ಗ್ರಾಮದಲ್ಲಿ ಆಯೋಜಿಸಿದ್ದ ‘ರಾಮ್ ಲೀಲಾ’ ಕಾರ್ಯಕ್ರಮದಲ್ಲಿ ಕುರ್ಚಿಯ ಮೇಲೆ ಕುಳಿತುಕೊಂಡಿದ್ದಕ್ಕೆ ದಲಿತ ಯುವಕನ ಮೇಲೆ ಪ್ರಬಲ ಜಾತಿಯ ಪುಂಡರು ಹಲ್ಲೆ ನಡೆಸಿದ್ದು, ಅವಮಾನದಿಂದ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉತ್ತರ ಪ್ರದೇಶದ ಕಸ್ಗಂಜ್ ಜಿಲ್ಲೆಯ ಸಲೇಂಪುರ್ ವಿವಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಮೃತ ಯುವಕನನ್ನು ರಮೇಶ್ ಚಂದ್ ಎಂದು ಗುರುತಿಸಲಾಗಿದೆ. ಆತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಯುವಕನ ಆತ್ಮಹತ್ಯೆಯಿಂದ ಆಕ್ರೋಶಗೊಂಡಿರುವ ಗ್ರಾಮದ ದಲಿತ ಸಮುದಾಯ ಪ್ರತಿಭಟನೆ ನಡೆಸಿದೆ. ಯುವಕನಿಗೆ ಅಪಮಾನ ಮಾಡಿ, ಹಲ್ಲೆಗೈದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ಮೃತ ಯುವಕನ ಪತ್ನಿ ರಾಮ್ ರತಿ ದೂರು ದಾಖಲಿಸಿದ್ದಾರೆ. “ಭಾನುವಾರ ರಾತ್ರಿ ಗ್ರಾಮದಲ್ಲಿ ನಡೆಯುತ್ತಿದ್ದ ‘ರಾಮ್ ಲೀಲಾ’ ಕಾರ್ಯಕ್ರಮಕ್ಕೆ ರಮೇಶ್ ಚಂದ್ ತೆರಳಿದ್ದರು. ಅಲ್ಲಿ ಹಾಕಲಾಗಿದ್ದ ಖಾಲಿ ಕುರ್ಚಿಯ ಮೇಲೆ ಕುಳಿತಿದ್ದರು. ಈ ವೇಳೆ, ಕಾರ್ಯಕ್ರಮದ ಆಯೋಜಕ ಕಾನ್ ಸ್ಟೇಬಲ್ ಬಹದ್ದೂರ್ ಮತ್ತು ವಿಕ್ರಮ್ ಚೌಧರಿ ಎಂಬವರು ತಮ್ಮ ಪತಿಯನ್ನು ಕುರ್ಚಿಯಿಂದ ಕೆಳಗೆ ದೂಡಿದ್ದಾರೆ” ಎಂದು ಆರೋಪಿಸಿದ್ದಾರೆ.
“ಕಾರ್ಯಕ್ರಮದ ಆಯೋಜಕರು ಪೊಲೀಸರಿಗೆ ಸೂಚನೆ ನೀಡಿದ್ದರಿಂದ, ಪೊಲೀಸರು ತನ್ನ ಪತಿ ಮೇಲೆ ಹಲ್ಲೆ ನಡೆಸಿದ್ದಾರೆ. ಜಾತಿ ನಿಂದನೆ ಮಾಡಿದ್ದಾರೆ. ಮಾತ್ರವಲ್ಲದೆ, ಆತನ ಕುತ್ತಿಗೆಗೆ ಟವೆಲ್ ಸುತ್ತಿ ಎಳೆದಾಡಿದ್ದಾರೆ. ಘಟನೆಯಿಂದ ಅವಮಾನಗೊಂಡ ರಮೇಶ್ ಚಂದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.