ಉಕ್ರೇನ್‌ನ ಒಡೆಸಾ ಬಂದರಿನಿಂದ ನಿರ್ಗಮಿಸುತ್ತಿದ್ದ ಸರಕು ಹಡಗಿನ ಮೇಲೆ ರಷ್ಯಾ ದಾಳಿ ನಡೆಸಿದೆ. ದಾಳಿಯಲ್ಲಿ ನಾಲ್ವರು ಭಾರತೀಯರು ಮೃತಪಟ್ಟಿದ್ದು, ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಗಿನಿ-ಬಿಸ್ಸೌ ಧ್ವಜ ಹೊಂದಿದ್ದ ‘ಎಮ್‌ವಿ ಗೋಲ್ಡನ್ ಲಿಯೋ’ ಹಡಗಿನ ಮೇಲೆ ದಾಳಿ ನಡೆದಿದೆ. ಈ ಹಡಗಿನಲ್ಲಿ ಐವರು ಭಾರತೀಯರು ಸೇರಿದಂತೆ ಒಟ್ಟು 17 ಸಿಬ್ಬಂದಿ ಇದ್ದರು ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಅಧಿಕೃತ ಪ್ರಕಟಣೆ ಹೊರಡಿಸಿರುವ ವಿದೇಶಾಂಗ ಸಚಿವಾಲಯವು, “ಲಭ್ಯವಿರುವ ಮಾಹಿತಿಯಂತೆ ನಾಲ್ವರು ಭಾರತೀಯ ಪ್ರಜೆಗಳು ದುರಂತವಾಗಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಒಬ್ಬರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಕ್ರೇನ್‌ನಲ್ಲಿರುವ ನಮ್ಮ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸುತ್ತಿದ್ದು, ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಶ್ರಮಿಸುತ್ತಿದೆ” ಎಂದು ಹೇಳಿದೆ.
ವಾಣಿಜ್ಯ ಹಡಗುಗಳು ಮತ್ತು ನಿರಪರಾಧಿ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ನಡೆದ ಈ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. “ನಾಗರಿಕ ಹಡಗುಗಳ ಮೇಲಿನ ದಾಳಿ, ನಾವಿಕರ ಜೀವಕ್ಕೆ ಅಪಾಯವನ್ನುಂಟು ಮಾಡುವುದು ಅಥವಾ ವ್ಯಾಪಾರ ಮತ್ತು ಸಂಚಾರ ಸ್ವಾತಂತ್ರ್ಯವನ್ನು ತಡೆಯುವುದು ಖಂಡನೀಯ ಮತ್ತು ಇದನ್ನು ತಪ್ಪಿಸಬೇಕು” ಎಂದು ಹೇಳಿದೆ.
ಉಕ್ರೇನ್‌ನ ವಿದೇಶಾಂಗ ಸಚಿವ ಆಂಡ್ರಿ ಸಿಬಿಹಾ ಅವರು, “ಉಕ್ರೇನ್‌ನ ಕಡಲ ಮಾರ್ಗದ ಮೂಲಕ ಪ್ರಯಾಣಿಸುತ್ತಿದ್ದ ಹಡಗಿನ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಭಾರತೀಯರು ಮೃತಪಟ್ಟಿದ್ದಾರೆ” ಎಂದು ದೃಢಪಡಿಸಿದ್ದಾರೆ. ಇದನ್ನು ಅಂತಾರಾಷ್ಟ್ರೀಯ ಹಡಗು ಸಂಚಾರದ ಮೇಲಿನ ದಾಳಿ ಎಂದು ಕರೆದಿರುವ ಅವರು, “ರಷ್ಯಾ ಅಧ್ಯಕ್ಷ ಪುಟಿನ್ ಜಾಗತಿಕ ಆಹಾರ ಭದ್ರತೆಗೆ ನೆರವಾಗುತ್ತಿದ್ದ ನಾಗರಿಕ ಹಡಗನ್ನೇ ಮತ್ತೊಂದು ಗುರಿಯನ್ನಾಗಿ ಮಾಡಿಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ.




