ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅತಿಯಾದ ಭದ್ರತಾ ಪಡೆಗಳನ್ನು ನಿಯೋಜಿಸಿರುವುದನ್ನು ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ತೀವ್ರವಾಗಿ ಖಂಡಿಸಿದ್ದಾರೆ. ಮಣಿಪುರ ಉರಿಯುತ್ತಿದ್ದಾಗ ಅಲ್ಲಿಗೆ ಕನಿಷ್ಠ ಭದ್ರತೆ ನೀಡದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಬೆದರಿಸಲು ಅಲ್ಲಿ ಎರಡು ಲಕ್ಷಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜಿಸಿದೆ ಎಂದು ಆರೋಪಿಸಿದ್ದಾರೆ.
ಶಿವಸೇನೆ (ಯುಬಿಟಿ) ಕಾರ್ಮಿಕ ಸಂಘದ 48ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿರುವ ಠಾಕ್ರೆ, ಪಶ್ಚಿಮ ಬಂಗಾಳದ ಸದ್ಯದ ಪರಿಸ್ಥಿತಿಯ ಕುರಿತು ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. “ಮಣಿಪುರದಲ್ಲಿ ಹಿಂಸಾಚಾರ ಉಲ್ಬಣಗೊಂಡು ಇಡೀ ರಾಜ್ಯವೇ ಹೊತ್ತಿ ಉರಿಯುತ್ತಿದ್ದಾಗ ಕಾನೂನು ಸುವ್ಯವಸ್ಥೆ ಕಾಪಾಡಲು ಅಲ್ಲಿ ಕೇವಲ 30,000 ಸಿಆರ್‌ಪಿಎಫ್ ಸಿಬ್ಬಂದಿ ಇದ್ದರು. ಆದರೆ ಈಗ ಬಂಗಾಳದಲ್ಲಿ ಚುನಾವಣೆ ನಡೆಯುತ್ತಿದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಅಲ್ಲಿಗೆ 2 ಲಕ್ಷಕ್ಕೂ ಅಧಿಕ ಸಿಬ್ಬಂದಿಯನ್ನು ರವಾನಿಸಿದೆ. ಅಂದರೆ ಅಲ್ಲಿ ಮತದಾನದ ದಿನ ಮತದಾರರಿಗಿಂತ ಭದ್ರತಾ ಸಿಬ್ಬಂದಿಯೇ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದಾರೆ” ಠಾಕ್ರೆ ವ್ಯಂಗ್ಯವಾಡಿದ್ದಾರೆ.
ಭದ್ರತಾ ಸಿಬ್ಬಂದಿಯನ್ನು ಜನರ ಸುರಕ್ಷತೆಗಾಗಿ ನಿಯೋಜಿಸಲಾಗಿದೆಯೇ ಅಥವಾ ಅವರಲ್ಲಿ ಭಯ ಹುಟ್ಟಿಸಲು ನಿಯೋಜಿಸಲಾಗಿದೆಯೇ? ಇಷ್ಟು ದೊಡ್ಡ ಮಟ್ಟದ ಸೇನೆಯ ಉಪಸ್ಥಿತಿಯಲ್ಲಿ ಮತದಾರರು ಹೇಗೆ ನಿರ್ಭಯವಾಗಿ ಬಂದು ಮತ ಚಲಾಯಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ. “ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲೆ ಗೌರವವಿಲ್ಲ. ಹೇಗಾದರೂ ಮಾಡಿ ಚುನಾವಣೆಯಲ್ಲಿ ಗೆಲ್ಲಬೇಕು ಎಂಬುದು ಅವರ ಏಕೈಕ ಉದ್ದೇಶವಾಗಿದೆ” ಎಂದು ಅವರು ಕಿಡಿಕಾರಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಬಿಜೆಪಿಯ ವಿರುದ್ಧ ಒಂಟಿ ಸಲಗದಂತೆ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಪಶ್ಚಿಮ ಬಂಗಾಳದ ಜನರು ಮಮತಾ ಅವರಿಗೆ ಬೆಂಬಲ ನೀಡಬೇಕು ಮತ್ತು ಟಿಎಂಸಿ ಪಕ್ಷವನ್ನೇ ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಚುನಾವಣೆ : ಅಗ್ನಿಪರೀಕ್ಷೆಯಲ್ಲಿ ಪಾಸ್ ಆಗುತ್ತಾರಾ ದೀದಿ?
ಮಹಾರಾಷ್ಟ್ರದ ಕಾನೂನು ಸುವ್ಯವಸ್ಥೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಪ್ರಸ್ತಾಪಿಸಿರುವ ಅವರು, “ರಾಜ್ಯದಲ್ಲಿ ಗಂಭೀರ ಸಮಸ್ಯೆಗಳಿರುವಾಗ ನಮ್ಮ ಮುಖ್ಯಮಂತ್ರಿಗಳು (ಏಕನಾಥ್ ಶಿಂಧೆ) ಪಶ್ಚಿಮ ಬಂಗಾಳದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಅವರಿಗೆ ಸ್ವಂತ ರಾಜ್ಯಕ್ಕಿಂತ ಚುನಾವಣೆ ನಡೆಯುತ್ತಿರುವ ರಾಜ್ಯವೇ ಮುಖ್ಯವಾಯಿತೇ?” ಎಂದು ಟೀಕಿಸಿದ್ದಾರೆ. ಚುನಾವಣಾ ಆಯೋಗ ಮತ್ತು ಇತರ ಕೇಂದ್ರೀಯ ಸಂಸ್ಥೆಗಳ ಸಹಾಯದಿಂದ ಬಿಜೆಪಿ ಚುನಾವಣೆಗಳನ್ನು ಹದಗೆಡಿಸುತ್ತಿದೆ ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆಯನ್ನು ಹತ್ತಿಕ್ಕುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.





