ಶಿಕ್ಷಕಿಯ ಸೂಚನೆ ಮೇರೆಗೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿಯೊಬ್ಬನಿಗೆ ಸಹಪಾಠಿಗಳು ಕಪಾಳಮೋಕ್ಷ ಮಾಡಿದ ಪ್ರಕರಣದ ತನಿಖೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಮುಜಾಫರ್ ನಗರ ಪೊಲೀಸ್ ವರಿಷ್ಠಾಧಿಕಾರಿಗೆ ಸುಪ್ರೀಂ ಕೋರ್ಟ್ ಬುಧವಾರ(ಸೆ.06) ಸೂಚಿಸಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿಥಾಲ್ ಅವರ ಪೀಠವು ವಿದ್ಯಾರ್ಥಿ ಮತ್ತು ಅವರ ಪೋಷಕರನ್ನು ರಕ್ಷಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ತಿಳಿಸುವಂತೆ ಎಸ್ಪಿಗೆ ತಿಳಿಸಿದೆ. ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಸೆಪ್ಟೆಂಬರ್ 25ರೊಳಗೆ ಉತ್ತರ ನೀಡುವಂತೆ ಸೂಚಿಸಿದೆ.
ವಿದ್ಯಾರ್ಥಿಗೆ ಕಪಾಳಮೋಕ್ಷ ಪ್ರಕರಣದ ತ್ವರಿತ ತನಿಖೆಗೆ ಕೋರಿ ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ ತುಷಾರ್ ಗಾಂಧಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ.
ಕೋಮು ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಮುಜಾಫರ್ ನಗರ ಪೊಲೀಸರು ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಶಿಕ್ಷಣ ಇಲಾಖೆಯಿಂದ ಶಾಲೆಗೆ ನೋಟಿಸ್ ಕೂಡ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಸತ್ಯದಿಂದ ಭಾರತದ ಕುಟುಂಬ ವ್ಯವಸ್ಥೆ ಉಳಿದಿದೆ ಎಂದ ಭಾಗವತ್: ಜಾತಿ ವ್ಯವಸ್ಥೆ, ಅಸಮಾನತೆ ಹೆಚ್ಚಿದೆ ಎಂದ ನೆಟ್ಟಿಗರು
ಮುಜಾಫರ್ ನಗರದ ಖುಬ್ಬಾಪುರ ಗ್ರಾಮದಲ್ಲಿ 2ನೇ ತರಗತಿಯ ಮುಸ್ಲಿಂ ಸಮುದಾಯದ ಬಾಲಕನಿಗೆ ಕಪಾಳಮೋಕ್ಷ ಮಾಡುವಂತೆ ವಿದ್ಯಾರ್ಥಿಗಳನ್ನು ಕೇಳುತ್ತಿದ್ದ ಹಾಗೂ ಕೋಮುವಾದಿ ಹೇಳಿಕೆ ನೀಡಿದ ವಿಡಿಯೋ ಬೆಳಕಿಗೆ ಬಂದ ಒಂದು ದಿನದ ನಂತರ ಶಿಕ್ಷಕಿ ತ್ರಿಪ್ತಾ ತ್ಯಾಗಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಮುಜಾಫರ್ ನಗರದ ನೇಹಾ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕಿ ತೃಪ್ತಾ ತ್ಯಾಗಿ ಎಂಬವರು ಮುಸ್ಲಿಂ ಬಾಲಕನಿಗೆ ಹೊಡೆಯುವಂತೆ ಉಳಿದ ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ. ಅದರಂತೆ ಉಳಿದ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿಯೇ ಬಂದು ಮುಸ್ಲಿಂ ಬಾಲಕನಿಗೆ ಹೊಡೆದಿದ್ದಾರೆ.
ಮುಸ್ಲಿಂ ಬಾಲಕನಿಗೆ ಉಳಿದ ಸಹಪಾಠಿಗಳು ಹೊಡೆಯುತ್ತಿದ್ದರೆ ಈ ಶಿಕ್ಷಕಿ ಕೂತುಕೊಂಡು ನೋಡುತ್ತಿದ್ದರು. ಜೊತೆಗೆ ಕೋಮುದ್ವೇಷದ ಮಾತುಗಳನ್ನು ಆಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಉಳಿದ ವಿದ್ಯಾರ್ಥಿಗಳಿಗೆ ಜೋರಾಗಿ ಹೊಡೆಯುವಂತೆ ಉತ್ತೇಜನ ನೀಡುತ್ತಿದ್ದರು. ಏ ನೀನು ಇವನಿಗೆ ಇಷ್ಟು ಮೆಲ್ಲಗೆ ಹೊಡೆಯುತ್ತಿದ್ದೀಯಾ? ಜೋರಾಗಿ ಹೊಡೆ ಎಂದು ಪ್ರೇರೇಪಿಸುತ್ತಿದ್ದುದು ವಿಡಿಯೋದಲ್ಲಿ ಕಂಡು ಬಂದಿದೆ.