ಪಶ್ಚಿಮ ಬಂಗಾಳದಲ್ಲಿ ಎನ್‌ಐಎ ಅಧಿಕಾರಿಗಳ ಮೇಲೆ ದಾಳಿಗೆ ಸಂಬಂಧಿಸಿದಂತೆ ಹತ್ತು ಸದಸ್ಯರ ಟಿಎಂಸಿ ನಿಯೋಗ ಚುನಾವಣಾ ಆಯೋಗದ ಸದಸ್ಯರನ್ನು ಇಂದು ಭೇಟಿ ಮಾಡಲಿದೆ.
ಕೆಲವು ದಿನಗಳ ಹಿಂದೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಲು ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾಗ ಸ್ಥಳೀಯರು ಎನ್‌ಐಎ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದರು. ಈ ಘಟನೆಯು ಟಿಎಂಸಿ ಹಾಗೂ ಬಿಜೆಪಿ ನಡುವಿನ ವಾಗ್ವಾದಕ್ಕೆ ಕಾರಣವಾಗಿತ್ತು.
ಇದು ಆಕಸ್ಮಿಕ ಘಟನೆ ಎಂದು ಟಿಎಂಸಿ ಹೇಳಿದರೆ, ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಗಿತ್ತು ಎಂದು ಎನ್‌ಐಎ ಹಾಗೂ ಬಿಜೆಪಿ ಆರೋಪ ಮಾಡಿದ್ದವು.
ಟಿಎಂಸಿ ನಿಯೋಗ ಬಿಜೆಪಿ ಹಾಗೂ ಎನ್‌ಐಎ ವಿರುದ್ಧ ದೂರು ನೀಡುವ ಸಾಧ್ಯತೆಯಿದೆ. ಟಿಎಂಸಿ ಚುನಾವಣಾ ಆಯೋಗದ ಬಾಗಿಲು ಬಡಿಯುತ್ತಿರುವುದು ಇದೆ ಮೊದಲಲ್ಲ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮರೆಯಲಾರದ, ಮರೆಯಬಾರದ ಮನಮೋಹನ ಈ ಸಿಂಗ್
“ಕಳೆದ ವಾರ ಎರಡು ಬಾರಿ ಚುನಾವಣಾ ಆಯೋಗದ ಅಧಿಕಾರಿಗಳನ್ನು ನಾವು ಭೇಟಿಯಾಗಿದ್ದೆವು. ಚುನಾವಣೆ ಎದುರಿಸಲು ಎಲ್ಲರಿಗೂ ಸಮಾನ ಅವಕಾಶ ಹಾಗೂ ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ನಾವು ಈ ವಿಷಯವನ್ನು ಚುನಾವಣಾ ಆಯೋಗದ ಮುಂದೆ ಪ್ರಸ್ತಾಪಿಸಿದ್ದೇವೆ. ಈ ಸಮಯದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಬೇಕೆಂದು ಮಾದರಿ ನೀತಿ ಸಂಹಿತೆ ಜಾರಿಯಾದಗಿನಿಂದ ನಾವು ಹೇಳುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರವು ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವುದು ಸರಿಯಲ್ಲ” ಎಂದು ನಿಯೋಗದ ಸದಸ್ಯರಲ್ಲಿ ಒಬ್ಬರಾದ ಟಿಎಂಸಿ ಸಂಸದೆ ದೋಲಾ ಸೆನ್ ತಿಳಿಸಿದ್ದಾರೆ.
“ಈಗಾಗಲೇ ಇಬ್ಬರು ವಿಪಕ್ಷ ಸಂಸದರು ಸೆರೆಮನೆಯಲ್ಲಿದ್ದಾರೆ. ಪಿತೂರಿಗಳು ಇನ್ನೂ ನಡೆಯುತ್ತಿವೆ.ಎನ್‌ಐಎ ನಮ್ಮ ಇಬ್ಬರು ಕಾರ್ಯಕರ್ತರನ್ನು ಬಂಧಿಸಿದೆ. ಇಂದು ನಮ್ಮ ಪಕ್ಷದ 10 ಮಂದಿ ನಿಯೋಗ ದೆಹಲಿಗೆ ತೆರಳುತ್ತಿದ್ದೇವೆ” ಎಂದು ಡೋಲಾ ಸಿಂಗ್ ಹೇಳಿದರು.
