119 ಮಂದಿ ಭಾರತೀಯರನ್ನು ಹೊತ್ತ ಅಮೆರಿಕದ ಮಿಲಿಟರಿ ವಿಮಾನ ಶನಿವಾರ(ಫೆ.16) ರಾತ್ರಿ ಪಂಜಾಬ್‌ನ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾದ ಭಾರತೀಯರ ಎರಡನೇ ತಂಡ ಇದಾಗಿದೆ.
ವಿಮಾನವು ಕಳೆದ ರಾತ್ರಿ 10 ಗಂಟೆಗೆ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ಮೂಲಗಳು ತಿಳಿಸಿವೆ. ಗಡಿಪಾರು ಮಾಡಲಾದವರಲ್ಲಿ ಹೆಚ್ಚಿನವರು 18 ರಿಂದ 30 ವರ್ಷ ವಯಸ್ಸಿನ ಯುವಕ-ಯುವತಿಯರಾಗಿದ್ದಾರೆ.
ಗಡಿಪಾರು ಮಾಡಲಾದ 119 ಜನರಲ್ಲಿ 67 ಜನರು ಪಂಜಾಬ್‌ನವರು, 33 ಜನರು ಹರಿಯಾಣದವರು, ಎಂಟು ಜನರು ಗುಜರಾತ್‌ನವರು, ಮೂವರು ಉತ್ತರ ಪ್ರದೇಶದವರು, ಗೋವಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದಿಂದ ತಲಾ ಇಬ್ಬರು, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ತಲಾ ಒಬ್ಬರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಮೆರಿಕ ನೆಲದಲ್ಲಿ ಮೋದಿ ಸಾಧಿಸಿದ್ದಕ್ಕಿಂತ ತಲೆ ಬಾಗಿದ್ದೇ ಹೆಚ್ಚು
ಗುರುದಾಸಪುರದ ಒಂದು ಕುಟುಂಬವು ತಮ್ಮ ಮಗ ಗುರ್ಮೀಲ್ ಸಿಂಗ್‌ಗಾಗಿ ವಿಮಾನ ನಿಲ್ದಾಣದಲ್ಲಿ ಕಾಯುತ್ತಿತ್ತು. ಗುರ್ಮೀಲ್ ಸಿಂಗ್ ಎರಡು ವರ್ಷಗಳ ಹಿಂದೆ ಭಾರತವನ್ನು ತೊರೆದು ಈ ವರ್ಷ ಜನವರಿ 30 ರಂದು ಅಮೆರಿಕಕ್ಕೆ ತೆರಳಿದ್ದರು. ಆತನ ತಂದೆ ಮತ್ತು ಸೋದರಸಂಬಂಧಿ ಟ್ರಾವೆಲ್ ಏಜೆಂಟ್‌ಗೆ 50 ಲಕ್ಷ ರೂಪಾಯಿಗಳ ಒಪ್ಪಂದದ ಮೇರೆಗೆ 36 ಲಕ್ಷ ರೂಪಾಯಿಗಳನ್ನು ಪಾವತಿಸಿ ಕಳುಹಿಸಿದ್ದರು.
ಫೆಬ್ರವರಿ 5 ರಂದು, ಸುಮಾರು 40 ಗಂಟೆಗಳ ಪ್ರಯಾಣದ ನಂತರ 104 ಭಾರತೀಯ ಗಡಿಪಾರುಗಾರರ ಮೊದಲ ತಂಡ ಅಮೃತಸರಕ್ಕೆ ಆಗಮಿಸಿತು. ಈ ಸಮಯದಲ್ಲಿ ಅವರ ಕೈಗಳಿಗೆ ಕೋಳ ಹಾಕಿ ಮತ್ತು ಅವರ ಕಾಲುಗಳಿಗೆ ಸರಪಳಿಗಳಿಂದ ಬಂಧಿಸಲಾಗಿತ್ತು.