ಲೋಕಸಭಾ ಚುನಾವಣೆಯಲ್ಲಿ ಮೇ.25 ಹಾಗೂ ಜೂನ್ 1ರ ಕೊನೆಯ ಎರಡು ಹಂತದ ಮತದಾನ ಬಾಕಿಯುಳಿದಿದ್ದು, ಈ ಹಿನ್ನೆಲೆಯಲ್ಲಿ ರೈತ ನಾಯಕ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾದ(ಎಸ್‌ಕೆಎಂ) ಅಂಗಸಂಸ್ಥೆ ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಅವರು ಬಿಜೆಪಿ ಸೋಲಿಸುವ ಅಭ್ಯರ್ಥಿಗಳಿಗೆ ಮತ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮದ ಮೂಲಕ ಸಂದೇಶ ನೀಡಿರುವ ಟಿಕಾಯತ್ತ್, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸುತ್ತಿಲ್ಲ ಬದಲಿಗೆ ದೇಶವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿರುವ ಬಂಡವಾಳಶಾಹಿಗಳ ಗುಂಪು ಚುನಾವಣೆಯಲ್ಲಿ ಸ್ಪರ್ಧಿಸಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಎರಡು ಹಂತಗಳ ಮತದಾನ ಬಾಕಿಯುಳಿದಿದೆ. ಎಸ್‌ಕೆಎಂ ಸ್ಪಷ್ಟವಾಗಿ ಹೇಳುತ್ತದೆ ಬಿಜೆಪಿ ಸೋಲಿಸುವ ಅಭ್ಯರ್ಥಿಗಳಿಗೆ ಮತ ನೀಡಿ. ಇದು ಬಿಜೆಪಿ ಸರ್ಕಾರವಲ್ಲ, ಇದೊಂದು ಬಂಡವಾಳಶಾಹಿ ಗುಂಪಿನ ಸರ್ಕಾರ. ಈ ಗುಂಪು ದೇಶವನ್ನು ಹಿಡಿದಿಟ್ಟುಕೊಂಡಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಿದೆ. ಯಾರೊಬ್ಬರು ಅವರಿಗೆ ಬೆಂಬಲಿಸಬೇಡಿ” ಎಂದು ಟಿಕಾಯತ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬರವೇ ಬರಲಿ, ನೆರೆಯೇ ಇರಲಿ, ಭರವಸೆಗಳಿಗೆ ಬರವಿಲ್ಲ
“ಈ ಚುನಾವಣೆಯು ನೇರವಾಗಿ ಭಾರತದ ಸಾರ್ವಜನಿಕರು ಹಾಗೂ ಒಂದು ಗುಂಪಿನ ನಡುವೆ ನಡೆಯುತ್ತಿದೆ. ಸಾರ್ವಜನಿಕರು ಈ ಚುನಾವಣೆಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಇಲ್ಲಿ ಆತಂಕಪಡುವ ಅಗತ್ಯವಿಲ್ಲ. ನಿಮ್ಮ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸುವ ಅಭ್ಯರ್ಥಿಗೆ ಮತ ನೀಡಿ” ಎಂದು ಟಿಕಾಯತ್ ತಿಳಿಸಿದ್ದಾರೆ.
“ನಮಗೆ ನಿರ್ದಿಷ್ಟವಾಗಿ ಯಾರ ವಿರುದ್ಧವೂ ವೈಯುಕ್ತಿತ ಸಮಸ್ಯೆಗಳಿಲ್ಲ. ಎಸ್‌ಕೆಎಂ ಇದನ್ನೇ ಹೇಳುತ್ತಿದೆ. ಹರಿಯಾಣ, ದೆಹಲಿ, ಪಂಜಾಬ್, ಉತ್ತರ ಪ್ರದೇಶ ಅಥವಾ ದೇಶದ ಇತರ ಭಾಗ ಯಾವುದೇ ಇರಲಿ ಎಸ್‌ಕೆಎಂ ಬಿಜೆಪಿ ಸೋಲಿಸುವ ಅಭ್ಯರ್ಥಿಗೆ ಮತ ನೀಡಿ ಎಂದು ಸಂದೇಶಗಳನ್ನು ನೀಡುತ್ತದೆ” ಎಂದು ರಾಕೇಶ್ ಟಿಕಾಯತ್ ಹೇಳಿದರು.
“ಎಸ್‌ಕೆಎಂ ಒಂದು ರಾಜಕೀಯೇತರ ಪಕ್ಷವಾಗಿದ್ದು, ಚುನಾವಣೆಗಳಿಂದ ದೂರವುಳಿದಿದೆ. ನೀವು ನೋಟಾಗೆ ಮತ ನೀಡಿದರೆ ನೇರವಾಗಿ ಸರ್ಕಾರಕ್ಕೆ ಸಹಾಯ ಮಾಡಿದಂತೆ. ಯಾವುದೇ ಕಾರಣಕ್ಕೂ ನೋಟಾಗೆ ಮತ ನೀಡಬೇಡಿ. ಇದು ಜನರ ಚುನಾವಣೆ. ಜನರು ಚುನಾವಣೆಯ ಮೂಲಕ ಹೋರಾಟ ನಡೆಸುತ್ತಿದ್ದಾರೆ. ಫಲಿತಾಂಶ ಏನೇ ಬರಬಹುದು, ನಾವು ಹೋರಾಟಕ್ಕೆ ಸಿದ್ಧರಾಗಿರಬೇಕು. ಜನರು ಶಾಂತವಾಗಿದ್ದಾರೆ ಎಂದರೆ ಅವರ ಕೋಪ ತಣಿದಿದೆ ಎಂದಲ್ಲ. ಸಮಾಧಾನದಿಂದಿರಿ. ಭರವಸೆ ಇಟ್ಟುಕೊಳ್ಳಿ. ಜನರು ಗೆಲುವು ಸಾಧಿಸಲಿದ್ದಾರೆ” ಎಂದು ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
