ಜಾಗತಿಕ ಚಿತ್ರರಂಗಕ್ಕೆ ‘ವಾಸ್ತವ’ದ ಹೊಸ ದೃಷ್ಟಿಕೋನ ನೀಡಿದ ಗ್ಲೌಬರ್ ರೋಚಾ ಸಿನೆಮಾಗಳು

Date:

ಗ್ಲೌಬರ್ ರೋಚಾ ಅವರ ಸಿನೆಮಾ ಪ್ರಯೋಗಗಳು ಮತ್ತು ವೈಚಾರಿಕ ಬರಹಗಳು ಜಾಗತಿಕ ಚಿತ್ರರಂಗಕ್ಕೆ ಮೂರನೇ ಜಗತ್ತಿನ ಕಣ್ಣಿನಿಂದ ವಾಸ್ತವವನ್ನು ನೋಡುವ ಹೊಸ ದೃಷ್ಟಿಕೋನವನ್ನು ನೀಡಿದವು. ಸಿನೆಮಾ ಕೇವಲ ಪಾಶ್ಚಾತ್ಯ ಮಾದರಿಯ ಮನರಂಜನಾ ವಾಣಿಜ್ಯ ಸರಕಾಗದೆ, ಸ್ಥಳೀಯ ರಾಜಕೀಯ ಬಿಕ್ಕಟ್ಟು ಮತ್ತು ಸಾಂಸ್ಕೃತಿಕ ಅಸ್ತಿತ್ವವನ್ನು ಬಿಂಬಿಸುವ ಪ್ರಬಲ ಮಾಧ್ಯಮವಾಗಬಲ್ಲದು ಎಂದು ಅವರು ತೋರಿಸಿಕೊಟ್ಟರು. 

ಬ್ರೆಜಿಲ್‌ನ ಅತ್ಯಂತ ಪ್ರಮುಖ ಚಲನಚಿತ್ರ ನಿರ್ದೇಶಕ ಹಾಗೂ 1960 ಮತ್ತು 70ರ ದಶಕದ ‘ಸಿನೆಮಾ ನೋವೊ’ (Cinema Novo) ಚಳವಳಿಯ ಮುಖ್ಯ ರೂವಾರಿಯಾಗಿದ್ದ ಗ್ಲೌಬರ್ ರೋಚಾ (1939–1981) ಅವರ ಚಿತ್ರಗಳು ಜಾಗತಿಕ ಚಿತ್ರರಂಗದ ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲುಗಳಾಗಿವೆ. ಕೇವಲ ಸಿನಿಮಾ ನಿರ್ದೇಶಕರಷ್ಟೇ ಅಲ್ಲದೆ, ಪ್ರಭಾವಶಾಲಿ ಬರಹಗಾರ ಮತ್ತು ಚಿತ್ರ ವಿಮರ್ಶಕರೂ ಆಗಿದ್ದ ರೋಚಾ, ಮೂರನೇ ಜಗತ್ತಿನ ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಜಾಗತಿಕ ವೇದಿಕೆಯಲ್ಲಿ ಚರ್ಚಿಸಿದ ಮುಖ್ಯ ಚಿಂತಕ.

- Advertisement -

ರೋಚಾ ಸಿನೆಮಾ ಮಾಡಲು ಆರಂಭಿಸಿದಾಗ ಬ್ರೆಜಿಲ್ ತೀವ್ರ ಆರ್ಥಿಕ ಅಸಮಾನತೆ ಮತ್ತು ರಾಜಕೀಯ ಅಸ್ಥಿರತೆಯಿಂದ ಕೂಡಿತ್ತು. 1960ರ ದಶಕದಲ್ಲಿ ಬ್ರೆಜಿಲ್ ಸೇರಿದಂತೆ ಇಡೀ ಲ್ಯಾಟಿನ್ ಅಮೆರಿಕದ ಚಿತ್ರಮಂದಿರಗಳನ್ನು ಮತ್ತು ಪ್ರೇಕ್ಷಕರ ಅಭಿರುಚಿಯನ್ನು ಅಮೆರಿಕದ ಹಾಲಿವುಡ್ ಸಿನಿಮಾಗಳು ಸಂಪೂರ್ಣವಾಗಿ ಆಕ್ರಮಿಸಿಕೊಂಡಿದ್ದವು. ಸ್ಥಳೀಯ ಚಿತ್ರರಂಗ ಸ್ವತಂತ್ರವಾಗಿ ಬೆಳೆಯಲು ಬಿಡದಂತೆ ವಾಣಿಜ್ಯ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿದ್ದ ಈ ಪಾಶ್ಚಾತ್ಯ ಮಾದರಿಯನ್ನು ರೋಚಾ ಮತ್ತು ಅವರ ‘ಸಿನೆಮಾ ನೋವೊ’ ಒಡನಾಡಿಗಳು ಸಂಪೂರ್ಣವಾಗಿ ನಿರಾಕರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ಈ ಹೊಸ ಸಿನಿಮಾ ಪ್ರಯೋಗಗಳ ಹಿಂದೆ ಜಾಗತಿಕ ಚಿತ್ರರಂಗದ ಎರಡು ಮುಖ್ಯ ಚಳವಳಿಗಳ ಪ್ರಭಾವವಿತ್ತು. ನೈಜ ಸ್ಥಳಗಳಲ್ಲಿ ಚಿತ್ರೀಕರಣ ಮಾಡುವುದು, ಹವ್ಯಾಸಿ ನಟರನ್ನು ಬಳಸುವುದು ಮತ್ತು ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳಿಗೆ ಸ್ಪಂದಿಸುವ ನಿಲುವನ್ನು ಇವರು ಇಟಾಲಿಯನ್ ನಿಯೋರಿಯಾಲಿಸಂನಿಂದ ಪಡೆದುಕೊಂಡಿದ್ದರು. ಹಾಗೆಯೇ, ಚಿತ್ರದ ಮೇಲೆ ನಿರ್ದೇಶಕನಿಗೆ ಸಂಪೂರ್ಣ ಸೃಜನಶೀಲ ಸ್ವಾತಂತ್ರ್ಯ ಮತ್ತು ನಿಯಂತ್ರಣ ಇರಬೇಕು ಎಂಬ ನಿಲುವನ್ನು ಫ್ರೆಂಚ್ ನ್ಯೂ ವೇವ್‌ನಿಂದ ಅಳವಡಿಸಿಕೊಂಡಿದ್ದರು. ‘ಸಿನೆಮಾ ನೋವೊ’ ಎನ್ನುವುದು ಆ ಕಾಲಘಟ್ಟದ ರಾಜಕೀಯ ಪ್ರಜ್ಞೆ ಉಳ್ಳ ಮತ್ತು ಕಲಾತ್ಮಕವಾಗಿ ಪ್ರತಿರೋಧ ಒಡ್ಡಿದ ಚಿತ್ರಗಳನ್ನು ಒಟ್ಟಾಗಿ ಗುರುತಿಸಲು ಸಿನೆಮಾ ಇತಿಹಾಸಕಾರರು ಹಾಗೂ ವಿಮರ್ಶಕರು ನಂತರದ ದಿನಗಳಲ್ಲಿ ಬಳಸಿದ ಒಂದು ಐತಿಹಾಸಿಕ ಹೆಸರಷ್ಟೇ ಆಗಿದೆ. ಇಲ್ಲಿ ಗ್ಲೌಬರ್ ರೋಚಾ ಅವರು ನೆಲ್ಸನ್ ಪಿರೇರಾ ಡಾ ಸ್ಯಾಂಟೋಸ್, ರುಯ್ ಗುಯೆರಾ ಮತ್ತು ಕಾರ್ಲೋಸ್ ಡೀಗೀಸ್ ಅವರಂತಹ ಸಮಕಾಲೀನ ನಿರ್ದೇಶಕರನ್ನು ಜೊತೆಗೂಡಿಸಿ ಈ ಸಾಮೂಹಿಕ ಆಂದೋಲನವನ್ನು ಮುನ್ನಡೆಸಿದರು. ಈ ನಿರ್ದೇಶಕರೂ ಸಹ ಸ್ಟುಡಿಯೋ ಸೆಟ್‌ಗಳನ್ನು ನಿರಾಕರಿಸಿ ನೈಜ ಸ್ಥಳಗಳಲ್ಲಿ, ನೈಸರ್ಗಿಕ ಬೆಳಕಿನಲ್ಲಿ ಹಾಗೂ ಹ್ಯಾಂಡ್‌ಹೆಲ್ಡ್ ಕ್ಯಾಮೆರಾ ಬಳಸಿ ಚಿತ್ರೀಕರಿಸುವ ರೋಚಾ ಅವರದೇ ದೃಶ್ಯ ವಿಧಾನಗಳನ್ನು ಅನುಸರಿಸಿದರು. ಕ್ರಾಂತಿಕಾರಿ ಇತಿಹಾಸ ಮತ್ತು ಒಳನಾಡಿನ ವಾಸ್ತವವನ್ನು ದಾಖಲಿಸುವ ಇವರ ಚಿತ್ರಗಳು ರೋಚಾ ಅವರ ಸಿದ್ಧಾಂತಗಳಿಗೆ ಪೂರ್ಣವಾಗಿ ಪೂರಕವಾಗಿದ್ದವು.

ಚಳವಳಿಯ ಈ ಸಾಮೂಹಿಕ ಪ್ರಯತ್ನದ ನಡುವೆಯೂ, ಗ್ಲೌಬರ್ ರೋಚಾ ತಮ್ಮ ವೈಯಕ್ತಿಕ ಕಲಾತ್ಮಕ ತೀವ್ರತೆಯಿಂದಾಗಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅವರು ಬಡತನ ಮತ್ತು ರಾಜಕೀಯ ಬಿಕ್ಕಟ್ಟುಗಳನ್ನು ಕರುಣೆಯ ದೃಷ್ಟಿಯಿಂದ ನೋಡದೆ, ಅವುಗಳ ಹಿಂದಿರುವ ವಸಾಹತುಶಾಹಿ ಹಾಗೂ ಆರ್ಥಿಕ ಶೋಷಣೆಯ ಬೇರುಗಳನ್ನು ಸಿನೆಮಾದ ಮೂಲಕ ಶೋಧಿಸಲು ಯತ್ನಿಸಿದರು. ಆರ್ಥಿಕ ಮಿತಿಗಳ ನಡುವೆಯೇ ಜಾಗತಿಕ ಗಮನ ಸೆಳೆಯುವ ಕಲಾತ್ಮಕ ಚಿತ್ರಗಳನ್ನು ರೂಪಿಸುವುದು ಹೇಗೆ ಎಂಬುದನ್ನು ಅವರು ತಮ್ಮ ಸೃಜನಶೀಲ ಪ್ರಯೋಗಗಳ ಮೂಲಕ ತೋರಿಸಿಕೊಟ್ಟರು. ನಂತರ ಅಲ್ಲಿ ಮಿಲಿಟರಿ ಸರ್ವಾಧಿಕಾರ ಆಡಳಿತಕ್ಕೆ ಬಂದಾಗ, ದೇಶದೊಳಗಿನ ರಾಜಕೀಯ ಒತ್ತಡಗಳ ವಿರುದ್ಧ ಅವರ ಹೋರಾಟ ಮುಂದುವರಿಯಿತು. ತಮ್ಮ ತೀಕ್ಷ್ಣ ಆಲೋಚನೆಗಳಿಂದಾಗಿ ಅವರು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ, ಕೊನೆಯ ದಿನಗಳಲ್ಲಿ ದೇಶಭ್ರಷ್ಟರಾಗಬೇಕಾಯಿತು. ಈ ಸವಾಲುಗಳ ನಡುವೆಯೂ ಅವರು ಸಿನೆಮಾ ಕುರಿತ ತಮ್ಮ ಒಳನೋಟಗಳನ್ನು ದಾಖಲಿಸುತ್ತಲೇ ಹೋದರು.

ಇದನ್ನು ಓದಿದ್ದೀರಾ?: ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!

ಗ್ಲೌಬರ್ ರೋಚಾ ಅವರ ಚಿತ್ರಚಿಂತನೆ ಮತ್ತು ರಾಜಕೀಯ ನಿಲುವುಗಳನ್ನು ಮುಖ್ಯವಾಗಿ ಅವರ ಎರಡು ಪ್ರಮುಖ ಪ್ರಣಾಳಿಕೆಗಳ ಮೂಲಕ ಅರ್ಥಮಾಡಿಕೊಳ್ಳಬಹುದು. ಕೇವಲ ಆಲೋಚನೆಗಳಾಗಿ ಉಳಿಯದ ಈ ಬರಹಗಳು, ‘ಸಿನೆಮಾ ನೋವೊ’ ಚಳವಳಿಗೆ ಒಂದು ಕ್ರಾಂತಿಕಾರಿ ಸೌಂದರ್ಯಮೀಮಾಂಸೆಯ ಚೌಕಟ್ಟನ್ನು ಒದಗಿಸಿದವು. 

ರೋಚಾ 1965ರಲ್ಲಿ ಮಂಡಿಸಿದ “An Aesthetics of Hunger” (ಹಸಿವನ್ನೇ ಪ್ರತಿರೋಧದ ಭಾಷೆಯಾಗಿಸಿದ ಸೌಂದರ್ಯಮೀಮಾಂಸೆ) ಎಂಬ ಮೊದಲ ಬರಹವು ಮೂರನೇ ಜಗತ್ತಿನ ಸಿನೆಮಾದ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿತು. ಪಾಶ್ಚಾತ್ಯ ದೇಶಗಳು ಮತ್ತು ಅಂತಾರಾಷ್ಟ್ರೀಯ ಪ್ರೇಕ್ಷಕರು ಮೂರನೇ ಜಗತ್ತಿನ ಬಡತನವನ್ನು ಕೇವಲ ಒಂದು ಕರುಣಾಜನಕ ಅಥವಾ ವಿಲಕ್ಷಣ ದೃಶ್ಯವಾಗಿ ನೋಡುವುದನ್ನು ಅವರು ಇದರಲ್ಲಿ ಬಲವಾಗಿ ಪ್ರಶ್ನಿಸಿದರು. ಅವರ ಪ್ರಕಾರ, ಮೂರನೇ ಜಗತ್ತಿನ ಮೂಲಭೂತ ಲಕ್ಷಣವಾಗಿರುವ ಹಸಿವು ಕೇವಲ ಆಹಾರದ ಕೊರತೆಯಲ್ಲ, ಅದು ವ್ಯವಸ್ಥೆಯು ಹೇರಿದ ಆರ್ಥಿಕ ಮತ್ತು ಸಾಂಸ್ಕೃತಿಕ ಗುಲಾಮಗಿರಿ. ಹಸಿದ ಮನುಷ್ಯನ ಸಹಜ ಪ್ರತಿಕ್ರಿಯೆ ಪ್ರತಿರೋಧ ಅಥವಾ ಹಿಂಸೆಯಾಗಿರುವುದರಿಂದ, ಸಿನೆಮಾ ಈ ಒರಟು ವಾಸ್ತವವನ್ನು ಮರೆಮಾಚದೆ ಹಾಗೆಯೇ ಬಿಂಬಿಸಬೇಕು ಎಂದು ಅವರು ಪ್ರತಿಪಾದಿಸಿದರು.

ಈ ಹಂತದಲ್ಲಿ ‘ಕೈಯಲ್ಲೊಂದು ಕ್ಯಾಮೆರಾ, ತಲೆಯಲ್ಲೊಂದು ಆಲೋಚನೆ’ ಎನ್ನುವುದು ಅವರ ಪ್ರಮುಖ ಸೂತ್ರವಾಗಿತ್ತು. ಪಾಶ್ಚಾತ್ಯ ಸಿನೆಮಾದ ದುಬಾರಿ ತಂತ್ರಜ್ಞಾನಕ್ಕೆ ಪ್ರತಿಯಾಗಿ ನೈಸರ್ಗಿಕ ಬೆಳಕು, ನೈಜ ಪರಿಸರ ಮತ್ತು ಹವ್ಯಾಸಿ ನಟರನ್ನು ಬಳಸಿ ಸಿನೆಮಾ ಮಾಡುವುದನ್ನು ಇವರು ರೂಢಿಗೆ ತಂದರು. ದೃಶ್ಯಗಳಷ್ಟೇ ಅವರ ಧ್ವನಿ ವಿನ್ಯಾಸವೂ (Sound Design) ಪ್ರತಿರೋಧದ ಮಾಧ್ಯಮವಾಗಿತ್ತು. ಸಾಂಪ್ರದಾಯಿಕ ಹಿನ್ನೆಲೆ ಸಂಗೀತದ ಆಡಂಬರವನ್ನು ನಿರಾಕರಿಸಿ, ಒರಟಾದ ನೈಜ ಧ್ವನಿಗಳು, ಸ್ಥಳೀಯ ಜಾನಪದ ಗೀತೆಗಳ ಆವೇಶ ಮತ್ತು ದೀರ್ಘ ಮೌನವನ್ನು ಬಳಸುವ ಮೂಲಕ ಅವರು ದೃಶ್ಯದ ತೀವ್ರತೆಯನ್ನು ಹೆಚ್ಚಿಸುತ್ತಿದ್ದರು. 

ಈ ಸಿದ್ಧಾಂತಕ್ಕೆ ರೋಚಾ 1964ರಲ್ಲಿ ನಿರ್ದೇಶಿಸಿದ “Black God, White Devil” ಚಿತ್ರವು ಅತ್ಯಂತ ಪ್ರಮುಖ ಪ್ರಾಯೋಗಿಕ ಉದಾಹರಣೆಯಾಗಿದೆ. ಬ್ರೆಜಿಲ್‌ನ ಈಶಾನ್ಯ ಭಾಗದ ಒಣ ಹವೆಯ ಮರಳುಗಾಡಿನಂತಹ ಪ್ರದೇಶವಾದ ‘ಸೆರ್ಟಾವೊ’ ಹಿನ್ನೆಲೆಯಲ್ಲಿ ಈ ಕಥೆ ನಡೆಯುತ್ತದೆ. ತೀವ್ರ ಬಡತನ, ಹಸಿವು ಮತ್ತು ಶೋಷಣೆಗೆ ಒಳಗಾಗುವ ಮ್ಯಾನುಯೆಲ್ ಮತ್ತು ರೋಸಾ ಎಂಬ ಕೃಷಿಕ ದಂಪತಿಗಳ ಸುತ್ತ ಇಡೀ ಕಥಾವಸ್ತು ಕೇಂದ್ರೀಕೃತವಾಗಿದೆ. ವ್ಯವಸ್ಥೆಯ ಹಿಂಸೆಯಿಂದ ಬೇಸತ್ತು, ತಮ್ಮದೇ ಭೂಮಾಲೀಕನನ್ನು ಕೊಂದ ನಂತರ ಅವರು ಬದುಕಿನ ದಾರಿಯನ್ನು ಹುಡುಕುತ್ತಾ ಸಾಗುವ ಪ್ರಯಾಣವೇ ಈ ಚಿತ್ರದ ಮುಖ್ಯ ವಸ್ತುವಾಗಿದೆ.

ಇದನ್ನು ಓದಿದ್ದೀರಾ?: ಆಂದ್ರೆ ಟಾರ್ಕೋವ್‌ಸ್ಕಿ ಚಿತ್ರಗಳ ಶಬ್ದಲೋಕ

ರೋಚಾ ಈ ಚಿತ್ರದಲ್ಲಿ ಹಸಿವು ಮತ್ತು ಬಡತನವನ್ನು ಕೇವಲ ಕಣ್ಣೀರಿನ ಕಥೆಯಾಗಿ ನೋಡದೆ, ಅದು ಹುಟ್ಟುಹಾಕುವ ಸಾಮಾಜಿಕ ಹಿಂಸೆಯನ್ನು ತೀರಾ ಒರಟಾಗಿ ಮತ್ತು ನೇರವಾಗಿ ದೃಶ್ಯೀಕರಿಸಿದ್ದಾರೆ. ಇಲ್ಲಿ ಅವರು ಬಳಸುವ ಐಸೆನ್‌ಸ್ಟೈನ್ ಮಾದರಿಯ ‘ಮೌಂಟೇಜ್ ತಂತ್ರ’ ವಿಶಿಷ್ಟವಾದದ್ದು ಚಿತ್ರದಲ್ಲಿ ಶೋಷಿತ ಜನಸಮುದಾಯವು ವಿಮೋಚನೆಗಾಗಿ ಎರಡು ದಾರಿಗಳನ್ನು ಆರಿಸಿಕೊಳ್ಳುವುದನ್ನು ತೋರಿಸಲಾಗಿದೆ, ಒಂದು, ಧಾರ್ಮಿಕ ನಂಬಿಕೆಯ ಬೆನ್ನು ಹತ್ತಿ ಹೋಗುವುದು ಮತ್ತು ಮತ್ತೊಂದು, ವ್ಯವಸ್ಥೆಯ ವಿರುದ್ಧವೇ ಶಸ್ತ್ರ ಎತ್ತಿ ದರೋಡೆಕೋರರ ಗುಂಪನ್ನು ಸೇರುವುದು. ಆದರೆ ರೋಚಾ ಪ್ರಕಾರ, ಇವೆರಡೂ ದಾರಿಗಳು ಜನರನ್ನು ಮತ್ತಷ್ಟು ಹಿಂಸೆಗೆ ತಳ್ಳುತ್ತವೆಯೇ ಹೊರತು ನಿಜವಾದ ರಾಜಕೀಯ ಬಿಡುಗಡೆಯನ್ನು ನೀಡುವುದಿಲ್ಲ. ಚಿತ್ರದ ಕೊನೆಯಲ್ಲಿ ಈ ಇಬ್ಬರೂ ನಾಯಕರ ಪತನವಾಗುತ್ತದೆ. ನಂತರ ದಂಪತಿಗಳು ಮರಳುಗಾಡಿನಿಂದ ಸಮುದ್ರದ ಕಡೆಗೆ ಓಡುತ್ತಾರೆ. ಜನರು ತಮ್ಮ ಬಿಡುಗಡೆಗಾಗಿ ಯಾರೋ ಒಬ್ಬ ರಕ್ಷಕನನ್ನು ಕಾಯದೆ, ತಮ್ಮ ದಾರಿಯನ್ನು ತಾವೇ ಕಂಡುಕೊಳ್ಳಬೇಕು ಎಂಬ ಆಲೋಚನೆಯೊಂದಿಗೆ ಸಿನೆಮಾ ಮುಕ್ತಾಯವಾಗುತ್ತದೆ.

ದೃಶ್ಯ ಶೈಲಿಯ ದೃಷ್ಟಿಯಿಂದ, ಈ ಚಿತ್ರದಲ್ಲಿ ಹ್ಯಾಂಡ್‌ಹೆಲ್ಡ್ ಕ್ಯಾಮೆರಾ, ನೈಸರ್ಗಿಕ ಸೂರ್ಯನ ಬೆಳಕಿನ ತೀಕ್ಷ್ಣತೆ ಮತ್ತು ದೃಶ್ಯಗಳನ್ನು ಥಟ್ಟನೆ ಕತ್ತರಿಸುವ ‘ಜಂಪ್ ಕಟ್ಸ್’ ಬಳಸಿ ರೋಚಾ ಸೆರ್ಟಾವೊ ಪ್ರದೇಶದ ಹಸಿವಿನ ತಾಪವನ್ನು ದೃಶ್ಯದ ಮೂಲಕವೇ ಪ್ರೇಕ್ಷಕರು ಅನುಭವಿಸುವಂತೆ ಮಾಡಿದ್ದಾರೆ. ಒರಟಾದ ವಾಸ್ತವ ಮತ್ತು ಜಾನಪದ ರೂಪಕಗಳ ಸಂಯೋಜನೆಯನ್ನು ಹೊಂದಿರುವ ಈ ಚಿತ್ರವು ಜಾಗತಿಕ ಚಿತ್ರರಂಗದಲ್ಲಿ ಸಿನೆಮಾ ನೋವೊ ಚಳವಳಿಯ ಅಸ್ತಿತ್ವವನ್ನು ಗಟ್ಟಿಯಾಗಿ ಸಾರಿತು. 

Black God White Devil 1964
Black God, White Devil” (1964) ಚಿತ್ರದಲ್ಲಿ ಸೆರ್ಟಾವೊದ ಬರಡು ಭೂದೃಶ್ಯ ಮತ್ತು ಶೋಷಿತ ಜನಸಮುದಾಯದ ಮುಖಾಮುಖಿ

ಅವರ ಮುಂದಿನ ಚಿತ್ರವಾದ “Entranced Earth”(1967) ಬ್ರೆಜಿಲ್‌ನ ರಾಜಕೀಯ ಬಿಕ್ಕಟ್ಟು ಮತ್ತು ಬುದ್ಧಿಜೀವಿಗಳ ಭ್ರಮನಿರಸನವನ್ನು ವಸ್ತುನಿಷ್ಠವಾಗಿ ಚರ್ಚಿಸುತ್ತದೆ. ‘ಎಲ್ಡೊರಾಡೊ’ ಎಂಬ ಕಾಲ್ಪನಿಕ ಲ್ಯಾಟಿನ್ ಅಮೆರಿಕನ್ ದೇಶದ ಹಿನ್ನೆಲೆಯಲ್ಲಿ ಈ ಕಥೆಯನ್ನು ಹೆಣೆಯಲಾಗಿದೆ. ಚಿತ್ರದ ಮುಖ್ಯ ಪಾತ್ರವಾದ ಪಾಲೊ ಒಬ್ಬ ಕವಿ ಮತ್ತು ಪತ್ರಕರ್ತ. ಆತ ದೇಶದ ಸಮಕಾಲೀನ ರಾಜಕೀಯ ಬದಲಾವಣೆಗಾಗಿ ಒಬ್ಬ ಬಲಪಂಥೀಯ ಸರ್ವಾಧಿಕಾರಿ ಮತ್ತು ಮತ್ತೊಬ್ಬ ಜನಪ್ರಿಯ ಎಡಪಂಥೀಯ ನಾಯಕನನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಬೆಂಬಲಿಸುತ್ತಾನೆ. ಆದರೆ, ಇಬ್ಬರೂ ನಾಯಕರು ಕೊನೆಗೆ ಜನಸಾಮಾನ್ಯರ ಹಿತಾಸಕ್ತಿಯನ್ನು ಬಲಿಗೊಟ್ಟು ಅಧಿಕಾರ ಹಿಡಿಯಲು ಯತ್ನಿಸಿದಾಗ ಆತನಿಗೆ ಎದುರಾಗುವ ಸವಾಲುಗಳೇ ಈ ಚಿತ್ರದ ಪ್ರಮುಖ ವಸ್ತುವಾಗಿದೆ.

ರೋಚಾ ಈ ಚಿತ್ರದಲ್ಲಿ ರಾಜಕೀಯ ವ್ಯವಸ್ಥೆಯ ಭ್ರಷ್ಟತೆ ಮತ್ತು ಅವಕಾಶವಾದಿ ನಿಲುವನ್ನು ಶೋಧಿಸಿದ್ದಾರೆ. ಸಾಮಾನ್ಯ ಜನರನ್ನು ಮುಂದಿಟ್ಟುಕೊಂಡು ರಾಜಕಾರಣಿಗಳು ನಡೆಸುವ ಅಧಿಕಾರದ ಆಟಗಳನ್ನು ಮತ್ತು ಅದಕ್ಕೆ ಸಾಕ್ಷಿಯಾಗುವ ಬುದ್ಧಿಜೀವಿಗಳ ಅಸಹಾಯಕತೆಯನ್ನು ಸಿನೆಮಾ ಗಂಭೀರವಾಗಿ ಬಿಂಬಿಸುತ್ತದೆ. ಬ್ರೆಜಿಲ್‌ನಲ್ಲಿ ಮಿಲಿಟರಿ ಸರ್ವಾಧಿಕಾರ ಆಡಳಿತಕ್ಕೆ ಬಂದ ಸಂದರ್ಭದಲ್ಲೇ ಈ ಚಿತ್ರ ಬಿಡುಗಡೆಯಾಗಿದ್ದರಿಂದ, ಅಂದಿನ ರಾಜಕೀಯ ಪರಿಸ್ಥಿತಿಗೆ ಇದು ಹತ್ತಿರವಾಗಿತ್ತು.

ದೃಶ್ಯ ಶೈಲಿಯ ದೃಷ್ಟಿಯಿಂದ, ಇಲ್ಲಿನ ನಿರೂಪಣೆ ನೇರ ಕಥನ ಶೈಲಿಯದ್ದಲ್ಲ. ಕಥೆಯು ಮುಖ್ಯ ಪಾತ್ರದ ನೆನಪುಗಳು ಮತ್ತು ಆಲೋಚನೆಗಳ ಮೂಲಕ ಹಿಂದೆಮುಂದೆ ಚಲಿಸುತ್ತದೆ. ರೋಚಾ ಇಲ್ಲಿ ದೀರ್ಘ ಶಾಟ್‌ಗಳು ಮತ್ತು ಹ್ಯಾಂಡ್‌ಹೆಲ್ಡ್ ಕ್ಯಾಮೆರಾ ತಂತ್ರವನ್ನು ಹೆಚ್ಚಾಗಿ ಬಳಸಿದ್ದಾರೆ. ದೃಶ್ಯದ ಚೌಕಟ್ಟಿನೊಳಗೆ ಪಾತ್ರಗಳ ಸಂಯೋಜನೆ ಮತ್ತು ಬೆಳಕಿನ ತೀವ್ರತೆಯು ಒಳನಾಡಿನ ಸಾಂಸ್ಕೃತಿಕ ಆವೇಶವನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ. ಅತಿವಾಸ್ತವಿಕ ದೃಶ್ಯಗಳು, ಆವೇಶಭರಿತ ಭಾಷಣಗಳು ಮತ್ತು ಸಾಂಕೇತಿಕ ರೂಪಕಗಳನ್ನು ಬಳಸಿ ರೋಚಾ ಅಂದಿನ ರಾಜಕೀಯ ಗೊಂದಲವನ್ನು ದೃಶ್ಯಗಳ ಮೂಲಕವೇ ಕಟ್ಟಿಕೊಟ್ಟಿದ್ದಾರೆ.

Entranced Earth 1967
“Entranced Earth” ಚಿತ್ರದಲ್ಲಿ ನಾಟಕೀಯ ಬೆಳಕಿನ ಹಿನ್ನೆಲೆಯಲ್ಲಿ ಪಾತ್ರಗಳ ಆವೇಶ ಮತ್ತು ಬುದ್ಧಿಜೀವಿಗಳ ರಾಜಕೀಯ ಅಸಹಾಯಕತೆ

ಬ್ರೆಜಿಲ್‌ನಲ್ಲಿ ಮಿಲಿಟರಿ ಸರ್ವಾಧಿಕಾರ ತೀವ್ರಗೊಂಡು ರೋಚಾ ದೇಶ ತೊರೆದ ನಂತರ, 1971ರಲ್ಲಿ “An Aesthetics of Dreams” ಎಂಬ ಅವರ ಮುಂದಿನ ಚಿಂತನೆ ಮೂಡಿಬಂದಿತು. ಕೇವಲ ಬಡತನದ ಸಾಮಾಜಿಕ ವಾಸ್ತವವನ್ನು ಆರ್ಥಿಕ ದೃಷ್ಟಿಕೋನದಿಂದ ತೋರಿಸುವುದರಿಂದಲೇ ಜನರ ಮನಸ್ಸಿನ ಗುಲಾಮಗಿರಿಯನ್ನು ಮುಕ್ತಗೊಳಿಸಲು ಸಾಧ್ಯವಿಲ್ಲ ಎಂಬುದು ಅವರಿಗೆ ಈ ವೇಳೆಗೆ ಮನವರಿಕೆಯಾಗಿತ್ತು. ನಿಜ ಹೇಳಬೇಕೆಂದರೆ, ಈ ಪ್ರಣಾಳಿಕೆಗೂ ಎರಡು ವರ್ಷಗಳ ಮುಂಚೆ, ಅಂದರೆ 1969ರಲ್ಲೇ ಬಿಡುಗಡೆಯಾಗಿದ್ದ ಅವರ “Antonio das Mortes” ಚಿತ್ರದಲ್ಲೇ ಈ ಹೊಸ ಆಲೋಚನೆಗಳ ಸೃಜನಶೀಲ ಪ್ರಯೋಗಗಳು ಮೊದಲ ಬಾರಿಗೆ ದೃಶ್ಯರೂಪ ಪಡೆದುಕೊಂಡಿದ್ದವು. ಆ ಚಿತ್ರದ ಕಾವ್ಯಾತ್ಮಕ ಪ್ರಯೋಗವೇ ಮುಂದೆ ಅವರ ಈ ಹೊಸ ಸಿದ್ಧಾಂತಕ್ಕೆ ಭದ್ರ ಬುನಾದಿಯಾಯಿತು. ಶೋಷಿತ ಸಮುದಾಯಗಳು ಆರ್ಥಿಕ ಬಿಡುಗಡೆಯ ಜೊತೆಗೆ, ವಸಾಹತುಶಾಹಿಯಿಂದಾಗಿ ಕಳೆದುಹೋಗಿರುವ ತಮ್ಮ ಕಲ್ಪನಾಶಕ್ತಿ ಮತ್ತು ಕನಸುಗಳನ್ನು ಮರಳಿ ಪಡೆಯಬೇಕು ಎಂದು ಅವರು ವಾದಿಸಿದರು.

ಇದನ್ನು ಓದಿದ್ದೀರಾ?: ಅಮೂರ್ತ ಮತ್ತು ಅಸಂಗತ ಸಿನೆಮಾಗಳು

ಈ ಚಿತ್ರದ ಕಥೆಯೂ ಬ್ರೆಜಿಲ್‌ನ ಪ್ರಸಿದ್ಧ ಬರಡು ಪ್ರದೇಶವಾದ ಸೆರ್ಟಾವೊ ಹಿನ್ನೆಲೆಯಲ್ಲೇ ನಡೆಯುತ್ತದೆ. ಚಿತ್ರದ ಮುಖ್ಯ ಪಾತ್ರವಾದ ಆಂಟೋನಿಯೊ, ಈ ಹಿಂದೆ ಭೂಮಾಲೀಕರ ಪರವಾಗಿ ಬಂಡಾಯಗಾರರನ್ನು ಹತ್ತಿಕ್ಕಲು ನಿಯೋಜನೆಗೊಳ್ಳುತ್ತಿದ್ದ ವ್ಯಕ್ತಿ. ವರ್ಷಗಳ ನಂತರ ಮತ್ತೊಮ್ಮೆ ಹಸಿದ ಜನರ ಪರವಾಗಿ ನಿಲ್ಲುವ ಕೋಯಿರಾನಾ ಎಂಬ ಹೊಸ ಬಂಡಾಯಗಾರನನ್ನು ಕೊಲ್ಲಲು ನಿಯೋಜನೆಗೊಳ್ಳುತ್ತಾನೆ. ಆದರೆ, ಜನರ ಹಸಿವು ಮತ್ತು ಅವರ ಸಾಂಸ್ಕೃತಿಕ ಹೋರಾಟವನ್ನು ಹತ್ತಿರದಿಂದ ನೋಡಿದಾಗ ಆಂಟೋನಿಯೊನಲ್ಲಿ ಉಂಟಾಗುವ ಮಾನಸಿಕ ಪರಿವರ್ತನೆ ಮತ್ತು ಆತ ಶೋಷಿತರ ಪರವಾಗಿ ಕತ್ತಿ ಎತ್ತುವುದೇ ಈ ಚಿತ್ರದ ಮುಖ್ಯ ವಸ್ತುವಾಗಿದೆ.

ರೋಚಾ ಈ ಚಿತ್ರದಲ್ಲಿ ರಾಜಕೀಯ ಕ್ರಾಂತಿಯನ್ನು ಕೇವಲ ಸಾಂಪ್ರದಾಯಿಕ ಯುರೋಪಿಯನ್ ಸಿದ್ಧಾಂತಗಳ ಚೌಕಟ್ಟಿನಲ್ಲಿ ನೋಡದೆ, ಲ್ಯಾಟಿನ್ ಅಮೆರಿಕದ ಮೂಲನಿವಾಸಿಗಳ ಮತ್ತು ಕಪ್ಪು ಜನಾಂಗದ ಸಾಂಸ್ಕೃತಿಕ ಬೇರುಗಳ ಹಿನ್ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಶೋಷಿತರ ಬಡತನವು ಕೇವಲ ಆರ್ಥಿಕ ಬಿಕ್ಕಟ್ಟಾಗಿರದೆ, ಅವರ ಸುಪ್ತಮನಸ್ಸಿನ ನಂಬಿಕೆಗಳು ಮತ್ತು ಜಾನಪದ ಆಧ್ಯಾತ್ಮಿಕತೆಯೊಂದಿಗೆ ಹೇಗೆ ಬೆರೆತಿದೆ ಎಂಬುದನ್ನು ಸಿನೆಮಾ ತೋರಿಸುತ್ತದೆ. ಅವರ ಪ್ರಕಾರ, ಅಧಿಕಾರದಲ್ಲಿರುವ ವ್ಯವಸ್ಥೆಯು ಹೇರುವ ತಾರ್ಕಿಕ ನಿಯಮಗಳನ್ನು ಒಡೆಯಲು ಜನರ ಈ ಸಾಂಸ್ಕೃತಿಕ ಮಿಸ್ಟಿಸಿಸಂ ಒಂದು ಪ್ರಮುಖ ಆಯುಧವಾಗುತ್ತದೆ. ಜನರ ಜಾನಪದ ಕಥೆಗಳು, ಪುರಾಣಗಳು ಮತ್ತು ಸ್ಥಳೀಯ ನಂಬಿಕೆಗಳಲ್ಲಿ ತಾವಾಗಿಯೇ ಒದಗಿಬರುವ ಪ್ರತಿರೋಧದ ಶಕ್ತಿಯಿರುತ್ತದೆ, ಅಧಿಕಾರದಲ್ಲಿರುವ ವ್ಯವಸ್ಥೆಗೆ ಇಂತಹ ಅತಾರ್ಕಿಕ ಆಲೋಚನೆಗಳನ್ನು ಸುಲಭವಾಗಿ ನಿಯಂತ್ರಿಸಲು ಸಾಧ್ಯವಿಲ್ಲ ಎನ್ನುವುದು ಅವರ ನಿಲುವಾಗಿತ್ತು. ಈ ಕಾರಣದಿಂದಾಗಿ, ಈ ಹಂತದಲ್ಲಿ ಅವರ ಸಿನಿಮಾದ ಭಾಷೆ ಕೇವಲ ಸಾಮಾಜಿಕ ವಾಸ್ತವವಾದಕ್ಕೆ ಸೀಮಿತವಾಗದೆ ಮಾಂತ್ರಿಕತೆ, ರೂಪಕಗಳು ಮತ್ತು ಸಾಂಕೇತಿಕ ದೃಶ್ಯಗಳ ಮೂಲಕ ಕಾವ್ಯಾತ್ಮಕ ಹಾಗೂ ಅತಿವಾಸ್ತವಿಕ ರೂಪವನ್ನು ಪಡೆದುಕೊಂಡಿತು.

ದೃಶ್ಯ ಶೈಲಿಯ ದೃಷ್ಟಿಯಿಂದ, ಈ ಚಿತ್ರವು ರೋಚಾ ಅವರ ಕಾವ್ಯಾತ್ಮಕ ಮತ್ತು ಸಾಂಕೇತಿಕ ಪ್ರಯೋಗಗಳ ಉತ್ತುಂಗವಾಗಿದೆ. ಸಿನೆಮಾವು ಸಾಂಪ್ರದಾಯಿಕ ನಿರೂಪಣೆಯನ್ನು ಬದಿಗಿಟ್ಟು, ಬ್ರೆಜಿಲ್‌ನ ಜನಪದ ರಂಗಭೂಮಿ ಮತ್ತು ಒಪೆರಾ ಶೈಲಿಯನ್ನು ಅಳವಡಿಸಿಕೊಂಡಿದೆ. ಚಿತ್ರದ ದೃಶ್ಯಗಳಲ್ಲಿ ಬಳಸಲಾದ ಗಾಢವಾದ ಪ್ರಾಥಮಿಕ ಬಣ್ಣಗಳು, ಸಾಂಪ್ರದಾಯಿಕ ಗೀತೆಗಳು ಮತ್ತು ರೂಪಕಗಳು ಚಿತ್ರಕ್ಕೆ ಒಂದು ಅತಿವಾಸ್ತವಿಕ ರೂಪವನ್ನು ನೀಡುತ್ತವೆ. ರಾಜಕೀಯ ಪ್ರತಿರೋಧಕ್ಕೆ ಸ್ಥಳೀಯ ಸಾಂಸ್ಕೃತಿಕ ಆಚರಣೆಗಳನ್ನು ದೃಶ್ಯದ ಭಾಷೆಯಾಗಿಸಿದ ಈ ವಿಶಿಷ್ಟ ಪ್ರಯೋಗಕ್ಕಾಗಿ ರೋಚಾ ಅವರಿಗೆ ಕಾನ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಒದಗಿಬಂತು.

Antonio Das Mortes 1969
“Antonio das Mortes” ಚಿತ್ರದಲ್ಲಿ ಬ್ರೆಜಿಲ್‌ನ ಜನಪದ ರಂಗಭೂಮಿ ಶೈಲಿ, ಗಾಢ ಬಣ್ಣಗಳು ಮತ್ತು ಸಾಂಪ್ರದಾಯಿಕ ವೇಷಭೂಷಣ

ರೋಚಾ ಅವರು ತಮ್ಮ ಅಲ್ಪಾವಧಿಯ ಸೃಜನಾತ್ಮಕ ಜೀವನದಲ್ಲಿ ಒಟ್ಟು ಆರು ಪೂರ್ಣ ಪ್ರಮಾಣದ ಕಥಾಚಿತ್ರಗಳನ್ನು ಒಳಗೊಂಡಂತೆ ಹಲವು ಸಾಕ್ಷ್ಯಚಿತ್ರಗಳು ಮತ್ತು ಕಿರುಚಿತ್ರಗಳನ್ನು ನಿರ್ಮಿಸಿದರು. ಲೇಖನದಲ್ಲಿ ಚರ್ಚಿಸಲಾದ ಮೂರು ಪ್ರಮುಖ ಚಿತ್ರಗಳಲ್ಲದೆ, ‘The Lion Has Seven Heads’ (1970) ಮತ್ತು ಅವರ ಅಂತಿಮ ಪ್ರಯೋಗವಾದ ‘The Age of the Earth’ (1980) ರೋಚಾ ಅವರ ಪ್ರಮುಖ ಸೃಜನಾತ್ಮಕ ಕೊಡುಗೆಗಳಾಗಿವೆ.

‘ಸಿನೆಮಾ ನೋವೊ’ ಚಳವಳಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂರನೇ ಜಗತ್ತಿನ ಸಿನಿಮಾಕ್ಕೊಂದು ಸ್ವತಂತ್ರ ಅಸ್ತಿತ್ವ ತಂದುಕೊಟ್ಟಿತು. ಹಾಲಿವುಡ್‌ನ ದುಬಾರಿ ತಂತ್ರಜ್ಞಾನ ಮತ್ತು ಬಂಡವಾಳವಿಲ್ಲದೆ, ಕೇವಲ ಸೃಜನಾತ್ಮಕ ಆಲೋಚನೆಗಳಿಂದ ಜಾಗತಿಕ ಗಮನ ಸೆಳೆಯುವ ಚಿತ್ರಗಳನ್ನು ನಿರ್ಮಿಸಬಹುದು ಎಂದು ರೋಚಾ ಮತ್ತು ಅವರ ಒಡನಾಡಿಗಳು ಸಾಬೀತುಪಡಿಸಿದರು. ಸ್ಥಳೀಯ ಚಿತ್ರರಂಗವನ್ನು ವಸಾಹತುಶಾಹಿ ಆಲೋಚನೆಗಳಿಂದ ಬಿಡುಗಡೆಗೊಳಿಸುವ ಇವರ ಚಿಂತನೆಗಳು, ನಂತರದ ದಿನಗಳಲ್ಲಿ ಆಫ್ರಿಕಾ ಮತ್ತು ಏಷ್ಯಾದ ಸ್ವತಂತ್ರ ಸಿನಿಮಾ ನಿರ್ದೇಶಕರಿಗೆ ಪ್ರೇರಣೆಯಾದವು.

ಇದನ್ನು ಓದಿದ್ದೀರಾ?: ಅಕಿರಾ ಕುರೊಸಾವಾನ ‘ಡೆರ್ಸು ಉಜಾಲಾ’ ಎಂಬ ಕಾಡಿನ ಸಂತನೂ, ಕಾಡುವ ಚಿತ್ರವೂ

ಆದರೆ, ಈ ಪ್ರಯೋಗಗಳು ಕೆಲವು ಪ್ರಮುಖ ಮಿತಿಗಳನ್ನು ಎದುರಿಸಬೇಕಾಯಿತು. ರೋಚಾ ಅವರು ಯಾವ ಶೋಷಿತ ಜನಸಮುದಾಯಗಳ ಪರವಾಗಿ ಸಿನಿಮಾ ಮಾಡಿದರೋ, ಆ ಸಾಮಾನ್ಯ ಪ್ರೇಕ್ಷಕರನ್ನು ತಲುಪುವಲ್ಲಿ ಈ ಚಿತ್ರಗಳ ಸಂಕೀರ್ಣ ಸಾಂಕೇತಿಕ ಶೈಲಿ ಮತ್ತು ಅತಿವಾಸ್ತವಿಕತೆ ಸವಾಲಾಗಿ ಪರಿಣಮಿಸಿತು. ಜೊತೆಗೆ, ಬ್ರೆಜಿಲ್‌ನಲ್ಲಿ ಮಿಲಿಟರಿ ಸರ್ವಾಧಿಕಾರ ತೀವ್ರಗೊಂಡಾಗ ಎದುರಾದ ಕಠಿಣ ಸೆನ್ಸಾರ್‌ಶಿಪ್ ಮತ್ತು ಆರ್ಥಿಕ ಬಿಕ್ಕಟ್ಟುಗಳು ಈ ಸ್ವತಂತ್ರ ಸಿನಿಮಾ ಪ್ರಯೋಗಗಳ ನಿರಂತರತೆಗೆ ಅಡ್ಡಿಯಾದವು.

ಗ್ಲೌಬರ್ ರೋಚಾ ಅವರ ಸಿನೆಮಾ ಪ್ರಯೋಗಗಳು ಮತ್ತು ವೈಚಾರಿಕ ಬರಹಗಳು ಜಾಗತಿಕ ಚಿತ್ರರಂಗಕ್ಕೆ ಮೂರನೇ ಜಗತ್ತಿನ ಕಣ್ಣಿನಿಂದ ವಾಸ್ತವವನ್ನು ನೋಡುವ ಹೊಸ ದೃಷ್ಟಿಕೋನವನ್ನು ನೀಡಿದವು. ಸಿನೆಮಾ ಕೇವಲ ಪಾಶ್ಚಾತ್ಯ ಮಾದರಿಯ ಮನರಂಜನಾ ವಾಣಿಜ್ಯ ಸರಕಾಗದೆ, ಸ್ಥಳೀಯ ರಾಜಕೀಯ ಬಿಕ್ಕಟ್ಟು ಮತ್ತು ಸಾಂಸ್ಕೃತಿಕ ಅಸ್ತಿತ್ವವನ್ನು ಬಿಂಬಿಸುವ ಪ್ರಬಲ ಮಾಧ್ಯಮವಾಗಬಲ್ಲದು ಎಂದು ಅವರು ತೋರಿಸಿಕೊಟ್ಟರು. ತಮ್ಮ ಕೊನೆಯ ದಿನಗಳಲ್ಲಿ ರಾಜಕೀಯ ಒತ್ತಡಗಳಿಂದಾಗಿ ದೇಶಭ್ರಷ್ಟರಾಗಬೇಕಾಗಿ ಬಂದರೂ, ಸಿನೆಮಾ ಕುರಿತ ಅವರ ಒಳನೋಟಗಳು ಮತ್ತು ಪ್ರಣಾಳಿಕೆಗಳು ಇಂದಿಗೂ ಸ್ವತಂತ್ರ ಸಿನೆಮಾ ನಿರ್ಮಾಣಕ್ಕೆ ಮುಖ್ಯ ಪ್ರೇರಣೆಯಾಗಿವೆ. ಕಲಾತ್ಮಕ ಸ್ವಾತಂತ್ರ್ಯ ಮತ್ತು ರಾಜಕೀಯ ಪ್ರಜ್ಞೆಯನ್ನು ಒಟ್ಟಿಗೆ ಕೊಂಡೊಯ್ದ ರೋಚಾ, ಜಾಗತಿಕ ಸಿನೆಮಾ ಇತಿಹಾಸದ ಅತ್ಯಂತ ಪ್ರಭಾವಶಾಲಿ ಚಿಂತಕರಲ್ಲಿ ಒಬ್ಬರಾಗಿ ನೆನಪಾಗುತ್ತಾರೆ.

rocha
Babu Eshwar Prasad
ಬಾಬು ಈಶ್ವರ್ ಪ್ರಸಾದ್
+ posts

ಲೇಖಕರು, ಚಿತ್ರನಿರ್ದೇಶಕರು, ದೃಶ್ಯ ಕಲಾವಿದರು. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ BFA ಹಾಗೂ ಮಹಾರಾಜಾ ಸಾಯೋಜಿರಾವ್ ವಿಶ್ವವಿದ್ಯಾಲಯ, ವಡೋದರದ ಫೈನ್ ಆರ್ಟ್ಸ್ ಫ್ಯಾಕಲ್ಟಿಯಿಂದ MA ಪದವಿಯನ್ನು ಪಡೆದಿರುತ್ತಾರೆ. 1993ರಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಚಿತ್ರಕಲಾ ಪ್ರದರ್ಶನಗಳನ್ನು ಮಾಡಿರುತ್ತಾರೆ. ಚಿತ್ರಕಲೆಯ ಹೊರತಾಗಿಯೂ, ಇವರಿಗೆ ಶಿಲ್ಪ, ಧ್ವನಿ ವಿನ್ಯಾಸ, ಫೋಟೋಗ್ರಫಿ ಮತ್ತು ವಿಶೇಷವಾಗಿ ವೀಡಿಯೊ ಮತ್ತು ಚಲನಚಿತ್ರಗಳಂತಹ ಇತರ ಮಾಧ್ಯಮಗಳನ್ನು ಅನ್ವೇಷಿಸುವಲ್ಲಿ ಆಳವಾದ ಆಸಕ್ತಿ ಇದೆ. ಇವರು 'ಗಾಳಿಬೀಜ' ಹಾಗೂ 'ಹರಿವ ನದಿಗೆ ಮೈಯೆಲ್ಲಾ ಕಾಲು' ಎಂಬ ಎರಡು ಚಿತ್ರಗಳನ್ನು ಹಾಗೂ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಬಾಬು ಈಶ್ವರ್ ಪ್ರಸಾದ್
ಬಾಬು ಈಶ್ವರ್ ಪ್ರಸಾದ್
ಲೇಖಕರು, ಚಿತ್ರನಿರ್ದೇಶಕರು, ದೃಶ್ಯ ಕಲಾವಿದರು. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ BFA ಹಾಗೂ ಮಹಾರಾಜಾ ಸಾಯೋಜಿರಾವ್ ವಿಶ್ವವಿದ್ಯಾಲಯ, ವಡೋದರದ ಫೈನ್ ಆರ್ಟ್ಸ್ ಫ್ಯಾಕಲ್ಟಿಯಿಂದ MA ಪದವಿಯನ್ನು ಪಡೆದಿರುತ್ತಾರೆ. 1993ರಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಚಿತ್ರಕಲಾ ಪ್ರದರ್ಶನಗಳನ್ನು ಮಾಡಿರುತ್ತಾರೆ. ಚಿತ್ರಕಲೆಯ ಹೊರತಾಗಿಯೂ, ಇವರಿಗೆ ಶಿಲ್ಪ, ಧ್ವನಿ ವಿನ್ಯಾಸ, ಫೋಟೋಗ್ರಫಿ ಮತ್ತು ವಿಶೇಷವಾಗಿ ವೀಡಿಯೊ ಮತ್ತು ಚಲನಚಿತ್ರಗಳಂತಹ ಇತರ ಮಾಧ್ಯಮಗಳನ್ನು ಅನ್ವೇಷಿಸುವಲ್ಲಿ ಆಳವಾದ ಆಸಕ್ತಿ ಇದೆ. ಇವರು 'ಗಾಳಿಬೀಜ' ಹಾಗೂ 'ಹರಿವ ನದಿಗೆ ಮೈಯೆಲ್ಲಾ ಕಾಲು' ಎಂಬ ಎರಡು ಚಿತ್ರಗಳನ್ನು ಹಾಗೂ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ ಸಂಚೇ?

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು...

ಜಿಮ್ ಇಲ್ಲ, ಟ್ರೆಡ್‌ಮಿಲ್ ಇಲ್ಲ; ಮನೆಯಲ್ಲೇ ಓಡಿ 4 ತಿಂಗಳಲ್ಲಿ 40 ಕೆಜಿ ತೂಕ ಇಳಿಸಿಕೊಂಡ ವ್ಯಕ್ತಿ!

ತೂಕ ಇಳಿಸಿಕೊಳ್ಳಲು ಜಿಮ್‌ಗೆ ಹೋಗಲೇಬೇಕು, ದುಬಾರಿ ವ್ಯಾಯಾಮ ಉಪಕರಣಗಳನ್ನು ಖರೀದಿಸಲೇಬೇಕು ಎಂಬ...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ ಆತಂಕದಲ್ಲಿ ಮೋದಿ ಸರ್ಕಾರ

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ...

ಯುಪಿ ಚುನಾವಣೆ | ಎಸ್‌ಪಿ ಜೊತೆ ಸೀಟು ಹಂಚಿಕೆಗೆ ಕಾಂಗ್ರೆಸ್ ಸಿದ್ಧತೆ; 125 ಸ್ಥಾನಗಳಿಗೆ ಪ್ರಿಯಾಂಕಾ ಪಡೆ ಬೇಡಿಕೆ!

ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ....