ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಹರಿಯಾಣದ ಖ್ಯಾತ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಸೇರಿ 6 ಜನರನ್ನು ಬಂಧಿಸಲಾಗಿದೆ.
ಟ್ರಾವೆಲ್ ವ್ಲಾಗರ್ ಆಗಿರುವ ಜ್ಯೋತಿ ಮಲ್ಹೋತ್ರಾ ಇತ್ತೀಚೆಗಷ್ಟೆ ಪಾಕಿಸ್ತಾನಕ್ಕೆ ಪ್ರವಾಸ ಮಾಡಿದ್ದರು. ಅಲ್ಲಿ ಆಕೆ ಐಎಸ್ಐ ಏಜೆಂಟ್ ಜೊತೆ ಸಂಪರ್ಕ ಬೆಳೆಸಿ, ಆತನೊಂದಿಗೆ ಚಾಟ್ ಮಾಡುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ. ಆಕೆಯ ಜೊತೆ ಇನ್ನೂ ಕೆಲವು ಯೂಟ್ಯೂಬರ್ಗಳನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳಿಗೆ ಭಾರತದ ಸೇನಾ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಆರೋಪ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಮೇಲೆ ಕೇಳಿಬಂದಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಸರ್ಕಾರಿ ರಹಸ್ಯ ಕಾಯ್ದೆ ಮತ್ತು ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಮೇ 16ರಂದು ಎಫ್ಐಆರ್ ದಾಖಲಿಸಲಾಗಿದೆ.
ಪೊಲೀಸರ ಮುಂದೆ ಎಲ್ಲ ವಿಚಾರಗಳನ್ನು ಹೇಳಿರುವ ಜ್ಯೋತಿ ಅವರನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಜ್ಯೋತಿ ಅವರನ್ನು ಐದು ದಿನಗಳವರೆಗೆ ಪೊಲೀಸ್ ವಶಕ್ಕೆ ನೀಡಿದೆ.
ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿಯ ಸಿಬ್ಬಂದಿ ಎಹ್ಸಾನ್ ಉರ್ ರಹೀಮ್ ಅಲಿಯಾಸ್ ಡ್ಯಾನಿಷ್ ಅವರೊಂದಿಗೆ ಜ್ಯೋತಿ ಸಂಪರ್ಕ ಹೊಂದಿದ್ದರು. ಭಾರತದ ಕುರಿತು ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಡ್ಯಾನಿಷ್ ಅವರನ್ನು ಕೇಂದ್ರ ಇದೇ ಮೇ 13ರಂದು ಗಡೀಪಾರು ಮಾಡಿತ್ತು.
ಜ್ಯೋತಿಯವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಜನವರಿ ತಿಂಗಳಿನಲ್ಲಿ ಪಹಲ್ಗಾಮ್ಗೆ ತೆರಳಿದ್ದ ವಿಡಿಯೋ ಅಪ್ಲೋಡ್ ಆಗಿದೆ. ಪಹಲ್ಗಾಮ್ ಘಟನೆ, ಆಪರೇಷನ್ ಸಿಂಧೂರ ಹಾಗೂ ಭಾರತ ಪಾಕಿಸ್ತಾನ ಸಂಘರ್ಷಕ್ಕೆ ವಿರಾಮದ ಬೆನ್ನಲ್ಲೇ ಜ್ಯೋತಿಯವರ ಹಳೆಯ ವಿಡಿಯೋಗಳು ಈಗ ವೈರಲ್ ಆಗಿದೆ. ಅಲ್ಲದೇ, ಪಾಕಿಸ್ತಾನದ ರಾಯಭಾರ ಕಚೇರಿಯು ಹಮ್ಮಿಕೊಂಡಿದ್ದ ಭಾರತೀಯ ಯೂಟ್ಯೂಬರ್ಗಳ ಡಿನ್ನರ್ ಪಾರ್ಟಿಯಲ್ಲೂ ಕೂಡ ಜ್ಯೋತಿ ಮಲ್ಹೋತ್ರಾ ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.
ಯಾರು ಈ ಜ್ಯೋತಿ ಮಲ್ಹೋತ್ರಾ?
‘ಟ್ರಾವೆಲ್ ವಿತ್ ಜ್ಯೋ’ ಎನ್ನುವ ಯೂಟ್ಯೂಬ್ ಚಾನೆಲ್ ಮೂಲಕ ಪ್ರವಾಸದ ವಿಡಿಯೋಗಳನ್ನು ಮಾಡುತ್ತಿದ್ದ ಜ್ಯೋತಿ ಅವರಿಗೆ 3.77 ಲಕ್ಷ ಮತ್ತು ಇನ್ಸ್ಟಾಗ್ರಾಂನಲ್ಲಿ 1.33 ಲಕ್ಷ ಚಂದಾದಾರರಿದ್ದರು.
ಪಾಕಿಸ್ತಾನದ ಶಕೀರ್ ಅಲಿಯಾಸ್ ರಾಣಾ ಶಹಬಾಝ್ ಎಂಬಾತನೊಂದಿಗೆ ಸಂಪರ್ಕ ಬೆಳೆಸಿದ್ದ ಜ್ಯೋತಿ, ತನ್ನ ಮೊಬೈಲ್ ಫೋನಿನಲ್ಲಿ ಆತನ ನಂಬರ್ ಅನ್ನು ಜಾಟ್ ರಾಂಧವ ಎಂದು ಸೇವ್ ಮಾಡಿಕೊಂಡಿರುವ ಸಂಗತಿ ಕೂಡ ಬೆಳಕಿಗೆ ಬಂದಿದೆ.
2023 ರಲ್ಲಿ, ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನ ಪ್ರವಾಸಕ್ಕೆ ಹೋದಾಗ, ಪಾಕ್ ಹೈಕಮಿಷನ್ ಅಧಿಕಾರಿಯಾಗಿದ್ದ ಡ್ಯಾನಿಶ್, ಗುಪ್ತಚರ ಸಂಸ್ಥೆಯಲ್ಲಿ ಕೆಲಸ ಮಾಡುವ ಇಬ್ಬರು ವ್ಯಕ್ತಿಗಳಿಗೆ ಅವಳನ್ನು ಪರಿಚಯಿಸಿದ್ದರು. ಅವರಲ್ಲಿ ಒಬ್ಬನಾಗಿದ್ದ ಶಹಬಾಝ್ನ ಅಲಿಯಾಸ್ ಜಾಟ್ ರಾಂಧವ ಆಗಿದ್ದರು.
ಏಪ್ರಿಲ್ 30, 2025 ರಂದು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದ ಫೋಟೋದಲ್ಲಿ ಅವರು ಇಂಡೋನೇಷ್ಯಾದ ಬಾಲಿಯಲ್ಲಿರುವ ಪ್ರವಾಸದ ಫೋಟೋ ಆಗಿತ್ತು. ಜ್ಯೋತಿ ಪಾಕಿಸ್ತಾನಿ ಅಧಿಕಾರಿಯೊಂದಿಗೆ ಇಂಡೋನೇಷ್ಯಾ ಪ್ರವಾಸಕ್ಕೆ ಹೋಗಿದ್ದರು ಎಂದು ಹರಿಯಾಣ ಪೊಲೀಸರು ಹೇಳಿಕೊಂಡಿದ್ದಾರೆ.
