ಕೇಂದ್ರ ಸರ್ಕಾರವು ವಿ ನಾರಾಯಣನ್ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ನೂತನ ಅಧ್ಯಕ್ಷ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಿದೆ.
ವಿ ನಾರಾಯಣನ್ ಅವರು ಜನವರಿ 14 ರಂದು ಪ್ರಸ್ತುತ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕೇಂದ್ರ ಸರ್ಕಾರದ ಸಂಪುಟದ ನೇಮಕಾತಿ ಸಮಿತಿಯೂ ಈ ಕುರಿತು ಅಧಿಸೂಚನೆ ಹೊರಡಿಸಿದೆ.
ವಿ ನಾರಾಯಣನ್ ಅವರ ನೇಮಕವು ಜನವರಿ 14 ರಿಂದ ಎರಡು ವರ್ಷಗಳ ಅವಧಿಗೆ ಇರುತ್ತದೆ ಎಂದು ಹೇಳಲಾಗಿದೆ. ವಿ ನಾರಾಯಣನ್ ಅವರಿಗೆ ಸುಮಾರು ನಾಲ್ಕು ದಶಕಗಳ ಅನುಭವವಿದೆ. ಅವರು ಭಾರತೀಯ ಬಾಹ್ಯಾಕಾಶ ಸಂಸ್ಥೆಯಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕ್ರಿಕೆಟ್ ಕೇಸರಿಕರಣ, ಪರಿಶುದ್ಧ ಆಟ ಅಂತರ್ಧಾನ
ಅವರು ರಾಕೆಟ್ ಮತ್ತು ಬಾಹ್ಯಾಕಾಶ ನೌಕೆ ತಂತ್ರಜ್ಞಾನದಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಅವರು GSLV Mk Ill ವಾಹನದ C25 ಕ್ರಯೋಜೆನಿಕ್ ಯೋಜನೆಯ ಯೋಜನಾ ನಿರ್ದೇಶಕರಾಗಿದ್ದರು.
ನಾರಾಯಣನ್ ಅವರು 1984 ರಲ್ಲಿ ಇಸ್ರೋಗೆ ಸೇರ್ಪಡೆಗೊಂಡರು ಮತ್ತು ಕೇಂದ್ರದ ನಿರ್ದೇಶಕರಾಗುವ ಮೊದಲು ವಿವಿಧ ಹುದ್ದೆಗಳನ್ನು ಅಲಂಕರಿಸಿದರು. ಆರಂಭದಲ್ಲಿ ಸುಮಾರು ನಾಲ್ಕೂವರೆ ವರ್ಷಗಳ ಕಾಲ ಅವರು ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಮತ್ತು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ನ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ.
