ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ 8ನೇ ದಿನಕ್ಕೆ ಕಾಲಿಟ್ಟಿದ್ದು, ಸುರಂಗ ಕುಸಿಯುವ ಭೀತಿಯಿಂದ ಪ್ರಸ್ತುತ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಉತ್ತರಾಖಂಡದ ಸುರಂಗದಲ್ಲಿ 170 ಗಂಟೆಗಳ ಕಾಲ ಸಿಲುಕಿ ಹಾಕಿಕೊಂಡಿರುವ ಕಾರ್ಮಿಕರ ರಕ್ಷಣೆಗೆ ನಡೆಯುತ್ತಿರುವ ಕಾರ್ಯಾಚರಣೆಗೆ ಕೊರೆಯುವ ಯಂತ್ರದಲ್ಲಿನ ದೋಷ ಮತ್ತೆ ತಡೆಯೊಡ್ಡಿದ್ದು, ಕಾರ್ಮಿಕರ ಕುಟುಂಬಗಳ ಆತಂಕ ಹೆಚ್ಚಿದೆ.
ಯಂತ್ರದಿಂದ ದಿಢೀರನೇ ದೊಡ್ಡ ಸದ್ದು ಕೇಳಿಬಂದ ಹಿನ್ನೆಲೆಯಲ್ಲಿ ಯಂತ್ರವನ್ನು ಸ್ಥಗಿತಗೊಳಿಸಲಾಗಿತ್ತು. ಎರಡನೇ ಅಧಿಕ ಸಾಮರ್ಥ್ಯದ ಕೊರೆಯುವ ಯಂತ್ರವನ್ನು ದುರಂತ ಸ್ಥಳಕ್ಕೆ ತರಲಾಗಿದ್ದು,ಕಾರ್ಯಾಚರಣೆ ಸದ್ಯದಲ್ಲೇ ಮರು ಆರಂಭವಾಗಲಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಕಳೆದ ಭಾನುವಾರ ನಿರ್ಮಾಣ ಹಂತದ ಸುರಂಗ ಕುಸಿದು 41 ಮಂದಿ ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದರು. ಕಾರ್ಮಿಕರು ಸುರಕ್ಷಿತವಾಗಿದ್ದು, ಉಕ್ಕಿನ ಕೊಳವೆಗಳ ಮೂಲಕ ಆಹಾರ ಮತ್ತು ನೀರು ಪೂರೈಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಬಲ ಜಾತಿಗಳ ಜೋಡೆತ್ತುಗಳು, ಬಿಜೆಪಿಗರಿಗೇ ಬೇಡವಾಗಿದ್ದೇಕೆ?
ಪ್ರಧಾನ ಮಂತ್ರಿ ಕಚೇರಿಯ (ಪಿಎಂಒ) ಅಧಿಕಾರಿಗಳು ಮತ್ತು ಸ್ಳಳದಲ್ಲಿರುವ ತಜ್ಞರ ತಂಡವು 41 ಜನರನ್ನು ರಕ್ಷಿಸಲು ಕೇವಲ ಒಂದು ಯೋಜನೆಗೆ ಬದಲಾಗಿ ಐದು ಯೋಜನೆಗಳಲ್ಲಿ ಏಕಕಾಲದಲ್ಲಿ ಕೆಲಸ ಮಾಡಲು ನಿರ್ಧರಿಸಿದೆ.
ದುರಂತ ನಡೆದ ಸ್ಥಳಕ್ಕೆ ಆಗಮಿಸಿರುವ ಕಾರ್ಮಿಕರ ಕುಟುಂಬಗಳು ಆತಂಕದಲ್ಲಿವೆ. ಸಿಲುಕಿಕೊಂಡಿರುವ ಕಾರ್ಮಿಕರ ಆರೋಗ್ಯ ಸ್ಥಿತಿ ಹದಗೆಡುವ ಮುನ್ನ ರಕ್ಷಣಾ ಕಾರ್ಯಾಚರಣೆ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸಿಲುಕಿಕೊಂಡಿರುವ ಕಾರ್ಮಿಕನ ಸಹೋದರರೊಬ್ಬರು ಹೇಳಿದ್ದಾರೆ.
ನಿರ್ಮಾಣ ಹಂತದ ಸಿಲ್ಕ್ಯಾತ್ರಾ ಸುರಂಗ ನವೆಂಬರ್ 12ರಂದು ಕುಸಿದು 41 ಮಂದಿ ಸಿಲುಕಿಕೊಂಡಿದ್ದರು. ರಂಧ್ರಗಳನ್ನು ಕೊರೆದು ಅವರನ್ನು ಸುರಕ್ಷಿತವಾಗಿ ಹೊರತರುವ ನಡೆಯುತ್ತಿರುವ ನಡುವೆಯೇ ಮತ್ತೆ ಮತ್ತೆ ಕುಸಿತಗಳು ಸಂಭವಿಸುತ್ತಿರುವುದು ಕಾರ್ಯಾಚರಣೆಗೆ ತಡೆಯಾಗಿದೆ. ಈ ಹಿನ್ನೆಲೆಯಲ್ಲಿ ರಂಧ್ರ ಕೊರೆದು ದೊಡ್ಡ ಪೈಪ್‌ಗಳ ಮೂಲಕ ಕಾರ್ಮಿಕರನ್ನು ಹೊರತರುವ ಪ್ರಯತ್ನ ನಡೆದಿದೆ.