ಲೋಕಸಭೆ ಚುನಾವಣೆ 2024 ಅಂತಿಮ ಘಟ್ಟ ಪ್ರವೇಶಿಸುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಈಗಾಗಲೇ ನಾಲ್ಕು ಹಂತದ ಚುನಾವಣಾ ಪ್ರಕ್ರಿಯೆ ನಡೆದಿದ್ದು, ಇನ್ನೂ ಕೂಡ ಮೂರು ಹಂತದ ಚುನಾವಣೆ ನಡೆಯಬೇಕಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ.
ಚುನಾವಣಾ ಸಮೀಕ್ಷೆಗಳನ್ನು ನಡೆಸುವ ಪ್ರಧಾನ ಸಂಸ್ಥೆಯಾದ ಸಿ-ಫೋರ್‌ನ ಸಂಸ್ಥಾಪಕ, ಚುನಾವಣಾ ಶಾಸ್ತ್ರಜ್ಞ ಪ್ರೇಮ್‌ಚಂದ್ ಪಾಲೆಟಿ, ಲೋಕಸಭಾ ಚುನಾವಣೆಯ ಕುರಿತು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಸಂದರ್ಶನ ನೀಡಿದ್ದು, ಈ ಸಂದರ್ಶನದಲ್ಲಿ, “ಈಗಿನ ಟ್ರೆಂಡಿಂಗ್ ಪ್ರಕಾರ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಕೂಡ ಮುಂದಿನ ಬಾರಿ ಸರ್ಕಾರ ರಚಿಸಿದರೆ ಅಚ್ಚರಿಯಿಲ್ಲ” ಎಂದಿದ್ದಾರೆ.
“ಷೇರು ಮಾರುಕಟ್ಟೆಗಳು ಊಹಾತ್ಮಕವಾಗಿವೆ. ದೇಶದ ಷೇರು ಮಾರುಕಟ್ಟೆಯು ಸಮೀಕ್ಷೆಯಲ್ಲಿ ಬರುವ ಪ್ರತಿಕ್ರಿಯೆಯನ್ನೂ ಕೂಡ ಅವಲಂಬಿಸಿಕೊಂಡಿದೆ. ನಿಜವಾದ ಮತಗಟ್ಟೆ ಸಮೀಕ್ಷೆಗಳನ್ನು ನಡೆಸುತ್ತಿರುವ ಹೆಚ್ಚಿನ ಸಮೀಕ್ಷೆಗಾರರು ಬಿಜೆಪಿಗೆ, ಒಂದು ತಿಂಗಳ ಹಿಂದೆ ನಿರೀಕ್ಷಿಸಿದಷ್ಟು ಸ್ಥಾನಗಳು ಬರುವುದಿಲ್ಲ ಎಂದು ಭಾವಿಸಿದ್ದಾರೆ” ಎಂದು ಪ್ರೇಮ್‌ಚಂದ್ ತಿಳಿಸಿದ್ದಾರೆ.
“ಪ್ರಧಾನಮಂತ್ರಿಯವರು ನುಸುಳುಕೋರರು, ಮುಸ್ಲಿಮರು, ಮೀಸಲಾತಿಯಂತಹ ಕೋಮು ವಿಭಜಕ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ ಮತ್ತು ಪ್ರತಿಪಕ್ಷಗಳು ಅದಾನಿಗಳು ಮತ್ತು ಅಂಬಾನಿಗಳಿಂದ ಕಪ್ಪು ಹಣವನ್ನು ಸ್ವೀಕರಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಪುಲ್ವಾಮಾ, ಬಾಲಕೋಟ್ ಬಿಜೆಪಿಗೆ ಸಹಾಯ ಮಾಡಿತ್ತು. ಈ ಚುನಾವಣೆಯಲ್ಲಿ ಅಂತಹ ಯಾವುದೇ ಸಮಸ್ಯೆ ಇಲ್ಲದಿರುವುದರಿಂದ ಬಿಜೆಪಿ ಕೆಲವು ಧಾರ್ಮಿಕ ಧ್ರುವೀಕರಣವನ್ನು ಸೃಷ್ಟಿಸಲು ಬಯಸುತ್ತಿದೆ. ಇದೆಲ್ಲದರ ಪರಿಣಾಮ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ” ಎಂದಿದ್ದಾರೆ.
“ಇದುವರೆಗಿನ ನಾಲ್ಕು ಹಂತಗಳಲ್ಲಿ, ಬಿಜೆಪಿ ಕೆಲವು ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಎನ್‌ಡಿಎ ಬಹುಮತಕ್ಕಿಂತ ಕೆಳಗೆ ಇಳಿಯುವ ಸಾಧ್ಯತೆಯಿದೆ. ನಿರುದ್ಯೋಗ ಮತ್ತು ಹಣದುಬ್ಬರವು ಮತದಾರರ ಕಾಳಜಿಯಾಗಿದೆ. ಅನೇಕ ಮತದಾರರು ಈಗಿನ ನಾಯಕತ್ವದ ಸರ್ವಾಧಿಕಾರಿ ಧೋರಣೆ ಮತ್ತು ವಿಪಕ್ಷಗಳ ರಾಜಕಾರಣಿಗಳ ಗುರಿಯನ್ನು ಇಷ್ಟಪಡುತ್ತಿಲ್ಲ, ಇದು ಮೋದಿಯವರ ನಾಯಕತ್ವದ ಮೇಲೆ ಪರಿಣಾಮ ಬೀರಬಹುದು” ಎಂದು ತಿಳಿಸಿದ್ದಾರೆ.
“ರಾಜಸ್ಥಾನದ ಹಲವು ಮತದಾರರು ನೂತನ ಮುಖ್ಯಮಂತ್ರಿಯ ಆಯ್ಕೆಯಿಂದ ಸಂತುಷ್ಟರಾಗಿಲ್ಲ. ಇದು ಬಿಜೆಪಿಯ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು. ಯುಪಿ ಸೇರಿದಂತೆ ಹೆಚ್ಚಿನ ರಾಜ್ಯಗಳಲ್ಲಿ ಸಾಮಾಜಿಕವಾಗಿ ಹಿಂದುಳಿದ ವರ್ಗಗಳು ಬಿಜೆಪಿಯನ್ನು ಮೇಲ್ಜಾತಿ ಮತ್ತು ಮೇಲ್ವರ್ಗದ ಪಕ್ಷವೆಂದು ಗ್ರಹಿಸುತ್ತಾರೆ. ರೈತರೂ ಅತೃಪ್ತರಾಗಿದ್ದಾರೆ. ಇವು ಕೂಡ ಎನ್‌ಡಿಎ ಮೈತ್ರಿಕೂಟಕ್ಕೆ ಹಿನ್ನಡೆ ತಂದೊಡ್ಡುವ ಸಾಧ್ಯತೆ ಕಾಣಿಸುತ್ತಿದೆ” ಎಂದು ಚುನಾವಣಾ ಶಾಸ್ತ್ರಜ್ಞ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಹಿಂದೂ-ಮುಸ್ಲಿಮ್ ರಾಜಕಾರಣ ಮಾಡುವುದಿಲ್ಲವೇ ನಮ್ಮ ಪ್ರಧಾನಿ!
“ಕರ್ನಾಟಕ, ತೆಲಂಗಾಣ, ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಬಿಹಾರ ಬಿಜೆಪಿಯ ಭವಿಷ್ಯವನ್ನು ಬದಲಿಸಬಲ್ಲ ರಾಜ್ಯಗಳಾಗಿವೆ. ಆದರೆ I.N.D.I.A ಮೈತ್ರಿಕೂಟ ಮುಂದಿನ ಸರ್ಕಾರ ರಚಿಸುವ ಸಾಧ್ಯತೆಯಿದೆ” ಎಂದು ಚುನಾವಣಾ ಶಾಸ್ತ್ರಜ್ಞ ಪ್ರೇಮ್‌ಚಂದ್ ಪಾಲೆಟಿ ಸಂದರ್ಶನದಲ್ಲಿ ತಿಳಿಸಿದ್ದಾರೆ.
