ನಾಗಾಲ್ಯಾಂಡ್‌, ಅರುಣಾಚಲದಲ್ಲಿ 6 ತಿಂಗಳು ಎಎಫ್‌ಎಸ್‌ಪಿಎ ಸ್ಥಾನಮಾನ ವಿಸ್ತರಣೆ

Date:

ನಾಗಾಲ್ಯಾಂಡ್‌ ಮತ್ತು ಅರುಣಾಚಲ ಪ್ರದೇಶದ ಭಾಗಗಳಲ್ಲಿ ಸಶಸ್ತ್ರ ಪಡೆಗಳು (ವಿಶೇಷ ಅಧಿಕಾರಗಳು) ಕಾಯಿದೆ, 1958ರ (ಎಎಫ್‌ಎಸ್‌ಪಿಎ) ಅಡಿ ವಿಧಿಸಲಾಗಿರುವ ‘ತೊಂದರೆಗೊಳಗಾದ ಪ್ರದೇಶ’ ಸ್ಥಾನಮಾನವನ್ನು 6 ತಿಂಗಳವರೆಗೆ ವಿಸ್ತರಿಸಿ ಕೇಂದ್ರ ಗೃಹ ಸಚಿವಾಲಯ ಶುಕ್ರವಾರ (ಮಾರ್ಚ್ 23) ಅಧಿಸೂಚನೆ ಹೊರಡಿಸಿದೆ.

ಎರಡೂ ರಾಜ್ಯಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಶೀಲಿಸಿದ ನಂತರ ಈ ತೀರ್ಮಾನ ಕೈಗೊಂಡಿರುವುದಾಗಿ ಗೃಹ ಸಚಿವಾಲಯ ಹೇಳಿದೆ.

ಯಾವುದೇ ವ್ಯಕ್ತಿಯನ್ನು ಆಧಾರ ಪತ್ರವಿಲ್ಲದೆ ಬಂಧಿಸುವ ಅಥವಾ ಅವರ ಮನೆಯನ್ನು ಶೋಧಿಸುವ ಮತ್ತು ಇತರ ಕಾನೂನು ಕ್ರಮಗಳನ್ನು ಕೈಗೊಳ್ಳಲು ಎಎಫ್‌ಎಸ್‌ಪಿಎ ಕಾಯಿದೆ ಭದ್ರತಾ ಪಡೆಗಳಿಗೆ ಅಧಿಕಾರ ನೀಡುತ್ತದೆ.

ಕೇಂದ್ರ ಸರ್ಕಾರ ಎಎಫ್‌ಎಸ್‌ಪಿಎ 1958ರ ಸೆಕ್ಷನ್‌ 3ರ ಅಡಿ ನೀಡಲಾದ ಅಧಿಕಾರವನ್ನು ಬಳಸಿ 2022ರ ಸೆಪ್ಟೆಂಬರ್‌ 30 ರಂದು ಅರುಣಾ ಅರುಣಾಚಲ ಪ್ರದೇಶದ ಚಾಂಗ್ಲಾಂಗ್, ತಿರಾಪ್ ಮತ್ತು ಲಾಂಗ್ಡಿಂಗ್ ಜಿಲ್ಲೆಗಳು ಮತ್ತು ನಮ್ಸಾಯಿ ಜಿಲ್ಲೆಯ ನಮ್ಸಾಯಿ ಮತ್ತು ಮಹದೇವಪುರ ಪೊಲೀಸ್ ಠಾಣೆಗಳ ವ್ಯಾಪ್ತಿಯ ಪ್ರದೇಶಗಳಿಗೆ ‘ತೊಂದರೆಗೊಳಗಾದ ಪ್ರದೇಶ’ ಎಂಬ ಸ್ಥಾನಮಾನ ನೀಡಲಾಗಿದೆ ಎಂದು ಗೃಹ ಸಚಿವಾಲಯದ ಅಧಿಸೂಚನೆ ಉಲ್ಲೇಖಿಸಿದೆ. 

ಏನಿದು ಎಎಫ್‌ಎಸ್‌ಪಿಎ ಕಾಯ್ದೆ?

ವಿವಾದಾತ್ಮಕ ಎಫ್‌ಎಸ್‌ಪಿಎ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ನಾಗಾಲ್ಯಾಂಡ್ ಮುಖ್ಯಮಂತ್ರಿ ನೀಫಿಯು ರಿಯೋ ಕೇಂದ್ರ ಸರ್ಕಾರಕ್ಕೆ ಈ ಹಿಂದೆ ಪತ್ರ ಬರೆದಿದ್ದರು. ಇದಕ್ಕೆ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ದನಿಗೂಡಿಸಿದ್ದರು.

ಆಂತರಿಕ ಗಲಭೆಗಳು, ಅಡ್ಡಿಗಳನ್ನು ನಿಭಾಯಿಸಲು ಸಮರ್ಥವಲ್ಲದ ರಾಜ್ಯ ಸರ್ಕಾರಗಳಿಗೆ ನೆರವು ನೀಡುವ ಉದ್ದೇಶದಿಂದ ಎಎಫ್‌ಎಸ್‌ಪಿಎ ಯನ್ನು ಜಾರಿಗೆ ತರಲಾಗಿತ್ತು. ಸರ್ಕಾರ ‘ಗೊಂದಲಪೀಡಿತ’ ಎಂದು ಗುರುತಿಸಿದ ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸರಿದಾರಿಗೆ ತರಲು ಎಎಫ್‌ಎಸ್‌ಪಿಎ ಕಾಯ್ದೆಯು ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ಹಾಗೂ ಕಾನೂನಿನ ರಕ್ಷಣೆಯನ್ನು ನೀಡುತ್ತದೆ.

ತೊಂದರೆಗೊಳಗಾದ ಪ್ರದೇಶಗಳ (ವಿಶೇಷ ನ್ಯಾಯಾಲಯಗಳು) ಕಾಯ್ದೆ 1976ರ ಅಡಿ ಸಮಸ್ಯೆಗೆ ಒಳಗಾಗಿರುವ ಎಂದು ಸರ್ಕಾರ ಗುರುತಿಸಿರುವ ಪ್ರದೇಶಗಳಲ್ಲಿ ಭಾರತೀಯ ಸೇನೆ, ವಾಯುಪಡೆ ಹಾಗೂ ಕೇಂದ್ರ ಅರೆಸೇನಾ ಪಡೆಗಳು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಈ ಕಾಯ್ದೆ ಅಧಿಕಾರ ನೀಡುತ್ತದೆ.

ಕಾನೂನು ಮತ್ತು ಸುವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುವ ಯಾರ ಮೇಲೆಯಾದರೂ ಗುಂಡು ಹಾರಿಸುವ ಅಧಿಕಾರವನ್ನು ಈ ಕಾಯ್ದೆ ನೀಡುತ್ತದೆ. ಯಾರನ್ನೇ ಆದರೂ ಅಧಿಕಾರ ಪತ್ರ ಇಲ್ಲದೆ ಬಂಧಿಸಲು, ಯಾವುದೇ ವಾಹನ ಅಥವಾ ಹಡಗನ್ನು ತಡೆಯಲು ಮತ್ತು ಪರಿಶೀಲಿಸಲು ಹಾಗೂ ಐದು ಅಥವಾ ಅದಕ್ಕಿಂತ ಹೆಚ್ಚಿನ ಜನರು ಗುಂಪುಗೂಡದಂತೆ ನಿಷೇಧಿಸುವುದು ಈ ಕಾಯ್ದೆಯ ಕೆಲವು ವಿಶೇಷ  ಅಧಿಕಾರಗಳಲ್ಲಿ ಸೇರಿವೆ.

ನಾಗರಿಕರು ಶಸ್ತ್ರಾಸ್ತ್ರಗಳನ್ನು ಹೊಂದುವುದನ್ನು ಕೂಡ ಎಫ್‌ಎಸ್‌ಪಿಎ ನಿರ್ಬಂಧಿಸಿದೆ. ಜತೆಗೆ ಆಯೋಗದ ನಿಯಮಗಳಿಗೆ ಒಳಪಡದ ಅಧಿಕಾರಿಗಳಿಗೆ ವಿಶೇಷ ಅಧಿಕಾರವನ್ನು ಕೂಡ ನೀಡುತ್ತದೆ.

ಒಮ್ಮೆ ಒಂದು ಪ್ರದೇಶದ ಮೇಲೆ ಎಎಫ್‌ಎಸ್‌ಪಿಎ ಜಾರಿಯಾದರೆ, ಯಾವುದೇ ವ್ಯಕ್ತಿ ಏನೇ ಕೃತ್ಯ ಮಾಡಿದ್ದರೂ ಅಥವಾ ಮಾಡಲು ಉದ್ದೇಶಿಸಿದ್ದರೂ ಅವರ ವಿರುದ್ಧ ಕೇಂದ್ರ ಸರ್ಕಾರ ಈ ಹಿಂದೆ ನಿರ್ಬಂಧಗಳನ್ನು ವಿಧಿಸಿದ್ದರ ಹೊರತಾಗಿ ವಿಚಾರಣೆ ಇಲ್ಲದೆ, ಮೊಕದ್ದಮೆ ಅಥವಾ ಕಾನೂನು ಪ್ರಕ್ರಿಯೆಯನ್ನು ನಡೆಸದೆ ಈ ಕಾಯ್ದೆಯ ಅಡಿ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ.

ವಿವಾದ ಏನು?

ಸಶಸ್ತ್ರ ಪಡೆಗಳ ವಿಶೇಷ ಅಧಿಕಾರದಡಿ, ಸರ್ಕಾರ  ‘ತೊಂದರೆಗೊಳಗಾದ ಪ್ರದೇಶಗಳು’ ಎಂದು ಗುರುತಿಸಿರುವ ಕಡೆಗಳಲ್ಲಿ ಭದ್ರತಾ ಪಡೆಗಳು ನಕಲಿ ಎನ್‌ಕೌಂಟರ್‌ಗಳು ಹಾಗೂ ಇತರೆ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಮಾಡಿವೆ ಎಂದು ಅನೇಕ ಆರೋಪಗಳಿವೆ.

ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಪ್ರಕಾರ, ಮಣಿಪುರ ಒಂದರಲ್ಲೇ 2000 – 2012ರ ನಡುವೆ ನ್ಯಾಯಾಂಗದ ವ್ಯಾಪ್ತಿಗೆ ಸೇರದ ಕನಿಷ್ಠ 1528 ಹತ್ಯೆಗಳು ನಡೆದಿವೆ. ಇವುಗಳಲ್ಲಿ ಹೆಚ್ಚಿನ ಸಾವುಗಳಲ್ಲಿ ಸಂತ್ರಸ್ತರು ಭದ್ರತಾ ಪಡೆಗಳ ವಶದಲ್ಲಿ ಇರುವಾಗ ಮತ್ತು ವಿಪರೀತ ಚಿತ್ರಹಿಂಸೆ ನೀಡಿದ ಕ್ರೂರ ಕೊಲೆಗಳಾಗಿವೆ ಎಂದು ಆರೋಪಿಸಲಾಗಿದೆ.

ಭದ್ರತಾ ಪಡೆಗಳು ಈ ಭಾಗದಲ್ಲಿನ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯಗಳನ್ನು ಎಸಗಿರುವ ಆರೋಪವೂ ಇದೆ. 2004ರಲ್ಲಿ ಮಣಿಪುರದ ಮಹಿಳೆಯೊಬ್ಬರನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ ಎಂದು ಅಸ್ಸಾಂ ರೈಫಲ್ಸ್ ವಿರುದ್ಧ ಭಾರೀ ಪ್ರತಿಭಟನೆ ನಡೆದಿತ್ತು. ‘ಭಾರತೀಯ ಸೇನೆಯವರೇ ಬನ್ನಿ ನಮ್ಮನ್ನು ಅತ್ಯಾಚಾರ ಮಾಡಿ’ ಎಂಬ ಬ್ಯಾನರ್ ಹಿಡಿದು ಮಹಿಳೆಯರು ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದು, ಇಡೀ ದೇಶವನ್ನು ತಲ್ಲಣಗೊಳಿಸಿತ್ತು.

ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಇರೋಮ್ ಶರ್ಮಿಳಾ ಅವರಂತಹ ಕಾರ್ಯಕರ್ತರು ಎಎಫ್‌ಎಸ್‌ಪಿಎ ವಿರುದ್ಧ ವ್ಯಾಪಕ ಪ್ರತಿಭಟನೆಗಳನ್ನು ನಡೆಸಿದ್ದರು. ಶರ್ಮಿಳಾ ಅವರು ಕಾನೂನು ರದ್ದುಗೊಳಿಸಲು ಒತ್ತಾಯಿಸಿ 16 ವರ್ಷಗಳ ಸುದೀರ್ಘ ಉಪವಾಸ ಸತ್ಯಾಗ್ರಹ ನಡೆಸಿದ್ದರು.

2013ರಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ನೇತೃತ್ವದಲ್ಲಿ ಸುಪ್ರೀಂಕೋರ್ಟ್ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿ ಮಣಿಪುರದಲ್ಲಿ ನಡೆದ ಆರು ನಕಲಿ ಎನ್‌ಕೌಂಟರ್ ಆರೋಪದ ಮಾದರಿಗಳ ಬಗ್ಗೆ ತನಿಖೆ ನಡೆಸಿತ್ತು.

ಮಾಜಿ ಮುಖ್ಯ ಚುನಾವಣಾ ಆಯುಕ್ತ ಜೆಎಂ ಲಿಂಗ್ಡೋ ಮತ್ತು ಕರ್ನಾಟಕದ ನಿವೃತ್ತ ಡಿಜಿಪಿ ಅಜಯ್ ಕುಮಾರ್ ಸಿಂಗ್ ಇದರ ಇತರೆ ಸದಸ್ಯರಾಗಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತೆಲಂಗಾಣ ಚುನಾವಣೆ | ಬೆಳಗ್ಗೆ 11ರವರೆಗೆ ಶೇ.27ರಷ್ಟು ಹಕ್ಕು ಚಲಾಯಿಸಿದ ಮತದಾರರು

ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಘಡ, ಮಿಝೋರಾಂ, ರಾಜಸ್ಥಾನ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭಾ...

ಮಲ್ಲಿಕಾರ್ಜುನ ಖರ್ಗೆ ರಾಜಕೀಯ ಪಯಣ ಕುರಿತ ಪುಸ್ತಕ ಬಿಡುಗಡೆ ಮಾಡಿದ ಸೋನಿಯಾ ಗಾಂಧಿ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ರಾಜಕೀಯದಲ್ಲಿ 50 ವರ್ಷಗಳನ್ನು...

ಉತ್ತರ ಪ್ರದೇಶ : ನಲ್ಲಿ ನೀರು ಕುಡಿದಿದ್ದಕ್ಕೆ ದಲಿತ ಯುವಕನ ಹತ್ಯೆ

ಸಾರ್ವಜನಿಕ ನಲ್ಲಿ ನೀರು ಕುಡಿದ ಕಾರಣಕ್ಕಾಗಿ ದಲಿತ ಸಮುದಾಯದ ಯುವಕನೊಬ್ಬನನ್ನು ಅಮಾನುಷವಾಗಿ...

ಏಕರೂಪ ನಾಗರಿಕ ಸಂಹಿತೆ ಅನುಷ್ಠಾನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್ ಶಾ

ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ಏಕರೂಪ ನಾಗರಿಕ ಸಂಹಿತೆ ಕಾಯ್ದೆಯನ್ನು ತಡೆಯಲು ಯಾರಿಂದಲೂ...