ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಆಫೀಸ್ (ಎನ್‌ಎಸ್‌ಒ) ಮೇ 17ರಂದು ಬಿಡುಗಡೆ ಮಾಡಿದ ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (ಪಿಎಲ್‌ಎಫ್‌ಎಸ್) ಅಂಕಿಅಂಶಗಳು ಭಾರತದಲ್ಲಿ ನಗರ ಪ್ರದೇಶದ ನಿರುದ್ಯೋಗವು ಆರ್ಥಿಕ ಅಸ್ಥಿರತೆಯ ಪ್ರತಿಬಿಂಬವಾಗಿರುವುದನ್ನು ತೋರಿಸುತ್ತದೆ. ಭಾರತದ ನಗರ ಭಾಗದಲ್ಲಿನ ನಿರುದ್ಯೋಗ ಪ್ರಮಾಣ ಆತಂಕಕಾರಿಯಾಗಿ ಏರಿಕೆ ಕಂಡಿದೆ.
ಹಣಕಾಸು ವರ್ಷ 2024ರ ಮೂರನೇ ತ್ರೈಮಾಸಿಕದಲ್ಲಿ ಶೇಕಡ 6.5ರಷ್ಟಿದ್ದ ನಗರ ನಿರುದ್ಯೋಗ ದರವು ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡ 6.7ಕ್ಕೆ ಏರಿದೆ. ಕಾರ್ಮಿಕ ಬಲದ ಭಾಗವಹಿಸುವಿಕೆಯ ದರವು (ಎಲ್‌ಎಫ್‌ಪಿಆರ್) ಶೇಕಡ 49.9ರಿಂದ ಶೇಕಡ 50.2ಕ್ಕೆ ಸಾಧಾರಣವಾಗಿ ಹೆಚ್ಚಳ ಕಂಡಿದೆ. ಆದರೆ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು ಉದ್ಯೋಗಾವಕಾಶಗಳ ಲಭ್ಯತೆಯ ಪ್ರಮಾಣದ ನಡುವಿನ ಅಂತರವು ಗಮನಾರ್ಹವಾಗಿ ಹೆಚ್ಚಾಗುತ್ತಿದೆ.
ಈ ಅಂಕಿಅಂಶಗಳು ಕೇವಲ ಸಂಖ್ಯೆಗಳಲ್ಲ. ಬದಲಾಗಿ ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿನ ಆರ್ಥಿಕ ಅಸಮತೋಲನವನ್ನು ಎತ್ತಿ ತೋರಿಸುವ ಸೂಚಕಗಳಾಗಿದೆ. ದೇಶದಲ್ಲಿ ನಿರುದ್ಯೋಗ ಹೆಚ್ಚಳವು, ಅದರಲ್ಲು ವಿಶೇಷವಾಗಿ ಯುವಕರು ಮತ್ತು ಪುರುಷರಲ್ಲಿ ನಿರುದ್ಯೋಗ ಹೆಚ್ಚಳವು ಶಾಶ್ವತವಾದ ಬಿಕ್ಕಟ್ಟಿಗೆ ಮುನ್ನುಡಿಯಾಗುತ್ತಿದೆ.
ಇದನ್ನು ಓದಿದ್ದೀರಾ? ಬಡತನವನ್ನು ನೋಡಲು ಆಗಲ್ಲ, ಆದರೆ ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಮಾತೇ ಇಲ್ಲ!
ಎಲ್‌ಎಫ್‌ಪಿಆರ್ ಅಂದರೆ ಕಾರ್ಮಿಕ ಬಲದ ಭಾಗವಹಿಸುವಿಕೆಯ ದರ ಹೆಚ್ಚಳವು ಕೆಲಸ ಮಾಡಲು ಬಯಸುವ ಜನರ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಸೂಚಿಸುತ್ತದೆ. ಆದರೆ ಅದಕ್ಕೆ ಅನುಗುಣವಾಗಿ ಉದ್ಯೋಗವಕಾಶವನ್ನು ಸೃಷ್ಟಿಸುವಲ್ಲಿ ಕೇಂದ್ರ ಸರ್ಕಾರವು ವಿಫಲವಾಗಿದೆ. ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚಳವಾದರೂ ದುಡಿಮೆಗೆ ಅವಕಾಶವೇ ಇಲ್ಲದಂತಾಗಿದೆ.
ಯುವಕರಲ್ಲಿ ನಿರುದ್ಯೋಗ ಹೆಚ್ಚಳ
ಪಿಎಲ್‌ಎಫ್‌ಎಸ್ ಅಂಕಿಅಂಶವು ಯುವಕರಲ್ಲಿ ನಿರುದ್ಯೋಗ ಹೆಚ್ಚಳವಾಗಿದೆ ಎಂದು ತೋರಿಸುತ್ತದೆ. ಮೂರನೇ ತ್ರೈಮಾಸಿಕದಲ್ಲಿ 15-29 ವರ್ಷ ವಯೋಮಿತಿಯ ಜನರಲ್ಲಿರುವ ನಿರುದ್ಯೋಗ ಪ್ರಮಾಣವು ಶೇಕಡ 16.5ರಷ್ಟಿದ್ದು ನಾಲ್ಕನೇ ತ್ರೈಮಾಸಿಕದ ವೇಳೆಗೆ ಶೇಕಡ 17ಕ್ಕೆ ಏರಿದೆ.
ಉದ್ಯೋಗದಲ್ಲಿ ಲಿಂಗ ಅಸಮಾನತೆ
ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಸಿಗುತ್ತಿದೆ ಎಂಬ ಕೆಲವರ ವಾದವನ್ನು ಹುಸಿಗೊಳಿಸುವಂತೆ ಪಿಎಲ್‌ಎಫ್‌ಎಸ್ ಅಂಕಿಅಂಶವು ಉದ್ಯೋಗ ಕ್ಷೇತ್ರದಲ್ಲಿರುವ ಲಿಂಗ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ. ಮಹಿಳೆಯರಲ್ಲಿ ನಿರುದ್ಯೋಗ ದರವು ಶೇಕಡ 8.5ಕ್ಕೆ ಕೊಂಚ ಇಳಿಕೆಯಾಗಿದ್ದರೂ ಕೂಡಾ ಪುರುಷರಲ್ಲಿರವ ನಿರುದ್ಯೋಗ ಪ್ರಮಾಣಕ್ಕಿಂತ ಅಧಿಕವಾಗಿದೆ. ಪುರುಷರಲ್ಲಿ ನಿರುದ್ಯೋಗ ದರವು ಶೇಕಡ 5.8ರಿಂದ ಶೇಕಡ 6.1ರ ನಡುವೆಯಿದೆ.
ಇನ್ನು ಉದ್ಯೋಗ ದರ ಕಡಿಮೆಯಾಗಲು ಸ್ವಯಂ ಉದ್ಯೋಗ ಮಾಡುತ್ತಿರವವರ ಪ್ರಮಾಣ ಹೆಚ್ಚಾಗುತ್ತಿರುವುದೇ ಕಾರಣ ಎಂದು ಹೇಳುವವರು ಎಲ್‌ಎಫ್‌ಪಿಆರ್ ಡೇಟಾದ ಮೇಲೆ ಒಮ್ಮೆ ಕಣ್ಣಾಡಿಸಬೇಕಾಗುತ್ತದೆ. ಸ್ವಯಂ ಉದ್ಯೋಗದಲ್ಲಿ ತೊಡಗಿರುವ ಜನರ ಪಾಲು ಶೇಕಡ 40.6ರಿಂದ ಶೇಕಡ 40.5ಕ್ಕೆ ಕೊಂಚ ಕಡಿಮೆಯಾಗಿದೆ. ಈ ಕುಸಿತವು ತೋರಿಕೆಯಲ್ಲಿ ಚಿಕ್ಕದಾದರೂ ಗಮನಾರ್ಹವಾಗಿದೆ. ಇದು ಹೆಚ್ಚುತ್ತಿರುವ ಸಂಪತ್ತಿನ ಕೇಂದ್ರೀಕರಣ ಮತ್ತು ಉದ್ಯೋಗಿಗಳಲ್ಲಿ ಬೆಳೆಯುತ್ತಿರುವ ಆರ್ಥಿಕ ಅನಿಶ್ಚಿತತೆಯ ಕಡೆಗೆ ಒಂದು ಸೂಚಕವಾಗಿದೆ.
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ದತ್ತಾಂಶವು ಭಾರತದ ಒಟ್ಟಾರೆ ನಿರುದ್ಯೋಗ ದರವು ಮಾರ್ಚ್ 2024ರಲ್ಲಿ ಶೇಕಡ 7.4ರಿಂದ ಶೇಕಡ ಏಪ್ರಿಲ್ 2024ರಲ್ಲಿ ಶೇಕಡ 8.1ಕ್ಕೆ ಏರಿಕೆಯಾಗಿದೆ ಎಂದು ತೋರಿಸುತ್ತದೆ. ನಾವಿಲ್ಲಿ ಪಿಎಲ್‌ಎಫ್‌ಎಸ್ ಮತ್ತು ಸಿಎಂಐಇ ದತ್ತಾಂಶದ ನಡುವಿನ ವ್ಯತ್ಯಾಸವನ್ನು ಗಮನಿಸಬಹುದು.
ಇದನ್ನು ಓದಿದ್ದೀರಾ? ಈದಿನ ಸಮೀಕ್ಷೆ | ಕಳೆದ 10 ವರ್ಷಗಳಲ್ಲಿ ನಿರುದ್ಯೋಗ ಹೆಚ್ಚಳಕ್ಕೆ ಬಿಜೆಪಿಯೇ ಕಾರಣ!
ಇದು ನಮ್ಮ ಆರ್ಥಿಕ ರಚನೆಗಳಲ್ಲಿ ಅಂತರ್ಗತವಾಗಿರುವ ಚಂಚಲತೆ ಮತ್ತು ವಿಶ್ವಾಸಾರ್ಹತೆ ಅಲ್ಲದಿರುವುದನ್ನು ಸೂಚಿಸುತ್ತದೆ. ಈ ಬದಲಾವಣೆಗಳು ಉದ್ಯೋಗದ ಅನಿಶ್ಚಿತತೆಯನ್ನು ಪ್ರತಿಬಿಂಬಿಸುತ್ತದೆ. ವಾರ್ಷಿಕವಾಗಿ ನಿರುದ್ಯೋಗ ದರವು ಶೇಕಡ 6.8ರಿಂದ ಶೇಕಡ 6.7ಕ್ಕೆ ಕೊಂಚ ಇಳಿಕೆಯಾಗಿದೆ. ಇದು ಕೊಂಚ ಸುಧಾರಣೆಯಂತೆ ಕಾಣುತ್ತದೆ. ಆದರೆ ನಿರುದ್ಯೋಗ ಪ್ರಮಾಣವು ಗಮನಾರ್ಹವಾಗಿರುವುದನ್ನು ಅಲ್ಲಗಳೆಯುವಂತಿಲ್ಲ.
ಈ ನಿರುದ್ಯೋಗ ಪ್ರಮಾಣವು ಅಗಾಧವಾದ ವ್ಯವಸ್ಥಿತ ಬಿಕ್ಕಟ್ಟಿನ ಲಕ್ಷಣಗಳಾಗಿವೆ. ಜನರಿಗಿಂತ ಲಾಭಕ್ಕೆ ಆದ್ಯತೆ ನೀಡುವ ಉತ್ಪಾದನಾ ವಿಧಾನವು ಅನಿವಾರ್ಯವಾಗಿ ಅಧಿಕ ಉತ್ಪಾದನೆ ಮತ್ತು ಕಡಿಮೆ ಉದ್ಯೋಗದ ಬಿಕ್ಕಟ್ಟಿಗೆ ಕಾರಣವಾಗಿದೆ. ನಗರ ನಿರುದ್ಯೋಗ ದರವು ವಿಶೇಷವಾಗಿ ಯುವಕರಲ್ಲಿರುವ ನಿರುದ್ಯೋಗವು ಕಾರ್ಮಿಕರಿಗೆ ಬೇಕಾದ ಉದ್ಯೋಗ ಒದಗಿಸುವಲ್ಲಿ ಕೇಂದ್ರ ಸರ್ಕಾರವು ವಿಫಲವಾಗಿರುವುದನ್ನು ಪ್ರತಿಬಿಂಬಿಸುತ್ತದೆ.
ಮೂಲ: ದಿ ನ್ಯೂಸ್ ಮಿನಿಟ್ ಮತ್ತು ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (ಪಿಎಲ್‌ಎಫ್‌ಎಸ್)
Periodic Labour Force Survey (PLFS) – Quarterly Bulletin (January-March 2024)
Unemployment Rate (UR) in urban areas decreased to 6.7% during January-March 2024 for persons of age 15 years and above
Female UR decreased to 8.5% in January-March 2024
Labour Force Participation… pic.twitter.com/AR1QHSvhcZ
— PIB India (@PIB_India) May 15, 2024

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.
ಮುಂಬಯಿ ವಿಮಾನ ನಿಲ್ದಾಣದಲ್ಲಿ 2600 ಹುದ್ದೆಗಳಿಗೆ 25000 ಮಂದಿ ಅರ್ಜಿ ಸಲ್ಲಿಸಿದ್ದಾರಂತೆ !
ಬೆಳಗಾಗುವುದರೊಳಗೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ 10000 ಯುವಕ – ಯುವತಿಯರು ದೂರದೂರಿನಿಂದ ಬಂದು ಸಂದರ್ಶನಕ್ಕೆ ಹಾಜರಾದರಂತೆ !
ಕೆಲವು ದಿನಗಳ ಹಿಂದೆ ಗುಜರಾತಿನ ಬರೂಚ್ ನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಖಾಲಿ ಇರುವ 18 ಹುದ್ದೆಗಳಿಗೆ 1800 ಮಂದಿ ಅರ್ಜಿ ಸಲ್ಲಿಸಿದ್ದರಂತೆ. ಸಂದರ್ಶನದ ಸಂದರ್ಭದಲ್ಲಿ ಅಭ್ಯರ್ಥಿಗಳು ನೂಕು ನುಗ್ಗಲಿನಿಂದ ಪರದಾಡಿದರಂತೆ !
ಭಾರತದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ ಎಂಬುದಕ್ಕೆ ಇದಕ್ಕಿಂತ ಹೆಚ್ಚು ಉದಾಹರಣೆ ಬೇರೇನು ಬೇಕು ?