ಯಂಗ್ ಇಂಡಿಯಾ ಕೌಶಲಾಭಿವೃದ್ಧಿ ವಿಶ್ವವಿದ್ಯಾಲಯಕ್ಕೆ ಅದಾನಿ ಸಮೂಹ ಘೋಷಿಸಿದ್ದ 100 ಕೋಟಿ ರೂಪಾಯಿ ದೇಣಿಗೆಯನ್ನು ತೆಲಂಗಾಣ ಸರ್ಕಾರ ತಿರಸ್ಕರಿಸಿದೆ.
ಅಮೆರಿಕದಲ್ಲಿ ಭಾರತೀಯ ಬಿಲಿಯನೇರ್ ಗೌತಮ್ ಅದಾನಿ ವಿರುದ್ಧ ಲಂಚದ ಆರೋಪಗಳು ಕೇಳಿಬಂದಿದೆ. ಈ ಹಿನ್ನೆಲೆ ಅದಾನಿ ಗ್ರೂಪ್‌ನಲ್ಲಿ ತಮ್ಮ ಸರ್ಕಾರ ಯಾವುದೇ ಹಣ ಸ್ವೀಕರಿಸುವುದಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಏನಿದು ಅದಾನಿ ಲಂಚದ ಹಗರಣ: ಇಲ್ಲಿದೆ ಸಂಪೂರ್ಣ ಮಾಹಿತಿ
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇವಂತ್ ರೆಡ್ಡಿ, “ನನ್ನ ಅಥವಾ ನಮ್ಮ ಸರ್ಕಾರದ ಘನತೆಗೆ ಧಕ್ಕೆ ತರುವಂತಹ ಯಾವುದೇ ಚರ್ಚೆಯಲ್ಲಿ, ಯಾವುದೇ ಸಂದರ್ಭದಲ್ಲಿ ತೊಡಗಿಕೊಳ್ಳಲು ನಾನು ಮತ್ತು ನನ್ನ ಸಚಿವ ಸಂಪುಟದ ಸದಸ್ಯರುಗಳು ಬಯಸುವುದಿಲ್ಲ” ಎಂದು ಹೇಳಿದ್ದಾರೆ.
“ಯಾವುದೇ ಚರ್ಚೆಯಲ್ಲಿ ಸಿಲುಕುವುದು ಬೇಡವೆಂದು ನಮ್ಮ ಸರ್ಕಾರದ ಪರವಾಗಿ ನಮ್ಮ ಅಧಿಕಾರಿ ಜಯೇಶ್ ರಂಜನ್ ಅದಾನಿಗೆ ಪತ್ರ ಬರೆದಿದ್ದಾರೆ. ಪ್ರಸ್ತುತ ವಿವಾದಗಳು ಇರುವಾಗ ತೆಲಂಗಾಣ ಸರ್ಕಾರವು ಅದಾನಿ ಸಂಸ್ಥೆಯಿಂದ 100 ಕೋಟಿ ರೂಪಾಯಿ ದೇಣಿಗೆ ಪಡೆಯಲು ಸಿದ್ಧವಿಲ್ಲ ಎಂದು ತಿಳಿಸಿದ್ದೇವೆ” ಎಂದರು.
ತೆಲಂಗಾಣ ಸರ್ಕಾರದ ವಿಶೇಷ ಮುಖ್ಯ ಕಾರ್ಯದರ್ಶಿ ಜಯೇಶ್ ರಂಜನ್ ಅವರು ಅದಾನಿ ಫೌಂಡೇಶನ್‌ನ ಅಧ್ಯಕ್ಷೆ ಪ್ರೀತಿ ಅದಾನಿ ಅವರಿಗೆ ಪತ್ರವನ್ನು ಬರೆದಿದ್ದಾರೆ. ಈ ಪತ್ರದಲ್ಲಿ ವಿಶ್ವವಿದ್ಯಾಲಯವು ಇತ್ತೀಚೆಗೆ ಆದಾಯ ತೆರಿಗೆಯ ಸೆಕ್ಷನ್ 80ಜಿ ಅಡಿಯಲ್ಲಿ ವಿನಾಯಿತಿ ಪಡೆದಿದೆ ಎಂದು ಉಲ್ಲೇಖಿಸಲಾಗಿದೆ.
