ಲಡಾಖ್‌ನ ಹೋರಾಟವನ್ನು ಸೋನಂ ವಾಂಗ್ಚುಕ್, ‘ಜೆನ್ ಝೀ’ ಹೋರಾಟ ಎಂದಿದ್ದಾರೆ. ಆದರೆ, ಹಿಂಸೆಗೆ ಬೇಸತ್ತ ಅವರು ಹಿಂಸಾಚಾರವನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಈ ಹಿಂಸಾಚಾರ ನಮ್ಮ ಹೋರಾಟಕ್ಕೆ ಹಾನಿಯನ್ನುಂಟುಮಾಡುತ್ತದೆ. ನಾವು ಲಡಾಖ್ ಮತ್ತು ದೇಶದಲ್ಲಿ ಅಸ್ಥಿರತೆಯನ್ನು ಬಯಸುವುದಿಲ್ಲ ಎಂದಿದ್ದಾರೆ.
ಭಾರತದ ನೆತ್ತಿಯ ತುತ್ತ ತುದಿಯ ಪ್ರದೇಶ ಲಡಾಖ್. ಗಡಿ ಭಾಗದಲ್ಲಿರುವ ಈ ಪ್ರದೇಶ ಅತ್ಯಂತ ಸೂಕ್ಷ್ಮ ವಲಯವೂ ಹೌದು. ಮೈನಡುಗಿಸುವ ಈ ಥಣ್ಣನೆಯ ಮರುಭೂಮಿಯ ಬೌದ್ಧರು ಉರಿದೆದ್ದಿದ್ದಾರೆ. ಲಡಾಖ್‌ನಲ್ಲಿ ಹಿಂಸಾಚಾರ ಭುಗಿಲೆದ್ದು, ಜನರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡಬೇಕು ಮತ್ತು ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಚಳವಳಿ ಉಗ್ರಸ್ವರೂಪಕ್ಕೆ ತಿರುಗಿದ್ದು, ನೇಪಾಳದ ಜೆನ್-ಝೀ ಮಾದರಿ ಹೋರಾಟ ನಡೆದಿದೆ.
ಬುಧವಾರ ಬೆಳಗ್ಗೆ, ಲಡಾಖ್ ರಾಜಧಾನಿ ಲೇಹ್‌ನಲ್ಲಿ ಯುವ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತೀವ್ರ ಘರ್ಷಣೆ ನಡೆದಿದೆ. ನಾಲ್ವರು ಸಾವನ್ನಪ್ಪಿದ್ದು, 70 ಜನ ಗಾಯಗೊಂಡಿದ್ದಾರೆ. ಲಡಾಖ್ ಹಿಂಸಾಚಾರಕ್ಕೆ ಸೋನಮ್ ವಾಗ್ಚುಕ್ ಅವರ ಪ್ರಚೋದನಾಕಾರಿ ಹೇಳಿಕೆಗಳೇ ಕಾರಣ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಇದೀಗ ಲಡಾಖ್ ಕಾದ ಕಬ್ಬಿಣದಂತೆ ಆಗಿದ್ದು, ಭಾರತದ ಗಡಿ ಭಾಗದಲ್ಲಿ ಸೂಕ್ಷ್ಮ ಪರಿಸ್ಥಿತಿ ನಿರ್ಮಾಣ ಆಗಿದೆ. ಹಾಗಾದ್ರೆ ಈ ಪ್ರತಿಭಟನೆಗೆ ಕಾರಣ ಏನು? ಜನ ಯಾಕೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ?
ಜಮ್ಮು ಮತ್ತು ಕಾಶ್ಮೀರಕ್ಕೆ ಸಾಂವಿಧಾನಿಕವಾಗಿ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೆಯ ವಿಧಿಯನ್ನು ಮೋದಿ ಸರ್ಕಾರ ಆಗಸ್ಟ್ 5, 2019ರಂದು ರದ್ದುಗೊಳಿಸಿತು. ಈ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಯಿತು. ಒಂದನೆಯದು ವಿಧಾನಸಭೆಯನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರ, ಎರಡನೆಯದು ಲೇಹ್ ಹಾಗೂ ಕಾರ್ಗಿಲ್ ಅನ್ನು ಒಳಗೊಂಡಿರುವ ಲಡಾಖ್. ಪರಿಣಾಮವಾಗಿ ಬೌದ್ಧರು-ಮುಸ್ಲಿಮರಿರುವ ಈ ಸೀಮೆ ತನ್ನ ಹಳೆಯ ಸ್ವಾಯತ್ತತೆಯನ್ನು ಕಳೆದುಕೊಂಡಿತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಲಡಾಖಿನ ಹೋರಾಟವೂ ಮತ್ತು ಮೋದಿಯ ಮೊಂಡಾಟವೂ
ಕೆಲವು ವರ್ಷಗಳ ಹಿಂದೆ, ಲಡಾಖ್‌ನಲ್ಲಿ ಒಂದು ಚಳುವಳಿ ಮೊಳೆಯಿತು. ದೇಶದ ಇತರೆ ಈಶಾನ್ಯ ರಾಜ್ಯಗಳಂತೆಯೇ ಸಂವಿಧಾನದ 6ನೇ ವೇಳಾಪಟ್ಟಿಯ ಅಡಿಯಲ್ಲಿ ಲಡಾಖ್‌ಗೂ ಬುಡಕಟ್ಟು ಸ್ಥಾನಮಾನಕ್ಕಾಗಿ ಆಗ್ರಹಿಸಿ ಅಲ್ಲಿನ ಜನರು ಬೀದಿಗಿಳಿದಿದ್ದರು. ಅಷ್ಟೇ ಅಲ್ಲ, ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆಗಳು ಶುರುವಾಗಿದ್ದವು. ಈ ಆಂದೋಲನದ ನೇತೃತ್ವವನ್ನು ಸೋನಮ್ ವಾಂಗ್‌ಚುಕ್ ವಹಿಸುತ್ತ ಬಂದಿದ್ದಾರೆ. ಕೈಗಾರಿಕೋದ್ಯಮಿಗಳು ಈ ಹಿಮಾಲಯ ಪ್ರದೇಶದ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಕಣ್ಣಿಟ್ಟಿದ್ದಾರೆ. ಕೇಂದ್ರಾಡಳಿತ ಪ್ರದೇಶವಾಗಿ ಉಳಿಯುವುದು ಕಾರ್ಪೊರೇಟ್ ಉದ್ಯಮಿಗಳಿಂದ ಲಡಾಖ್‌ನ ಶೋಷಣೆಗೆ ದಾರಿ ಮಾಡಿಕೊಡುತ್ತದೆ. ಇದನ್ನು ತಡೆಯುವ ಏಕೈಕ ಮಾರ್ಗ ಅಂದರೆ, ಬುಡಕಟ್ಟು ಸ್ಥಾನಮಾನ ನೀಡುವುದು ಎಂದು ವಾಂಗ್ಚುಕ್ ಮೊದಲೇ ಹೇಳಿದ್ದರು.
ಲಡಾಖ್‌ಗೆ ರಾಜ್ಯದ ಸ್ಥಾನಮಾನ ಸೇರಿದಂತೆ ನಾಲ್ಕು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರು ಬುಧವಾರ(ಸೆಪ್ಟೆಂಬರ್ 24) ಹಿಂಸಾಚಾರ ಸಿಡಿಯುತ್ತಿದ್ದಂತೆ 15ನೇ ದಿನಕ್ಕೆ ಉಪವಾಸ ನಿಲ್ಲಿಸಿದ್ದಾರೆ. ಆದರೆ, ಲಡಾಖ್ ಹಿಂಸಾಚಾರಕ್ಕೆ ಅವರ ಪ್ರಚೋದನಾಕಾರಿ ಹೇಳಿಕೆಗಳೇ ಕಾರಣ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ. ಈ ಆರೋಪಗಳನ್ನು ನಿಚ್ಚಳವಾಗಿ ನಿರಾಕರಿಸಿರುವ ಸತ್ಯಾಗ್ರಹಿ ಸೋನಮ್ ವಾಂಗ್ಚುಕ್, “ನಮ್ಮ ನ್ಯಾಯಯುತ ಬೇಡಿಕೆಗಳಿಂದ ಜನರನ್ನು ದಾರಿ ತಪ್ಪಿಸಲು ಆಡಳಿತ ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದೆ” ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ, ಹಿಂಸಾಚಾರಕ್ಕೆ ಕಾಂಗ್ರೆಸ್ ಕಾರಣ ಎಂಬ ಬಿಜೆಪಿ ಆರೋಪವನ್ನೂ ವಾಂಗ್ಚುಕ್ ತಳ್ಳಿ ಹಾಕಿದ್ದಾರೆ.
ಲಡಾಖ್‌ನ ಭೂಮಿ, ಸಂಸ್ಕೃತಿ ಹಾಗೂ ಸಂಪನ್ಮೂಲಗಳ ರಕ್ಷಣೆಗಾಗಿ ಲಡಾಖ್‌ಅನ್ನು ಆರನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು, ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡಬೇಕು, ಸ್ಥಳೀಯ ಉದ್ಯೋಗಕ್ಕಾಗಿ ಸಾರ್ವಜನಿಕ ಸೇವಾ ಆಯೋಗ (ಪಿಎಸ್‌ಎ) ರಚಿಸಬೇಕು, ಲೇಹ್ ಮತ್ತು ಕಾರ್ಗಿಲ್‌ಗೆ ತಲಾ ಒಂದು ಲೋಕಸಭಾ ಕ್ಷೇತ್ರಗಳನ್ನು ನೀಡಬೇಕು ಎಂಬ ಒಟ್ಟು ನಾಲ್ಕು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು 2019ರಿಂದ ಲಡಾಖ್‌ನಲ್ಲಿ ನಿರಂತರ ಹೋರಾಟ ನಡೆಯುತ್ತಿದೆ. 2023ರ ಜನವರಿಯಿಂದ ಸೋನಮ್ ವಾಂಗ್ಚುಕ್ ಕೂಡಾ ಈ ಚಳವಳಿಯಲ್ಲಿ ಜತೆಯಾಗಿದ್ದಾರೆ.
ಸೋನಂ ವಾಂಗ್ಚುಕ್ ಈ ಹೋರಾಟವನ್ನು, ‘ಜೆನ್ ಝೀ’ ಹೋರಾಟ ಎಂದು ಕರೆದಿದ್ದಾರೆ. ಆದರೆ ಹಿಂಸೆಗೆ ಬೇಸತ್ತ ಅವರು ಹಿಂಸಾಚಾರವನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. “ಲಡಾಖ್‌ನ ಯುವಕರು ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಬೇಕೆಂದು ನಾನು ವಿನಂತಿಸುತ್ತೇನೆ. ನಿಮ್ಮ ಈ ಹಿಂಸಾಚಾರ ನಮ್ಮ ಹೋರಾಟಕ್ಕೆ ಹಾನಿಯನ್ನುಂಟುಮಾಡುತ್ತದೆ ಮತ್ತು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ನಾವು ಲಡಾಖ್ ಮತ್ತು ದೇಶದಲ್ಲಿ ಅಸ್ಥಿರತೆಯನ್ನು ಬಯಸುವುದಿಲ್ಲ. ಐದು ವರ್ಷಗಳಿಂದ ಶಾಂತಿಯುತ ಹೋರಾಟ ಮುಂದುವರಿಯುತ್ತಿತ್ತು. ಆದರೆ ಇಂದು ಯುವಕರ ಅಸಹನೆ ಹಿಂಸೆಗೆ ತಿರುಗಿದೆ. ನಾನು ಅವರ ಚಡಪಡಿಕೆಯನ್ನು ಅರ್ಥಮಾಡಿಕೊಳ್ಳುತ್ತೇನೆ, ಆದರೆ ಹಿಂಸೆಯ ದಾರಿಯನ್ನು ಒಪ್ಪುವುದಿಲ್ಲ” ಎಂದು ಅವರು ಹೇಳಿದ್ದಾರೆ.
2002-2003ರಲ್ಲಿ, ಲೇಹ್‌ನ ಜನರು ಜಮ್ಮು ಮತ್ತು ಕಾಶ್ಮೀರ ಸರ್ಕಾರದಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದೇವೆ ಎಂದು ಕೇಂದ್ರಾಡಳಿತ ಪ್ರದೇಶ ಸ್ಥಾನಮಾನಕ್ಕೆ ಒತ್ತಾಯಿಸಲು ಪ್ರಾರಂಭಿಸಿದರು. 2019ರಲ್ಲಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಿದಾಗ, ಅಲ್ಲಿನ ಜನರು ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಲು ಪ್ರಾರಂಭಿಸಿದರು. ಕೇಂದ್ರ ಗೃಹ ಸಚಿವಾಲಯವು 17 ಸದಸ್ಯರ ಕೇಂದ್ರ ಸಮಿತಿಯನ್ನು ರಚಿಸಿತು. ಈ ಸಮಿತಿಯು 2023ರಲ್ಲಿ ಲಡಾಖ್‌ನಲ್ಲಿ ಕೆಲವು ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿತು. ಆದರೆ ಯಾವುದೇ ತೀರ್ಮಾನಗಳಿಗೆ ಬರಲಿಲ್ಲ. ಅಂದಿನಿಂದ, ಸೋನಮ್ ವಾಂಗ್ಚುಕ್ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ಮುನ್ನ 21 ದಿನಗಳ ಉಪವಾಸ ಸತ್ಯಾಗ್ರಹ ಸೇರಿದಂತೆ ವಾಂಗ್ಚುಕ್ ಹಲವಾರು ಪ್ರತಿಭಟನೆಗಳನ್ನು ನಡೆಸಿದ್ದರು.
ಈ ಲೇಖನ ಓದಿದ್ದೀರಾ?: ಜಿಎಸ್‌ಟಿ 2.0 | ವಸ್ತುಗಳ ಬೆಲೆಯೇ 50% ಕಡಿತ; ತಪ್ಪು ಲೆಕ್ಕ ಹೇಳಿ ಪೇಚಿಗೆ ಸಿಲುಕಿದ ಬಿಜೆಪಿ ಸಂಸದ
ಆಗಸ್ಟ್‌ನಲ್ಲಿ, ವಾಂಗ್ಚುಕ್ ಮತ್ತು ಲಡಾಖ್ ಸಂಸದ ಮೊಹಮ್ಮದ್ ಹನೀಫಾ ಜಾನ್ ಅವರು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಮೂರು ದಿನಗಳ ಉಪವಾಸ ಸತ್ಯಾಗ್ರಹವನ್ನು ಮುಕ್ತಾಯಗೊಳಿಸುವ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಕೊನೆಯ ಸುತ್ತಿನ ಮಾತುಕತೆ 2025ರ ಮೇ 27ರಂದು ನಡೆದಿತ್ತು. ಅದರ ನಂತರ ಕೇಂದ್ರವು ಜೂನ್‌ನಲ್ಲಿ ಕೇಂದ್ರಾಡಳಿತ ಪ್ರದೇಶಕ್ಕೆ ಹೊಸ ನಿವಾಸ ಮತ್ತು ಉದ್ಯೋಗ ಮೀಸಲಾತಿ ನೀತಿಯನ್ನು ಘೋಷಿಸಿತು. ಹೊಸ ನಿಯಮಗಳ ಪ್ರಕಾರ, ಅಕ್ಟೋಬರ್ 31, 2019ರಂದು ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ರಚನೆಯಾದಾಗಿನಿಂದ 15 ವರ್ಷಗಳ ಕಾಲ ಲಡಾಖ್‌ನಲ್ಲಿ ವಾಸಿಸುತ್ತಿರುವ ವ್ಯಕ್ತಿ ಮಾತ್ರ ಅಲ್ಲಿನ ನಿವಾಸಿವಾಗಲು ಅರ್ಹರಾಗಿರುತ್ತಾರೆ.
ಅಕ್ಟೋಬರ್ 31, 2019ರಿಂದ ಏಳು ವರ್ಷಗಳ ಕಾಲ ಅಧ್ಯಯನ ಮಾಡಿ ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿರುವ ಶಿಕ್ಷಣ ಸಂಸ್ಥೆಯಲ್ಲಿ 10 ಅಥವಾ 12ನೇ ತರಗತಿ ಪರೀಕ್ಷೆಗಳನ್ನು ಬರೆದ ವ್ಯಕ್ತಿಯೂ ಸಹ ನಿವಾಸಿಯಾಗಲು ಅರ್ಹತೆ ಪಡೆಯುತ್ತಾರೆ. ಆದಾಗ್ಯೂ, ನಿವಾಸ ನಿಯಮವು “ಲಡಾಖ್ ನಾಗರಿಕ ಸೇವೆಗಳ ವಿಕೇಂದ್ರೀಕರಣ ಮತ್ತು ನೇಮಕಾತಿಯಲ್ಲಿ ವ್ಯಾಖ್ಯಾನಿಸಲಾದ ಲಡಾಖ್ ಕೇಂದ್ರಾಡಳಿತ ಪ್ರದೇಶದ ಅಡಿಯಲ್ಲಿ ಹುದ್ದೆಗಳಿಗೆ ನೇಮಕಾತಿ ಮಾಡುವ ಉದ್ದೇಶಕ್ಕಾಗಿ ಮಾತ್ರ ಮಾನ್ಯವಾಗಿರುತ್ತದೆ” ಎಂದು ಹೇಳುತ್ತದೆ. ಮೀಸಲಾತಿ ನೀತಿಯನ್ನು ತಿದ್ದುಪಡಿ ಮಾಡಲು ಕೇಂದ್ರವು ಒಂದು ಸುಗ್ರೀವಾಜ್ಞೆಯನ್ನು ಸಹ ತಂದಿತ್ತು. ಸುಗ್ರೀವಾಜ್ಞೆಯ ಪ್ರಕಾರ, ಲಡಾಖ್‌ನಲ್ಲಿರುವ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ 85% ಉದ್ಯೋಗಗಳು ಮತ್ತು ಪ್ರವೇಶಗಳನ್ನು ಕೇಂದ್ರಾಡಳಿತ ಪ್ರದೇಶದ ನಿವಾಸಿಗಳಿಗೆ ಮೀಸಲಿಡಬೇಕು. ಆದಾಗ್ಯೂ, ಲಡಾಖ್ ನಾಯಕತ್ವವು ಇದನ್ನು ‘ಮೊದಲ ಹೆಜ್ಜೆ’ ಮತ್ತು ಕೊಂಚ ‘ಪ್ರಗತಿ’ ಎಂದು ಮಾತ್ರ ಕರೆದಿತ್ತು.
ಸೋನಮ್ ವಾಂಗ್ಚುಕ್ ಅವರ ಹೋರಾಟವನ್ನ ಬೆಂಬಲಿಸಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಯುವಕರು ಬೀದಿಗಿಳಿದಿದ್ದಾರೆ. ಬುಧವಾರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಬಿಜೆಪಿ ಕಚೇರಿಯನ್ನೂ ಧ್ವಂಸಗೊಳಿಸಲಾಗಿದೆ. ಸಿಆರ್‌ಪಿಎಫ್ ವಾಹನಗಳನ್ನು ಸುಟ್ಟುಹಾಕಿದ್ದಾರೆ. ಪ್ರತಿಭಟನೆಗಳು ಸಾಕಷ್ಟು ಹಿಂಸಾತ್ಮಕವಾಗಿವೆ. ಪ್ರತಿಯಾಗಿ ಪೊಲೀಸರು ಅಶ್ರುವಾಯು ಮತ್ತು ಲಾಠಿ ಚಾರ್ಜ್ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ಯತ್ನಿಸಿದರು. ಜನರು ಬೀದಿಗಳಲ್ಲಿ ಬೆಂಕಿ ಹಚ್ಚುವ ಮೂಲಕ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ. ನಗರದ ಹಲವೆಡೆ ಆತಂಕದ ವಾತಾವರಣ ನಿರ್ಮಾಣವಾಯಿತು. ಇದಾದ ಬೆನ್ನಲ್ಲೇ ಲೇಹ್‌ನಲ್ಲಿ ಕಂಡಲ್ಲಿ ಗುಂಡಿಕ್ಕುವ ಕರ್ಫ್ಯೂ ಜಾರಿ ಮಾಡಲಾಗಿದೆ. ಸದ್ಯ ಕಾರ್ಗಿಲ್ ಬಂದ್ ಆಗಿದೆ.