ಲಂಚ ನೀಡಲು ಸಾಧ್ಯವಾಗದ ಕಾರಣ ಹೆರಿಗೆ ಮಾಡಿಸಲು ವೈದ್ಯರು ನಿರಾಕರಿಸಿದ ಬಳಿಕ ಮಹಿಳೆಯೊಬ್ಬರು ರಸ್ತೆ ಸಮೀಪದಲ್ಲಿದ್ದ ಪೊದೆಯಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರಪ್ರದೇಶದ ಅಲಿಗಢದ ಹಬುದಾ ಮೊಹಲ್ಲಾದಲ್ಲಿ ನಡೆದಿದೆ.
ಮಹಿಳೆಯನ್ನು ಹೆರಿಗೆಗಾಗಿ ಇಗ್ಲಾಸ್ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ ಹಣ ನೀಡದ ಕಾರಣ ತಮ್ಮನ್ನು ಇನ್ನೊಂದು ಆಸ್ಪತ್ರೆಗೆ ಕೆರೆದೊಯ್ಯುವಂತೆ ಸೂಚಿಸಲಾಗಿದೆ. ಪರಿಣಾಮವಾಗಿ ಮಹಿಳೆ ರಸ್ತೆ ಸಮೀಪದಲ್ಲಿದ್ದ ಪೊದೆಯಲ್ಲಿ ಕುಟುಂಬದ ಸದಸ್ಯರ ನೆರವಿನಿಂದ ಮಗುವಿಗೆ ಜನ್ಮ ನೀಡಿದರು.
‘‘ಒಂದು ಸಾವಿರ ರೂಪಾಯಿ ಲಂಚದ ಹಣವನ್ನು ಪಾವತಿಸಲು ಸಾಧ್ಯವಾಗದೇ ಇರುವುದರಿಂದ ಆಸ್ಪತ್ರೆಯ ವೈದ್ಯರು ಹೆರಿಗೆ ಮಾಡಿಸಲು ನಿರಾಕರಿಸಿದರು’’ ಎಂದು ಮಹಿಳೆಯ ಕುಟುಂಬ ಆರೋಪಿಸಿದೆ.
ಈ ಘಟನೆಯನ್ನು ಕೆಲವರು ದೂರದಿಂದ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು. ನಂತರದಲ್ಲಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
“ನಾವು ಹಳೆಯ ಶೂ ಹಾಗೂ ಚಪ್ಪಲಿ ಹೊಲಿಯುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಾವು ಮಹಿಳೆಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆರಿಗೆಗೆ ಕರೆದುಕೊಂಡು ಹೋದಾಗ ವೈದ್ಯರು ಒಂದು ಸಾವಿರ ಲಂಚ ನೀಡದ ಕಾರಣ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು” ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.