“ಪ್ರಧಾನಿ ಮೋದಿ ಭಾರತದ ವಿದೇಶಾಂಗ ನೀತಿಯನ್ನು ಅವರ ವೈಯಕ್ತಿಕ ವಿದೇಶಾಂಗ ನೀತಿಯಾಗಿಸಿದ್ದಾರೆ” ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಸಂಸತ್ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಸಂಧಾನದ ಮಾತುಕತೆಗೆ ಮುಂದಾಗಿದೆ. ಆದರೆ, ನಮ್ಮ ಪ್ರಧಾನಿ ಜಾಗತಿಕ ರಾಜಕಾರಣದಲ್ಲಿ ಭಾರತವನ್ನು ಹೊರಗಿಡುವ ಸ್ಥಿತಿ ನಿರ್ಮಿಸಿದ್ದಾರೆ. ಟ್ರಂಪ್ ಹೇಳುವ ಪ್ರತಿ ಮಾತನ್ನು ಶಿರಸಾವಹಿಸಿ ಪಾಲಿಸುವ ಮೋದಿ ಅಮೆರಿಕದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಟ್ರಂಪ್ ಮೋದಿಯನ್ನು ಹೇಗೆ ನಿಯಂತ್ರಿಸುವುದು ಎನ್ನುವುದನ್ನು ಬಲ್ಲರು. ಮೋದಿ ರಾಷ್ಟ್ರದ ಹಿತಾಸಕ್ತಿಯ ಜೊತೆಗೆ ಹೊಂದಿಕೆ ಮಾಡಿಕೊಂಡು ಆಡಳಿತ ಮಾಡುತ್ತಿದ್ದಾರೆ. ಇಸ್ರೇಲ್ ಹಾಗೂ ಅಮೆರಿಕ ಹೇಳುವುದನ್ನು ಮೋದಿ ಮರುಪ್ರಶ್ನಿಸದೇ ಮಾಡುತ್ತಾರೆ ಎಂದಿದ್ದಾರೆ.

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕೂಡ ಮೋದಿಯ ಎಡಬಿಡಂಗಿ ನೀತಿಯನ್ನು ತರಾಟೆಗೆ ತೆಗೆದು ಕೊಂಡರು. ಮಧ್ಯಪ್ರಾಚ್ಯ ಸಂಘರ್ಷವು ಜಗತ್ತಿಗೆ ಭಾರತ ವಿಶ್ವಗುರು ಎನಿಸಿಕೊಳ್ಳುವ ಅವಕಾಶ ತಂದುಕೊಟ್ಟಿತು. ಈ ಅವಕಾಶವನ್ನು ಆಡಳಿತ ಸರ್ಕಾರ ಹೇಗೆ ಕೈ ಚೆಲ್ಲಿತು ಎಂದು ಉತ್ತರಿಸಲಿ ಎಂದರು.




