ಈ ದಿನ ಸಂಪಾದಕೀಯ | ಪ್ರಬಲ ಜಾತಿಗಳ ಜೋಡೆತ್ತುಗಳು, ಬಿಜೆಪಿಗರಿಗೇ ಬೇಡವಾಗಿದ್ದೇಕೆ?

Date:

ಅಪ್ಪನ ಆಸ್ಥಾನವನ್ನೇ ಆಕ್ರಮಿಸಿಕೊಂಡು ಅಟ್ಟಹಾಸ ಮೆರೆದ ವಿಜಯೇಂದ್ರ, ತಮ್ಮ ರಾಜಕಾರಣದುದ್ದಕ್ಕೂ ಹೊಂದಾಣಿಕೆಯಲ್ಲಿಯೇ ಮಿಂದೆದ್ದ ಅಶೋಕ್- ಬಿಜೆಪಿಗರಿಗೇ ಬೇಡವಾದ ಈ ಜೋಡೆತ್ತುಗಳು, ಯಾರಿಗಾಗಿ-ಏತಕ್ಕಾಗಿ ಕೆಲಸ ಮಾಡುತ್ತಾರೆ ಎನ್ನುವುದನ್ನು ನಾಡಿನ ಜನತೆ ಅರ್ಥ ಮಾಡಿಕೊಳ್ಳಬೇಕಾಗಿದೆ.

ಭಾರತೀಯ ಜನತಾ ಪಕ್ಷ ಆರು ತಿಂಗಳ ನಂತರ, ಅಳೆದು ಸುರಿದು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಆರ್.ಅಶೋಕ್‌ ಅವರನ್ನು ಆಯ್ಕೆ ಮಾಡಿದೆ. ಏಳು ಸಲ ಶಾಸಕರಾಗಿ ಆಯ್ಕೆಯಾಗಿರುವ ಹಿರಿತನದ ಜೊತೆಗೆ, ನಾಲ್ವರು ಮುಖ್ಯಮಂತ್ರಿಗಳ ಕೈ ಕೆಳಗೆ ನಾಲ್ಕು ತೂಕದ ಖಾತೆಗಳನ್ನು ನಿಭಾಯಿಸಿದ ಅನುಭವ ಹೊಂದಿರುವ, ರಾಜ್ಯದ ಬಲಿಷ್ಠ ಜಾತಿಗಳಲ್ಲೊಂದಾದ ಒಕ್ಕಲಿಗ ಸಮುದಾಯದಿಂದ ಬಂದಿರುವ, ಒಂದು ಸಲ ಉಪಮುಖ್ಯಮಂತ್ರಿಯೂ ಆಗಿರುವ ಅಶೋಕ್ ಆಯ್ಕೆ, ಈ ಕ್ಷಣಕ್ಕೆ ಸೂಕ್ತ ಎನಿಸಬಹುದು. ಪಕ್ಷದ ಅಧ್ಯಕ್ಷರಾಗಿ ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾಗಿ ಅಶೋಕ್- ರಾಜ್ಯದ ಎರಡು ಪ್ರಬಲ ಸಮುದಾಯಗಳಿಂದ ಬಂದವರಾಗಿರುವುದರಿಂದ, ಮೇಲ್ನೋಟಕ್ಕೆ ಈ ಆಯ್ಕೆ ಸರಿ ಎನಿಸಬಹುದು.

ಆದರೆ, ಒಂದು ರಾಜಕೀಯ ಪಕ್ಷವೆಂದರೆ ಅದು ಎರಡು ಪ್ರಬಲ ಸಮುದಾಯಗಳ ಪಕ್ಷವಲ್ಲ; ಬಲಾಢ್ಯ, ಬಹುಸಂಖ್ಯಾತ, ಬಲಿಷ್ಠ ಸಮುದಾಯಗಳಿಗೆ ಅಧಿಕಾರ ಕೊಡುವುದು ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಆಪತ್ತು ತರದೇ ಇರುವುದಿಲ್ಲ. ದುರದೃಷ್ಟಕರ ಸಂಗತಿ ಎಂದರೆ, ಇದು ಬರೆಯಲಿಕ್ಕೆ, ಭಾಷಣ ಮಾಡಲಿಕ್ಕೆ ಅಷ್ಟೇ ಸೀಮಿತವಾಗಿದೆ. ರಾಜಕಾರಣವೆಂದರೆ ಅದು ಬಲಿಷ್ಠ ಜಾತಿ ಜನಗಳ ಆಡುಂಬೊಲವೇ ಆಗಿದೆ. ಅಲ್ಲಿ, ದಲಿತ, ಹಿಂದುಳಿದ, ಶೋಷಿತ ಸಮುದಾಯಗಳು ಲೆಕ್ಕಕ್ಕೇ ಇಲ್ಲವಾಗಿವೆ. ಅಥವಾ ಅವರೆಲ್ಲ ಭಾವುಟ ಕಟ್ಟುವ, ಭೋಪರಾಕ್ ಹಾಕುವ, ಕೈ ಎತ್ತುವ ಕೆಲಸಕ್ಕಷ್ಟೇ ಸೀಮಿತವಾಗಿದ್ದಾರೆ. ಇನ್ನು ಮಹಿಳೆಯರ ಸ್ಥಿತಿಯಂತೂ ಹೇಳತೀರದಾಗಿದೆ. ಆದರೆ ಮಹಿಳೆಯರನ್ನೇ ಮುಂದಿಟ್ಟು ಪ್ರಚಾರ ಪಡೆಯುವುದನ್ನು ಪ್ರಧಾನಿಗಳಿಂದ ಕಲಿಯಬೇಕಿದೆ.

ಭಾರತೀಯ ಜನತಾ ಪಕ್ಷದ ದಿಲ್ಲಿಯ ದೊರೆಗಳು, ವಿಧಾನಸಭಾ ಚುನಾವಣೆಯ ಸೋಲಿನ ನಂತರ ರಾಜ್ಯ ಬಿಜೆಪಿ ನಾಯಕರನ್ನು ನೋಡದೆ ನಿರ್ಲಕ್ಷಿಸಿದ್ದರು. ಕರ್ನಾಟಕದ ಸಹವಾಸವೇ ಬೇಡವೆಂದು ಬಿಟ್ಟಿದ್ದರು. ಈಗ, ಅವರಿಗೆ ಆರು ತಿಂಗಳ ನಂತರ ಕರ್ನಾಟಕ ನೆನಪಾಗಿದೆ. ಏಕೆಂದರೆ, ಅವರಿಗೆ 2024ರ ಲೋಕಸಭಾ ಚುನಾವಣೆ ಬಹಳ ಮುಖ್ಯವಾಗಿದೆ. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕಿದೆ. ಅವರು ಅಧಿಕಾರಕ್ಕೇರಲು ಕರ್ನಾಟಕದ 28 ಸಂಸದರ ಸಂಖ್ಯಾಬಲ ಬೇಕಾಗಿದೆ. ಅದಕ್ಕೆ ರಾಜ್ಯದ ಬಹುಸಂಖ್ಯಾತರ ಬೆಂಬಲ ಬೇಕೆನ್ನುವುದು ದಿಲ್ಲಿಯ ನಾಯಕರ ತಿಳಿವಳಿಕೆಯಾಗಿದೆ. ಹಾಗಾಗಿ ಪಕ್ಷದ ಅಧ್ಯಕ್ಷ ಮತ್ತು ವಿಪಕ್ಷ ನಾಯಕರ ಆಯ್ಕೆಯ ನಾಟಕಕ್ಕೆ ಚಾಲನೆ ಸಿಕ್ಕಿದೆ. ನಿರ್ಮಲಾ ಸೀತಾರಾಮನ್ ಮತ್ತು ದುಶ್ಯಂತ್ ಕುಮಾರ್ ಗೌತಮ್ ಎಂಬ ಬೆನ್ನುಮೂಳೆ ಇಲ್ಲದ ನಾಯಕರಿಬ್ಬರನ್ನು ಔಪಚಾರಿಕ ಆಯ್ಕೆ ಪ್ರಕ್ರಿಯೆಗಾಗಿ ಕಳುಹಿಸಿದ್ದಾರೆ. ಅವರು ರಾಜ್ಯ ಬಿಜೆಪಿ ನಾಯಕರನ್ನು ಭೇಟಿ ಮಾಡುವ, ಅಹವಾಲು ಕೇಳುವ, ಆಯ್ಕೆ ಮಾಡುವ, ಅಪ್ಪಿಕೊಳ್ಳುವ ‘ಆಟ’ ಆಡಿದ್ದಾರೆ. ಇದು ದಿಲ್ಲಿ ಕೃಪಾಪೋಷಿತ ನಾಟಕ ಎನ್ನುವುದು ಗೊತ್ತಾಗುತ್ತಿದ್ದಂತೆ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ್ ಜಾರಕಿಹೊಳಿ, ಅರವಿಂದ್ ಬೆಲ್ಲದ ದಿಲ್ಲಿ ನಾಯಕರ ಎದುರೇ ಬಂಡಾಯದ ಭಾವುಟ ಹಾರಿಸಿ, ಸಭೆಯಿಂದ ಎದ್ದು ಹೊರನಡೆದಿದ್ದಾರೆ. ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ಗೈರು ಹಾಜರಾಗಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆದರೆ, ರಾಜ್ಯ ಬಿಜೆಪಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಂದ ಮುಕ್ತ ಮಾಡಲು ಹೆಣಗಾಡಿದ; ಅದನ್ನು ಸಂಘ ಪರಿವಾರದ ಸುಪರ್ದಿಗೆ ತೆಗೆದುಕೊಳ್ಳಲು ತವಕಿಸಿದ ಸಂಘ ಪರಿವಾರವೇಕೆ ಸುಮ್ಮನಿದೆ? ಅದರಲ್ಲೂ ಆರೆಸೆಸ್ಸಿನ ಬಿ.ಎಲ್. ಸಂತೋಷ್, ಪೇಶ್ವೆ ಪ್ರಲ್ಹಾದ ಜೋಶಿ, ಉಗ್ರ ಹಿಂದುತ್ವವಾದಿ ತೇಜಸ್ವಿ ಸೂರ್ಯ ಮತ್ತವರ ಗುಂಪು, ಅಧ್ಯಕ್ಷ-ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಬಾಯಿ ಬಿಟ್ಟಿಲ್ಲವೇಕೆ? ಶೂದ್ರರಾದ ಯತ್ನಾಳ್, ಜಾರಕಿಹೊಳಿ, ಬೆಲ್ಲದ್ ಬಹಿರಂಗವಾಗಿ ಬಾಯಿ ಬಡಿದುಕೊಂಡರು, ಸಂಘಿಗಳು ಮಾತ್ರ ಸುಮ್ಮನಾದರು- ಇದು ಕರ್ನಾಟಕದ ಜನತೆಗೆ ಅರ್ಥವಾಗುವುದಿಲ್ಲವೇ?

ರಾಜ್ಯದಲ್ಲಿ ಬಿಜೆಪಿಗೊಂದು ನೆಲೆ ಕಲ್ಪಿಸಿದ, ಲಿಂಗಾಯತ ಸಮುದಾಯವನ್ನು ಬಿಜೆಪಿಯತ್ತ ಸೆಳೆದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ವಿರುದ್ಧ, ಪುತ್ರ ವಿಜಯೇಂದ್ರ ವಸೂಲಿಗಿಳಿದಿದ್ದಾರೆಂದು ಆರೋಪಕ್ಕಿಳಿದ ಸಂಘ ಪರಿವಾರ, ದಿಲ್ಲಿಯ ದೊರೆಗಳಿಗೆ ದೂರು ನೀಡಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿತು; ಕಣ್ಣೀರು ಹಾಕಿಸಿತು. ಬಸವರಾಜ ಬೊಮ್ಮಾಯಿಯವರನ್ನು ಸಿಎಂ ಸ್ಥಾನದಲ್ಲಿ ಕೂರಿಸಿ ಬೊಂಬೆ ಮಾಡಿಕೊಂಡು, ಬಸವಣ್ಣನ ಸಹಬಾಳ್ವೆಯ ನಾಡನ್ನು ಕೋಮು ಕುಲಮೆಯಲ್ಲಿ ಕೊತ ಕೊತ ಕುದಿಯುವಂತೆ ಮಾಡಿತು. ಇದರ ಫಲವಾಗಿ ಬಿಜೆಪಿ ಸೋಲನುಭವಿಸಿತು. ಸಂಘಿಗಳ ಮಾತಿಗೆ ಮರುಳಾದ ಸಿಟಿ ರವಿ, ನಳಿನ್, ಸುನಿಲ್, ಲಿಂಬಾವಳಿ, ಪ್ರತಾಪ್ ಸಿಂಹ, ಅಶ್ವತ್ಥ ನಾರಾಯಣ್- ಈಗ ಇಂಗು ತಿಂದ ಮಂಗಗಳಾಗಿದ್ದಾರೆ. ಪಕ್ಷವನ್ನು ನಂಬಿದ ಬೊಮ್ಮಾಯಿ, ಸೋಮಣ್ಣ, ನಿರಾಣಿಗಳನ್ನು ಕೇಳುವವರಿಲ್ಲದಾಗಿದೆ. ಹಿರಿಯರಾದ ಈಶ್ವರಪ್ಪ, ಕಾರಜೋಳ, ಸಿದ್ದೇಶ್ವರ್, ಜಿಗಜಿಣಗಿ, ಕರಡಿ, ಸದಾನಂದಗೌಡ ನಡೆಯದ ನಾಣ್ಯಗಳಾಗಿದ್ದಾರೆ. ಇನ್ನು ಬಿಜೆಪಿಯಲ್ಲಿರುವ ದಲಿತ, ಹಿಂದುಳಿದ, ಶೋಷಿತ ಸಮುದಾಯಗಳ ನಾಯಕರನ್ನು ಯಾರು ಕೇಳುತ್ತಾರೆ? ಅಷ್ಟೇ ಅಲ್ಲ, ಈ ಶೋಷಿತ ಸಮುದಾಯಗಳನ್ನು ಅವಮಾನಿಸಲೆಂಬಂತೆ, ಪ್ರಬಲ ಜಾತಿ ಜನಾಂಗದ ನಾಯಕರಿಗೇ ಪಟ್ಟ ಕಟ್ಟುತ್ತಾರೆ.

ಇಂತಹ ಬಿಜೆಪಿಯಲ್ಲಿ ಅಪ್ಪನ ಆಸ್ಥಾನವನ್ನೇ ಆಕ್ರಮಿಸಿಕೊಂಡು ಅಟ್ಟಹಾಸ ಮೆರೆದ ವಿಜಯೇಂದ್ರ, ತಮ್ಮ ರಾಜಕಾರಣದುದ್ದಕ್ಕೂ ಹೊಂದಾಣಿಕೆಯಲ್ಲಿಯೇ ಮಿಂದೆದ್ದ ಅಶೋಕ್- ಜೋಡೆತ್ತುಗಳಂತೆ ಕೆಲಸ ಮಾಡುತ್ತೇವೆ ಎನ್ನುತ್ತಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ಸನ್ನು ಕಟ್ಟಿಹಾಕುವುದು ಇವರಿಂದ ಸಾಧ್ಯವೇ ಎನ್ನುವುದನ್ನು ಇವರ ‘ಇತಿಹಾಸ’ವೇ ಹೇಳುತ್ತಿದೆ. ಜೊತೆಗೆ ಯತ್ನಾಳ್, ಸೋಮಣ್ಣ, ನಿರಾಣಿ, ಬೆಲ್ಲದ್‌ರಂತಹ ಲಿಂಗಾಯತ ನಾಯಕರ ವಿರೋಧ ಕಟ್ಟಿಕೊಂಡ ವಿಜಯೇಂದ್ರ; ಸಿಟಿ ರವಿ, ಅಶ್ವತ್ಥನಾರಾಯಣ, ಶೋಭಾ, ಪ್ರತಾಪ್ ಸಿಂಹ, ಸೋಮಶೇಖರ್, ಯಲಹಂಕ ವಿಶ್ವನಾಥ್, ಆರಗ ಜ್ಞಾನೇಂದ್ರರಂತಹ ಒಕ್ಕಲಿಗ ನಾಯಕರ ನಿರ್ಲಕ್ಷಕ್ಕೊಳಗಾದ ಅಶೋಕ್- ಅಂದರೆ ಬಿಜೆಪಿಗರಿಗೇ ಬೇಡವಾದ ಈ ಜೋಡೆತ್ತುಗಳು, ಯಾರಿಗಾಗಿ-ಏತಕ್ಕಾಗಿ ಕೆಲಸ ಮಾಡುತ್ತಾರೆ ಎನ್ನುವುದನ್ನು ನಾಡಿನ ಜನತೆ ಅರ್ಥ ಮಾಡಿಕೊಳ್ಳಬೇಕಾಗಿದೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಜ್ಯದ ಪರವಾಗಿ ಧ್ವನಿ ಎತ್ತದ ಸಂಸದರನ್ನು ಮತದಾರ ತಿರಸ್ಕರಿಸಬೇಕಿದೆ

ರಾಜ್ಯದ ಬಿಜೆಪಿ ಸಂಸದರು ತಮ್ಮದೇ ಪಕ್ಷ ಅಧಿಕಾರದಲ್ಲಿದ್ದೂ, ನಾಲ್ವರು ಸಚಿವರು ಇದ್ದೂ...

ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ...

ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ....

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...