ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಮೇ 3ರಂದು ಜರ್ಮನಿಯಲ್ಲಿ ಮದುವೆಯಾಗಿದ್ದಾರೆ. ಬಿಜು ಜನತಾದಳದ (ಬಿಜೆಡಿ) ನಾಯಕ, ಮಾಜಿ ಸಂಸದ ಪಿನಾಕಿ ಮಿಶ್ರಾ ಅವರನ್ನು ಮಹುವಾ ವಿವಾಹವಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಹುವಾ ಮೊಯಿತ್ರಾ ಚಿನ್ನದ ಆಭರಣಗಳನ್ನು ಧರಿಸಿ, ಪಿನಾಕಿ ಮಿಶ್ರಾ ಅವರ ಕೈಗಳನ್ನು ಹಿಡಿದು ನಗುತ್ತಿರುವ ಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
50 ವರ್ಷದ ಮಹುವಾ ಮೊಯಿತ್ರಾ ಅವರಿಗೆ ಇದು ಎರಡನೇ ಮದುವೆ. ಅವರು ಈ ಹಿಂದೆ ಡ್ಯಾನಿಶ್ ಹಣಕಾಸು ತಜ್ಞ ಲಾರ್ಸ್ ಬ್ರೋರ್ಸನ್ ಅವರನ್ನು ವಿವಾಹವಾಗಿದ್ದರು. ಮದುವೆಯ ಬಗ್ಗೆ ಮಹುವಾ ಮೊಯಿತ್ರಾ, ಪಿನಾಕಿ ಮಿಶ್ರಾ ಅಥವಾ ಅವರ ಪಕ್ಷಗಳು ಯಾವುದೇ ಅಧಿಕೃತ ಹೇಳಿಕೆಯನ್ನು ಈವರೆಗೆ ನೀಡಿಲ್ಲ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಭಿಮಾನಿಗಳ ಅತಿರೇಕ ಮತ್ತು ಸರ್ಕಾರದ ಅವಿವೇಕ
ಅಸ್ಸಾಂನಲ್ಲಿ ಅಕ್ಟೋಬರ್ 12, 1974ರಂದು ಜನಿಸಿದ ಮಹುವಾ ಮೊಯಿತ್ರಾ ಅವರು ಮೌಂಟ್ ಹೋಲಿಯೋಕ್ ಕಾಲೇಜಿನಿಂದ ಅರ್ಥಶಾಸ್ತ್ರ ಮತ್ತು ಗಣಿತದಲ್ಲಿ ಪದವಿ ಪಡೆದಿದ್ದಾರೆ.
ರಾಜಕಾರಣಕ್ಕೆ ಕಾಲಿಡುವ ಮುನ್ನ ಬ್ಯಾಂಕರ್ ಆಗಿದ್ದ ಮಹುವಾ, 2010ರಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸೇರಿದ್ದರು. 2019ರಲ್ಲಿ ಪಶ್ಚಿಮ ಬಂಗಾಳದ ಕರಿಂಪುರ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾವಣೆಯಲ್ಲಿ ಗೆದ್ದು ಲೋಕಸಭೆ ಪ್ರವೇಶಿಸಿದ್ದರು. ಮಹುವಾ ಅವರು ಪ್ರಸ್ತುತ ಎರಡನೇ ಅವಧಿಗೆ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
65 ವರ್ಷದ ಪಿನಾಕಿ ಮೊದಲು ಸಂಗೀತಾ ಮಿಶ್ರಾ ಅವರನ್ನು ಜನವರಿ 16, 1984 ರಂದು ವಿವಾಹವಾಗಿದ್ದರು. ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಪಿನಾಕಿ ಈಗ ಮಹುವಾ ಮೊಯಿತ್ರಾ ಅವರನ್ನು ಮದುವೆಯಾಗಿದ್ದಾರೆ. ಪಿನಾಕಿ ಅವರು ಬಿಜೆಡಿಯಿಂದ ಮೂರು ಬಾರಿ ಸಂಸದರಾಗಿದ್ದರು.