ಧರ್ಮಸ್ಥಳ | ಸೌಜನ್ಯ ಕುಟುಂಬ, ಹೋರಾಟಗಾರರ ವಿರುದ್ಧ ಅಪಪ್ರಚಾರಕ್ಕಿಳಿದ ಭಕ್ತಪಡೆ

Date:

ಸೌಜನ್ಯ ಕುಟುಂಬದ ಪರವಾಗಿ ದಶಕದಿಂದ ಹೋರಾಟ ಮಾಡುತ್ತಲೇ ಬಂದಿರುವ ಸೋದರ ಮಾವ ವಿಠಲ ಗೌಡ ಮತ್ತು ಮಹೇಶ್‌ ಶೆಟ್ಟಿ ತಿಮರೋಡಿ ಅವರೇ ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸುತ್ತಿದ್ದಾರೆ. ಈ ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಬೇಕು ಎಂಬ ಉದ್ದೇಶದಿಂದ ಸಂಘಟಿತ ಹೋರಾಟ ನಡೆಸುತ್ತಿರುವ ಮೈಸೂರಿನ ʼಒಡನಾಡಿʼ ಸಂಸ್ಥೆಯ ಬಗ್ಗೆಯೂ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ 

ಹನ್ನೊಂದು ವರ್ಷಗಳ ಹಿಂದೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪಿಯು ವಿದ್ಯಾರ್ಥಿನಿ, ಪಾಂಗಳದ ಸೌಜನ್ಯಳ ಅತ್ಯಾಚಾರ/ಕೊಲೆ ಪ್ರಕರಣದಲ್ಲಿ ಅಮಾಯಕ ಸಂತೋಷ್‌ ರಾವ್‌ ನನ್ನು ಬಂಧಿಸಿ, ಸಿಐಡಿ ಮತ್ತು ಸಿಬಿಐ ಹನ್ನೊಂದು ವರ್ಷಗಳ ಕಾಲ ತನಿಖೆ ನಡೆಸಿ ಜೂನ್‌ 16ರಂದು ಆತನನ್ನು ನಿರ್ದೋಷಿ ಎಂದು ಖುಲಾಸೆಗೊಳಿಸಿದೆ. ಆನಂತರ ರಾಜ್ಯದಾದ್ಯಂತ ಸೌಜನ್ಯಳ ಕೊಲೆ ಆರೋಪಿಗಳ ಪತ್ತೆಗೆ ಮರುತನಿಖೆ ನಡೆಸಬೇಕು ಎಂಬ ಕೂಗು ಎದ್ದಿದೆ. ಸೌಜನ್ಯ ಕುಟುಂಬದವರು ಮತ್ತು ಸಾಮಾಜಿಕ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಅವರ ಬೆಂಬಲಕ್ಕೆ ನಿಂತ ಮೈಸೂರಿನ ಒಡನಾಡಿ ಮತ್ತು ಪ್ರಗತಿಪರ ಸಂಘಟನೆಗಳು ಸರ್ಕಾರದ ಮೇಲೆ ಮರುತನಿಖೆಗೆ ಒತ್ತಡ ಹೇರುವ ಸಲುವಾಗಿ ಅಲ್ಲಲ್ಲಿ ಪ್ರತಿಭಟನೆ ಮಾಡುತ್ತಿವೆ. ಈ ನಡುವೆ ಮಹೇಶ್‌ ಶೆಟ್ಟಿ ತಿಮರೋಡಿ, ವಿಠಲ ಗೌಡ, ಸೌಜನ್ಯ ಕುಟುಂಬ ಸಹಿತ ಹಲವು ಹೋರಾಟಗಾರರಿಗೆ ಧರ್ಮಸ್ಥಳದ ಹೆಸರೆತ್ತದಂತೆ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುಟುಂಬ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದೆ. ಹೆಗ್ಗಡೆ ಕುಟುಂಬದ ಬಗ್ಗೆ ಮಾನಹಾನಿ ಬರಹ ಪ್ರಕಟಿಸದಂತೆ ಪತ್ರಿಕೆ, ಟಿವಿ ಮಾಧ್ಯಮಗಳು, ಯುಟ್ಯೂಬ್‌ಗಳಿಗೆ ಕೋರ್ಟ್‌ ನಿಷೇಧ ಹೇರಿದೆ.

ಅಸಲಿ ಕತೆ ಆ ನಂತರ ಶುರುವಾಗಿದೆ. ಹೆಗ್ಗಡೆಯವರು ದೇವಸ್ಥಾನದ ಸಿಬ್ಬಂದಿಗಳ ಸಭೆ ನಡೆಸಿ, “ನಮ್ಮ ಭಕ್ತರು ಏನು ಬೇಕಾದರೂ ಮಾಡಲು ರೆಡಿ ಇದ್ದಾರೆ. ಆದರೆ ನಾನೇ ಬೇಡ ಎಂದಿದ್ದೇನೆ” ಎಂದು ಹೇಳಿರುವ ವಿಡಿಯೋ ವೈರಲ್‌ ಆಗಿತ್ತು. ಈ ನಡುವೆ ಅಲ್ಲಿಯವರೆಗೂ ಸೌಜನ್ಯ ಕುಟುಂಬವನ್ನು ಭೇಟಿಯಾಗದ, ಆ ವಿಚಾರದಲ್ಲಿ ಒಮ್ಮೆಯೂ ಮಾತನಾಡದ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ದಿಢೀರ್‌ ಆಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸೌಜನ್ಯ ಪ್ರಕರಣದ ಮರುತನಿಖೆ ನಡೆಸಬೇಕು ಎಂದು ಮನವಿ ಸಲ್ಲಿಸಿದರು. ಅವರದ್ದು ಪ್ರಾಮಾಣಿಕ ಮತ್ತು ಕಾಳಜಿಯ ನಡೆಯಾಗಿದ್ದರೆ ಅವರು ಸಿಎಂ ಅವರನ್ನು ಭೇಟಿಯಾಗುವ ಮುನ್ನ ಸೌಜನ್ಯ ಹೆತ್ತವರ ಗಮನಕ್ಕೆ ತರಬಹುದಿತ್ತು. ಆದರೆ ಅವರು ಹಾಗೆ ಮಾಡದಿರುವುದು ಅನುಮಾನಕ್ಕೆ ಕಾರಣವಾಗಿತ್ತು.

ಇದಾದ ನಂತರ ಸೌಜನ್ಯ ಕುಟುಂಬದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದು ಭೇಟಿ ಮಾಡಿ ಸಿಬಿಐ ವರದಿಯ ಪ್ರತಿಯನ್ನೂ ನೀಡಿ ಮರುತನಿಖೆಗೆ ಒತ್ತಾಯಿಸಿ ಪತ್ರ ಸಲ್ಲಿಸಿದ್ದರು. ಅದಾಗಿ ಎರಡು ದಿನದಲ್ಲಿ ಬೆಂಗಳೂರಿನಲ್ಲಿ ಹಲವು ಸಮಾನ ಮನಸ್ಕ ಸಂಘಟನೆಗಳು ಸೇರಿ ಧರಣಿ ನಡೆಸಿ ಪ್ರಮುಖ ಮಹಿಳಾಪರ ಹೋರಾಟಗಾರರು, ಚಿಂತಕರ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿ ಮರು ತನಿಖೆಗೆ ಒತ್ತಾಯಿಸಿದ್ದರು. ಸಿಬಿಐ ವರದಿಯ ಅಧ್ಯಯನ ನಡೆಸಿ ಕಾನೂನು ವ್ಯಾಪ್ತಿಯಲ್ಲಿ ಮರುತನಿಖೆಗೆ ನೀಡುವ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ತಿಳಿಸಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸೌಜನ್ಯ ಕುಟುಂಬದ ಅವಹೇಳನ

ಇಷ್ಟೆಲ್ಲಾ ಆದ ನಂತರ ಧರ್ಮಸ್ಥಳದ ಭಕ್ತರು, ಹೆಗ್ಗಡೆಯವರ ಅಭಿಮಾನಿಗಳು ಹೋರಾಟಗಾರರನ್ನೇ ಅವಮಾನಿಸುವ ಕೆಲಸ ಶುರು ಮಾಡಿದ್ದಾರೆ. ಫೇಸ್‌ಬುಕ್‌ನಲ್ಲಿ ನಕಲಿ ಐಡಿಗಳನ್ನು ಕ್ರಿಯೇಟ್‌ ಮಾಡಿ ಸೌಜನ್ಯ ಕುಟುಂಬ ಮತ್ತು ತಿಮರೋಡಿ ಅವರನ್ನು ಧಂದೆಕೋರರು, ಸೌಜನ್ಯ ಹೆಸರಲ್ಲಿ ಹಣ ಮಾಡುತ್ತಿದ್ದಾರೆ ಎಂದು ಬರೆಯುವುದಕ್ಕೆ ಶುರು ಮಾಡಿದ್ದಾರೆ. ಅಷ್ಟೇ ಅಲ್ಲ ಸಾಕಷ್ಟು ಅಡಿಕೆ ತೋಟ ಇರುವ ಶ್ರಮ ಜೀವಿಗಳಾಗಿರುವ ಸೌಜನ್ಯ ಕುಟುಂಬದವರು ಇತ್ತೀಚೆಗೆ ಕಟ್ಟಿರುವ ಹೊಸ ಮನೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ “ಇದು ಸೌಜನ್ಯ ಕೊಲೆ ಪ್ರಕರಣದ ಹೋರಾಟದ ಹೆಸರಿನಲ್ಲಿ ಹನ್ನೊಂದು ವರ್ಷಗಳಿಂದ ಹಣ ಲೂಟಿ ಮಾಡಿ ಕಟ್ಟಿದ ಮನೆ” ಎಂಬಂತೆ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಿ ಆ ಕುಟುಂಬವನ್ನು ಇನ್ನಷ್ಟು ನೋವಿಗೆ ದೂಡುತ್ತಿದ್ದಾರೆ.

ಕೆಲವು ಯೂಟ್ಯೂಬರ್‌ಗಳು ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ಹೆಗ್ಗಡೆಯವರ ಕುಟುಂಬದ ಕೈವಾಡ ಇಲ್ಲ ಎಂಬುದಕ್ಕೆ ತಮ್ಮದೇ ವಾದ ಸರಣಿ ಮಂಡಿಸುತ್ತಿದ್ದಾರೆ. ಕೆಲವರು ಈಗಲೂ “ಸಂತೋಷ್‌ ರಾವ್‌ನೇ ನಿಜವಾದ ಕೊಲೆಗಾರ. ಆದರೆ, ಆತನ ಅಪರಾಧವನ್ನು ಸಾಬೀತುಪಡಿಸುವಲ್ಲಿ ಸಾಕ್ಷ್ಯಗಳನ್ನು ಸಲ್ಲಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ” ಎಂಬ ಒಂದು ಸಾಲಿನ ಮೇಲೆ ವಾದ ಮಾಡುತ್ತಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಅನುಮಾನ ಇರುವ ವ್ಯಕ್ತಿಗಳೇ ಸಂತೋಷ್‌ ರಾವ್‌ನನ್ನು ಹಿಡಿದು ಪೊಲೀಸರಿಗೆ ಕೊಡುವ ದರ್ದು ಏನಿತ್ತು ಎಂಬ ನಿಟ್ಟಿನಲ್ಲಿ ವಾದ ಮಂಡಿಸುತ್ತಿಲ್ಲ.

ಅಂಧಭಕ್ತಿಯ ಮುಂದುವರಿದ ಭಾಗವಾಗಿ ಕೆಲವರು ಸೌಜನ್ಯ ಪ್ರಕರಣದ ತನಿಖಾ ವರದಿ ಮಾಡಿದ ವರದಿಗಾರರು, ಮಾಧ್ಯಮಗಳ ಮೇಲೆ ಕೀಳುಮಟ್ಟದ ಟೀಕೆಗಳನ್ನು ಮಾಡಿ ಟ್ರೋಲ್‌ ಮಾಡುತ್ತಿದ್ದಾರೆ.

ಸೌಜನ್ಯ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಒಕ್ಕಲಿಗ ಸಂಘದಿಂದ ನಡೆದ ಪ್ರತಿಭಟನೆ

ವಿಠಲ ಗೌಡ, ಮಹೇಶ್‌ ಶೆಟ್ಟಿ ತಿಮರೋಡಿಯವರ ಮೇಲೇ ಆರೋಪ !

ಸೌಜನ್ಯ ಕುಟುಂಬದ ಪರವಾಗಿ ದಶಕದಿಂದ ಹೋರಾಟಕ್ಕೆಂದು ಲಕ್ಷಾಂತರ ಹಣ ಖರ್ಚು ಮಾಡಿರುವ ಸೋದರ ಮಾವ ವಿಠಲ ಮತ್ತು ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಅವರೇ ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ವಿಠಲ ಅವರೇ ಸೊಸೆ ಸೌಜನ್ಯಳ ಬಗ್ಗೆ ಸಂತೋಷ್‌ ರಾವ್‌ಗೆ ಮಾಹಿತಿ ಕೊಟ್ಟು ಕೊಲೆ ಮಾಡಿಸಿದ್ದಾರೆ ಎಂಬ ತಲೆಬುಡವಿಲ್ಲದ ಆರೋಪ ಮಾಡುತ್ತಿದ್ದಾರೆ. ಈ ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಬೇಕು ಎಂಬ ಉದ್ದೇಶದಿಂದ ಸಂಘಟಿತ ಹೋರಾಟ ನಡೆಸುತ್ತಿರುವ ಮೈಸೂರಿನ ʼಒಡನಾಡಿʼ ಸಂಸ್ಥೆಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇಷ್ಟು ನೀಚ ಮಟ್ಟಕ್ಕೆ ಇಳಿದ ಭಕ್ತ ಸಮೂಹದ ನಡೆಯೇ ಪ್ರಬಲ ವ್ಯಕ್ತಿಗಳ ಬಗ್ಗೆ ಇದ್ದ ಅನುಮಾನವನ್ನು ಇನ್ನಷ್ಟು ಹೆಚ್ಚಿಸಲು ಕಾರಣವಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಸಂಘ ಪರಿವಾರದ ಹುಡುಗರಿಂದ ನಿರಂತರವಾಗಿ ನಡೆಯುತ್ತಿರುವ ಅನೈತಿಕ ಪೊಲೀಸ್‌ಗಿರಿ, ದಲಿತರ ಮೇಲಿನ ಹಲ್ಲೆ, ಅತ್ಯಾಚಾರ, ಹೆಣ್ಣುಮಕ್ಕಳ ಅಶ್ಲೀಲ ವಿಡಿಯೋ ವೈರಲ್‌ ಮುಂತಾದ ಸಾಲು ಸಾಲು ಸಮಾಜಘಾತಕ ಚಟುವಟಿಕೆಗಳ ಬಗ್ಗೆ ಮಾತನಾಡದ ಜೈನ ಮುನಿಗಳು, ವಿಶ್ವ ಹಿಂದೂ ಪರಿಷತ್ತಿನ ಮುಖಂಡರು ಧರ್ಮಸ್ಥಳದ ʼಪಾವಿತ್ರ್ಯʼತೆಯ ರಕ್ಷಣೆಗೆ ಇಳಿದಿದ್ದಾರೆ.

ಧರ್ಮಸ್ಥಳದ ಪರವಾಗಿ ಜಿಲ್ಲೆ, ಜಿಲ್ಲೆಗಳಲ್ಲಿ, ಪತ್ರಿಕಾಗೋಷ್ಠಿ ನಡೆಸಲಾಗುತ್ತಿದೆ. ಇಡೀ ಭಕ್ತ ಸಮೂಹ ಧರ್ಮಸ್ಥಳದ ರಕ್ಷಣೆಗೆ ನಿಂತಿದೆಯೇನೋ ಎಂಬಂಥ ವಾತಾವರಣ ಸೃಷ್ಟಿ ಮಾಡಲಾಗಿದೆ. ಈ ಮಧ್ಯೆ ಧರ್ಮಸ್ಥಳದ ಪರ ಹೋರಾಟಕ್ಕೆಂದು ಹೊಸದಾಗಿ ಅಖಿಲ ಭಾರತ ಧರ್ಮಸ್ಥಳ ಭಕ್ತ ಅಭಿಮಾನಿಗಳ ಸಂಘ ಹುಟ್ಟು ಹಾಕಿ ಆಗಸ್ಟ್‌ 4ರಂದು ಉಜಿರೆಯಲ್ಲಿ ಬೃಹತ್‌ ಪ್ರತಿಭಟನಾ ಸಭೆ ಆಯೋಜಿಸಿದ್ದಾರೆ. ಧರ್ಮಸ್ಥಳದ ಸ್ವಸಹಾಯ ಸಂಘದ ಮಹಿಳೆಯರನ್ನು ಈ ಸಭೆಗೆ ಕಡ್ಡಾಯವಾಗಿ ಹಾಜರಾಗಲು ಸೂಚಿಸಿದ್ದಾರೆ ಎಂಬ ಮಾಹಿತಿಯಿದೆ. ಇದು ಸೌಜನ್ಯ ಪರ ಹೋರಾಟಕ್ಕೆ ಠಕ್ಕರ್‌ ಕೊಡುವ ಉದ್ದೇಶದಿಂದ ನಡೆಯುತ್ತಿರುವ ಸಭೆ ಎಂಬ ಚರ್ಚೆ ನಡೆಯುತ್ತಿದೆ.

ಸೌಜನ್ಯ ಪ್ರಕರಣದ ಮರುತನಿಖೆಗೆ ಒತ್ತಾಯಿಸಿ ಶಾಲಾ ಮಕ್ಕಳಿಂದ ಪ್ರತಿಭಟನೆ

ಇತ್ತೀಚೆಗೆ ದಕ್ಷಿಣ ಕನ್ನಡಕ್ಕೆ ಪ್ರವಾಸ ಹೋಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೌಜನ್ಯ ಪ್ರಕರಣವನ್ನು ಮರುತನಿಖೆಗೆ ವಹಿಸುತ್ತೀರಾ ಎಂಬ ವರದಿಗಾರರ ಪ್ರಶ್ನೆಗೆ, “ವಕೀಲನಾಗಿ ನಾನೇ ಆ ಪ್ರಕರಣದ ಅಧ್ಯಯನ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ” ಎಂಬ ಭರವಸೆ ನೀಡಿದ ನಂತರ ಭಕ್ತಪಡೆಯ ಅಬ್ಬರ ಇನ್ನೂ ಹೆಚ್ಛಾಗಿದೆ. ಈ ಮಧ್ಯೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ವೀರೇಂದ್ರ ಹೆಗ್ಗಡೆ, “ಸೌಜನ್ಯ ಪ್ರಕರಣದ ಮರುತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು” ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನೆನಪಾದರು ಪದ್ಮಲತಾ, ವೇದವಲ್ಲಿ, ನಾರಾಯಣ, ಯಮುನಾ…

ಸೌಜನ್ಯಳ ಪ್ರಕರಣ ಹಳ್ಳಹಿಡಿದ ಬೆನ್ನಲ್ಲೇ ಎರಡು ದಶಕಗಳ ಹಿಂದೆ ಕಾಲೇಜು ವಿದ್ಯಾರ್ಥಿನಿ ಪದ್ಮಲತಾಳನ್ನು ಅಪಹರಿಸಿ, ಅತ್ಯಾಚಾರಗೈದು ಕೊಂದ ಪ್ರಕರಣ ಮತ್ತು ಟೀಚರ್‌ ವೇದವಲ್ಲಿಯವರ ಅನುಮಾನಾಸ್ಪದ ಸಾವು ಪ್ರಕರಣದ ಮರುತನಿಖೆಯೂ ನಡೆಯಬೇಕು. ಸೌಜನ್ಯ ಕೊಲೆಯಾಗುವ ಕೆಲ ದಿನಗಳ ಹಿಂದೆ ನಡೆದ ಮಾವುತ ನಾರಾಯಣ ಮತ್ತು ಆತನ ಸೋದರಿ ಯಮುನಾರ ಜೋಡಿಕೊಲೆ ಜೊತೆಗೆ ಬೆಳ್ತಂಗಡಿ ತಾಲ್ಲೂಕಿನಲ್ಲಿ ಒಂದು ದಶಕದಲ್ಲಿ ನಡೆದ 400ಕ್ಕೂ ಹೆಚ್ಚು ಅನುಮಾನಾಸ್ಪದ ಸಾವುಗಳ ಬಗ್ಗೆಯೂ ತನಿಖೆಯಾಗಬೇಕು ಎಂಬ ಒತ್ತಾಯ ರಾಜ್ಯದ ಹಲವು ಸಾಮಾಜಿಕ ಹೋರಾಟಗಾರರು ಮಾಡಿದ್ದರು.

ದುನಿಯಾ ವಿಜಯ್‌
ನಟ ದುನಿಯಾ ವಿಜಯ್

ಹೋರಾಟ ಬೆಂಬಲಿಸಿ ಟ್ರೋಲ್‌ಗೆ ಒಳಗಾದ ವಿಜಯ್‌, ಕಿಶೋರ್‌, ಚೇತನ್‌

ಈ ಮಧ್ಯೆ ಇಷ್ಟೆಲ್ಲ ಹೋರಾಟ ನಡೆಯುತ್ತಿದ್ದರೂ ತುಟಿ ಬಿಚ್ಚದ ಸ್ಯಾಂಡಲ್‌ವುಡ್‌ನಲ್ಲಿ ದುನಿಯಾ ವಿಜಯ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಸೌಜನ್ಯಳ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಬರೆದುಕೊಂಡಿದ್ದರು. “ಪ್ರತಿ ವರ್ಷ ಮಂಜುನಾಥನ ದರ್ಶನ ಪಡೆಯೋದು ವಾಡಿಕೆ. ಆದರೆ ಸೌಜನ್ಯಳಿಗೆ ನ್ಯಾಯ ಸಿಗುವವರೆಗೆ ಧರ್ಮಸ್ಥಳಕ್ಕೆ ಕಾಲಿಡಲ್ಲ” ಎಂಬ ಹೇಳಿಕೆ ಸಂಚಲನ ಸೃಷ್ಟಿಸಿತ್ತು. ಆದರೆ, ಅಲ್ಲಿನ ಭಕ್ತಗಣ ವಿಜಯ್‌ ಅವರ ವೈಯಕ್ತಿಕ ವಿಚಾರ ಇಟ್ಟುಕೊಂಡು ಟ್ರೋಲ್‌ಗಿಳಿದಿದ್ದಾರೆ. ಹಾಗೆಯೇ ಜನಪರ ಕಾಳಜಿಯ ಕಿಶೋರ್‌ ಎಲ್ಲಾ ಅನ್ಯಾಯಗಳಿಗೂ ಸ್ಪಂದಿಸುವಂತೆ ಸೌಜನ್ಯ ಪ್ರಕರಣದಲ್ಲೂ ಸ್ಪಂದಿಸಿದ್ದಾರೆ. ಚೇತನ್‌ ಅಹಿಂಸಾ ಕೂಡಾ ಸೌಜನ್ಯಳ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಆಶಿಸಿದ್ದಾರೆ. ಭಕ್ತರು ಅವರವರ ಮಟ್ಟಕ್ಕೆ ಪ್ರತಿಕ್ರಿಯಿಸಿದ್ದಾರೆ.

ತಡೆಯಾಜ್ಞೆ ಇರುವುದು ವೀರೇಂದ್ರ ಹೆಗ್ಗಡೆ ಅವರ ಕುಟುಂಬದ ಬಗ್ಗೆ ಮಾನಹಾನಿಕರವಾಗಿ ಮಾತನಾಡಬಾರದು, ಪ್ರಕಟಿಸಬಾರದು ಎಂದಷ್ಟೇ. ಅದರಿಂದ ಸೌಜನ್ಯ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ನಡೆಯುವ ಹೋರಾಟಕ್ಕೆ ಯಾವುದೇ ಅಡ್ಡಿಯಿಲ್ಲ. ಹುಣಸೂರಿನಲ್ಲಿ ಇಂದು (ಜು.3) ಬೃಹತ್‌ ಪ್ರತಿಭಟನೆ ನಡೆದಿದೆ. ದೊಡ್ಡ ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಕೃಷಿಕ ಮಹಿಳೆಯರು ಭಾಗವಹಿಸಿದ್ದರು. ಸೌಜನ್ಯಳ/ ಅತ್ಯಾಚಾರ ಕೊಲೆ ಮಾಡಿದವರು ಯಾರೆಂದು ಪತ್ತೆ ಹಚ್ಚಿ ಶಿಕ್ಷೆ ಕೊಡಬೇಕು ಎಂಬುದು ಈ ಎಲ್ಲರ ಒತ್ತಾಯ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದರತ್ತ ಎಲ್ಲರ ಚಿತ್ತ ನೆಟ್ಟಿದೆ.

ಹೇಮಾ ವೆಂಕಟ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗವತ್‌ಗೆ ಪ್ರಧಾನಿಗೆ ಸಮನಾದ ಭದ್ರತೆ ಏಕೆ, ಏನಿದರ ಗುಟ್ಟು?

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್‌ಗೆ ಈಗಾಗಲೇ...

ಆರ್‌ಎಸ್‌ಎಸ್‌ – ಬಿಜೆಪಿಯ ಮುಖವಾಡವನ್ನು ಹೊಸ ತಲೆಮಾರಿನ ಓದುಗರಿಗೆ ಪರಿಚಯಿಸಿದ ನೂರಾನಿ

ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಮಾನವ ಹಕ್ಕುಗಳ ಪರವಾಗಿ ಕೊನೆಯವರೆಗೂ ಹೋರಾಟ ಮಾಡುತ್ತಲೆ...

ವೈದ್ಯೆಯ ಮೇಲಿನ ಅತ್ಯಾಚಾರ; ನೆನಪಾದರು ನರ್ಸ್‌ ಅರುಣಾ ಶಾನುಭಾಗ್

ಐವತ್ತು ವರ್ಷಗಳ ಹಿಂದೆ ಮುಂಬೈನ ಆಸ್ಪತ್ರೆಯಲ್ಲಿ ದಾದಿ ಅರುಣಾ ಮೇಲೆ ಅತ್ಯಾಚಾರಗೈದವ...

ತಂಗಳಾನ್‌ ಸಿನಿಮಾ ಮತ್ತು ತಿರುಕುಲದ ಹೊಲೆಯರು

ರಾಮಾನುಜರಿಂದ ಮತಾಂತರಗೊಂಡ ತಿರುಕುಲದ ಹೊಲೆಯರು, ಸ್ಥಳೀಯ ಹೊಲೆಯರೊಂದಿಗೆ ಬೆರೆಯಲಾಗದೇ, ಬ್ರಾಹ್ಮಣರೊಂದಿಗೆ ಹೊಂದಾಣಿಕೆ...