ದೆಹಲಿಯ ಮಾಳವೀಯ ನಗರದ ಹೋಟೆಲ್‌ನಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತದ ಒಂದು ದಿನದ ನಂತರ ಬಿಹಾರದ ಮುಜಫರ್‌ಪುರ ಜಿಲ್ಲೆಯಲ್ಲಿ ಮತ್ತೊಂದು ಭಾರಿ ಅಗ್ನಿ ಅವಘಡ ನಡೆದಿದೆ. ಆಸ್ಪತ್ರೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೂವರು ರೋಗಿಗಳು ಸಜೀವ ದಹನಗೊಂಡಿದ್ದಾರೆ.
ಆಸ್ಪತ್ರೆಯಲ್ಲಿ ಬೆಂಕಿ ಹರಡುತ್ತಿದ್ದಂತೆ, ಅಗ್ನಿಶಾಮಕ ದಳವು ಧಾವಿಸಿ ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಪ್ರಾರಂಭಿಸಿತ್ತು. ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಆದರೂ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಇದನ್ನು ಓದಿದ್ದೀರಾ? ದೆಹಲಿಯ ರೆಸ್ಟೋರೆಂಟ್‌ನಲ್ಲಿ ಭಾರಿ ಅಗ್ನಿ ದುರಂತ: 21 ಮಂದಿ ಸಜೀವ ದಹನ
ಘಟನೆಯಲ್ಲಿ 20ಕ್ಕೂ ಹೆಚ್ಚು ರೋಗಿಗಳು ಗಾಯಗೊಂಡಿದ್ದಾರೆ. ಅವರನ್ನು ಕಟ್ಟಡದಿಂದ ಸ್ಥಳಾಂತರಿಸಲಾಗಿದೆ. ಈ ಪೈಕಿ ಹಲವು ಮಂದಿ ಸ್ಥಿತಿ ಗಂಭೀರವಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡ ರೋಗಿಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.
ಘಟನೆಯ ಸಮಯದಲ್ಲಿ ಆಸ್ಪತ್ರೆಯಲ್ಲಿದ್ದ ಎಲ್ಲ ರೋಗಿಗಳ ಪರಿಸ್ಥಿತಿ ಹೇಗಿದೆ ಎಂದು ಪರಿಶೀಲಿಸಲಾಗುತ್ತಿದೆ. ಬೆಂಕಿಯ ನಂತರ ಕೆಲವು ರೋಗಿಗಳ ಸಂಬಂಧಿಕರು ಯಾರೆಂದು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಕೆಲವು ರೋಗಿಗಳ ಕುಟುಂಬ ಸದಸ್ಯರು ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಸುಬ್ರತ್ ಕುಮಾರ್ ಸೇನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
“ಆಸ್ಪತ್ರೆಯ ಐಸಿಯು ಉಸ್ತುವಾರಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂದು ಸರಿಯಾದ ಮಾಹಿತಿ ನೀಡಲಾಗದು. ಆದರೆ ಸದ್ಯ ಮೂವರ ಮೃತದೇಹ ಸಿಕ್ಕಿದೆ” ಎಂದೂ ಸೇನ್ ಸ್ಪಷ್ಟಪಡಿಸಿದ್ದಾರೆ.
ಇನ್ನು ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಹಲವಾರು ಸಿಬ್ಬಂದಿ ಆವರಣದಿಂದ ಕಣ್ಮರೆಯಾಗಿದ್ದಾರೆ ಎಂಬ ಆರೋಪಗಳಿವೆ. “ಬೆಳಿಗ್ಗೆ 3 ಗಂಟೆ ಸುಮಾರಿಗೆ ಬೆಂಕಿಯ ಬಗ್ಗೆ ಮಾಹಿತಿ ಬಂದಿದೆ. ಅಗ್ನಿಶಾಮಕ ದಳದವರು ಆಸ್ಪತ್ರೆಗೆ ತಲುಪುವ ಹೊತ್ತಿಗೆ, ಐಸಿಯು ಸಂಪೂರ್ಣವಾಗಿ ದಟ್ಟ ಹೊಗೆಯಿಂದ ಆವೃತವಾಗಿತ್ತು. ರಕ್ಷಣಾ ತಂಡಗಳು ಬಂದಾಗ ಹೆಚ್ಚಿನ ಆಸ್ಪತ್ರೆಯ ನೌಕರರು ಸ್ಥಳದಲ್ಲಿ ಇರಲಿಲ್ಲ” ಎಂದು ಅಗ್ನಿಶಾಮಕ ಅಧಿಕಾರಿ ಆರ್.ಎನ್. ಪಾಂಡೆ ಹೇಳಿದ್ದಾರೆ.





