ಹರಿಯಾಣ ಗಲಭೆ ಕುರಿತಂತೆ ಮಾಡಿದ ಪೋಸ್ಟ್ ನಂತರ ನಟ ಗೋವಿಂದ ತಮ್ಮ ಟ್ವಿಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ ಎನ್ನಲಾಗಿದೆ.
ಗುರುವಾರ ಇನ್‌ಸ್ಟಾಗ್ರಾಂ ಪೋಸ್ಟ್ ಒಂದನ್ನು ಮಾಡಿದ ಗೋವಿಂದ ತಮ್ಮ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು ಎಂದಿದ್ದಾರೆ. ತಾನು ಯಾವುದೇ ಟ್ವೀಟ್ ಮಾಡಿಲ್ಲ, ತನ್ನ ತಂಡವೂ ಟ್ವೀಟ್ ಮಾಡಿಲ್ಲ ಎಂದು ಇನ್‌ಸ್ಟಾಗ್ರಾಂ ವಿಡಿಯೋ ಮೂಲಕ ನಟ ಹೇಳಿದ್ದಾರೆ. ಸೈಬರ್ ಕ್ರೈಂ ಘಟಕಕ್ಕೆ ದೂರು ಸಲ್ಲಿಸುವುದಾಗಿಯೂ ಅವರು ತಿಳಿಸಿದ್ದಾರೆ.
ಬುಧವಾರ(ಆಗಸ್ಟ್ 2) @ಗೋವಿಂದಅಹುಜಾ21 ಎಂಬ ಖಾತೆಯಿಂದ ಗುರುಗ್ರಾಮ ಹಿಂಸಾಚಾರ ಕುರಿತು ಟ್ವೀಟ್ ಒಂದನ್ನು ಮಾಡಲಾಗಿತ್ತು. ಆದರೆ ತಾನು ಆ ಖಾತೆಯನ್ನು ಬಹಳ ಸಮಯದಿಂದ ಬಳಸಿಲ್ಲ ಎಂದು ಗೋವಿಂದ ಹೇಳಿದ್ದಾರಲ್ಲದೆ ಚುನಾವಣೆ ಸಮಯ ಹತ್ತಿರ ಬರುತ್ತಿರುವುದರಿಂದ ನಾನು ಒಂದು ಪಕ್ಷದ ಪರ ಕಣಕ್ಕಿಳಿಯಬಹುದೆಂದು ಕೆಲ ಜನರು ಅಂದುಕೊಂಡು ಈ ಟ್ವೀಟ್ ಮಾಡಿರಬಹುದು. ಆದರೆ ನಾನು ಟ್ವೀಟ್ ಮಾಡಿಲ್ಲ, ಇಂತಹ ವಿಷಯಗಳ ಬಗ್ಗೆ ಮಾತನಾಡುವುದೂ ಇಲ್ಲ,” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ ಜೀನ್ಸ್ ಘಟಕಗಳಿಗೆ ಸೌಲಭ್ಯ ಕಲ್ಪಿಸಿ: ರಾಜ್ಯ ಸರ್ಕಾರಕ್ಕೆ ರಾಹುಲ್ ಪತ್ರ
ಗುರುಗ್ರಾಮದಲ್ಲಿ ಮುಸ್ಲಿಮರ ಅಂಗಡಿಗಳ ಮೇಲಿನ ದಾಳಿ ಸಂಬಂಧಿತ ವಿಡಿಯೋವೊಂದಕ್ಕೆ ಉತ್ತರಿಸಿದ್ದ ಗೋವಿಂದ ಹೆಸರಿನ ಟ್ವಿಟರ್ ಖಾತೆಯು “ನಾವೆಷ್ಟು ಕೆಳಮಟ್ಟಕ್ಕೆ ಇಳಿದಿದ್ದೇವೆ. ತಮ್ಮನ್ನು ಹಿಂದುಗಳೆಂದು ಹೇಳಿಕೊಂಡು ನಂತರ ಇಂತಹ ಕೃತ್ಯಗಳನ್ನು ನಡೆಸುವವರಿಗೆ ನಾಚಿಕೆಯಾಗಬೇಕು. ಶಾಂತಿ ಕಾಪಾಡಿ, ನಮ್ಮದು ಡೆಮಾಕ್ರೆಸಿ, ಅಟಾಕ್ರೆಸಿ ಅಲ್ಲ,” ಎಂದು ಟ್ವೀಟ್ ಮಾಡಿದ್ದರು.