‘ದೇವರ ನಾಡು ‘ ಪ್ರವಾಸಿಗರ ಸ್ವರ್ಗ ಎನಿಸಿಕೊಳ್ಳುವ ಕೇರಳ ಪ್ರತಿ ವರ್ಷ ಒಂದಲ್ಲಾ ಒಂದು ವಿಪತ್ತನ್ನು ಎದುರಿಸುತ್ತಾ ಬಂದಿದೆ. ಈ ಹಿಂದೆ ನಿಫಾ ವೈರಸ್ ಕಾಡಿತ್ತು. ಆ ಬಳಿಕ ನೆರೆ ಬಂದು ಅಕ್ಷರಶಃ ನಲುಗಿತ್ತು. ಈಗ ವಯನಾಡ್‌ನ ಭೂ ಕುಸಿತ ಇಡೀ ಕೇರಳವನ್ನೇ ಕುಗ್ಗಿಸಿದೆ.
ಆದರೆ ಕೇರಳದ ಕಡೆಗೆ ಮಾನವೀಯತೆಯ ಮನಸ್ಸುಗಳು ಮಿಡಿದಿವೆ. ನೆರವಿನ ಹಸ್ತ ಚಾಚಿವೆ. ಇಂತಹ ಭಯಾನಕ ಪರಿಸ್ಥಿತಿಯಲ್ಲಿಯೂ ಸಹ ಮೇಪ್ಪಾಡಿಯಿಂದ ಚೋರಲ್ ಮಲ, ಅಟ್ಟಮಲ, ಫುದುಮಲವರೆಗೂ ಯಾರೆ ಇರಲಿ ದಾಹ ಅನ್ನದ ಹಾಗೆ, ಹಸಿವು ಎಂದು ಬವಣಿಸದಾಗೆ ಹೆಜ್ಜೆ ಹೆಜ್ಜೆಗೂ ಸ್ವಯಂಸೇವಕರನ್ನು ಕಾಣಬಹುದಾಗಿದೆ. ಆಹಾರ ,ನೀರು, ಬಿಸ್ಕೆಟ್, ಬ್ರೆಡ್, ಮೆಡಿಸಿನ್, ವೈದ್ಯಕೀಯ ನೆರವನ್ನು ಸ್ವಯಂ ಸೇವಕರು ನೀಡುತ್ತಿದ್ದಾರೆ.
ಈ ದಿನ.ಕಾಮ್ ಪ್ರತಿನಿಧಿಯಾಗಿ ದುರಂತ ಪೀಡಿತ ಸ್ಥಳದಲ್ಲಿ ಓಡಾಡುವಾಗ ಮಾನವೀಯತೆ ಅನಾವರಣ ಆಗುತ್ತಿತ್ತು. ಎಲ್ಲಿ ನೋಡಿದರು ನೆರವಿನ ಹಸ್ತಗಳು. ಕೇರಳ ಮಾತ್ರವಲ್ಲದೇ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರ ಹೀಗೆ ಹಲವು ರಾಜ್ಯಗಳಿಂದ ಹಲವು ಸಂಘಟನೆಗಳು ಬಂದಿಳಿದಿವೆ. ಅವರು ಇವರು ಎನ್ನದೆ ಅಗತ್ಯ ಇರುವ ಎಲ್ಲ ರೀತಿಯ ವ್ಯವಸ್ಥೆಯನ್ನ ಕಲ್ಪಿಸಿ,
ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ.

ದುರಂತ ಪೀಡಿತ ಸ್ಥಳದಲ್ಲಿ ಕಳ್ಳತನ ಆಗುತ್ತಿದೆ ಎಂದು ವರದಿಯಾಗುತ್ತಿದ್ದಂತೆಯೇ ಕೇರಳ ಸರ್ಕಾರ, ಸ್ಥಳೀಯ ಆಡಳಿತ ಬಿಗಿ ಭದ್ರತೆ ಒದಗಿಸಿದೆ. ಅಷ್ಟು ಸುಲಭಕ್ಕೆ ಯಾರು ಒಳ ಹೋಗಲು ಸಾಧ್ಯವಿಲ್ಲದಂತಹ ವ್ಯವಸ್ಥೆ ನಿರ್ಮಿಸಿದೆ.
ವಯನಾಡು ದುರಂತ ಸ್ಥಳದಲ್ಲಿ ಸ್ವಯಂ ಸೇವಕರಾಗಿ ಹೋಗಬೇಕೆಂದಿದ್ದರೆ ಕಲೆಕ್ಟರ್ ಅವರ ಮೂಲಕ ಪಾಸ್ ಪಡೆಯಬೇಕು. ಅಲ್ಲಿಂದ ಸೇನೆ, ಪೊಲೀಸ್, ಫಾರೆಸ್ಟ್ ಡಿಪಾರ್ಟ್ಮೆಂಟ್ ಸಿಬ್ಬಂದಿ ಜೊತೆಗೆ ಮಾತ್ರ ತೆರಳಲು ಅವಕಾಶ ಹೊರತು ಇಷ್ಟ ಬಂದಂತೆ ತೆರಳಲು ಯಾರಿಗೂ ಅವಕಾಶ ಇಲ್ಲ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಪರವಾಗಿ ಸಚಿವ ಸಂತೋಷ್ ಲಾಡ್, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶ್ರೀನಿವಾಸ್ ಇತ್ತೀಚೆಗೆ ಬಂದಿದ್ದರು.
ಕರ್ನಾಟಕದಿಂದ ಹುಮ್ಯಾನಿಟೇರಿಯನ್ ಸೊಸೈಟಿ (ಹೆಚ್ ಆರ್ ಎಸ್)ಯ ಎರಡು ತಂಡ ಕೂಡ ದುರಂತ ಸ್ಥಳಕ್ಕೆ ತೆರಳಿದ್ದು, ಕೇರಳದ ಐ ಆರ್ ಡಬ್ಲ್ಯೂ ಹಾಗೂ ವೆಲ್ಫೇರ್ ಪಾರ್ಟಿಯ ಟೀಮ್ ವೆಲ್ಫೇರ್ ತಂಡದೊಂದಿಗೆ ಕಾರ್ಯಾಚರಣೆ ನಡೆಸುತ್ತಿದೆ. ಈ ತಂಡದಲ್ಲಿ ತಂಡದ ಕ್ಯಾಪ್ಟನ್ ಅಮೀರ್ ಸಿದ್ದೀಕ್ ಮಂಗಳೂರು, ಮೈಸೂರಿನಿಂದ ಅಸಾದುಲ್ಲಾ, ಕೊಡಗಿನಿಂದ ಅಬ್ದುಲ್ಲಾ, ಉಡುಪಿಯಿಂದ ರಯೀಸ್ ಅಹಮ್ಮದ್ ಸೇರಿದಂತೆ ಹಲವರಿದ್ದಾರೆ.
ಅದೇ ರೀತಿ, ಎಂಎಂವೈಸಿ ಬೆಂಗಳೂರು ತಂಡ ಅಬೂಬಕರ್, ಜುನೈದ್ ಪಿ ಕೆ ಬೆಂಗಳೂರು ಕೂಡ ತಮ್ಮಿಂದಾದ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೇರೆ ಬೇರೆ ರಾಜ್ಯಗಳಿಂದ ವೈದ್ಯರ ತಂಡ, ಆಂಬುಲೆನ್ಸ್, ರೆಸ್ಕ್ಯೂ ತಂಡಗಳು ಸ್ಥಳಕ್ಕೆ ಆಗಮಿಸಿ ಸಂತ್ರಸ್ತರ ನೆರವಿನಲ್ಲಿ ತೊಡಗಿಸಿಕೊಂಡಿವೆ.


