ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಮಂಗಳವಾರ ನವದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹವಾಮಾನ ಬದಲಾವಣೆಯಿಂದಾಗಿ ಸೋನಿಯಾ ಅವರು ಅಸ್ವಸ್ಥರಾಗಿದ್ದು ಸದ್ಯ ವೈದ್ಯರ ನಿಗಾದಲ್ಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಸೋನಿಯಾರನ್ನು ಆಸ್ಪತ್ರೆಗೆ ದಾಖಲಿಸುವಾಗ ಅವರ ಮಕ್ಕಳು ಮತ್ತು ಲೋಕಸಭಾ ಸಂಸದರಾದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಆಸ್ಪತ್ರೆಯಲ್ಲಿ ಹಾಜರಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿಯವರ ತಾಯಿ ಮಾತ್ರ ಹೆಣ್ಣೇ! ಸೋನಿಯಾರನ್ನು ಅವಮಾನಿಸುವುದು ಸರಿಯೇ?
ಇನ್ನು ರಾಜ್ಯಸಭಾ ಸಂಸದೆಯನ್ನು ಈ ಹಿಂದೆ ಜನವರಿಯಲ್ಲಿ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಸಮಯದಲ್ಲಿ, ದೆಹಲಿಯ ಚಳಿಗಾಲ ಮತ್ತು ವಾಯು ಮಾಲಿನ್ಯದ ಪರಿಣಾಮ ಸೋನಿಯಾ ಅವರ ಮೇಲೆ ಬೀರಿತ್ತು. ಅವರಿಗೆ ಶ್ವಾಸನಾಳದ ಆಸ್ತಮಾ ಸ್ವಲ್ಪ ಉಲ್ಬಣಗೊಂಡಿತ್ತು.
2025ರಲ್ಲಿ ಸೋನಿಯಾ ಅವರನ್ನು ವಿವಿಧ ಕಾರಣಗಳಿಗಾಗಿ ಮೂರು ಬಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ವರ್ಷ ಜೂನ್‌ನಲ್ಲಿ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಅವರನ್ನು ಸರ್ ಗಂಗಾ ರಾಮ್‌ಗೆ ದಾಖಲಿಸಲಾಗಿತ್ತು. ಅದೇ ತಿಂಗಳ ಆರಂಭದಲ್ಲಿ, ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳ ಕಾರಣ ನಾಯಕಿಯನ್ನು ಶಿಮ್ಲಾದಲ್ಲಿ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಕ್ಕೂ ಹಿಂದೆ 2025ರ ಫೆಬ್ರವರಿಯಲ್ಲಿ ಸೋನಿಯಾ ಗಾಂಧಿಯನ್ನು ಸರ್ ಗಂಗಾ ರಾಮ್‌ಗೆ ದಾಖಲಿಸಲಾಗಿತ್ತು.
79 ವರ್ಷದ ಸೋನಿಯಾ ಅವರು ರಾಜ್ಯಸಭೆಗೆ ಆಯ್ಕೆಯಾಗುವ ಮೊದಲು ಐದು ಬಾರಿ ಲೋಕಸಭಾ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಪಕ್ಷದಲ್ಲಿ ಎರಡು ಬಾರಿ ಅಧ್ಯಕ್ಷರೂ ಆಗಿದ್ದರು.




