ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಥವಾ ಎಎಪಿ ಪರವಾಗಿ ಪ್ರಚಾರ ಮಾಡುವುದಿಲ್ಲ. ನಮ್ಮ ಪಕ್ಷವು ತಟಸ್ಥ ನಿಲುವನ್ನು ಅಳವಡಿಸಿಕೊಂಡಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಮಂಗಳವಾರ ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಇಂಡಿಯಾ ಒಕ್ಕೂಟದ ಭಾಗವಾಗಿ ಮೈತ್ರಿಯಾಗಿ ಸ್ಪರ್ಧಿಸಿದ್ದವು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದೆ. ಈ ನಡುವೆ ಇಂಡಿಯಾ ಒಕ್ಕೂಟದ ಭಾಗವಾಗಿರುವ ಕೆಲವು ಪಕ್ಷಗಳು ಎಎಪಿಗೆ ಬೆಂಬಲ ನೀಡಿದೆ.
ಇದನ್ನು ಓದಿದ್ದೀರಾ? ದೆಹಲಿ ವಿಧಾನಸಭೆ ಚುನಾವಣೆ | ಶೇ.46ರಷ್ಟು ಅಭ್ಯರ್ಥಿಗಳು 5-12ನೇ ತರಗತಿ ಶಿಕ್ಷಣ ಪಡೆದವರು
ಆದರೆ ಶಿವಸೇನೆ ತಟಸ್ಥವಾಗಿರಲು ನಿರ್ಧರಿಸಿದೆ. “ಇಂಡಿಯಾ ಒಕ್ಕೂಟದ ಎಎಪಿ ಮತ್ತು ಕಾಂಗ್ರೆಸ್ ಎರಡೂ ಕೂಡಾ ಶಿವಸೇನೆ (ಯುಬಿಟಿ) ಸ್ನೇಹಿತರು ಎಂದು ಸಂಜಯ್ ರಾವತ್ ಒತ್ತಿ ಹೇಳಿದ್ದಾರೆ. ಮಾಧ್ಯಮದ ಪ್ರಶ್ನೆಗೆ ಉತ್ತರಿಸುತ್ತಾ ಈ ಹೇಳಿಕೆಯನ್ನು ನೀಡಿದ್ದಾರೆ.
ಈಗಾಗಲೇ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ತಮ್ಮ ಬೆಂಬಲವನ್ನು ಘೋಷಿಸಿದೆ. ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಬಿಜೆಪಿಗೆ ಬೆಂಬಲ ನೀಡಿದೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. 2020ರಲ್ಲಿ 70 ವಿಧಾನಸಭೆ ಕ್ಷೇತ್ರಗಳ ಪೈಕಿ ಒಟ್ಟು 62 ಸ್ಥಾನಗಳನ್ನು ಗೆದ್ದಿದ್ದ ಎಎಪಿಯು ಭರ್ಜರಿ ಗೆಲುವು ಕಂಡಿದೆ. ಇದೀಗ ಅರವಿಂದ್ ಕೇಜ್ರಿವಾಲ್ ಸತತ ಮೂರನೇ ಬಾರಿಗೆ ಅಧಿಕಾರ ಚುಕ್ಕಾಣಿಯನ್ನು ಪಡೆಯುವ ಪ್ರಯತ್ನವನ್ನು ನಡೆಸುತ್ತಿದ್ದಾರೆ.
