ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಮಾರ್ಚ್ 27ರಂದು ನಡೆದ ಪ್ರತಿಭಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯ ಬಳಿಕ ಬಾಂಗ್ಲಾದೇಶದ ಜೊತೆ ಗಡಿ ಹಂಚಿಕೊಂಡಿರುವ ಮೇಘಾಲಯ ರಾಜ್ಯದ ಹಲವಾರು ಗ್ರಾಮಗಳಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ.
ಸಿಎಎ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಖಾಸಿ ವಿದ್ಯಾರ್ಥಿ ಸಂಘವು (ಕೆಎಸ್‌ಯು) ಇಬ್ಬರನ್ನು ಹತ್ಯೆ ಮಾಡಿದೆ ಎಂದು ಆರೋಪಿಸಲಾಗಿದೆ. ಮೃತರನ್ನು ಸುಜಿತ್ ದತ್ತಾ (35) ಮತ್ತು ಎಸನ್ ಸಿಂಗ್ (24) ಎಂದು ಗುರುತಿಸಲಾಗಿದೆ. ಸುಜಿತ್ ಬಂಗಾಳಿಯಾಗಿದ್ದರೆ, ಎಸಾನ್ ಆದಿವಾಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಸುಜಿತ್ ಸುಣ್ಣದ ಕಲ್ಲು ಕ್ವಾರಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ವೇಳೆ ಕೊಲೆ ಮಾಡಲಾಗಿದೆ. ಸಿಎಎ ವಿರುದ್ಧ ಪ್ರತಿಭಟನೆ ನಡೆಸಿದವರು ಕೊಲೆ ಮಾಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಆದರೆ, ಸಿಎಎ ವಿರೋಧಿ ಪ್ರತಿಭಟನೆಗಳು ಮತ್ತು ಹತ್ಯೆಗಳ ನಡುವೆ ಯಾವುದೇ ಸಂಬಂಧವಿರುವುದು ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಈ ಕೊಲೆಗೆ ಸಂಬಂಧಿಸಿ ಕೆಎಸ್‌ಯು ಸದಸ್ಯ ಶಾನ್‌ಬೋರ್ಲಾಂಗ್ ಶಾತಿ (26) ಮತ್ತು ಮೆಸದಪ್ಪೋರ್ ಸ್ಕೆಂಬಿಲ್ (26) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 2 ರಂದು ಸ್ಥಳೀಯ ನ್ಯಾಯಾಲಯವು ಆರೋಪಿಗಳನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.
ಇದನ್ನು ಓದಿದ್ದೀರಾ? ಪುರೋಹಿತ ಕೂಡಾ ಸಿಎಎ ಅರ್ಹತಾ ಪ್ರಮಾಣಪತ್ರ ನೀಡಬಹುದೆಂದ ಸರ್ಕಾರಿ ಸಹಾಯವಾಣಿ!
ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಕೆಎಸ್‌ಯು ಸದಸ್ಯರು ಬುಧವಾರ ಮಧ್ಯಾಹ್ನ ಸೊಹ್ರಾ ಪಟ್ಟಣದ ಸ್ಥಳೀಯ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು. ಅಲ್ಲದೆ, ಸುಮಾರು ಐದು ಜನರು ಮಾಸ್ಕ್ ಮತ್ತು ಹೆಲ್ಮೆಟ್ ಧರಿಸಿ ಶಿಲ್ಲಾಂಗ್‌ನ ಮಾವ್ಲೈ ಪೊಲೀಸ್ ಠಾಣೆಯತ್ತ ಪೆಟ್ರೋಲ್ ಬಾಂಬ್ ಎಸೆದು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ‘ಸಿಎಎ ಅಸಂವಿಧಾನಿಕ’ ಎಂದ ನ್ಯಾಯಮೂರ್ತಿ ಚಂದ್ರಚೂಡ್‌ರ ಪುತ್ರ; ವೀಡಿಯೋ ವೈರಲ್
ಮೃತರಲ್ಲಿ ಒಬ್ಬರಾದ ಸುಜಿತ್ ಅವರ ಕುಟುಂಬವು ಸೊಹ್ರಾದಿಂದ 30 ಕಿಲೋಮೀಟರ್ ದೂರದಲ್ಲಿರುವ ಇಚಮತಿಯಲ್ಲಿರುವ ತಮ್ಮ ಮನೆಯಿಂದ ಹೊರಬರಲು ಕೂಡಾ ಭಯಪಡುತ್ತಿದೆ ಎಂದು ದಿ ವೈರ್ ವರದಿ ಮಾಡಿದೆ.