ದಕ್ಷಿಣ ದೆಹಲಿಯ ಮಾಳವೀಯ ನಗರದಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆ ವೇಳೆ 40 ಜನರನ್ನು ರಕ್ಷಿಸಲಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರಲ್ಲಿ ಮಧ್ಯ ಏಷ್ಯಾ, ಆಫ್ರಿಕಾ ಸೇರಿ ವಿದೇಶಿಯರು ಸೇರಿದ್ದಾರೆ.
ದೆಹಲಿ ಅಗ್ನಿಶಾಮಕ ಸೇವೆ (DFS) ಅಧಿಕಾರಿಗಳ ಪ್ರಕಾರ, ಬುಧವಾರ ಬೆಳಿಗ್ಗೆ ಸ್ಥಳೀಯ ಕಾಲಮಾನ 9:45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡ ಬಗ್ಗೆ ಕರೆ ಬಂದಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಸಿಬ್ಬಂದಿ, ಹಲವು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಕಟ್ಟಡದಲ್ಲಿದ್ದ ಒಟ್ಟು 40 ಜನರನ್ನು ರಕ್ಷಿಸಲಾಗಿದ್ದು, ಸೆಂಟ್ರಲೈಸ್ಡ್ ಆಕ್ಸಿಡೆಂಟ್ ಅಂಡ್ ಟ್ರಾಮಾ ಸರ್ವಿಸಸ್ ಆಂಬ್ಯುಲೆನ್ಸ್‌ಗಳ ಮೂಲಕ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಇದಕ್ಕೂ ಮುನ್ನ, ಇದೇ ಕಟ್ಟಡದ ನೆಲಮಾಳಿಗೆಯಲ್ಲಿ ಸಿಲುಕಿದ್ದ ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಕಾಗದದ ನೋಟುಗಳಿಗೆ ಗುಡ್ ಬೈ? ಭಾರತಕ್ಕೆ ಬರಲಿದೆಯೇ ಪಾಲಿಮರ್ ಕರೆನ್ಸಿ
ಘಟನೆ ಕುರಿತು ಪ್ರತಿಕ್ರಿಯಿಸಿರುವ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ಜಿತೇಂದ್ರ ಕುಮಾರ್, ‘ಬೆಳಿಗ್ಗೆ ಘಟನೆಯ ಮಾಹಿತಿ ಸಿಕ್ಕ ತಕ್ಷಣವೇ ನಮ್ಮ ಡಿಡಿಎಂಎ ಕೋಶವನ್ನು ಸಕ್ರಿಯಗೊಳಿಸಿದೆವು. ಎಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರಗಳಿಗೆ ಮಾಹಿತಿ ನೀಡಿ, ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಲು ಸೂಚಿಸಲಾಯಿತು. ನಾನು ತರಬೇತಿ ಕಾರ್ಯಕ್ರಮವೊಂದಕ್ಕೆ ತೆರಳಬೇಕಿತ್ತು, ಆದರೆ ಅದನ್ನು ಮುಂದೂಡಿ ನೇರವಾಗಿ ಘಟನಾ ಸ್ಥಳಕ್ಕೆ ಬಂದಿದ್ದೇನೆ’ ಎಂದು ವಿವರಿಸಿದರು.
‘ಕಟ್ಟಡದ ನೆಲಮಹಡಿಯಲ್ಲಿ ಈ ರೆಸ್ಟೋರೆಂಟ್ ಕಾರ್ಯನಿರ್ವಹಿಸುತ್ತಿತ್ತು ಎಂಬುದು ಸ್ಥಳಕ್ಕೆ ಬಂದಾಗ ನಮಗೆ ತಿಳಿದುಬಂದಿದೆ. ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಬಹುಶಃ ರೆಸ್ಟೋರೆಂಟ್‌ನಿಂದಲೇ ಬೆಂಕಿ ಆವರಿಸಿರುವ ಸಾಧ್ಯತೆಯಿದೆ. ನಮ್ಮ ಕಾರ್ಯಾಚರಣೆಯ ಆರಂಭಿಕ ಹಂತದಲ್ಲಿ 4 ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ಕಳುಹಿಸಲಾಗಿತ್ತು. ಮೃತಪಟ್ಟವರ ಗುರುತು ಮತ್ತು ಇತರ ಮಾಹಿತಿಗಾಗಿ ಅಧಿಕೃತ ದೃಢೀಕರಣಕ್ಕೆ ಕಾಯುತ್ತಿದ್ದೇವೆ.





