ತೆಲಂಗಾಣ ರಾಜ್ಯಪಾಲೆ ಹಾಗೂ ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿದ್ದ ತಮಿಳ್‌ಸೆಲ್ವಿ ಸೌಂದರರಾಜನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸೌಂದರರಾಜನ್ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳಿಸಿಕೊಟ್ಟಿದ್ದಾರೆ ಎಂದು ರಾಜಭವನದ ವರದಿಗಳು ತಿಳಿಸಿವೆ.
ಸೌಂದರಿರಾಜನ್ ಅವರ ರಾಜೀನಾಮೆ ತಮಿಳುನಾಡು ಹಾಗೂ ಪುದಿಚೆರಿಯ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಎರಡು ದಿನ ಬಾಕಿಯಿರುವ ಸಂದರ್ಭದಲ್ಲಿಯೇ ರಾಜೀನಾಮೆ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ.
ತಮಿಳ್‌ಸೆಲ್ವಿ ಸೌಂದರರಾಜನ್ ಅವರು ಈ ಹಿಂದೆ ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ್ದರು. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.
ದಕ್ಷಿಣ ಚೆನ್ನೈ ಅಥವಾ ತಿರುನೆಲ್ವೆಲಿ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಚ್ಚಿಟ್ಟ ಮಾಧ್ಯಮಗಳು ಬಿಚ್ಚಿಟ್ಟ ಸಾಮಾಜಿಕ ಮಾಧ್ಯಮಗಳು
2019ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ತೂತುಕುಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೌಂದರರಾಜನ್ ಅವರು ಡಿಎಂಕೆಯ ಹಿರಿಯ ನಾಯಕಿ ಕನಿಮೊಳಿ ಅವರ ವಿರುದ್ಧ ಭಾರಿ ಅಂತರದಿಂದ ಪರಾಭವಗೊಂಡಿದ್ದರು. ನಂತರದಲ್ಲಿ ಅವರನ್ನು ಅದೇ ವರ್ಷ ತೆಲಂಗಾಣ ರಾಜ್ಯಪಾಲರಾಗಿ ನೇಮಿಸಲಾಗಿತ್ತು.
2021ರ ಫೆಬ್ರವರಿಯಲ್ಲಿ ಕಿರಣ್ ಬೇಡಿ ರಾಜಿನಾಮೆ ನೀಡಿದ ಕಾರಣ ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಕೂಡ ಹೆಚ್ಚುವರಿ ಜವಾಬ್ದಾರಿ ನೀಡಲಾಯಿತು. ಕಳೆದ ಮೂರು ವರ್ಷಗಳಲ್ಲಿ ಸೌಂದರಿರಾಜನ್ ಅವರು ಹೈದರಾಬಾದ್‌ಗಿಂದ ಹೆಚ್ಚಾಗಿ ಪುದುಚೆರಿಯಲ್ಲಿಯೆ ಇರುತ್ತಿದ್ದರು.
ಸೌಂದರಿರಾಜನ್ ಅವರು ಹಿರಿಯ ಕಾಂಗ್ರೆಸ್ ನಾಯಕ ಕುಮರಿ ಅನಂತನ್ ಅವರ ಪುತ್ರಿಯಾಗಿದ್ದು, 1990ರಲ್ಲಿ ತಮ್ಮ ತಂದೆಯ ವಿರುದ್ಧವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದರು. 2014 ರಿಂದ 2019ರವರೆಗೆ ತಮಿಳುನಾಡಿನ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದರು.
ರಾಜ್ಯಪಾಲರೊಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಇದು ಮೊದಲೇನಲ್ಲ. ಮಿಜೋರಾಂ ರಾಜ್ಯಪಾಲರಾಗಿದ್ದ ಕುಮ್ಮರಮ್ ರಾಜಶೇಖರನ್ 2019ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ 2019ರಲ್ಲಿ ತಿರುವನಂತಪುರಂನಿಂದ ಶಶಿ ತರೂರ್ ವಿರುದ್ಧ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
