ಭೂಮಿಯ ಮೇಲಿರುವ ಎಲ್ಲ ಸಾಗರಗಳ ನೀರಿನ ಮೂರು ಪಟ್ಟು ಹೆಚ್ಚು ‘ನೀರು’ ಬಾಹ್ಯಾಕಾಶದಲ್ಲಿ ಪತ್ತೆಯಾಗಿದೆ.
ಭೂಮಿಯಾಚೆಗೆ ಜೀವ ಜಗತ್ತು ಇದೆಯೇ ಎಂಬ ಕುರಿತ ಸಂಶೋಧನೆ ಸತತವಾಗಿ ನಡೆಯುತ್ತಲೇ ಇದ್ದು, ಈ ಸಂದರ್ಭದಲ್ಲಿ ಅಪಾರ ನೀರಿನ ಆವಿಯ ಅಸ್ತಿತ್ವವನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.
ಭೂಮಿಯಿಂದ 450 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಈ ತಾಣ ಪ್ರಾಯಶಃ ಗ್ರಹವೊಂದರ ಜನ್ಮಸ್ಥಾನವಿದ್ದೀತು. ಗ್ರಹವೊಂದು ರೂಪು ತಳೆಯುತ್ತಿರಬಹುದಾದ ಜಾಗದಲ್ಲಿ ಸಾಗರಗಳಷ್ಟು ನೀರಿನ ಆವಿ ಪತ್ತೆಯಾಗಬಹುದು ಎಂಬ ಕಲ್ಪನೆ ಕೂಡ ನಮಗೆ ಇರಲಿಲ್ಲ ಎಂದು ಮಿಲಾನ್ ವಿಶ್ವವಿದ್ಯಾಲಯದ ಖಗೋಳ ಭೌತಶಾಸ್ತ್ರಜ್ಞ ಸ್ಟೆಫಾನೋ ಫಾಶಿನಿ ಪತ್ರಿಕಾ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.
‘ನೇಚರ್ ಅಸ್ಟ್ರಾನಮಿ’ ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಸಂಶೋಧನಾ ಪ್ರಬಂಧದ ಪ್ರಕಾರ ನೀರಿನ ಆವಿಯ ಅಸ್ತಿತ್ವವು ಆ ಗ್ರಹವನ್ನು ಅದು ರೂಪು ತಳೆದ ನಂತರ ವಾಸ ಯೋಗ್ಯ ಆಗಿಸುವ ಸಾಧ್ಯತೆಗಳಿವೆ.

ಅಪಾರ ನೀರಿನ ಆವಿಯ ಅಸ್ತಿತ್ವವು ಹಲವು ಗ್ರಹಗಳ ಹುಟ್ಟಿಗೆ ಕಾರಣವಾಗಬಹುದು. ಈ ವಾತಾವರಣವು ಭೂಮಿಯು 4.5 ಶತಕೋಟಿ ವರ್ಷಗಳ ಹಿಂದೆ ಜನ್ಮ ತಳೆದಾಗ ಇದ್ದ ವಾತಾವರಣದಂತೆಯೇ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಭೂಮಿಯ ಮೇಲಿನ ಜಲಸಂಪತ್ತು ವೇಗವಾಗಿ ಬರಿದಾಗುತ್ತಿರುವ ದಿನಗಳಿವು.
Is it true