ಭಾರತದಲ್ಲಿ ಕೋವಿಡ್ ಸಂದರ್ಭದಲ್ಲಿ 60 ಲಕ್ಷ ಮಕ್ಕಳು ಕ್ಯಾಲರಿಯುಕ್ತ ಆಹಾರ ಸಿಗದೆ ಹಸಿವಿನಿಂದ ನರಳಿದ್ದಾರೆ ಎನ್ನುವ ಅಂತಾರಾಷ್ಟ್ರೀಯ ಅಧ್ಯಯನ ವರದಿಯನ್ನು ಭಾರತೀಯ ತಜ್ಞರು ತಿರಸ್ಕರಿಸಿದ್ದಾರೆ
2021ರ ಕೋವಿಡ್ ಅವಧಿಯಲ್ಲಿ ದೇಶದ ಸುಮಾರು 60 ಲಕ್ಷ ಮಕ್ಕಳು (6ರಿಂದ 23 ತಿಂಗಳ ನಡುವಿನ ವಯಸ್ಸಿನವರು) ಕನಿಷ್ಠ ಒಪ್ಪತ್ತಿನ ಗುಣಮಟ್ಟದ ಕ್ಯಾಲರಿಯುಕ್ತ ಪೌಷ್ಠಿಕಾಹಾರ ಇಲ್ಲದ ಪರಿಸ್ಥಿತಿ ಎದುರಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ವಿಜ್ಞಾನ ಜರ್ನಲ್ ‘ದಿ ಲ್ಯಾನ್ಸೆಟ್’ ಹೇಳಿದೆ.
‘ದಿ ಲ್ಯಾನ್ಸೆಟ್’ ಮಾರ್ಚ್ 30ರಂದು ಪ್ರಕಟಿಸಿದ ವರದಿ ಪ್ರಕಾರ, “2021ರ ಸಯದಲ್ಲಿ ಭಾರತದಲ್ಲಿ ಪೌಷ್ಠಿಕ ಆಹಾರವಿಲ್ಲದೆ 59,98,138 ಮಕ್ಕಳು ಬಳಲಿದ್ದಾರೆ. ಈ ಪೈಕಿ, ಉತ್ತರ ಪ್ರದೇಶ (28.4%), ಬಿಹಾರ (14.2%), ಮಹಾರಾಷ್ಟ್ರ (7.1%), ರಾಜಸ್ಥಾನ ( 6.5%), ಹಾಗೂ ಮಧ್ಯಪ್ರದೇಶ (6%) ಮೂರನೇ ಎರಡರಷ್ಟು ಪಾಲು ಹೊಂದಿವೆ.
ಆಹಾರ ಕೊರತೆ ಅಥವಾ ಪೌಷ್ಠಿಕ ಆಹಾರವಿಲ್ಲದಿರುವ ಬಗ್ಗೆ ವಿವರಿಸಿರುವ ವರದಿ, “ಮಗುವು ಅಗತ್ಯವಿರುವ ಕ್ಯಾಲೋರಿಫಿಕ್ ಅಂಶದ ಯಾವುದೇ ಆಹಾರ ಸೇವಿಸಿಲ್ಲ (ಅಂದರೆ, ಮಗು ಕಳೆದ 24 ಗಂಟೆಗಳಲ್ಲಿ ಯಾವುದೇ ಘನ/ಅರೆ-ಘನ/ ಮೃದು/ ಮೆತ್ತಗಿನ ಆಹಾರ ಅಥವಾ ತಾಜಾ ಹಾಲು ಸೇವಿಸದಿರುವುದು)” ಎಂದು ತಾಯಂದಿರು ನೀಡಿರುವ ಮಾಹಿತಿಯನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ” ಎಂದು ಹೇಳಿದೆ.
1993, 1999, 2006, 2016 ಮತ್ತು 2021ರಲ್ಲಿ ನಡೆದಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಗಳ (ಎನ್‌ಎಫ್‌ಎಚ್‌ಎಸ್) ದತ್ತಾಂಶ ಉಲ್ಲೇಖಿಸಿ ‘ದಿ ಲ್ಯಾನ್ಸೆಟ್’ ಭಾರತದಲ್ಲಿ ಆಹಾರದ ಕೊರತೆ ಹೆಚ್ಚಾಗಿದೆ ಎಂದು ಹೇಳಿದೆ. 1993ರಲ್ಲಿ ಶೇ 20.0ರಷ್ಟಿದ್ದ ಆಹಾರ ಕೊರತೆಯು 2021ರ ವೇಳೆಗೆ ಶೇ 17.8ಕ್ಕೆ ಇಳಿದಿದೆ. 2021ರ ಸಮೀಕ್ಷೆಯಂತೆ 60 ಲಕ್ಷ ಮಕ್ಕಳು ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ.
‘ದಿ ಲ್ಯಾನ್ಸೆಟ್‘ ವರದಿಯನ್ನು ಆಡಳಿತ ಬಿಜೆಪಿ ಸರ್ಕಾರ ಟೀಕಿಸಿ ತಳ್ಳಿಹಾಕಿದೆ. “ಈ ವರದಿಯು ‘ಕೃತಕ’ವಾಗಿದ್ದು, ಇದು ಓದುಗರನ್ನು ಮತ್ತು ಆಡಳಿತವನ್ನು ದಾರಿ ತಪ್ಪಿಸುತ್ತದೆ” ಎಂದು ಭಾರತೀಯ ಆಹಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
“ಶಿಶುಗಳು ಮತ್ತು ಚಿಕ್ಕ ಮಕ್ಕಳು ಎದೆ ಹಾಲನ್ನು ಕುಡಿಯುತ್ತವೆ. ಎದೆ ಹಾಲನ್ನು ಹೊರಗಿಟ್ಟು ಆಹಾರ ಕೊರತೆಯ ಬಗ್ಗೆ ಜರ್ನಲ್ ವರದಿ ಮಾಡಿದೆ” ಎಂದು ಮುಂಬೈನ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸೈನ್ಸಸ್ (ಐಐಪಿಎಸ್) ಅಸೋಸಿಯೇಟ್ ಪ್ರೊಫೆಸರ್ ಡಾ ಶ್ರೀನಿವಾಸ್ ಗೋಲಿ ಹೇಳಿದ್ದಾರೆ.
‘ದಿ ಲ್ಯಾನ್ಸೆಟ್’ ವರದಿಯಂತೆ ಶೇ. 17.8 ಮಕ್ಕಳಲ್ಲಿ ಆಹಾರ ಕೊರತೆಯಿದೆ ಎಂಬುದನ್ನು ಒಪ್ಪಿಕೊಳ್ಳಲಾಗದು. ನಾವು ಆಹಾರದ ವ್ಯಾಖ್ಯಾನದಲ್ಲಿ ಎದೆ ಹಾಲನ್ನು ಪರಿಗಣಿಸಿದರೆ, ನಿಜವಾದ ಆಹಾರ ಕೊರತೆ ಅಂಕಿಅಂಶವು ಶೇ 1.3ರಷ್ಟು ಮಾತ್ರವಿದೆ ಎಂದು ಗೋಲಿ ವಾದಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಆರೋಗ್ಯ ಹಕ್ಕು ಮಸೂದೆ ವಿರುದ್ಧ ರಾಜಸ್ಥಾನದ ವೈದ್ಯರೇಕೆ ತಿರುಗಿ ಬಿದ್ದಿದ್ದಾರೆ?
“ಕ್ಯಾಲರಿಯುಕ್ತ ಆಹಾರದಿಂದ ವಂಚಿತವಾಗಿರುವ ಮಕ್ಕಳಲ್ಲಿ ಹೆಚ್ಚಿನವರು (ಸುಮಾರು ಶೇ. 65) 6-11 ತಿಂಗಳ ವಯಸ್ಸಿನ-ಗುಂಪಿಗೆ ಸೇರಿದವರು. ಅವರು ಎದೆಹಾಲು ಕುಡಿಯುವವರಾಗಿದ್ದಾರೆ. ಬರೀ ಎದೆಹಾಲು ಮಕ್ಕಳಿಗೆ ಸಾಕಾಗುವುದಿಲ್ಲ. ಆದರೂ, ಈ ವಯಸ್ಸಿನ ಮಕ್ಕಳನ್ನು ಆಹಾರ ವಂಚಿತ ಮಕ್ಕಳ ಅಂಕಿ- ಅಂಶಕ್ಕೆ ಪರಿಗಣಿಸಲಾಗುವುದಿಲ್ಲ” ಎಂದು ಸಂಶೋಧಕರು ಹೇಳಿದ್ದಾರೆ.
ಸಮೀಕ್ಷೆಯಲ್ಲಿ ಭಾಗವಹಿಸಿದ 6ರಿಂದ 23 ತಿಂಗಳೊಳಗಿನ ಸುಮಾರು ಶೇ. 93ರಷ್ಟು ಮಕ್ಕಳು ಎದೆಹಾಲು ಕುಡಿಯುವವರು. ಅವರಲ್ಲಿ 6ರಿಂದ 11 ತಿಂಗಳ ವಯಸ್ಸಿನ ಶಿಶುಗಳ ಸಂಖ್ಯೆ ಹೆಚ್ಚಾಗಿತ್ತು. ಈ ವಯಸ್ಸಿನ ಮಕ್ಕಳು ಅಗತ್ಯ ಕ್ಯಾಲರಿಗಳನ್ನು ಎದೆಹಾಲಿನಿಂದಲೇ ಪಡೆಯುತ್ತಾರೆ. ಆದ್ದರಿಂದ, ‘ಆಹಾರ’ದ ವ್ಯಾಖ್ಯಾನದಲ್ಲಿ ಎದೆಹಾಲನ್ನು ಬಿಟ್ಟುಬಿಡುವ ಪರಿಕಲ್ಪನೆಯು ‘ಕೃತಕವಾಗಿ ಸಂಖ್ಯೆಗಳನ್ನು ಹೆಚ್ಚಿಸುತ್ತದೆ’ ಮತ್ತು ಓದುಗರು ಮತ್ತು ಆಡಳಿತಕ್ಕೆ ಅನಗತ್ಯ ಎಚ್ಚರಿಕೆ ಸೃಷ್ಟಿಸುತ್ತದೆ” ಎಂದು ಐಐಪಿಎಸ್‌ನ ಎಪಿಡೆಮಿಯಾಲಜಿ ಮತ್ತು ಬಯೋಸ್ಟಾಟಿಸ್ಟಿಕ್ಸ್ ವಿಭಾಗದ ಪ್ರೊ. ಉದಯ ಎಸ್ ಮಿಶ್ರಾ ತಿಳಿಸಿದ್ದಾರೆ.