ಈ ಹಿಂದೆ ಕೇಂದ್ರದಲ್ಲಿ ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರವಿದ್ದಾಗ ದೇಶದಲ್ಲಿ ವಿಪರೀತಕ್ಕೆ ಹೋಗಿದ್ದ ಮುಸ್ಲಿಂ ದ್ವೇಷವು, ಮೋದಿಯವರ ಎನ್‌ಡಿಎ ಮೈತ್ರಿಕೂಟದ ಸರ್ಕಾರದ ಬಂದ ಮೇಲೂ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.
ಯಾಕೆಂದರೆ ಗುಜರಾತ್‌ನ ವಡೋದರಾದಲ್ಲಿ ಸಿಎಂ ವಸತಿ ಯೋಜನೆಯಡಿ ಮುಸ್ಲಿಂ ಮಹಿಳೆಯೋರ್ವರಿಗೆ ಫ್ಲ್ಯಾಟ್ ಮಂಜೂರು ಮಾಡಲಾಗಿತ್ತು. ಆದರೆ, ಮುಸ್ಲಿಂ ಮಹಿಳೆ ವಾಸಿಸುವುದಕ್ಕೆ ಅಲ್ಲಿನ ಹಿಂದುಗಳು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಮುಖ್ಯಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ವಾಣಿಜ್ಯೋದ್ಯಮ ಮತ್ತು ಕೌಶಲ್ಯಾಭಿವೃದ್ಧಿ ಸಚಿವಾಲಯದಲ್ಲಿ ಉದ್ಯೋಗಿಯಾಗಿರುವ 44 ವರ್ಷದ ಮುಸ್ಲಿಂ ಮಹಿಳೆಗೆ 2017ರಲ್ಲಿ ಫ್ಲ್ಯಾಟ್ ಮಂಜೂರು ಮಾಡಲಾಗಿತ್ತು. ಆದರೆ, ಸ್ಥಳೀಯರು ಮುಸ್ಲಿಂ ಮಹಿಳೆ ವಾಸಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಇದರಿಂದ 2017ರಲ್ಲಿ ಮನೆ ಮಂಜೂರಾದರೂ, ಮನೆಯಲ್ಲಿ ವಾಸಿಸಲು ಸಾಧ್ಯವಾಗದೆ ಮುಸ್ಲಿಂ ಮಹಿಳೆ ಕಂಗಾಲಾಗಿದ್ದಾರೆ.
ಹರ್ನಿಯಲ್ಲಿರುವ ವಡೋದರಾ ಮುನ್ಸಿಪಲ್ ಕಾರ್ಪೊರೇಷನ್(ವಿಎಂಸಿ) ಮಹಿಳೆಗೆ ವಸತಿ ಘಟಕವನ್ನು 2017ರಲ್ಲಿ ಮಂಜೂರು ಮಾಡಿತ್ತು. ಇದರಿಂದ ಮಹಿಳೆ ಮತ್ತು ಅವರ ಅಪ್ರಾಪ್ತ ವಯಸ್ಸಿನ ಮಗ ಸಂತೋಷಪಟ್ಟಿದ್ದರು. ಆದರೆ ಅವರು ಸ್ಥಳಾಂತರಗೊಳ್ಳುವ ಮೊದಲೇ ವಸತಿ ಸಮುಚ್ಚಯದ 33 ನಿವಾಸಿಗಳು ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದು, ಮುಸ್ಲಿಂ ಕುಟುಂಬ ವಸತಿ ಸಮುಚ್ಚಯಕ್ಕೆ ಸ್ಥಳಾಂತರಗೊಳ್ಳುವುದನ್ನು ವಿರೋಧಿಸಿದ್ದಾರೆ. ಆಕೆ ನಮ್ಮ ನೆರೆಹೊರೆಯಲ್ಲಿರುವುದರಿಂದ ನಮಗೆ ಬೆದರಿಕೆ ಉಂಟು ಮಾಡುತ್ತದೆ ಮತ್ತು ಸಮಸ್ಯೆಯಾಗುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ವಡೋದರಾ ಮುನ್ಸಿಪಲ್ ಕಮಿಷನರ್ ದಿಲೀಪ್ ರಾಣಾ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ ಮತ್ತು ಉಪ ಮುನ್ಸಿಪಲ್ ಕಮಿಷನರ್ ಅರ್ಪಿತ್ ಸಾಗರ್ ಮತ್ತು ಎಂಜಿನಿಯರ್ ನೀಲೇಶ್‌ಕುಮಾರ್ ಪರ್ಮಾರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯಲ್ಲಿ ಉಲ್ಲೇಖಿಸಿದೆ.
Video of protest by residents in #Gujarat‘s #Vadodara against allocation of a flat to a #Muslim Woman in a housing complex under Chief Minister housing scheme.
The residents can be seen raising religious slogans during the protest. pic.twitter.com/Mc7jQjudxH
— Hate Detector 🔍 (@HateDetectors) June 14, 2024
2020ರಲ್ಲಿ ನಿವಾಸಿಗಳು ಹಂಚಿಕೆ ಮಾಡಿದ ಮನೆಯನ್ನು ಅಮಾನ್ಯಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಕಚೇರಿಗೆ ಪತ್ರ ಬರೆದಿದ್ದರು. ಮುಸ್ಲಿಂ ಕುಟುಂಬಗಳಿಗೆ ಮನೆ ನೀಡುವುದನ್ನು ವಿರೋಧಿಸಿ ಪ್ರತಿಭಟನೆಗಳು ಜರುಗಿದ್ದವು. ಹರ್ನಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎರಡೂ ಕಡೆಯ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಆದರೆ, ಈಗ ಮುಸ್ಲಿಂ ಮಹಿಳೆ ವಾಸ ಮಾಡುವುದಕ್ಕೆ ಮತ್ತೆ ವಿರೋಧ ವ್ಯಕ್ತಪಡಿಸಿ, ಜೂನ್ 10ರಂದು ಪ್ರತಿಭಟನೆ ನಡೆದಿದೆ. ಪ್ರತಿಭಟನೆಯ ವೇಳೆ ಜೈ ಶ್ರೀರಾಮ್ ಘೋಷಣೆ ಕೂಡ ಕೂಗಿದ್ದಾರೆ.
“ನಾನು ಬರೋಡಾದಲ್ಲಿ ಎಲ್ಲ ವರ್ಗದ ಜನರು ವಾಸಿಸುವ ಪ್ರದೇಶದಲ್ಲಿ ಹುಟ್ಟಿ ಬೆಳೆದವಳು. ನನ್ನ ಮಗ ಎಲ್ಲರನ್ನೂ ಒಳಗೊಂಡಿರುವ ವಾತಾವರಣದಲ್ಲಿ ಬೆಳೆಯಬೇಕೆಂದು ನಾನು ಯಾವಾಗಲೂ ಬಯಸಿದ್ದೆ, ಆದರೆ ಸುಮಾರು ಆರು ವರ್ಷಗಳಾಗಿದೆ. ನನ್ನ ಕನಸುಗಳು ಛಿದ್ರಗೊಂಡಿವೆ. ನಾನು ಎದುರಿಸುತ್ತಿರುವ ವಿರೋಧಕ್ಕೆ ಯಾವುದೇ ಪರಿಹಾರವಿಲ್ಲ. ನನ್ನ ಮಗ ಈಗ 12ನೇ ತರಗತಿಯಲ್ಲಿದ್ದಾನೆ ಮತ್ತು ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವಷ್ಟು ಆತನಿಗೆ ವಯಸ್ಸಾಗಿದೆ. ತಾರತಮ್ಯವು ಅವನ ಮೇಲೆ ಮಾನಸಿಕವಾಗಿ ಪರಿಣಾಮ ಬೀರುತ್ತದೆ” ಎಂದು ಸಂತ್ರಸ್ತ ಮುಸ್ಲಿಂ ಮಹಿಳೆ ಫ್ಲ್ಯಾಟ್‌ನ ನಿವಾಸಿಗಳ ನಡೆಗೆ ಬೇಸರದಿಂದ ಹೇಳಿಕೆ ನೀಡಿದ್ದಾರೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಜಿಲ್ಲಾಧಿಕಾರಿ, ಮೇಯರ್, ವಿಎಂಸಿ ಕಮಿಷನರ್ ಹಾಗೂ ವಡೋದರಾದ ಪೊಲೀಸ್ ಆಯುಕ್ತರಿಗೆ ಸಲ್ಲಿಸಿದ ದೂರಿನಲ್ಲಿ 33 ಸಹಿದಾರರು ಮುಸ್ಲಿಂ ಫಲಾನುಭವಿಗೆ ಮಂಜೂರು ಮಾಡಿದ ವಸತಿ ಘಟಕವನ್ನು ಅಮಾನ್ಯಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಮೋಟ್ನಾಥ್ ರೆಸಿಡೆನ್ಸಿ ಕೋಆಪರೇಟಿವ್ ಹೌಸಿಂಗ್ ಸರ್ವಿಸಸ್ ಸೊಸೈಟಿ ಲಿಮಿಟೆಡ್‌ನ ಜ್ಞಾಪಕ ಪತ್ರದಲ್ಲಿ, “ವಿಎಂಸಿಯು ಮಾರ್ಚ್ 2019ರಲ್ಲಿ ಒಬ್ಬ ಅಲ್ಪಸಂಖ್ಯಾತ ಫಲಾನುಭವಿಗೆ ಮನೆ ಸಂಖ್ಯೆ K204ನ್ನು ಮಂಜೂರು ಮಾಡಿದೆ. ಹರ್ನಿ ಪ್ರದೇಶವು ಹಿಂದೂ ಪ್ರಾಬಲ್ಯದ ಶಾಂತಿಯುತ ಪ್ರದೇಶವಾಗಿದೆ ಮತ್ತು ಮುಸ್ಲಿಮರು ವಾಸ ಇಲ್ಲ ಎಂದು ನಾವು ನಂಬುತ್ತೇವೆ” ಎಂದು ಹೇಳಿಕೊಂಡಿದೆ.
ಕಾಲೋನಿಯ ನಿವಾಸಿಗಳು ಮುಸ್ಲಿಂ ಕುಟುಂಬಗಳಿಗೆ ಸ್ಥಳಾಂತರಗೊಳ್ಳಲು ಅವಕಾಶ ನೀಡಿದರೆ ಕಾನೂನು-ಸುವ್ಯವಸ್ಥೆ ಬಿಕ್ಕಟ್ಟು ಉಂಟಾಗುತ್ತದೆ ಎಂದು ಹೇಳಿದ್ದಾರೆ. ನಾವೆಲ್ಲರೂ ಈ ಕಾಲೋನಿಯಲ್ಲಿ ಮನೆಗಳನ್ನು ಬುಕ್ ಮಾಡಿದ್ದೇವೆ ಮತ್ತು ಇತರ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ವ್ಯಕ್ತಿಗಳು ನಮ್ಮ ಕಾಲೋನಿಯಲ್ಲಿ ವಾಸಿಸುವುದನ್ನು ನಾವು ಇಷ್ಟಪಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಹೌಸಿಂಗ್ ಕಾಲೋನಿಯಲ್ಲಿನ ಹಲವಾರು ಕುಟುಂಬಗಳು ಮಾಂಸಾಹಾರಿಗಳಾಗಿದ್ದರೂ, ವಿಭಿನ್ನ ಧಾರ್ಮಿಕ ಕಲ್ಪನೆಯ ಜನರು ನಮ್ಮ ನೆರೆಹೊರೆಗೆ ಬರುವುದು ಕಳವಳವನ್ನು ಉಂಟುಮಾಡಿದೆ. ಅಲ್ಪಸಂಖ್ಯಾತ ಕುಟುಂಬವು ನಮ್ಮ ನೆರೆಹೊರೆಯಲ್ಲಿ ವಾಸಿಸುವುದರಿಂದ ನಮ್ಮ ನೆಮ್ಮದಿಗೆ ಭಂಗ ತರುತ್ತದೆ ಎಂದು ಹೇಳಿರುವುದಾಗಿ ವರದಿಯಾಗಿದೆ.
Muslim woman allotted flat under CM scheme in Vadodara, residents protest. 33 residents of the housing complex out of 462 units sent a complaint to the authorities, objecting to a ‘Muslim’ moving in, citing “threat and nuisance” due to her presence. https://t.co/uofgtkq2SV
— Mohammed Zubair (@zoo_bear) June 14, 2024
ಮಹಿಳೆ ಪ್ರಸ್ತುತ ತನ್ನ ಪೋಷಕರು ಮತ್ತು ಮಗನೊಂದಿಗೆ ವಡೋದರದ ಮತ್ತೊಂದು ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಈ ವಿರೋಧದ ಕಾರಣದಿಂದ ನಾನು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯನ್ನು ಮಾರಾಟ ಮಾಡಲು ಬಯಸುವುದಿಲ್ಲ. ನಾನು ಕಾಯುತ್ತೇನೆ. ನಾನು ಪದೇ ಪದೇ ಕಾಲೋನಿಯ ವ್ಯವಸ್ಥಾಪಕ ಸಮಿತಿಯನ್ನು ಭೇಟಿ ಮಾಡಿದರೂ ಅವರು ಪ್ರತಿಕ್ರಿಯಿಸಲಿಲ್ಲ ಎಂದು ಹೇಳಿದ್ದಾರೆ.
ಆದರೂ ಕಾಲೊನಿಯ ನಿವಾಸಿಯೋರ್ವರು ಮಹಿಳೆಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಇದು ಅನ್ಯಾಯವಾಗಿದೆ ಏಕೆಂದರೆ ಅವಳು ಸರ್ಕಾರಿ ಯೋಜನೆಯ ಫಲಾನುಭವಿಯಾಗಿದ್ದಾಳೆ ಮತ್ತು ಕಾನೂನು ನಿಬಂಧನೆಗಳ ಪ್ರಕಾರ ಫ್ಲ್ಯಾಟ್ ಹಂಚಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ರೇಣುಕಾಸ್ವಾಮಿ ಕೊಲೆ ಪ್ರಕರಣ | ಮರಣೋತ್ತರ ಪರೀಕ್ಷೆಯಲ್ಲಿ ದೇಹದ 15 ಕಡೆಗಳಲ್ಲಿ ಗಾಯದ ಗುರುತು
ಸರ್ಕಾರಿ ಯೋಜನೆಗಳು ಅರ್ಜಿದಾರರು ಮತ್ತು ಫಲಾನುಭವಿಗಳನ್ನು ಧರ್ಮದ ಆಧಾರದ ಮೇಲೆ ಪ್ರತ್ಯೇಕಿಸದ ಕಾರಣ, ವಸತಿಯನ್ನು ನಿಯಮಾನುಸಾರ ನೀಡಲಾಗಿದೆ ಎಂದು ವಿಎಂಸಿಯ ವಸತಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಇದು ನ್ಯಾಯಾಲಯವನ್ನು ಸಂಪರ್ಕಿಸುವ ಮೂಲಕ ಪರಿಹರಿಸಬೇಕಾದ ವಿಷಯವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
