ದಲಿತ ಸಮುದಾಯದ ವ್ಯಕ್ತಿಯೊಬ್ಬ ವಿದ್ಯುತ್ ವೈರಿಂಗ್ ಪರಿಶೀಲಿಸಿದ್ದಕ್ಕಾಗಿ ಲೈನ್‌ಮೆನ್ ಒಬ್ಬ ಮನಬಂದಂತೆ ಹಲ್ಲೆ ನಡೆಸಿ ತನ್ನ ಚಪ್ಪಲಿ ನೆಕ್ಕಿಸಿದ ಅಮಾನುಷ ಘಟನೆ ಉತ್ತರ ಪ್ರದೇಶದ ಸೋನ್‌ಭದ್ರ ಜಿಲ್ಲೆಯಲ್ಲಿ ನಡೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ಚಪ್ಪಲಿ ನೆಕ್ಕೆಸಿದ ಆರೋಪಿ ಲೈನ್‌ಮೆನ್ ತೇಜ್ಬಾಲಿ ಸಿಂಗ್ ಪಟೇಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ವಿಡಿಯೋದಲ್ಲಿರುವಂತೆ ಆರೋಪಿಯು 21 ವರ್ಷದ ದಲಿತ ಸಮುದಾಯದ ವ್ಯಕ್ತಿ ರಾಜೇಂದ್ರ ಚಮರ್ ಎಂಬುವವರ ಮೇಲೆ ಹಲ್ಲೆ ನಡೆಸಿ ಚಪ್ಪಲಿ ನೆಕ್ಕಿಸುತ್ತಿದ್ದಾನೆ. ಅಲ್ಲದೆ ಕಿವಿ ಹಿಂಡಿ ಕ್ಷಮೆಯಾಚಿಸು ಎಂದು ಗದರಿಸುತ್ತಿದ್ದಾನೆ.
ಈ ಸುದ್ದಿ ಓದಿದ್ದೀರಾ? ಮಳೆಗೆ ನಲುಗಿದ ಉತ್ತರ ಭಾರತ; ದೆಹಲಿಯಲ್ಲಿ 40 ವರ್ಷದಲ್ಲೇ ದಾಖಲೆ ಮಳೆ
ಮತ್ತೊಂದು ವಿಡಿಯೋದಲ್ಲಿ ಲೈನ್‌ಮೆನ್ ಒಳಗೊಂಡಂತೆ ವಿದ್ಯುತ್ ಕಾರ್ಮಿಕರು ರಾಜೇಂದ್ರ ಚಮರ್ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ನಿಂದಿಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲೈನ್‌ಮೆನ್ ತೇಜ್ಬಾಲಿ ಸಿಂಗ್ ಪಟೇಲ್ ಎಂಬಾತನನ್ನು ಪೊಲೀಸರು ಬಂಧಿಸಿ ಶಹಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
“ನನ್ನ ಚಿಕ್ಕಪ್ಪನ ಮನೆಗೆ ಹೋಗಿದ್ದೆ. ವಿದ್ಯುತ್ ತಂತಿಯಲ್ಲಿ ಸ್ವಲ್ಪ ಸಮಸ್ಯೆಯಿದ್ದ ಕಾರಣ ಪರಿಶೀಲಿಸುತ್ತಿದ್ದೆ. ತೇಜ್ಬಾಲಿ ಅಲ್ಲಿಗೆ ಬಂದು ನನ್ನ ಮೇಲೆ ದೊಣ್ಣೆಗಳಿಂದ ಹಲ್ಲೆ ಮಾಡಲು ಆರಂಭಿಸಿ ತನ್ನ ಪಾದರಕ್ಷೆಯನ್ನು ನೆಕ್ಕುವಂತೆ ಹೇಳಿದ” ಎಂದು ಚಮರ್ ಘಟನೆಯ ಕುರಿತು ಸುದ್ದಿಗಾರರಿಗೆ ತಿಳಿಸಿದರು.
“ಜುಲೈ 8 ರಂದು, ನಾವು ಸಾಮಾಜಿಕ ಮಾಧ್ಯಮದ ಮೂಲಕ ಎರಡು ವೈರಲ್ ವಿಡಿಯೋಗಳನ್ನು ಸ್ವೀಕರಿಸಿದ್ದೇವೆ. ವಿಡಿಯೋಗಳಲ್ಲಿ, ಲೈನ್‌ಮೆನ್ ತೇಜ್ಬಾಲಿ ಎಂಬಾತ ಚಮರ್ ಅವರ ಮೇಲೆ ಹಲ್ಲೆ ಮಾಡಿ ಚಪ್ಪಲಿ ನೆಕ್ಕಿಸಿದ್ದಾನೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು 506 (ಅಪರಾಧ, ಬೆದರಿಕೆ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ದೌರ್ಜನ್ಯ ತಡೆ) ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿದ್ದೇವೆ” ಎಂದು ಉತ್ತರ ಪ್ರದೇಶ ಸೋನಭದ್ರಾ ವೃತ್ತದ ಪೊಲೀಸ್ ಅಧಿಕಾರಿ ಅಮಿತ್ ಕುಮಾರ್ ತಿಳಿಸಿದ್ದಾರೆ.