ಭಾರತೀಯ ತೆರೆಯನ್ನು ಆಳಿದ ತಾರೆ: ಬಿ. ಸರೋಜಾದೇವಿ

Date:

Advertisements
ಎಲ್ಲ ಭಾಷೆಯ ಚಿತ್ರಗಳಲ್ಲಿ ತಾವೇ ಭಾವಪೂರ್ಣವಾಗಿ ಸಂಭಾಷಣೆ ಒಪ್ಪಿಸಿ ಅಭಿನಯಿಸುತ್ತಿದ್ದ ಬಿ. ಸರೋಜಾದೇವಿ ಅವರು ಕಲಿಕೆಗೂ ಮಾದರಿಯೆನಿಸಿದ್ದರು. ಇದೇ ಕಾರಣಕ್ಕೆ ರಸಿಕರು ಅವರಿಗೆ 1962ರಲ್ಲಿ ನೀಡಿದ 'ಚತುರ್ಭಾಷಾ ತಾರೆ' ಅವರ ವ್ಯಕ್ತಿತ್ವಕ್ಕೆ ಒಪ್ಪುವಂತಹ ಬಿರುದು...

ಕನ್ನಡ ನಾಡಲ್ಲಿ ಜನಿಸಿದ ಅಪ್ಪಟ ಕನ್ನಡತಿ ಬಿ. ಸರೋಜಾದೇವಿ ಅವರು ಓರ್ವ ಕಲಾವಿದೆಯಾಗಿ ದಕ್ಷಿಣ ಭಾರತ ಚಿತ್ರರಂಗವನ್ನು ಆಳಿದ ಮತ್ತು ಹಿಂದೀ ಚಿತ್ರರಂಗಕ್ಕೂ ವ್ಯಾಪಿಸಿಕೊಂಡ ವಿದ್ಯಮಾನವು ಇಪ್ಪತ್ತನೇ ಶತಮಾನದ ಭಾರತೀಯ ಚಿತ್ರರಂಗದಲ್ಲಿ ಸಂಭವಿಸಿದ ಅಚ್ಚರಿಗಳಲ್ಲೊಂದು. ಯಾವುದೇ ಕಲಾ ಸಂಸ್ಕೃತಿಯ ಹಿನ್ನೆಲೆಯಿಲ್ಲದೆ, ಅಭಿನಯದ ಗಂಧ ಗಾಳಿಯೂ ತಿಳಿಯದೆ, ಶ್ರೀಮಂತಿಕೆಯ ಅಥವಾ ಪ್ರಭಾವಿಗಳ ನೆರವಿಲ್ಲದೆ ಚಿತ್ರರಂಗದಲ್ಲಿ ಅರಳಿದ ಸಹಜ ಪ್ರತಿಭೆಗೆ ಅವರೊಂದು ಉಜ್ವಲ ಉದಾಹರಣೆ. ಚಿತ್ರರಂಗದ ಬಗ್ಗೆ ಯಾವ ವ್ಯಾಮೋಹವೂ ಇಲ್ಲದೆ ತಾಯಿಯ ಒತ್ತಾಸೆಯಿಂದ ಚಿತ್ರರಂಗಕ್ಕೆ ಬಂದನಂತರ ಕೇವಲ ಶಿಸ್ತು, ನಿರಂತರ ಪರಿಶ್ರಮ ಮತ್ತು ಅನುಭವದ ಮೂಲಕವೇ ಅಭಿನಯದ ಕೌಶಲ್ಯವನ್ನು ಕರಗತ ಮಾಡಿಕೊಂಡು ತಾರೆಯಾಗಿ ಜನಪ್ರಿಯತೆಯ ಉತ್ತುಂಗಕ್ಕೇರಿದ ಸರೋಜಾದೇವಿ ಅವರ ಸಾಧನೆ ಅಧ್ಯಯನಯೋಗ್ಯ.

ಬೆಂಗಳೂರಿನಲ್ಲಿ ಜನಿಸಿದ ಸರೋಜಾದೇವಿ ಅವರು ಪ್ರಾದೇಶಿಕ ಗಡಿಗಳನ್ನು ದಾಟಿ ಭಾರತೀಯ ಚಿತ್ರರಂಗದ ಅತ್ಯಂತ ಗೌರವಾನ್ವಿತ ನಟಿಯರಲ್ಲಿ ಒಬ್ಬರಾದ ಕತೆ ಯಾವ ಕಾಲಕ್ಕೂ ಆಸಕ್ತಿದಾಯಕವಾದದ್ದು. ಏಳು ದಶಕಗಳ ವೃತ್ತಿಜೀವನ ಮತ್ತು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಲಾವಿದೆಯಾಗಿ ಪಾಲ್ಗೊಂಡ ಅವರು ಸಮಕಾಲೀನ ಟ್ರೆಂಡ್‌ಗಳಲ್ಲೊಂದಾದ ಪ್ಯಾನ್ ಇಂಡಿಯಾ ಪರಿಕಲ್ಪನೆಯು ಆಕರ್ಷಣೆ ಪಡೆಯುವ ಮೊದಲೇ ಅವರು ಪ್ಯಾನ್-ಇಂಡಿಯನ್ ತಾರಾಪಟ್ಟದ ವಿಶಿಷ್ಟ ಮಾದರಿಯನ್ನು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಸೃಷ್ಟಿಸಿದರು.

ಕನ್ನಡದಲ್ಲಿ ‘ಅಭಿನಯ ಸರಸ್ವತಿ’ (ಅಭಿವ್ಯಕ್ತ ಕಲೆಗಳ ದೇವತೆ) ಮತ್ತು ತಮಿಳಿನಲ್ಲಿ ‘ಕನ್ನಡತು ಪೈಂಕಿಳಿ’ (ಕನ್ನಡದ ಅರಗಿಳಿ) ಎಂದು ಬಿರುದು ಪಡೆದ ಸರೋಜಾದೇವಿಯವರು ತಮ್ಮ ಸಮಕಾಲೀನ ಚಿತ್ರರಂಗದ ಸರಿ ಸುಮಾರು ಎಲ್ಲ ಸುಪ್ರಸಿದ್ಧ ನಟರುಗಳಿಗೆ ನಾಯಕಿಯಾಗಿ, ಎಲ್ಲ ಖ್ಯಾತನಾಮ ನಿರ್ದೇಶಕರ ಚಿತ್ರಗಳಲ್ಲಿ ಅಭಿನಯಿಸಿ ಯಶಸ್ಸು ಪಡೆದ ವಿಶಿಷ್ಟ ಕಲಾವಿದೆಯಾಗಿ ಮೆರೆದರು. ಸುಮಾರು ಐವತ್ತೊಂದು ವರ್ಷಗಳ ಕಾಲದ ವೃತ್ತಿ ಬದುಕಿನಲ್ಲಿ ಎಲ್ಲ ಬಗೆಯ ಪಾತ್ರಗಳಲ್ಲಿ ಅಭಿನಯಿಸಿ, ಒಬ್ಬ ಕಲಾವಿದರಿಗೆ ಸಲ್ಲಬಹುದಾದ ಎಲ್ಲ ಮನ್ನಣೆಗಳನ್ನೂ ಪಡೆದ ಅದೃಷ್ಟ ಕಲಾವಿದೆ. ಸಾರ್ವಜನಿಕ ಬದುಕಿನಲ್ಲಿ ಸಭ್ಯತೆಯನ್ನು ಮೆರೆದು, ವಿವಾದಗಳಿಗೆ ಅತೀತವಾಗಿ ಬಾಳಿದ ಅವರ ವೈಯಕ್ತಿಕ ಬದುಕು ಸಹ ಅನುಕರಣಯೋಗ್ಯ.

Advertisements
Advertisements

ಇದನ್ನು ಓದಿದ್ದೀರಾ?: ಖ್ಯಾತ ನಟಿ ಬಿ ಸರೋಜಾ ದೇವಿ ನಿಧನ

ಚನ್ನಪಟ್ಟಣ ತಾಲೂಕಿನ ದಶಾವಾರ ಗ್ರಾಮ ಮೂಲದ ಬಿ. ಸರೋಜಾದೇವಿ ಅವರು ಜನವರಿ 7, 1938ರಂದು ಬೆಂಗಳೂರಿನಲ್ಲಿ ಜನಿಸಿದರು. ಪೊಲೀಸ್ ಇಲಾಖೆಯಲ್ಲಿದ್ದ(ಆಗ ಮೈಸೂರು ರಾಜ್ಯ) ತಂದೆ ಭೈರಪ್ಪ ಮತ್ತು ತಾಯಿ ಗೃಹಿಣಿ ರುದ್ರಮ್ಮ ದಂಪತಿಗಳಿಗೆ ಜನಿಸಿದ ಮೂವರು ಪುತ್ರಿಯರಲ್ಲಿ ಬಿ.ಸರೋಜಾದೇವಿ ಮೂರನೆಯವರು. ಬಾಲ್ಯವನ್ನು ಕೆಲಕಾಲ ದಶಾವಾರದಲ್ಲಿಯೇ ಕಳೆದ ಸರೋಜಾದೇವಿ ಅವರು ಬೆಂಗಳೂರಿನ ಕ್ರಿಶ್ಚಿಯನ್ ಕಾನ್ವೆಂಟ್‌ನಲ್ಲಿ ಪ್ರಾಥಮಿಕ ಶಿಕ್ಷಣ ಆರಂಭವಾಯಿತು. ಸಂಪ್ರದಾಯವಾದಿ ಸಾಮಾಜಿಕ ರೂಢಿಗಳ ಹೊರತಾಗಿಯೂ ಕಲಾತ್ಮಕ ಶಿಕ್ಷಣವನ್ನು ಗೌರವಿಸುವ ಶೂದ್ರ ಕುಟುಂಬದಲ್ಲಿ ಬೆಳೆದ ಅವರ ತಂದೆ ಅವರನ್ನು ನೃತ್ಯ ತರಬೇತಿಗೆ ಸೇರಿಸಿದರು. ತಾಯಿ ರುದ್ರಮ್ಮ ಅವರಿಗೆ ಮಗಳು ಕಲಾವಿದೆಯಾಗಿ ಬೆಳೆಯಬೇಕೆಂಬ ಆಶೆಯಿತ್ತು. ಮುಂದೆ ಸಂಪ್ರದಾಯದ ಚೌಕಟ್ಟಿನಾಚೆಗಿನ ಪಾತ್ರಗಳನ್ನು ವಹಿಸದಿರುವಂತೆ ಆಕೆ ನಿರ್ಬಂಧ ಹೇರಿದರೂ ಮಗಳ ವೃತ್ತಿಬದುಕು ವಿಕಸನವಾಗಲು ಪ್ರಮುಖ ಪಾತ್ರ ವಹಿಸಿದರು. ಸರೋಜಾದೇವಿ ಅವರು ಒಂದು ಸಂದರ್ಶನದಲ್ಲಿ ತಮ್ಮ ತಾಯಿಯ ಪ್ರಭಾವವನ್ನು ಪ್ರಸ್ತಾಪಿಸಿ ಅವರು ಹೇರಿದ ಕಟ್ಟುನಿಟ್ಟುಗಳನ್ನು ತಮ್ಮ ವೃತ್ತಿಜೀವನದುದ್ದಕ್ಕೂ ಪಾಲಿಸಿದ್ದನ್ನು ನೆನೆದಿದ್ದಾರೆ. ಕೌಟುಂಬಿಕ ಮೌಲ್ಯಗಳು ಅವರ ವೃತ್ತಿಪರ ವ್ಯಕ್ತಿತ್ವವನ್ನು ಹೇಗೆ ರೂಪಿಸುತ್ತವೆ ಎಂಬುದಕ್ಕೆ ಅವರು ಮತ್ತೊಂದು ದೃಷ್ಟಾಂತವಾದರು.

Kitturu Chennamma
ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ರಾಜ್ ಮತ್ತು ಸರೋಜಾದೇವಿ

ಚಲನಚಿತ್ರೋದ್ಯಮಕ್ಕೆ ಅವರ ಪ್ರವೇಶವು ಆಕಸ್ಮಿಕವಾಗಿತ್ತು: ಚಲನಚಿತ್ರ ನಿರ್ಮಾಪಕ ಬಿ.ಆರ್. ಕೃಷ್ಣಮೂರ್ತಿ ಅವರು ಬಾಲಕಿ ಸರೋಜಾದೇವಿ ಅವರ ಗಾಯನ ನೃತ್ಯವನ್ನು ನೋಡಿದಾಗ ಅವರಲ್ಲಿದ್ದ ಪ್ರತಿಭೆಯನ್ನು ಗುರುತಿಸಿದರು. ಆಗ ಅವರಿಗೆ 13 ವರ್ಷ. ಆರಂಭದಲ್ಲಿ ಹುಡುಕಿ ಬಂದ ಚಲನಚಿತ್ರಗಳಲ್ಲಿ ಅಭಿನಯಿಸುವ ಅಭಿನಯದ ಅವಕಾಶಗಳನ್ನು ನಿರಾಕರಿಸಿದರು. ಆದರೂ 17ನೇ ವಯಸ್ಸಿನಲ್ಲಿ, ಅವರು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಿಡುಗಡೆಯಾದ ಮೊದಲ ಚಿತ್ರ ಮಹಾಕವಿ ಕಾಳಿದಾಸ(1955) ಚಿತ್ರ ವಿದ್ಯಾಧರೆಯ ಪಾತ್ರ ರಸಿಕರ ಗಮನ ಸೆಳೆಯಿತು. ಅನಂತರ  ಶ್ರೀರಾಮ ಪೂಜ, ಆಷಾಢಭೂತಿ, ಕಚ ದೇವಯಾನಿ, ಕೋಕಿಲವಾಣಿ, ಪಂಚತಂತ್ರ, ಚಿಂತಾಮಣಿ ಮೊದಲಾದ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಾ ಬಂದರು.

ಸರೋಜಾದೇವಿ ಅವರನ್ನು ಕಲಾವಿದೆಯಾಗಿ ತಿದ್ದಿದವರಲ್ಲಿ ಸಾಹಿತಿ, ನಿರ್ದೇಶಕ ಕು.ರಾ. ಸೀತಾರಾಮ ಶಾಸ್ತ್ರಿಯವರು ಪ್ರಮುಖರು. ಮಹಾಕವಿ ಕಾಳಿದಾಸದಿಂದ ಆರಂಭವಾದ ಅವರ ಸಹ ಪಯಣ ಅಣ್ಣ ತಂಗಿ(1958) ಚಿತ್ರದಲ್ಲಿ ಅವರ ಅಭಿನಯ ಸಾಮರ್ಥ್ಯವನ್ನು ಹೊರಹಾಕುವುದರಲ್ಲಿ ಯಶಸ್ವಿಯಾಯಿತು. ಗಯ್ಯಾಳಿ ಬೆಳ್ಳಿಯ ಪಾತ್ರದಲ್ಲಿ ಸರೋಜಾದೇವಿ ಅವರು ರಾಜ್ ಅವರ ಜೊತೆ ಸರಿಸಾಟಿಯಾಗಿ ನಟಿಸಿದರು. ಆ ನಂತರ ಭೂಕೈಲಾಸ, ಸ್ಕೂಲ್ ಮಾಸ್ಟರ್, ಜಗಜ್ಯೋತಿ ಬಸವೇಶ್ವರ, ವಿಜಯನಗರದ ವೀರಪುತ್ರ(1961) ಚಿತ್ರಗಳಲ್ಲಿ ನಟಿಸುವ ವೇಳೆಗೆ ತಮಿಳು ಚಿತ್ರರಂಗದಲ್ಲಿ ತಾರೆಯಾಗಿ ಮೆರೆದಿದ್ದರು. ಅನಂತರ ಅವರ ಕನ್ನಡ ಚಿತ್ರಗಳು ಅಪರೂಪವಾಗತೊಡಗಿದವು. 1961ರಿಂದ 1970ರ ವೇಳೆಗೆ ಅವರು ನಾಯಕಿಯಾಗಿ ಅವಕಾಶವಿದ್ದು ನಟಿಸಿದ ಪ್ರಮುಖ ಕನ್ನಡ ಚಿತ್ರಗಳೆಂದರೆ ಕಿತ್ತೂರು ಚನ್ನಮ್ಮ, ವಿಜಯನಗರದ ವೀರಪುತ್ರ, ಅಮರಶಿಲ್ಪಿ ಜಕಣಾಚಾರಿ, ಬೆರೆತ ಜೀವ ಮತ್ತು ಮಲ್ಲಮ್ಮನ ಪವಾಡ ಮಾತ್ರ. ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಯಶಸ್ವಿ ತಾರೆಯಾಗಿ ವರ್ಷಕ್ಕೆ ಸರಾಸರಿ ಹತ್ತು ಚಿತ್ರಗಳಲ್ಲಿ ನಟಿಸುತ್ತಿದ್ದ ಸರೋಜಾದೇವಿ ಅವರು ಕನ್ನಡಕ್ಕೆ ಅಪರೂಪವಾದದ್ದು ಸಹಜ ಬೆಳವಣಿಗೆಯೇ ಆಗಿತ್ತು.

1970ರಲ್ಲಿ ಮತ್ತೆ ಲಕ್ಷ್ಮಿ ಸರಸ್ವತಿ ಚಿತ್ರದ ಮೂಲಕ ಕನ್ನಡದಲ್ಲಿ ಎರಡನೇ ಇನಿಂಗ್ಸ್ ಆರಂಭಿಸಿದ ಸರೋಜಾದೇವಿಯವರು ತಮ್ಮ ನೆಲೆಯನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಿಕೊಂಡದ್ದು ಮಾತ್ರವಲ್ಲ, ತಮಿಳು, ತೆಲುಗು ಚಿತ್ರಗಳ ಜೊತೆಯಲ್ಲಿ ಕನ್ನಡದಲ್ಲೂ ಹೆಚ್ಚು ಕಾಣಿಸಿಕೊಂಡರು. ಎಪ್ಪತ್ತರ ದಶಕದಲ್ಲಿ ಸುಮಾರು ಇಪ್ಪತ್ತು ಚಿತ್ರಗಳಲ್ಲಿ ನಟಿಸಿದ ಸರೋಜಾದೇವಿ ಅವರು ರಾಜ್ ಅವರ ಜೊತೆ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದರು. ಮುಖ್ಯವಾಗಿ ಅವರು ರಾಜ್ ಅವರ ಜೊತೆ ನಟಿಸಿದ ನ್ಯಾಯವೇ ದೇವರು, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ, ಶ್ರೀನಿವಾಸ ಕಲ್ಯಾಣ, ಬಬ್ರುವಾಹನ ಮತ್ತು ಭಾಗ್ಯವಂತರು ನಟಿಯಾಗಿ ಅವರು ಅತ್ಯುತ್ತಮ ಅಭಿನಯ ನೀಡಿದ ಚಿತ್ರಗಳು. ಹಾಗೆಯೇ ಚಿರಂಜೀವಿ, ಸಹಧರ್ಮಿಣಿ, ಪುಟ್ಟಣ್ಣನವರ ಕಥಾಸಂಗಮದ ಅತಿಥಿ, ಗೃಹಿಣಿ ಅವರ ಅಭಿನಯ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದ ಚಿತ್ರಗಳು. 

Anbe Vaa5 1
ನಾಡೋಡಿ ಮನ್ನನ್ ಚಿತ್ರದಲ್ಲಿ ಎಂಜಿಆರ್ ಮತ್ತು ಬಿ. ಸರೋಜಾದೇವಿ

ಸರೋಜಾದೇವಿ ಅವರ ವೃತ್ತಿಬದುಕು ಹೊರಳುದಾರಿ ಹಿಡಿದದ್ದು 1958ರಲ್ಲಿ ಬಿಡುಗಡೆಯಾದ ಎಂ.ಜಿ.ಆರ್ ನಟಿಸಿ, ನಿರ್ಮಿಸಿ, ನಿರ್ದೇಶಿಸಿದ ‘ನಾಡೋಡಿ ಮನ್ನನ್’ ಚಿತ್ರದ ಮೂಲಕ. ಎಂಜಿಆರ್ ದ್ವಿಪಾತ್ರದಲ್ಲಿ ನಟಿಸಿದ್ದ ಭಾಗಶಃ ವರ್ಣದ ಅದ್ದೂರಿ ಚಿತ್ರ ನಾಡೋಡಿ ಮನ್ನನ್ ಇಬ್ಬರು ನಾಯಕಿಯರಲ್ಲಿ ಸರೋಜಾದೇವಿ ಅವರ ಪಾತ್ರ ಪ್ರವೇಶ ಬಣ್ಣದಲ್ಲಿಯೇ ಆರಂಭವಾಗುತ್ತದೆ. ತಮಿಳು ಚಿತ್ರರಂಗದಲ್ಲಿ ಅವರ ವೃತ್ತಿಬದುಕಿನ ಉಜ್ವಲ ಅಧ್ಯಾಯವನ್ನು ಸಂಕೇತಿಸುವಂತೆ ಅವರು ರಾಜಕುಮಾರಿ ರತ್ನಳ ಪಾತ್ರದಲ್ಲಿ ಬಣ್ಣದ ತೆರೆಯ ಮೇಲೆ ಕುಣಿಯುತ್ತಾ ರಸಿಕರೆದೆಗೆ ಲಗ್ಗೆ ಹಾಕಿದರು. ತಮಿಳು ಚಿತ್ರ ರಸಿಕ ಸಮುದಾಯ ಅವರನ್ನು ತಮಿಳು ಚಿತ್ರರಂಗದ ಉತ್ತುಂಗಕ್ಕೇರಿಸಿತು. ಎಂಜಿಆರ್ ಅವರೊಂದಿಗಿನ ಅವರ ಸಹಯೋಗವು ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದಾಗಿ ವಿಕಸನಗೊಂಡಿತು. ನಾಡೋಡಿ ಮನ್ನನ್ ಚಿತ್ರದಿಂದ ಆರಂಭವಾದ ಈ ಜೋಡಿಯ ಯಶೋಗಾಥೆ ತಿರುಡಾದೆ, ಮಾಡಪುರ, ಪೆರಿಯ ಇಡತ್ತ ಪೆಣ್, ಎಂಗವೀಟ್ಟು ಪಿಳ್ಳೈ(1965) ಎನ್ ಕಡಮೈ, ಪರಕ್ಕುಂ ಪಾವೈ, ಅನ್ಬೆವಾ(1966), ಅರಸ ಕಟ್ಟಳೈ(1967)ನಂತಹ ಸತತ 26 ಹಿಟ್ ಚಿತ್ರಗಳಿಗೆ ವಿಸ್ತರಿಸಿತು. ಜಯಲಲಿತಾ ಅವರ ಪ್ರವೇಶದವಾದ ನಂತರ ಎಂಜಿಆರ್-ಜಯಲಲಿತ ಯುಗ ಆರಂಭವಾಗುವವರೆಗೆ ಸರೋಜಾದೇವಿ ಅವರು ಅಕ್ಷರಶಃ ಎಂಜಿಆರ್ ಚಿತ್ರಗಳ ಯಶಸ್ವಿ ನಾಯಕಿಯಾಗಿದ್ದರು. ಅದೇ ವೇಳೆ ತಮಿಳು ಚಿತ್ರರಂಗದ ಯಶಸ್ವಿ ನಾಯಕರಾದ ಶಿವಾಜಿ ಗಣೇಶನ್ (ಪಣಮಾ ಪಾಸಮಾ), ಜೆಮಿನಿ ಗಣೇಶನ್(ಕಲ್ಯಾಣ ಪರಿಸು), ಎಸ್.ಎಸ್ ರಾಜನ್ (ಪ್ರೆಸಿಡೆಂಟ್ ಪಂಚಾಕ್ಷರಂ) ಮುಂತಾದ ಅನೇಕ ನಾಯಕರ ಚಿತ್ರಗಳಲ್ಲಿ ನಟಿಸಿದರು.

ಇದೇ ಅವಧಿಯಲ್ಲಿ ಅವರ ತೆಲುಗು ಚಿತ್ರರಂಗದಲ್ಲಿಯೂ ನಾಯಕಿಯಾಗಿ ಅಭೂತಪೂರ್ವ ಯಶಸ್ಸು ಕಂಡರು. 1957ರಲ್ಲಿ ಎನ್.ಟಿ. ರಾಮರಾವ್ ಅವರ ಜೋಡಿಯಾಗಿ ‘ಪಾಂಡುರಂಗ ಮಹಾತ್ಮಂ’ ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ತಮ್ಮ ಅಭಿನಯ ವೃತ್ತಿಯನ್ನು ಮುಂದುವರೆಸಿದ ಸರೋಜಾದೇವಿ ಅವರು, ಆ ಚಿತ್ರರಂಗದ ಪೌರಾಣಿಕ, ಜಾನಪದ ಚಿತ್ರಗಳಲ್ಲಿ ಹೆಚ್ಚಿನ ಯಶಸ್ಸು ಕಂಡರು. ಭಾರತೀಯ ಚಿತ್ರರಂಗದಲ್ಲಿ ಅದರಲ್ಲೂ ದಕ್ಷಿಣ ಭಾರತದ ಪೌರಾಣಿಕ ಮತ್ತು ಜಾನಪದ ಚಿತ್ರಗಳಲ್ಲಿನ ದೇವಿಯರು ಮತ್ತು ನಾಯಕಿಯರ ಪಾತ್ರಗಳ ಸ್ವರೂಪವು ಕಲಾವಿದ ರಾಜಾ ರವಿವರ್ಮನ ವರ್ಣಚಿತ್ರಗಳಿಂದ ಪ್ರೇರಣೆಗೊಂಡಂಥವು. ರವಿವರ್ಮನ ವರ್ಣಚಿತ್ರಗಳಿಗೆ ಹೇಳಿಮಾಡಿಸಿದಂಥ ರೂಪದರ್ಶಿಯ ಚಹರೆಗಳನ್ನು ನಿರ್ದೆಶಕರು ಸರೋಜಾದೇವಿಯರಲ್ಲಿ ಕಂಡುಕೊಂಡ ಕಾರಣದಿಂದ ಆ ಕಾಲದಲ್ಲಿ ಎನ್‌ಟಿಆರ್, ಎಎನ್‌ಆರ್, ಕಾಂತಾರಾವ್ ಮುಂತಾದ ನಾಯಕರ ಚಿತ್ರಗಳ ಜೋಡಿಯಾಗಿ ಸರೋಜಾದೇವಿ ಅವರು ಯಶಸ್ಸು ಕಂಡರು.  ಎನ್‌ಟಿಆರ್ ಅವರ ಪಾಂಡುರಂಗ ಮಹಾತ್ಮಂ(1957), ಜಗದೇಕವೀರುನಿ ಕಥಾ(1961), ಶ್ರೀ ಕೃಷ್ಣಾರ್ಜುನ ಯುದ್ಧಂ(1963), ದಾಗುಡು ಮೂತುಲು(1964), ಪ್ರಮೀಳಾರ್ಜುನೀಯಂ(1965), ಶಕುಂತಲಾ(1966), ಭಾಗ್ಯ ಚಕ್ರಂ(1968) ಮುಂತಾದವು ಮತ್ತು ಎಎನ್‌ಆರ್ ಜೊತೆ ನಟಿಸಿದ ಆತ್ಮ ಬಲಂ(1964), ರಹಸ್ಯಂ(1967) ಮೊದಲಾದ ಚಿತ್ರಗಳು ತೆಲುಗು ಪ್ರೆಕ್ಷಕರ ಮನಗೆದ್ದವು.

Sarojadevi2
ಜಗದೇಕ ವೀರುನಿ ಕಥಾ ಚಿತ್ರದಲ್ಲಿ ಎನ್‌ಟಿಆರ್ ಮತ್ತು ಸರೋಜಾದೇವಿ

ಇದೇ ಅವಧಿಯಲ್ಲಿ ಹಿಂದಿ ಚಿತ್ರರಂಗಕ್ಕೂ ಕಾಲಿರಿಸಿದ ಅವರು ದಿಲೀಪ್ ಕುಮಾರ್ ಅವರೊಂದಿಗೆ ಪೈಘಂ(1959) ಮತ್ತು ಶಮ್ಮಿಕಪೂರ್ ಅವರೊಂದಿಗೆ ಪ್ಯಾರ್ ಕಿಯಾ ತೋ ಡರ್ನಾ ಕ್ಯಾ(1963), ರಾಜೇಂದ್ರ ಕುಮಾರ್ ಅವರೊಡನೆ ಸಸುರಾಲ್(1962), ಸುನೀಲ್ ದತ್ ಅವರೊಡನ್ ಬೇಟಿ ಬೇಟೆ(1964) ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ  ಬಾಲಿವುಡ್ ಯಾತ್ರೆಯನ್ನೂ ಯಶಸ್ವಿಯಾಗಿಸಿದರು.

ಸರೋಜಾದೇವಿಯವರು 161 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ ಅಪ್ರತಿಮ ದಾಖಲೆ (1955-1984) ನಿರ್ಮಿಸಿದ್ದಾರೆ. ಈ ಮೂರು ದಶಕಗಳ ಅವಧಿಯಲ್ಲಿ ಅವರು ಅತ್ಯಂತ ಬೇಡಿಕೆಯ ನಟಿಯಾಗಿ ದಿನಕ್ಕೆ ಮೂರು ಪಾಳಿಗಳಲ್ಲಿ ಶಿಸ್ತಿನಿಂದ ವೃತ್ತಿಯನ್ನು ನಿರ್ವಹಿಸಿದ್ದಾರೆ. ಒಂದೇ ದಿನದಲ್ಲಿ ಬೇರೆ ಬೇರೆ ಭಾಷೆಯಲ್ಲಿನ ಚಿತ್ರಗಳಲ್ಲಿ ಭಿನ್ನ ಭಿನ್ನ ಪಾತ್ರಗಳನ್ನು ಹಲವಾರು ಸೆಟ್‌ಗಳಿಗೆ ಭೇಟಿ ನೀಡಿ ತಮ್ಮ ವೃತ್ತಿಬದುಕಿಗೆ ಅಪೂರ್ವ ಶಿಸ್ತು, ಘನತೆಯನ್ನು ತಂದರು. ಅಲ್ಲದೆ ಎಲ್ಲ ಭಾಷೆಯ ಚಿತ್ರಗಳಲ್ಲಿ ತಾವೇ ಭಾವಪೂರ್ಣವಾಗಿ ಸಂಭಾಷಣೆ ಒಪ್ಪಿಸಿ ಅಭಿನಯಿಸುತ್ತಿದ್ದ ಅವರು ಕಲಿಕೆಗೂ ಮಾದರಿಯೆನಿಸಿದ್ದರು. ಇದೇ ಕಾರಣಕ್ಕೆ ರಸಿಕರು ಅವರಿಗೆ 1962ರಲ್ಲಿ ನೀಡಿದ ‘ಚತುರ್ಭಾಷಾ ತಾರೆ’ ಅವರ ವ್ಯಕ್ತಿತ್ವಕ್ಕೆ ಒಪ್ಪುವಂತಿತ್ತು.

ಇನ್ನು ಅವರ ಅಭಿನಯಕ್ಕೆ ಮೆರುಗು ನೀಡುವಂತೆ ಪ್ರಶಸ್ತಿಗಳು ಹುಡುಕಿಕೊಂಡು ಬಂದು ಗೌರವಿಸಿದ್ದುಂಟು. ಭಾರತ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪಡೆದ ದಕ್ಷಿಣ ಭಾರತದ ಕಲಾವಿದರಲ್ಲಿ ಇವರೇ ಮೊದಲಿಗರು. ಆನಂತರ ಪದ್ಮಭೂಷಣ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು. ಇದಲ್ಲದೆ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿಗಳೆಲ್ಲವೂ ಸರೋಜಾದೇವಿಯವರಿಗೆ ಸಂದಿವೆ.

ಸರೋಜಾದೇವಿ ಅವರು ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸುವ ಅವಧಿಯಲ್ಲಿ ನಾಯಕಿಯರ ತೀವ್ರ ಪೈಪೋಟಿಯಿತ್ತು. ಅಭಿನಯದಲ್ಲಿ ಅವರಿಗಿಂತ ಸೂಕ್ಷ್ಮವಾಗಿ ಅಭಿನಯಿಸುವ ಕಲಾವಿದೆಯರಿದ್ದರು, ನೃತ್ಯದಲ್ಲಿ ಅವರನ್ನು ಮೀರಿಸುವ ನಟಿಯರಿದ್ದರು. ತಮಿಳು ಮತ್ತು ತೆಲುಗಿನಲ್ಲಿ ಪಿ. ಭಾನುಮತಿ, ಸಾವಿತ್ರಿ, ಅಂಜಲೀದೇವಿ, ಸಾಹುಕಾರ್ ಜಾನಕಿ, ಕೃಷ್ಣಕುಮಾರಿ, ವೈಜಯಂತಿಮಾಲಾ, ಪದ್ಮಿನಿ, ದೇವಿಕಾ ನಂತರ ಆಗಮಿಸಿದ ಕೆಆರ್ ವಿಜಯಾ, ಜಯಲಲಿತಾ, ವಾಣಿಶ್ರೀ ಇತ್ಯಾದಿ ಕಲಾವಿದರೊಡನೆ ಸ್ಪರ್ಧಿಸಿ ತಮ್ಮ ಸ್ಥಾನವನ್ನು ಅಬಾಧಿತವಾಗಿ ಸುಮಾರು ಮೂರು ದಶಕಗಳ ಕಾದಿರಿಸಿ ಭಾರತದ ಅತ್ಯಂತ ದೀರ್ಘಕಾಲದ ನಾಯಕಿಯಾಗಿ ಯಶಸ್ಸು ಕಂಡರು.

1967ರಲ್ಲಿ ಕೈಗಾರಿಕೋದ್ಯಮಿ ಶ್ರೀಹರ್ಷ ಅವರನ್ನು ಮದುವೆಯಾದ ನಂತರ, ಅವರು ನಟನೆಯನ್ನು ಮುಂದುವರೆಸಿದರು. ಆದರೆ ನಟಿಸುವ ಚಿತ್ರಗಳ ಸಂಖ್ಯೆಗೆ ಮಿತಿ ಹೇರಿಕೊಂಡರು. 1986ರಲ್ಲಿ ಹರ್ಷ ಅವರ ಮರಣದ ನಂತರ, ಅವರು ಚಿತ್ರರಂಗಕ್ಕೆ ಮರಳುವ ಮೊದಲು ಸ್ವಲ್ಪ ಸಮಯ ಚಿತ್ರರಂಗಕ್ಕೆ ವಿದಾಯ ಹೇಳಿದ್ದರು. ಅನಂತರ ಹಲವು ವರ್ಷ ನಾಯಕಿಯಾಗಿ ನಟಿಸಿ ಕ್ರಮೇಣ ಪೋಷಕ ಪಾತ್ರಗಳಿಗೆ ಹೊಂದಿಕೊಂಡರು. ಹೀಗೆ 1955ರಲ್ಲಿ ಮಹಾಕವಿ ಕಾಳಿದಾಸ ಚಿತ್ರದಿಂದ ಆರಂಭವಾದ ಅವರ ವೃತ್ತಿ ಬದುಕು ‘ನಟಸಾರ್ವಭೌಮ'(2019)ನಲ್ಲಿ ಅತಿಥಿ ಪಾತ್ರದವರೆಗೆ ವಿಸ್ತರಿಸಿತ್ತು.

hq720 16
ಸಸುರಾಲ್ ಚಿತ್ರದಲ್ಲಿ ರಾಜೇಂದ್ರಕುಮಾರ್ ಮತ್ತು ಸರೋಜಾದೇವಿ

1960ರ ದಶಕದಲ್ಲಿ ಸರೋಜಾದೇವಿ ದಕ್ಷಿಣ ಭಾರತದಲ್ಲಿ ಮಹಿಳೆಯರ ಫ್ಯಾಷನ್ ಟ್ರೆಂಡ್ ಸೃಷ್ಟಿ ಮಾಡಿದ  ನಟಿಯಾಗಿಯೂ ಹೆಸರುವಾಸಿಯಾಗಿದ್ದರು. ‘ಎಂಗವೀಟ್ಟು ಪಿಳ್ಳೈ’ ಮತ್ತು ‘ಅನ್ಬೆವಾ’ ಚಿತ್ರಗಳಲ್ಲಿನ ಅವರ ವೇಷಭೂಷಣಗಳು ರಾಷ್ಟ್ರವ್ಯಾಪಿ ಮಹಿಳೆಯರನ್ನು ಪ್ರಭಾವಿಸಿದವು. ಮಹಿಳೆಯರು ಅವರ ಸೀರೆ ಉಡುವ, ಆಭರಣಗಳನ್ನು ಧರಿಸುವ ಪರಿಯನ್ನು ಮತ್ತು ಕೇಶವಿನ್ಯಾಸಗಳನ್ನು ಅನುಕರಿಸಿದರು. ಸಾಂಪ್ರದಾಯಿಕ ಉಡುಗೆ ತೊಡುಗೆಗಳಿಗೆ ಆಧುನಿಕ ಸ್ಪರ್ಷ ನೀಡಿದ ಅವರ ಸೌಂದರ್ಯಪ್ರಜ್ಞೆಯು ಭಾರತೀಯ ಯುವ ಮಹಿಳೆಯರನ್ನು ಆಕರ್ಷಿಸಿದ್ದು ಸಹಜವಾಗಿತ್ತು.

ಇದನ್ನು ಓದಿದ್ದೀರಾ?: ತಮಿಳು ಚಿತ್ರರಸಿಕರು ಮೆಚ್ಚಿದ ‘ಕನ್ನಡತ್ತು ಪೈಂಕಿಳಿ’ ಬಿ. ಸರೋಜಾದೇವಿ

ಅರವತ್ತರ ದಶಕದಲ್ಲಿ ನಿರ್ಮಾಣವಾದ ಮುಖ್ಯವಾಗಿ ತೆಲುಗು, ತಮಿಳು ಚಿತ್ರರಂಗದಲ್ಲಿ ನಿರ್ಮಾಣವಾದ ಬಹುತೇಕ ಪೌರಾಣಿಕ, ಜಾನಪದ ಮತ್ತು ಐತಿಹಾಸಿಕ ಚಿತ್ರಗಳ ನಾಯಕಿಯರ ಪಾತ್ರಕ್ಕೆ ವೈಜಯಂತಿಮಾಲಾ ಮತ್ತು ಬಿ. ಸರೋಜಾದೇವಿ ಅವರಿಗೆ ಆದ್ಯತೆ ನೀಡಲಾಗುತ್ತಿತ್ತು. ವೈಜಯಂತಿಮಾಲಾ ಅವರು ಹಿಂದೀ ಚಿತ್ರರಂಗಕ್ಕೆ ಮುಖ ಮಾಡಿದ ನಂತರ ಸರೋಜಾದೇವಿಯವರ ಪಾರಮ್ಯ ಮುಂದುವರೆಯಿತು. ಬಹುತೇಕ ಈ ವರ್ಗದ ಚಿತ್ರಗಳ ನಾಯಕಿಯರ ಸ್ವರೂಪವನ್ನು ನಿರ್ದೇಶಕರು ರಾಜಾ ರವಿವರ್ಮ ಚಿತ್ರಿಸಿದ ಮಹಿಳೆಯರಂತಿರಬೇಕೆಂದು ಆಶಿಸುತ್ತಿದ್ದರು. ಆ ನಾಯಕಿಯರ ಮುಖ ಸೌಂದರ್ಯ ಮತ್ತು ಕಣ್ಣುಗಳ ಭಾವಾಭಿವ್ಯಕ್ತಿಯ ಚಹರೆಗಳನ್ನು ನಿರ್ದೇಶಕರು ಸರೋಜಾದೇವಿಯವರಲ್ಲಿ ಗುರುತಿಸಿದರು. ಹಾಗಾಗಿಯೇ ಅವರು ವಿದ್ಯಾಧರೆ, ಶಕುಂತಲಾ, ಸೀತೆ ಪಾತ್ರಗಳಿಂದ ಹಿಡಿದು ಜಾನಪದ ಚಿತ್ರಗಳು ಐತಿಹಾಸಿಕ ಚಿತ್ರಗಳ ನಾಯಕಿಯರ ಪಾತ್ರಗಳು ಅರಸಿಬಂದವು. ತಮ್ಮ ಭಾವಾಭಿವ್ಯಕ್ತಿಯನ್ನು ಅವರು ಮಧುಬಾಲ ಅವರಂತೆ ಕಣ್ಣುಗಳನ್ನೇ ನೆಚ್ಚಿಕೊಂಡಿದ್ದರು. ಧ್ವನಿಪೂರ್ಣವಾಗಿ ಒಪ್ಪಿಸುವ ಸಂಭಾಷಣೆ ಮತ್ತು ಸಭ್ಯತೆಯ ಗಡಿಯನ್ನು ಮೀರದ ಅಂಗನ್ಯಾಸಗಳಿಂದ ಅವರು ಹೆಚ್ಚು ಪ್ರಸಿದ್ಧರು. ಜೊತೆಗೆ ಅವರು ನಿರ್ದೇಶಕರ ನಟಿಯಾಗಿ ತನ್ನ ಮಿತಿಗಳನ್ನು ಮೀರಲು ಯತ್ನಿಸುವ ಕಲಾವಿದೆಯಾಗಿ ನಿರ್ದೇಶಕರ ನೆಚ್ಚಿನ ನಟಿಯಾಗಿ ಉಳಿದ್ದು ಅವರ ಸುದೀರ್ಘ ಯಶಸ್ಸಿಗೆ ಕಾರಣವಿರಬಹುದು.

Sarojadevi1

ಹಾಗೆ ನೋಡಿದರೆ ಬಿ. ಸರೋಜಾದೇವಿ ಅವರ ಯಶಸ್ಸು ಚಲನಚಿತ್ರಶಾಸ್ತ್ರದ ಅಂಕಿಅಂಶಗಳನ್ನು ಮೀರಿದೆ. ಬಹುಭಾಷಾ ಕಲಾವಿದೆಯಾಗಿ ಜಾಗತೀಕರಣದ ಪೂರ್ವದಲ್ಲಿಯೇ ಅಖಿಲ ಭಾರತ ತಾರೆಯಾಗಿ ಗಮನ ಸೆಳೆದ ಕಲಾವಿದೆ, ಅವರು.

WhatsApp Image 2023 07 14 at 5.34.29 PM
ಡಾ. ಕೆ. ಪುಟ್ಟಸ್ವಾಮಿ
+ posts

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಕೆ. ಪುಟ್ಟಸ್ವಾಮಿ
ಡಾ. ಕೆ. ಪುಟ್ಟಸ್ವಾಮಿ

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಗರೇಟ್ ಜತೆ ಆರೋಗ್ಯ ಎಚ್ಚರಿಕೆ ಪಟ್ಟಿಗೆ ಸೇರಿದ ಚಹಾ, ಸಮೋಸಾ, ಜಿಲೇಬಿ,ಬಿಸ್ಕತ್

ಬಹುತೇಕ ಮಂದಿಯ ಅಚ್ಚುಮೆಚ್ಚಿನ ತಿನಸುಗಳಾದ ಜಿಲೇಬಿ, ಸಮೋಸಾ, ಬಿಸ್ಕತ್ ಹಾಗೂ ನಿತ್ಯ...

Global Gender Gap | ದೇಶಕ್ಕೆ ಎಚ್ಚರಿಕೆ ಗಂಟೆ ‘ಜಾಗತಿಕ ಲಿಂಗ ಅಂತರ ಸೂಚ್ಯಂಕ’ ವರದಿ: ಲಿಂಗ ಸಮಾನತೆಯಲ್ಲಿ ಕಳಪೆ ಸ್ಥಾನ

ಜಾಗತಿಕ ಲಿಂಗ ಅಂತರ ಸೂಚ್ಯಂಕ ವರದಿಯಲ್ಲಿ ಬಾಂಗ್ಲಾದೇಶ(24), ಲಿಬೇರಿಯಾ(40), ಮದಗಸ್ಕರ್(58)ಗಿಂತ ಕಳಪೆ...

ನೆರೆಮನೆಯವರಿಂದ ಜೀವ ಬೆದರಿಕೆ; ಹೆಲ್ಮೆಟ್‌ಗೆ ಕ್ಯಾಮೆರಾ ಅಳವಡಿಸಿ ಓಡಾಡುತ್ತಿರುವ ವ್ಯಕ್ತಿ: ವಿಡಿಯೋ ವೈರಲ್

ತನ್ನ ನೆರೆಮನೆಯವರಿಂದ ಜೀವ ಬೆದರಿಕೆಯಿದೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರು ಹೆಲ್ಮೆಟ್‌ಗೆ ಕ್ಯಾಮೆರಾ...

ಬಿಹಾರ | ತನ್ನ 6 ವರ್ಷದ ಮಗನನ್ನು ಎತ್ತಿ ನೆಲಕ್ಕೆ ಎಸೆದು ಕೊಂದ ತಂದೆ: ಪರಾರಿ

ಹೋಟೆಲ್‌ ಕೋಣೆಯಲ್ಲಿ ತನ್ನ 6 ವರ್ಷದ ಮಗನನ್ನು ಥಳಿಸಿ ಕೊಂದು ತಂದೆ...

Download Eedina App Android / iOS

X