ಈ ದಿನ ಸಂಪಾದಕೀಯ | ಲಡಾಖಿನ ಹೋರಾಟವೂ ಮತ್ತು ಮೋದಿಯ ಮೊಂಡಾಟವೂ

Date:

ಆರ್ಟಿಕಲ್‌ 370 ತೆರವುಗೊಳಿಸಿದ ಮೋದಿಯವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಯಾರು ಬೇಕಾದರೂ ಭೂಮಿ ಖರೀದಿಸಬಹುದು ಎಂದು ಘೋಷಿಸಿದರು. ಆದರೆ ಅದರಿಂದ ಲಾಭವಾಗಿದ್ದು ಸ್ಥಳೀಯರಿಗಲ್ಲ, ದೇಶದ ಜನರಿಗಲ್ಲ, ಮೋದಿಯ ಆಪ್ತ ಕಾರ್ಪೊರೇಟ್‌ ಕುಳಗಳಿಗೆ. ಗಣಿಗಾರಿಕೆ, ಚೀನಾದ ಅತಿಕ್ರಮಣದಿಂದಾಗಿ ಲಡಾಖ್‌ ನಲುಗಿಹೋಗಿದೆ. ಮೋದಿ ಮಾತ್ರ ಏನೂ ಆಗಿಯೇ ಇಲ್ಲವೆಂದು ಮೌನಕ್ಕೆ ಜಾರಿದ್ದಾರೆ…

ಭಾರತದ ನೆತ್ತಿಯಲ್ಲಿರುವ ಲಡಾಖ್, ಚೀನಾ ಮತ್ತು ಪಾಕಿಸ್ತಾನ ದೇಶಗಳ ಗಡಿಗಳಿಗೆ ಹೊಂದಿಕೊಂಡಿರುವ; ಅತ್ಯಂತ ಸೂಕ್ಷ್ಮ ಜೀವವೈವಿಧ್ಯವನ್ನು, ಬೆಲೆಬಾಳುವ ಖನಿಜ ನಿಕ್ಷೇಪಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ಪರ್ವತ ಶ್ರೇಣಿ. ಉತ್ತರ ಭಾರತದ ಹಲವು ನದಿಗಳಿಗೆ, ವೈವಿಧ್ಯ ಜೀವರಾಶಿಗಳಿಗೆ, ಬುಡಕಟ್ಟು ಜನಾಂಗಗಳಿಗೆ ಆಶ್ರಯ ನೀಡಿದ ಅಪರೂಪದ ತಾಣ.

ಈ ತಾಣವೀಗ ಅಧಿಕಾರದಾಹಿ ರಾಜಕಾರಣಿಗಳ ಮತ್ತು ಧನದಾಹಿ ಕಾರ್ಪೊರೇಟ್‌ ಕುಳಗಳ ಕಾಕದೃಷ್ಟಿಗೆ ಬಿದ್ದಿದೆ. ಅಭಿವೃದ್ಧಿಯ ಅಧ್ವಾನಕ್ಕೆ ಒಳಗಾಗಿದೆ. ಜೊತೆಗೆ ಚೀನಾದ ಅತಿಕ್ರಮಣದಿಂದ ಬುಡಕಟ್ಟು ಜನಾಂಗದ ಕುರಿಗಾಹಿಗಳು ನೆಲೆ ಕಳೆದುಕೊಂಡು ಬದುಕುವುದೇ ಕಷ್ಟವಾಗಿದೆ. ಇಡೀ ಲಡಾಖ್‌ ಸಂಕಷ್ಟಕ್ಕೆ ಸಿಲುಕಿದೆ.

ಕಳೆದ ಮಾರ್ಚ್‌ನಲ್ಲಿ ಲಡಾಖ್‌ನ ಶಿಕ್ಷಣತಜ್ಞ, ಪರಿಸರ ಹೋರಾಟಗಾರ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸೋನಮ್‌ ವಾಂಗ್‌ಚುಕ್‌ ಅವರು ಹಿಮಾಲಯ ಪರ್ವತ ಪ್ರದೇಶಗಳ ಉಳಿವಿಗಾಗಿ 21 ದಿನಗಳು ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆ ಸತ್ಯಾಗ್ರಹಕ್ಕೆ ಪ್ರಪಂಚದ ಮೂಲೆ ಮೂಲೆಗಳಿಂದ ಬೆಂಬಲ ವ್ಯಕ್ತವಾಯಿತು. ಕರ್ನಾಟಕದ ಕೃಪಾಕರ-ಸೇನಾನಿ ಮತ್ತು ಪ್ರಕಾಶ್‌ ರೈ ಕೂಡ ಆ ಸತ್ಯಾಗ್ರಹದಲ್ಲಿ ಪಾಲ್ಗೊಂಡು, ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ಕೇಂದ್ರ ಸರಕಾರ ಮತ್ತು ಮೋದಿಯವರು, ತಮಗೂ ಅದಕ್ಕೂ ಸಂಬಂಧವೇ ಇಲ್ಲದಂತಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೋದಿಯ ಮೊಂಡಾಟಕ್ಕೆ ಉತ್ತರ ಕೊಡಲು ಮತ್ತು ಲಡಾಖ್‌ನ ಸುಮಾರು 4 ಸಾವಿರ ಚದರ ಕಿ.ಮೀ ಅನ್ನು ಚೀನಾ ಆಕ್ರಮಿಸಿಕೊಂಡಿರುವುದನ್ನು ಸಾಕ್ಷ್ಯ ಸಮೇತ ಜಗತ್ತಿಗೆ ತೋರಲು, ಅಲೆಮಾರಿ ಬುಡಕಟ್ಟು ಜನಾಂಗದವರು ಕಳೆದ ಭಾನುವಾರ, ಏ. 7ರಂದು ಲಡಾಖ್‌ನ ಸಂಘ ಸಂಸ್ಥೆಗಳ ಸಂಘಟಕರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳೊಂದಿಗೆ ಸೇರಿ ʼಗಡಿ ಮೆರವಣಿಗೆʼ ಆಯೋಜಿಸಿದ್ದರು.

ಆದರೆ, ಮೋದಿಯವರ ಕೇಂದ್ರ ಸರಕಾರ, ಮೆರವಣಿಗೆ ನಡೆಸದಂತೆ ನಿಷೇಧಾಜ್ಞೆ ಹೇರಿತು. ಪೂರ್ವಾನುಮತಿ ಇಲ್ಲದೆ ಪ್ರತಿಭಟನೆ, ರ್ಯಾಲಿ, ಮೆರವಣಿಗೆ, ಭಾಷಣ ನಡೆಸುವಂತಿಲ್ಲ ಎಂದು ನಿರ್ಬಂಧ ವಿಧಿಸಿತು. ತಮ್ಮ ನೋವು, ಸಂಕಟಗಳನ್ನು ಜಗತ್ತಿಗೆ ತಿಳಿಸಲು ಬಂದಿದ್ದ ಲಡಾಖ್‌ನ ಹತ್ತು ಸಾವಿರಕ್ಕೂ ಹೆಚ್ಚು ಜನರ ಒಡಲುರಿ ಒಡಲೊಳಗೇ ಉಳಿಯಿತು.

ಈ ಕುರಿತು ಮಾತನಾಡಿದ ಸೋನಮ್‌ ವಾಂಗ್‌ಚುಕ್‌, ʼಸತ್ಯ ಹೇಳುವವರನ್ನು ಈ ಸರ್ಕಾರ ದೇಶದ್ರೋಹಿಗಳು ಎಂದು ಕರೆಯುತ್ತದೆ. ಈಗ ಗಡಿ ಮೆರವಣಿಗೆಗೆ ನಿಷೇಧ ಹೇರಿದೆ. ಹೀಗಿದ್ದೂ ನಾವು ಮೆರವಣಿಗೆ ನಡೆಸಲು ಯತ್ನಿಸಿದರೆ, ಅದು ಭದ್ರತಾ ಸಂಸ್ಥೆಗಳ ಜತೆಗೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಆಗ ನಮ್ಮನ್ನು ಭಯೋತ್ಪಾದಕರು ಎಂದೂ ಕರೆಯಬಹುದು. ಹೀಗಾಗಿ ಮೆರವಣಿಗೆ ಕೈಬಿಟ್ಟಿದ್ದೇವೆʼ ಎಂದು ಮೋದಿಯವರ ಸರಕಾರದ ಕ್ರಮವನ್ನು ಖಂಡಿಸಿದರು. ಅಷ್ಟಾದರೂ ಲಡಾಖಿಗಳಿಗೆ ಗಾಂಧಿಮಾರ್ಗದಲ್ಲಿಯೇ ನಡೆಯುವಂತೆ ವಿನಂತಿಸಿಕೊಂಡರು.

ಲಡಾಖ್‌ನ ಪರಿಸ್ಥಿತಿ ಈ ಮಟ್ಟಕ್ಕೆ ಬಿಗಡಾಯಿಸಲು ಮೋದಿ ಮತ್ತವರ ಬಿಜೆಪಿ ಸರಕಾರದ ಕೆಟ್ಟ ನಿರ್ಧಾರವೇ ಹೊರತು ಬೇರೇನೂ ಅಲ್ಲ. ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್ 370ನ್ನು ತೆರವುಗೊಳಿಸಿದಾಗ, ʼಮೋದಿ ಮಾತ್ರ ಮಾಡಬಹುದಾದ ಕೆಲಸʼ ಎಂದು ಸುದ್ದಿ ಮಾಧ್ಯಮಗಳು ಹಾಡಿ ಹೊಗಳಿದವು. ಮೋದಿ ಮತ್ತು ಮಾಧ್ಯಮಗಳನ್ನು ನಂಬುವ ದೇಶದ ಜನ, ʼಯಾರೂ ಮಾಡದಿದ್ದುದನ್ನು ಮೋದಿ ಮಾಡಿದ್ದಾರೆʼ ಎಂದು ಮೆಚ್ಚಿ ಮಾತನಾಡಿದರು.

ಆದರೆ, ಜಮ್ಮು ಮತ್ತು ಕಾಶ್ಮೀರಗಳು ರಾಜ್ಯದ ಸ್ಥಾನಮಾನ ಕಳೆದುಕೊಂಡಾಗ ಅವುಗಳ ಭಾಗವಾಗಿದ್ದ ಲಡಾಖ್ ಅನ್ನು ಪ್ರತ್ಯೇಕ ರಾಜ್ಯವಾಗಿಸುವುದರ ಬದಲು ಕೇಂದ್ರಾಡಳಿತ ಪ್ರದೇಶವೆಂದು ಸಾರಿದ ಕೇಂದ್ರ ಸರ್ಕಾರ, ಅಲ್ಲಿನ ಶಾಸಕಾಂಗ ವ್ಯವಸ್ಥೆಯನ್ನೇ ರದ್ದುಗೊಳಿಸಿತು. ಲಡಾಖ್ ರಾಜ್ಯದ ಮನ್ನಣೆ ಕಳೆದುಕೊಳ್ಳುತ್ತಿದ್ದಂತೆ ತನ್ನ ಭವಿಷ್ಯವನ್ನು ತನ್ನಿಷ್ಟದ ಪ್ರಕಾರ ರೂಪಿಸಿಕೊಳ್ಳುವ ಅವಕಾಶ ಮತ್ತು ಹಕ್ಕನ್ನು ಕಳೆದುಕೊಂಡಿತು. ಈಗ ಇದು ಅತ್ಯಂತ ಕೆಟ್ಟ ಕ್ರಮ ಎನ್ನುವುದು ಲಡಾಖ್ ಜನರ ಅರಿವಿಗೆ ಬಂದಿದೆ. ಮತ್ತೆ ತಮ್ಮ ನಾಡಿಗೆ ರಾಜ್ಯದ ಸ್ಥಾನಮಾನ ಕೇಳುತ್ತಿದ್ದಾರೆ. ಬರೀ ಕೇಳುತ್ತಿಲ್ಲ, ಜನಚಳವಳಿಯನ್ನೇ ಹುಟ್ಟುಹಾಕಿದ್ದಾರೆ.

ಆರ್ಟಿಕಲ್‌ 370 ತೆರವುಗೊಳಿಸಿದ ಮೋದಿಯವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಯಾರು ಬೇಕಾದರೂ ಭೂಮಿ ಖರೀದಿಸಬಹುದು ಎಂದು ಘೋಷಿಸಿದರು. ಆದರೆ ಅದರಿಂದ ಲಾಭವಾಗಿದ್ದು ಸ್ಥಳೀಯರಿಗಲ್ಲ, ದೇಶದ ಜನರಿಗಲ್ಲ, ಮೋದಿಯ ಆಪ್ತ ಕಾರ್ಪೊರೇಟ್‌ ಕುಳಗಳಿಗೆ. ಅವರಿಗೆ ಬೇಕಾದಂತೆ ಕಾನೂನಿನಲ್ಲಿ ತಿದ್ದುಪಡಿಗಳನ್ನು ತಂದ ಮೋದಿ ಸರಕಾರ, 40 ಸಾವಿರ ಎಕರೆ ಭೂಮಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗಾಗಿ ಎಸ್‌ಸಿಸಿಐ ಕಂಪನಿಗೆ ಗುತ್ತಿಗೆ ನೀಡಿದೆ.

ಲಡಾಖಿನ ಬೆಟ್ಟಗುಡ್ಡಗಳಲ್ಲಿ ಅಪರೂಪದ ಖನಿಜ ನಿಕ್ಷೇಪವಿದೆ ಎಂದು ಗೊತ್ತಾಗಿದೆ, ಅದಕ್ಕೂ ಪರವಾನಗಿ ಕೊಟ್ಟರೆ, ಕಾರ್ಪೊರೇಟ್ ಉದ್ಯಮಿಗಳ ಓಡಾಟ ಶುರುವಾದರೆ, ಭಾರತದ ನೆತ್ತಿಗೆ ಪೆಟ್ಟು ಬೀಳಲಿದೆ. ಈಗಲೇ ಪರಿಸರ ಸಮತೋಲನ ಕಳೆದುಕೊಂಡು ಹವಾಮಾನ ಬದಲಾವಣೆಗೆ ಕಾರಣವಾಗಿ ಲಡಾಖಿನಲ್ಲಿ ಕುಡಿಯುವ ನೀರಿಗೆ ಬರ ಬಂದಿದೆ. ಸ್ಥಳೀಯರಿಗೆ ಉದ್ಯೋಗ ಸಿಗದೆ, ಬದುಕು ದುಸ್ತರವಾಗಿದೆ. ಲಡಾಖಿಗಳ ಅಸ್ಮಿತೆಯೇ ಅಳಿಸಿಹೋಗುತ್ತಿದೆ.

ಲಡಾಖ್‌ನ 4 ಸಾವಿರ ಚದರ ಕಿ.ಮೀ. ಪ್ರದೇಶವನ್ನು ಚೀನಾ ಅತಿಕ್ರಮಿಸಿಕೊಂಡಿದ್ದರೂ, ಅರುಣಾಚಲಪ್ರದೇಶದಲ್ಲಿ ಒಂದು ಹಳ್ಳಿಯನ್ನೇ ಚೀನಾ ನಿರ್ಮಿಸಿದ್ದರೂ ಪ್ರಶ್ನಿಸುವ ಧೈರ್ಯ ಮಾಡದ ಮೋದಿ – ದೇಶಪ್ರೇಮಿಯೇ?

ಮೋದಿ ಮೂಗಿನಡಿಯಲ್ಲಿಯೇ ಗುಜರಾತ್‌ ಹತ್ತಿ ಉರಿಯಿತು, ಮಣಿಪುರ ಉರಿದು ಬೂದಿಯಾಯಿತು. ಈಗ ಲಡಾಖ್‌ ಲಾವಾರಸದಂತೆ ಕುದಿಯುತ್ತಿದೆ. ಗುಜರಾತ್‌, ಮಣಿಪುರ, ಲಡಾಖ್‌ಗಳಿಗೆ ಆದದ್ದು, ನಮಗಾಗುವುದಿಲ್ಲವೇ?

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಬಿಜೆಪಿ ಹಿಂದೂಗಳ ಅಧಿಕೃತ ಪಕ್ಷವೇನೂ ಅಲ್ಲ; ಬದರಿನಾಥದಲ್ಲೂ ಗೆಲ್ಲಲಿಲ್ಲ

ಅಂದು ಅಯೋಧ್ಯೆ, ಇಂದು ಬದರಿನಾಥ- ಎರಡೂ ಕ್ಷೇತಗಳಲ್ಲಿ ಬಿಜೆಪಿಗೆ ಜನ ತಕ್ಕ...

ಈ ದಿನ ಸಂಪಾದಕೀಯ | ಈ ಬಾರಿಯ ಅಧಿವೇಶನದಲ್ಲಾದರೂ ಜನಪರ ಚರ್ಚೆ-ವಾಗ್ವಾದ ನಡೆಯಬಹುದೇ?

ಆಡಳಿತ ಪಕ್ಷ ಮತ್ತು ವಿಪಕ್ಷ- ಯಾರೇ ಆದರೂ, ಪ್ರಜಾಸತ್ತಾತ್ಮಕವಾದ ಅತ್ಯುನ್ನತ ಮಟ್ಟದ...

ಈ ದಿನ ಸಂಪಾದಕೀಯ | ಹೆಣ್ಣುಮಕ್ಕಳ ಸಾಮೂಹಿಕ ಅತ್ಯಾಚಾರ; ಕುರುಡಾಯಿತೇ ಸಮಾಜ?

ಈ ಸಮಾಜ ಹೆಣ್ಣುಮಕ್ಕಳ ಬಗ್ಗೆ ಸಂವೇದನಾಶೂನ್ಯವಾಗಿದೆ. ಗಂಡು ಮಕ್ಕಳ ನಡವಳಿಕೆಗಳು ಬದಲಾಗುವ...

ಈ ದಿನ ಸಂಪಾದಕೀಯ | ರಾಮನಗರ ಜಿಲ್ಲೆ ಹೆಸರು ಬದಲಾವಣೆ ಯಾರಿಗಾಗಿ, ಏತಕ್ಕಾಗಿ?

ಮೂವತ್ತು ನಲವತ್ತು ವರ್ಷಗಳಿಂದ ರಾಜಕಾರಣದಲ್ಲಿ ಉನ್ನತ ಹುದ್ದೆ ಅಲಂಕರಿಸಿದವರು ಈಗ ಎದುರಾಗಿರುವ...