ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಮೃತ ಬಾಲಕಿಯರ ಕುಟುಂಬ ಆರೋಪಿಸಿದೆ.
ಕಾನ್ಲುರ ಜಿಲ್ಲೆಯ ಘಟಂಪುರ ಪ್ರದೇಶದ ಹಳ್ಳಿಯೊಂದರ ಇಟ್ಟಿಗೆ ಗೂಡಿನಲ್ಲಿ ಅವರು ಕೆಲಸ ಮಾಡುತ್ತಿದ್ದರು. ಆ ಇಟ್ಟಿಗೆ ಗೂಡಿನ ಬಳಿಯ ಹೊಲದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಬಾಲಕಿಯ ಮೃತದೇಹಗಳು ಪತ್ತೆಯಾಗಿವೆ. ಅವರ ಮೇಲೆ ಕೆಲ ದಿನಗಳ ಹಿಂದೆ ಅತ್ಯಾಚಾರ ಎಸಗಲಾಗಿತ್ತು ಎಂದು ಕುಂಬಸ್ಥರು ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಅಪ್ರಾಪ್ತ ಬಾಲಕಿಯರ ಮೇಲೆ ಇಟ್ಟಿಗೆ ಭಟ್ಟಿಯ ಗುತ್ತಿಗೆದಾರ ರಾಮರೂಪ್ ನಿಶಾದ್ (48), ಅವರ ಮಗ ರಾಜು (18) ಮತ್ತು ಸೋದರಳಿಯ ಸಂಜಯ್ (19) ಅತ್ಯಾಚಾರ ಎಸಗಿದ್ದಾರೆ ಎಂದು ಆರೋಫಿಸಲಾಗಿದೆ. ಈ ಮೂವರು ಆರೋಪಿಗಳನ್ನೂ ಬಂಧಿಸಲಾಗಿದೆ ಎಂದು ಎಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹರೀಶ್ ಚಂದ್ರು ಹೇಳಿದ್ದಾರೆ.
“ಕುಟುಂಬಗಳ ಪ್ರಕಾರ, ಆರೋಪಿಗಳು ಕೃತ್ಯವನ್ನ ವಿಡಿಯೋ ಮಾಡಿಕೊಂಡಿದ್ದರು. ಆ ವಿಡಿಯೋ ಇಟ್ಟುಕೊಂಡು ಹುಡುಗಿಯರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ಇದರಿಂದಾಗಿ, ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಎಂದು ಚಂದ್ರು ಹೇಳಿದ್ದಾರೆ.
“ಸಂತ್ರಸ್ತೆಯರು ಬುಧವಾರ ನಾಪತ್ತೆಯಾಗಿದ್ದರು. ಸಂಜೆ ವೇಳೆಗೆ, ಇಟ್ಟಿಗೆ ಗೂಡಿನಿಂದ 400 ಮೀಟರ್ ದೂರದಲ್ಲಿ ಅವರ ಮೃತದೇಹಗಳು ಪತ್ತೆಯಾಗಿವೆ” ಎಂದು ಎಸಿಪಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಸಂದೇಶ್‌ಖಾಲಿ ಪ್ರಕರಣ | ಟಿಎಂಸಿ ವಿರುದ್ಧ ಮತ ಚಲಾಯಿಸಿದ್ದಕ್ಕೆ ಆದಿವಾಸಿಗಳಿಗೆ ಚಿತ್ರಹಿಂಸೆ; ಎನ್‌ಸಿಎಸ್‌ಟಿ ವಿವರ
“ನಾವು ಆರೋಪಿಗಳ ಮೊಬೈಲ್‌ಗಳಿಂದ ಹುಡುಗಿಯರ ವೀಡಿಯೊಗಳು ಮತ್ತು ಫೋಟೋಗಳನ್ನು ವಶಪಡಿಸಿಕೊಂಡಿದ್ದೇವೆ. ಅದನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುವುದು” ಎಂದು ಅವರು ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376ಡಿ (ಗ್ಯಾಂಗ್ ಅತ್ಯಾಚಾರ), 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು ಪೋಕ್ಸೋ ಆಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಚಂದ್ರು ತಿಳಿಸಿದ್ದಾರೆ.
ಸಾವಿಗೆ ನಿಖರವಾದ ಕಾರಣ ಕಂಡುಹಿಡಿಯಲು ಮತ್ತು ಸಾಮೂಹಿಕ ಅತ್ಯಾಚಾರದ ಆರೋಪಗಳನ್ನು ಪರಿಶೀಲಿಸಲು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.