ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಾಗಾಲ್ಯಾಂಡ್‌ನಾದ್ಯಂತ ಪ್ರವಾಹ ಉಂಟಾಗಿದ್ದು ಮೂವರು ಬಲಿಯಾಗಿದ್ದಾರೆ. ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ದಿಮಾಪುರದಲ್ಲಿ ಮನೆಯೊಂದರಲ್ಲಿ ಮಳೆ ವೇಳೆ ವಿದ್ಯುತ್ ಅವಘಡ ಸಂಭವಿಸಿ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಪ್ರವಾಹದ ನೀರು ವಸತಿ ಪ್ರದೇಶಗಳಿಗೆ ನುಗ್ಗಿದ್ದು, ಎದೆಯೆತ್ತರದವರೆಗೆ ತುಂಬಿರುವ ನೀರಿನಲ್ಲೇ ಜನರು ಓಡಾಟ ನಡೆಸುತ್ತಿದ್ದಾರೆ. ಬರ್ಮಾ ಕ್ಯಾಂಪ್ ಮತ್ತು ಕುಡಾ ಗ್ರಾಮದಲ್ಲಿ ಪ್ರವಾಹ ಹೆಚ್ಚಾಗಿದೆ.
ಇದನ್ನು ಓದಿದ್ದೀರಾ? ನಾಗಾಲ್ಯಾಂಡ್, ಅರುಣಾಚಲದಲ್ಲಿ 6 ತಿಂಗಳು ಎಎಫ್‌ಎಸ್‌ಪಿಎ ಸ್ಥಾನಮಾನ ವಿಸ್ತರಣೆ
ಭಾರೀ ಮಳೆಯಿಂದಾಗಿ ರನ್‌ವೇ ಮತ್ತು ಪಾರ್ಕಿಂಗ್ ಪ್ರದೇಶಗಳು ಜಲಾವೃತವಾಗಿದ್ದು, ದಿಮಾಪುರ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಕಾರ್ಯಾಚರಣೆಯನ್ನು ಭಾನುವಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಪ್ರಯಾಣಿಕರು ನೇರವಾಗಿ ವಿಮಾನಯಾನ ಸಂಸ್ಥೆಗಳಿಂದ ಹೆಚ್ಚಿನ ಮಾಹಿತಿಯನ್ನು ಪಡೆಯುವಂತೆ ಸೂಚಿಸಲಾಗಿದೆ. ದಿಮಾಪುರವನ್ನು ಕೊಹಿಮಾದೊಂದಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 29 ಕೂಡ ಪ್ರವಾಹದಿಂದ ತುಂಬಿದೆ.
ಭೂಕುಸಿತ ಉಂಟಾಗಿ ನಾಲ್ಕು ಪಥದ ಹೆದ್ದಾರಿಯ ಕೆಲವು ಭಾಗಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ವಾಹನ ಸಂಚಾರಕ್ಕೆ ತೀವ್ರ ಪರಿಣಾಮ ಬೀರಿವೆ. ದಿಮಾಪುರ, ಕೊಹಿಮಾ ಮತ್ತು ನಿಯುಲ್ಯಾಂಡ್ ಜಿಲ್ಲೆಗಳು ಹೆಚ್ಚು ಹಾನಿಗೊಳಗಾಗಿವೆ. ಸೇತುವೆಗಳು ಮುಳುಗಿದ್ದು, ಮನೆಗಳು, ಭತ್ತದ ಗದ್ದೆಗಳಿಗೆ ಹಾನಿಯಾಗಿದೆ. ನಿಯುಲ್ಯಾಂಡ್ ಜಿಲ್ಲೆಯಲ್ಲಿ, 70 ಹಳ್ಳಿಗಳು ಪ್ರವಾಹಕ್ಕೆ ಸಿಲುಕಿದ್ದು, ಜನರು ದೋಣಿ ಬಳಸಿ ಸಂಚರಿಸುತ್ತಿದ್ದಾರೆ. ಸದ್ಯ 52 ಜನರನ್ನು ರಕ್ಷಿಸಲಾಗಿದೆ.
ಇದನ್ನು ಓದಿದ್ದೀರಾ? ಇಳಿ ಹೊತ್ತಿಗೆ ತಂಪಾದ ಇಳೆ; ಗುಡುಗು-ಮಿಂಚುಗಳಿಂದ ಕೂಡಿದ ಮಳೆ
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ದಿಮಾಪುರ ಉಪ ಆಯುಕ್ತ ಡಾ. ಟಿನೋಜೋಂಗ್ಶಿ ಚಾಂಗ್, “ನಿನ್ನೆ ರಾತ್ರಿಯಿಂದ ಮತ್ತೆ ಮಳೆಯಾಗಿಲ್ಲ. ಅದರಿಂದಾಗಿ ನೀರಿನ ಮಟ್ಟ ಕ್ರಮೇಣ ಕಡಿಮೆಯಾಗಲಿದೆ. ಆದರೂ ಮುಂದಿನ ದಿನಗಳಲ್ಲಿ ಮಳೆ ಅಧಿಕವಾಗುವ ನಿರೀಕ್ಷೆಯಿರುವ ಕಾರಣ ಅಧಿಕಾರಿಗಳು ಜಾಗರೂಕರಾಗಿದ್ದಾರೆ” ಎಂದು ತಿಳಿಸಿದ್ದಾರೆ.
ವಾರದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ಪರಿಸ್ಥಿತಿಯನ್ನು ನಿರ್ಣಯಿಸಲು ಸ್ಥಳೀಯ ಆಡಳಿತ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಇಂದು ಸಮನ್ವಯ ಸಭೆ ನಡೆಸಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
