ದೆಹಲಿ ನೈರುತ್ಯ ಭಾಗದ ಆರ್.ಕೆ.ಪುರಂ ಪ್ರದೇಶದಲ್ಲಿ ಅಪರಿಚಿತರು ಭಾನುವಾರ (ಜೂನ್ 18) ಇಬ್ಬರು ಮಹಿಳೆಯರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ತಕ್ಷಣ ಇಬ್ಬರು ಮಹಿಳೆಯರನ್ನೂ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ತೀವ್ರ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಮಹಿಳೆಯರೂ ಮೃತಪಟ್ಟಿದ್ದಾರೆ.
ದೆಹಲಿ ಅಂಬೇಡ್ಕರ್ ಬಸ್ತಿ ಪ್ರದೇಶದಿಂದ ವ್ಯಕ್ತಿಯೊಬ್ಬರು ನಸುಕಿನ ಜಾವ 4.40ಕ್ಕೆ ಆರ್.ಕೆ.ಪುರ ಪೊಲೀಸ್ ಠಾಣೆಗೆ ಕರೆ ಮಾಡಿ ಕೆಲವು ಅಪರಿಚಿತರು ತಮ್ಮ ಸಹೋದರಿಯರಿಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು
ಹೇಳಿದ್ದಾರೆ.
ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ದೌಡಾಯಿಸಿತು. ಗುಂಡೇಟು ಬಿದ್ದ ಸಹೋದರಿಯರನ್ನು ಎಸ್.ಜೆ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಅವರು ಮೃತಪಟ್ಟರು ಎಂದು ಈಶಾನ್ಯ ದೆಹಲಿಯ ಉಪ ಪೊಲೀಸ್ ಆಯುಕ್ತ ಮನೋಜ್ ಸಿ. ಹೇಳಿದರು ಎಂದು ವರದಿಯಾಗಿದೆ.
ಮೃತರನ್ನು ಪಿಂಕಿ (30) ಮತ್ತು ಜ್ಯೋತಿ (29) ಎಂದು ಗುರುತಿಸಲಾಗಿದೆ.
ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಮುಖ್ಯ ಆರೋಪಿ ಮತ್ತು ಆತನ ಸಹಚರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಣಕಾಸಿನ ವಿಚಾರವಾಗಿ ಹತ್ಯೆ ನಡೆದಿರುವುದಾಗಿ ಶಂಕಿಸಲಾಗಿದೆ. ತನಿಖೆಯ ನಂತರ ಪೂರ್ಣ ಮಾಹಿತಿ ತಿಳಿಯಲಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
‘ಸರ್ಕಾರದ ಬಳಿ ಕಾನೂನು-ಸುವ್ಯವಸ್ಥೆ ಇದ್ದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ’
ದೆಹಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯು ಲೆಫ್ಟಿನೆಂಟ್ ಗೌರ್ನರ್ ಅವರ ಬಳಿ ಇರುವ ಬದಲಿಗೆ ಎಎಪಿ ಸರ್ಕಾರದ ಬಳಿ ಇದ್ದಿದ್ದರೆ ಗುಂಡಿನ ದಾಳಿಯಂತಹ ಘಟನೆಗಳು ನಡೆಯುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗುಜರಾತ್ | ʻನನ್ನ ಪತ್ನಿ ಗರ್ಭಿಣಿʼ ಎಂದ ಅತ್ಯಾಚಾರ ಆರೋಪಿ; ಹೈಕೋರ್ಟ್ ಸಂಧಾನ ವಿಫಲ
ಸಹೋದರಿಯರ ಹತ್ಯೆ ಘಟನೆಯು ಮಾಧ್ಯಮಗಳಲ್ಲಿ ಬಿತ್ತರವಾದ ನಂತರ ಕೇಜ್ರಿವಾಲ್ ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ.
“ನಮ್ಮ ಆಲೋಚನೆಗಳು ಇಬ್ಬರು ಮಹಿಳೆಯರ ಕುಟುಂಬದ ಜೊತೆ ಇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ದೆಹಲಿಯ ಜನರು ಸಾಕಷ್ಟು ಅಭದ್ರತೆಯ ಭಾವನೆಯನ್ನು ಅನುಭವಿಸುತ್ತಿದ್ದಾರೆ. ದೆಹಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿಭಾಯಿಸುವ ಜವಾಬ್ದಾರಿ ಹೊತ್ತಿರುವವರು ಪರಿಸ್ಥಿತಿಯನ್ನು ಸರಿಪಡಿಸುವ ಬದಲು ದೆಹಲಿ ಸರ್ಕಾರವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಪಿತೂರಿ ನಡೆಸಲಾಗುತ್ತಿದೆ” ಎಂದು ಕೇಜ್ರಿವಾಲ್ ಟ್ವೀಟ್‌ನಲ್ಲಿ ಕುಟುಕಿದ್ದಾರೆ.