ವಯನಾಡು ಭೂಕುಸಿತ ಮಾನವ ಕುಲಕ್ಕೇ ಎಚ್ಚರಿಕೆಯ ಕರೆಗಂಟೆ. ಪ್ರಕೃತಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವುದರ ಸಂದೇಶ. ಮನುಷ್ಯ ಯಾವುದನ್ನು ಮಾಡಬಾರದೊ ಅಂತಹದನ್ನು ಮಾಡಿದಾಗ ಏನಾಗುತ್ತದೆ ಎನ್ನುವುದರ ಸಾರಾಂಶ.
ಈವರೆಗೆ ಎಲ್ಲ ಮಾಧ್ಯಮಗಳು ಹೇಳುವುದು ಒಂದೇ ಮಾತು, ʼವಯನಾಡು ಭೂಕುಸಿತ ಆಯ್ತು, ಮುಂಡಕೈ ಗ್ರಾಮ ಕೊಚ್ಚಿಕೊಂಡು ಹೋಗಿವೆ ಅಂತ. ಅದರಿಂದಾಚೆಗಿನ ಕಡುಸತ್ಯ ಯಾರೂ ಮಾತಾಡ್ತಾ ಇಲ್ಲ.
ಬರೀ ಭೂ ಕುಸಿತದಿಂದನೇ ಇಷ್ಟೆಲ್ಲಾ ಅನಾಹುತ ಆಯ್ತಾ, ಎಲ್ಲ ಗ್ರಾಮಗಳೂ ಭೂಸಮಾಧಿ ಆಗಿವೆಯಾ ಅಂದರೆ ನಿಜಕ್ಕೂ ಇಲ್ಲ. ಚೂರಲಮಲ ಬೆಟ್ಟ ಕುಸಿದಿದೆ. ನೀರಿನೊಟ್ಟಿಗೆ ಪ್ರವಾಹ ಬಂತು ಇದರಿಂದ ಮುಂಡಕೈ ಗ್ರಾಮ ಜಲಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದೆ. ಆದ್ರೆ ಮುಂದೇನು ಆಗಿದ್ದು!

ಮುಂದೆಸಾಗಲು ಸಾಧ್ಯವೇ ಇರಲಿಲ್ಲ. ಆಗ ತನ್ನ ಸ್ಥಳ ವಿಸ್ತರಣೆ, ನೀರಿನ ಹರಿವು ಹೆಚ್ಚಾದಂತೆ ಪ್ರವಾಹದ ಮಟ್ಟ ಏರುವಾಗ ಇಡೀ ಚೂರಲಮಲ ಒಂದು ಸುತ್ತು ಹಾಕಿ ಎಲ್ಲಿಯೂ ಮುಂದೆಸಾಗಲು ಸಾಧ್ಯವಾಗದೆ ಫುದುಮಲ ಅಡ್ಡವಾಗಿ ತಡೆದಾಗ ಅದರ ಓಟ ಹಿಂದಕ್ಕೆ ಸರಿದು ಅಟ್ಟಮಲ ಗ್ರಾಮದ ಕಡೆಗೆ ನುಗ್ಗಿದೆ. ಅದರ ಪ್ರವಾಹದ ಹೊಡೆತಕ್ಕೆ ಸಿಕ್ಕಾಗ ತನ್ನೆಲ್ಲ ವ್ಯಾಪ್ತಿ ವಿಸ್ತರಿಸಿ, ಗ್ರಾಮದ ಜತೆಗೆ ಫುದುಮಲ ಬೆಟ್ಟವನ್ನು ಕೊಚ್ಚಿಕೊಂಡು ಪದಿನೊನ್ನಾಮ್ ಪಾಲಂ ಕೊಲ್ಲಿ ಮೂಲಕ ಚಲಿಯಾರ್, ಮಲಪ್ಪುರಂ ಕಡೆಗೆ ಹೊಳೆಯಾಗಿ ಹರಿದಿದೆ.

ಚೂರಲಮಲ ಬೆಟ್ಟಗಳಿಂದ ಉರುಳಿದ ಬಂಡೆ, ಜಾರಿದ ಮಣ್ಣು, ಬೃಹತ್ ಮರಗಳ ನಡುವೆ ಹೊತ್ತುತಂದ ನೀರು ಕಂಡ ಕಂಡಲ್ಲಿ ನುಗ್ಗಿದೆ. ಜಾಗ ಮಾಡಿಕೊಳ್ಳಲು ಹವಣಿಸಿದೆ. ಸಿಕ್ಕ ಸಿಕ್ಕ ಮನೆಯನ್ನು ಹೊಡೆದುರುಳಿಸಿ ತನ್ನ ಪಥದ ಅರಿವಿಲ್ಲದೆ ನುಗ್ಗಿದ ನೀರು ಇಡೀ ಮುಂಡಕೈ ಗ್ರಾಮದ ಒಂದು ಸುತ್ತುಬಳಸಿ ರಭಸವಾಗಿ ನುಗ್ಗಿದೆ. ನುಗ್ಗಿದಲ್ಲೆಲ್ಲ ಬೆಟ್ಟಗಳ ಅಡೆತಡೆ ಸರಾಗವಾಗಿ ಸಾಗಲು ಸಾಧ್ಯವಾಗಿಲ್ಲ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಮಧ್ಯ ರಾತ್ರಿ ಒಂದಲ್ಲ ಎರಡಲ್ಲ, ಮೂರು ಬಾರಿ ಪ್ರವಾಹ ಬಂದಿದೆ.

ಬೆಟ್ಟ ಕುಸಿದಂತೆಲ್ಲ ರಾತ್ರಿ ಸಮಯದಲ್ಲಿ ಜಾನುವಾರುಗಳ ಆಕ್ರಂದನ ಕೇಳಿ ಹೊರಬಂದ ಜನ ಜಾನುವಾರುಗಳ ರಕ್ಷಣೆಗೆ ಮುಂದಾಗಿದ್ದಾರೆ. ಆ ಸಮಯದಲ್ಲಿ ಮುಂಡಕೈ ಸೇತುವೆ ಒಡೆದು ನುಗ್ಗಿದ ನೀರು ಎಲ್ಲವನ್ನೂ ತನ್ನೊಂದಿಗೆ ಕೊಚ್ಚಿಕೊಂಡು ಚಾಲಿಯಾರ್ ಕಡೆಗೆ ಧಾವಿಸಿದೆ. ಕೆಲವರು ರಕ್ಷಣೆಗಾಗಿ ಗುಡ್ಡ ಹತ್ತಿ ಕುಳಿತಿದ್ದಾರೆ, ನೀರು ಮತ್ತೆ ಮತ್ತೆ ಪ್ರವಾಹವಾಗಿ ಬಂದಂತೆಲ್ಲಾ ಗುಡ್ಡ ಅಲುಗಿದೆ. ನೀರು ಹೋಗಲಾರದೆ ಅಟ್ಟಮಲ, ಸೂಜಿಪಾರ, ಪುದುಮಲ ಭಾಗದಲ್ಲಿ ಹಿಂದಕ್ಕೆ ಚಲಿಸಿದ ನೀರು ನೂರಾರು ಕುಟುಂಬಗಳನ್ನು ಬಲಿ ಪಡೆದಿದೆ.

ನೀರಿನ ರಭಸಕ್ಕೆ ಸಿಕ್ಕ ಫುದುಮಲೆ ಬೆಟ್ಟ ರಾತ್ರೋ ರಾತ್ರಿ ಕೊಚ್ಚಿ ಹೋಗಿ ಸಂಪೂರ್ಣ ನದಿಯಾಗಿ ಬದಲಾಗಿದೆ. ಜಾನುವಾರಗಳು, ಸಾಕು ಪ್ರಾಣಿಗಳು ನೀರಿನ ಹೊಡೆತಕ್ಕೆ ಹೊರ ಬರಲಾರದೆ ಅಲ್ಲಿಯೇ ಅಸುನೀಗಿವೆ.
ಪ್ರತ್ಯಕ್ಷವಾಗಿ ನೋಡುವಾಗ ಈ ಎಲ್ಲ ಸ್ಥಳಗಳಲ್ಲಿದ್ದ ಮನೆಗಳು ಅಲ್ಲೊಂದು ಇಲ್ಲೊಂದು ಅನ್ನುವಂತೆ ಉಳಿದಿವೆಯೇ ಹೊರತು, ಊರಿಗೆ ಊರೇ ಕೊಚ್ಚಿಕೊಂಡು ಹೋಗಿದೆ. ಮನೆಯಲ್ಲಿ ಇದ್ದವರು ನೀರಿನಲ್ಲಿ ಸಿಕ್ಕವರು ತಮ್ಮವರ ಮುಂದೆಯೇ ಕಣ್ಮರೆಯಾಗಿದ್ದಾರೆ. ಸಹಾಯಕ್ಕೆ ಅಂಗಲಾಚಿದರು.ಏನು ಮಾಡುವ ಪರಿಸ್ಥಿತಿ ಇಲ್ಲ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಗ್ರಾಮಾಂತರ | ಬೆಟ್ಟ- ಗುಡ್ಡಗಳಲ್ಲಿ ಗಿಡ ಮರಗಳನ್ನು ನೆಟ್ಟು ಭೂಕುಸಿತ ತಡೆಗಟ್ಟಿ : ಸಚಿವ ಮುನಿಯಪ್ಪ
ಪುನರ್ವಸತಿ ಕೇಂದ್ರಗಳಲ್ಲಿ ಗಮನಿಸಿದಾಗ ಸುರಕ್ಷಿತರಾಗಿ ಬಂದವರ ಸಂಖ್ಯೆ ಕಡಿಮೆ ಇದೆ, ಗಾಯಾಳುಗಳ ಸಂಖ್ಯೆಯೂ ಕಡಿಮೆ ಇರುವಾಗ ಗ್ರಾಮಗಳ ಮನೆಯಲ್ಲಿದ್ದ ಜನರು ಭೂಕುಸಿತದ ಹೊಡೆತಕ್ಕೆ ಸಿಕ್ಕಿ ಎಲ್ಲೆಂದರಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಭೂಕುಸಿತ, ನೀರಿನ ಪ್ರವಾಹ ಅಷ್ಟೇ ಅಲ್ಲ. ನೀರು ಮುಂದೆ ಚಲಿಸಲಾರದೆ ಹಿಂದಕ್ಕೆ ರಭಸವಾಗಿ ನುಗ್ಗಿದಾಗ ಭಾರೀ ಅನಾಹುತ ಬೇರೆ ಬೇರೆ ಭಾಗಗಳಲ್ಲಿ ಸಂಭವಿಸಿದೆ.
