ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನಕರ್ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಿರುವ ಧನಕರ್, ಪತ್ರದಲ್ಲಿ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖ ಮಾಡಿದ್ದಾರೆ.
“ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು ಸಂವಿಧಾನದ 67(ಎ) ವಿಧಿಗೆ ಅನುಗುಣವಾಗಿ, ತಕ್ಷಣವೇ ಜಾರಿಗೆ ಬರುವಂತೆ ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ” ಎಂದು ಧನಕರ್ ಪತ್ರದಲ್ಲಿ ಬರೆದಿದ್ದಾರೆ.
ಇದನ್ನು ಓದಿದ್ದೀರಾ? ಬಿಜೆಪಿಗಾಗಿ ಉಪ ರಾಷ್ಟ್ರಪತಿ ಪಟ್ಟ ಕಳೆದುಕೊಳ್ತಾರಾ ಧನಕರ್?
ಹಾಗೆಯೇ ರಾಷ್ಟ್ರಪತಿಯವರ ಅಚಲ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ. ಮುರ್ಮು ಅವರ ಕಾರ್ಯವೈಖರಿಯನ್ನು ಶಾಂತ ಮತ್ತು ಅದ್ಭುತ ಎಂದು ಬಣ್ಣಿಸಿದ್ದಾರೆ. ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವರಿಗೂ ಧನ್ಯವಾದ ತಿಳಿಸಿರುವ ಅವರ ಪ್ರಧಾನಿಯವರ ಬೆಂಬಲವನ್ನು ‘ಅಮೂಲ್ಯ’ ಎಂದು ಉಲ್ಲೇಖಿಸಿದ್ದಾರೆ.

ಈ ಹಿಂದೆ 2007ರಲ್ಲಿ ಭೈರೋನ್ ಸಿಂಗ್ ಶೇಖಾವತ್ ಅವರು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿ ಯುಪಿಎ-ಎಡ ಬೆಂಬಲಿತ ಅಭ್ಯರ್ಥಿ ಪ್ರತಿಭಾ ಪಾಟೀಲ್ ವಿರುದ್ಧ ಸೋತು ರಾಷ್ಟ್ರಪತಿ ಚುನಾವಣೆಯಲ್ಲಿ ಸೋತ ಮೊದಲ ಉಪರಾಷ್ಟ್ರಪತಿ ಎಂದೆನಿಸಿಕೊಂಡಿದ್ದರು. ಈ ಹಿನ್ನೆಲೆ ಶೇಖಾವತ್ ಅವರು 2017ರ ಜುಲೈನಲ್ಲಿ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.