ತಿರುಪತಿ ದೇಗುಲದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬ ಬಳಸಲಾಗಿದೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಿಬಿಐ ಒಳಗೊಂಡ ಐವರು ತಂಡದಿಂದ ಸ್ವತಂತ್ರ ಎಸ್‌ಐಟಿ ತನಿಖೆಗೆ ಆದೇಶಿಸಿದೆ.
ನಮ್ಮ ಆದೇಶವನ್ನು ರಾಜ್ಯ ಎಸ್‌ಐಟಿ ಸದಸ್ಯರ ಸ್ವತಂತ್ರ ಹಾಗೂ ನ್ಯಾಯಸಮ್ಮತ ವಿಚಾರಣೆಗೆ ಅನುಮಾನ ವ್ಯಕ್ತಪಡಿಸುವ ರೀತಿಯಲ್ಲಿ ಅರ್ಥೈಸಬಾರದು. ಕೋಟ್ಯಂತರ ಜನರ ನಂಬಿಕೆಗಳು ಹಾಗೂ ಭಕ್ತಿಯನ್ನು ಸಮಾಧಾನಪಡಿಸುವುದಕ್ಕಾಗಿ ನಾವು ಸಮಿತಿಯನ್ನು ರಚಿಸುತ್ತಿದ್ದೇವೆ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಹಾಗೂ ಕೆ ವಿ ವಿಶ್ವನಾಥನ್ ಅವರ ಪೀಠ ಆದೇಶದಲ್ಲಿ ತಿಳಿಸಿದೆ.
ಸುಪ್ರೀಂ ಕೋರ್ಟ್ ಆದೇಶಿಸುತ್ತಿರುವ ಎಸ್‌ಐಟಿ ತಂಡದಲ್ಲಿ ಸಿಬಿಐನಿಂದ ನಾಮ ನಿರ್ದೇಶನಗೊಂಡ ಇಬ್ಬರು ಅಧಿಕಾರಿಗಳು, ಆಂಧ್ರ ಪ್ರದೇಶ ಪೊಲೀಸ್‌ನ ಇಬ್ಬರು ಅಧಿಕಾರಿಗಳು, ಆಹಾರ ಗುಣಮಟ್ಟ ಸಂಸ್ಥೆಯ ಹಿರಿಯ ಅಧಿಕಾರಿ ತಂಡದಲ್ಲಿರುತ್ತಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾತಲ್ಲಿ ಅಭಿವೃದ್ಧಿ, ಮಾಧ್ಯಮಗಳಲ್ಲಿ ಬ್ರ್ಯಾಂಡ್ ಬೆಂಗಳೂರು
ಸೆ.30 ರಂದು ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಪೀಠವು, ದೇವರನ್ನು ರಾಜಕೀಯದಿಂದ ದೂರವಿಡಬೇಕೆಂದು ಅಭಿಪ್ರಾಯಪಟ್ಟಿತ್ತು. ವೈ ಎಸ್ ಜಗನ್ ಮೋಹನ್ ರೆಡ್ಡಿ ಆಡಳಿತದಲ್ಲಿ ತಿರುಪತಿ ಲಡ್ಡುವಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿದೆ ಎಂದು ಹಾಲಿ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ಇದು ಎಲ್ಲಡೆ ವಿವಾದಕ್ಕೆ ಕಾರಣವಾಗಿತ್ತು.
ಲಡ್ಡು ಪ್ರಸಾದದ ಬಗ್ಗೆ ರಾಜಕೀಯ ಆರೋಪ, ಪ್ರತ್ಯಾರೋಪದ ಬಗ್ಗೆ ನ್ಯಾಯಾಲಯವನ್ನು ವೇದಿಕೆ ಮಾಡಿಕೊಳ್ಳಲು ಅನುಮತಿಸುವುದಿಲ್ಲ ಎಂದು ಪೀಠವು ತನ್ನ ಆದೇಶದಲ್ಲಿ ಹೇಳಿದೆ.
