ಏಕದಿನ ಸರಣಿಯಲ್ಲಿ ಏಳು ಮಂದಿ ಅನುಭವಿ ಬ್ಯಾಟರ್‌ಗಳಿದ್ದರೂ 240 – 250 ರನ್‌ಗಳಂಥ ಸಾಧಾರಣ ಗುರಿ ಮುಟ್ಟಲಾಗುತ್ತಿಲ್ಲ. ನಾಯಕ ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ ಒಂದಿಷ್ಟು ಪ್ರದರ್ಶನ ತೋರುತ್ತಿರುವುದನ್ನು ಬಿಟ್ಟರೆ ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್, ಶ್ರೇಯಸ್ ಅಯ್ಯರ್ ಅವರಂತಹ ಆಟಗಾರರು ವಿಫಲರಾಗುತ್ತಿದ್ದಾರೆ. ಅದಲ್ಲದೆ ಗಂಭೀರ್ ವಿಚಿತ್ರ ಪ್ರಯೋಗಗಳು ಕೂಡ ತಂಡದ ಸೋಲಿಗೆ ಕಾರಣವಾಗಿದೆ ಎಂದು ಟೀಕೆಗಳು ಸಹ ಕೇಳಿಬರುತ್ತಿವೆ.
ಕೇವಲ ಐಪಿಎಲ್ ಪಂದ್ಯಗಳನ್ನು ಪರಿಗಣನೆಗೆ ತೆಗೆದುಕೊಂಡು ಅತೀ ಉತ್ಸಾಹದಿಂದ ಗೌತಮ್ ಗಂಭೀರ್ ಅವರನ್ನು ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ನೇಮಿಸಿದ ಬಿಸಿಸಿಐ ಈಗ ಬಹಳಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಶ್ರೀಲಂಕಾ ವಿರುದ್ಧದ ಪ್ರವಾಸದಲ್ಲಿ ಭಾರತ ತಂಡ ಟಿ20 ಸರಣಿಯನ್ನು ಗೆದ್ದರೂ ಏಕದಿನ ಸರಣಿಯಲ್ಲಿ ಭಾರಿ ಮುಖಭಂಗ ಅನುಭವಿಸಿದೆ. ಟೀಂ ಇಂಡಿಯಾದಲ್ಲಿ ಅತಿರಥ ಮಹಾರಥರಂಥ ಆಟಗಾರರಿದ್ದರೂ ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾ ನೇತೃತ್ವದ ಪಡೆ ಹೀನಾಯವಾಗಿ ಸೋಲು ಕಂಡಿದೆ.
ಕಳೆದ 27 ವರ್ಷಗಳಲ್ಲಿ ತವರಿನಲ್ಲಾಗಲಿ ಅಥವಾ ನೆರೆಯ ದ್ವೀಪ ರಾಷ್ಟ್ರದಲ್ಲಾಗಲಿ ಯಾವುದೇ ಸರಣಿಯನ್ನೇ ಸೋಲದ ಭಾರತ ತಂಡಕ್ಕೆ ಅಪಮಾನ ಉಂಟಾಗಿದೆ. ಗೌತಮ್ ಗಂಭೀರ್ ಮೇಲೆ ಇಟ್ಟಿದ್ದ ನಂಬಿಕೆಗೆ ಟೀಂ ಇಂಡಿಯಾದ ಪರಾಭವ ನಿಜಕ್ಕೂ ಆಘಾತಕಾರಿ. ಸರಣಿ ಗೆಲುವಿನ ಸಿಂಚನ ನೀಡಿದ ಶ್ರೇಯ ಶ್ರೀಲಂಕಾ ತಂಡದ ಕೋಚ್ ಆಗಿರುವ ಸನತ್ ಜಯಸೂರ್ಯ ಅವರಿಗೆ ಸಲ್ಲಬೇಕು.
ಶ್ರೀಲಂಕಾವನ್ನು ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆಲ್ಲಿಸಿದ ಸ್ಟಾರ್ ಆಟಗಾರರಲ್ಲಿ ಜಯಸೂರ್ಯ ಕೂಡ ಒಬ್ಬರು. ಸಿಂಹಳೀಯರ ತಂಡದ ಮುಖ್ಯ ಕೋಚ್ ಆಗಿ ಜಯಸೂರ್ಯ ಅವರು ಟಿ20ಯಲ್ಲಿ ಸರಣಿ ಸೋಲು ಕಂಡರೂ ತಮ್ಮ ಚಾಣಾಕ್ಷತನದ ಯೋಜನೆಗಳಿಂದ ಏಕದಿನ ಸರಣಿಯಲ್ಲಿ ಅದ್ಭುತವಾಗಿ ಗೆಲುವಿನ ಕೊಡುಗೆ ನೀಡಿದ್ದಾರೆ. ಟಿ20 ಸೋಲಿನ ನಂತರ ಏಕದಿನ ಸರಣಿಗೆ ಬಲಿಷ್ಠ ತಂಡವನ್ನು ಸಜ್ಜುಗೊಳಿಸಿದರು. ಬ್ಯಾಟಿಂಗ್, ಬೌಲಿಂಗ್ ಸೇರಿದಂತೆ ಪ್ರತಿಯೊಂದು ವಿಭಾಗದಲ್ಲಿಯೂ ಪ್ರತಿಭಾನ್ವಿತ ಆಟಗಾರರಿಗೆ ಮಣೆ ಹಾಕಲಾಯಿತು.ಗೆಲ್ಲುವ ತಂಡವಾಗಿ ಮಾರ್ಪಡಿಸಿ ಭಾರತದ ವಿರುದ್ಧ ಸರಣಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು.
1993ರಲ್ಲಿ ಭಾರತ ಮೊದಲ ಬಾರಿಗೆ ಶ್ರೀಲಂಕಾ ವಿರುದ್ಧ ಸರಣಿ ಸೋತಿತ್ತು. ನಂತರ 1997ರಲ್ಲಿ ಎರಡನೇ ಏಕದಿನ ಸರಣಿ ಸೋತಿತ್ತು. ಇದೀಗ 2024ರಲ್ಲಿ 3ನೇ ಬಾರಿ ಸಿಂಹಳೀಯರ ವಿರುದ್ಧ ಒಂದೂ ಪಂದ್ಯ ಗೆಲ್ಲಲಾಗದೆ ಏಕದಿನ ಸರಣಿಯಲ್ಲಿ ಆಘಾತ ಅನುಭವಿಸಿದೆ. ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಹೀನಾಯ ಪ್ರದರ್ಶನ ತೋರಿದ್ದರು. ಎರಡೂವರೆ ದಶಕದ ನಂತರ ಮೊದಲ ಬಾರಿ ಟೀಂ ಇಂಡಿಯಾ ಸೋಲು ಅನುಭವಿಸಿದ್ದಕ್ಕೆ ‘ಗೌತಮ್ ಗಂಭೀರ್ ಯುಗಾರಂಭ’ವಾಗಿದೆ ಎಂದು ಹಲವು ಕಡೆಗಳಿಂದ ವಾಗ್ದಾಳಿ ಶುರುವಾಗಿದೆ. ಈ ಸರಣಿ ಗೆಲ್ಲುವುದಕ್ಕೂ ಮುನ್ನ ಶ್ರೀಲಂಕಾ ತಂಡ ಟಿ20 ಹಾಗೂ ಏಕದಿನ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ತೋರಿತ್ತು. ವಿಶ್ವಕಪ್ ನಂತರವೂ ಆಡಿದ ಹಲವು ಸರಣಿಗಳಲ್ಲಿ ದ್ವೀಪ ರಾಷ್ಟ್ರ ಹಲವು ಸೋಲು ಕಂಡಿತ್ತು. ಆದರೆ ಈಗ ವಿಶ್ವ ಚಾಂಪಿಯನ್ ತಂಡವನ್ನು ಮಣಿಸಿ ಪುಟಿದೆದ್ದಿದೆ.
ಜುಲೈ ಅಂತ್ಯದಲ್ಲಿ ಶ್ರೀಲಂಕಾ ವಿರುದ್ದ ಆರಂಭವಾದ ಸರಣಿಯಲ್ಲಿ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಗೌತಮ್ ಗಂಭೀರ್ ತಮ್ಮ ಕಾರ್ಯತಂತ್ರದ ಮೂಲಕ ಟಿ20 ಸರಣಿಯನ್ನು ಗೆಲ್ಲಿಸಿದ್ದರು. ಅದೇ ರೀತಿ ಏಕದಿನ ಸರಣಿಯಲ್ಲಿ ಭಾರತ ತಂಡಕ್ಕೆ ಜಯದ ಕಾಣಿಕೆ ನೀಡಲಿದ್ದಾರೆ ಎಂದು ಲೆಕ್ಕಾಚಾರ ಹಾಕಿದರೂ ವಿಧವಿಧದ ಪ್ರಯೋಗ ಮಾಡಲುಹೋಗಿ ಸೋಲಿನ ಕೊಡುಗೆ ನೀಡಿದ್ದಾರೆ. ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾದಂಥ ಪ್ರಬಲ ತಂಡವಲ್ಲದೆ ಲಂಕಾದಂಥ ಸಾಧಾರಣ ತಂಡದೆದುರು ಭಾರಿ ಅಂತರದಿಂದ ಸೋತಿರುವುದಕ್ಕೆ ಗಂಭೀರ್ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಐಪಿಎಲ್‌ನಲ್ಲಿ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುವುದೇ ಬೇರೆ, ರಾಷ್ಟ್ರೀಯ ತಂಡದ ಕೋಚ್ ಆಗಿ ತಂಡವನ್ನು ನಿಭಾಯಿಸುವುದೇ ಬೇರೆ. ದಯವಿಟ್ಟು ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಟುಹೋಗಿ ಇಲ್ಲವೆಂದರೆ ಕೋಚ್ ಸ್ಥಾನದಿಂದಲೇ ಬಿಸಿಸಿಐ ವಜಾಗೊಳಿಸಬೇಕು ಎಂದು ಕ್ರೀಡಾಭಿಮಾನಿಗಳು ಆಗ್ರಹಿಸುತ್ತಿದ್ದಾರೆ.
ಮುಂದೆ ಸಾಗರದಷ್ಟು ಸವಾಲುಗಳು, ಗಂಭೀರ್ ವಿಚಿತ್ರ ಪ್ರಯೋಗಗಳು
ಆರಂಭದಲ್ಲಿಯೇ ದುರ್ಬಲ ತಂಡದೆದುರು ಮುಗ್ಗರಿಸಿದರೆ ಮುಂದಿನ ಪಾಡೇನು ಎಂಬುದು ಅಭಿಮಾನಿಗಳು ಹಾಗೂ ಆಡಳಿತ ಮಂಡಳಿಗೆ ಆತಂಕ ಕಾಡುತ್ತಿದೆ. 2025ರಲ್ಲಿ ಚಾಂಪಿಯನ್ಸ್ ಟ್ರೋಫಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, 2026ರಲ್ಲಿ ಟಿ20 ವಿಶ್ವಕಪ್, 2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ತಂಡವನ್ನು ಸಜ್ಜುಗೊಳಿಸಬೇಕಿದೆ. ಗೌತಮ್ ಮುಂದೆ ಸಾಗರದಷ್ಟು ಸವಾಲುಗಳಿವೆ. ಆರಂಭದಲ್ಲೇ ಎಡವಿರುವುದು ಕ್ರೀಡಾಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಸುದ್ದಿ ಓದಿದ್ದೀರಾ? ಗೌತಮ್ ಗಂಭೀರ್: ಖ್ಯಾತಿಗಿಂತ ಹೆಚ್ಚು ವಿವಾದಗಳನ್ನೇ ಉಸಿರಾಡಿದ ಕ್ರಿಕೆಟಿಗನಿಗೆ ಹೊಣೆಗಾರಿಕೆಯ ಹುದ್ದೆ
ಸೂರ್ಯಕುಮಾರ್ ಯಾದವ್ ಸಾರಥ್ಯದಲ್ಲಿ ಟೀಂ ಇಂಡಿಯಾ ಟಿ20 ಸರಣಿ ವಿಜಯ ಸಾಧಿಸಿತ್ತು. ಯುವ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ತಂಡವು ಸಿಂಹಳೀಯರನ್ನು ಬಗ್ಗುಬಡಿದಿತ್ತು. ಆದರೆ ಏಕದಿನ ಸರಣಿಯಲ್ಲಿ ಏಳು ಮಂದಿ ಅನುಭವಿ ಬ್ಯಾಟರ್‌ಗಳಿದ್ದರೂ 240 – 250 ರನ್‌ಗಳಂಥ ಸಾಧಾರಣ ಗುರಿ ಮುಟ್ಟಲಾಗುತ್ತಿಲ್ಲ. ನಾಯಕ ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ ಒಂದಿಷ್ಟು ಪ್ರದರ್ಶನ ತೋರುತ್ತಿರುವುದನ್ನು ಬಿಟ್ಟರೆ ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್, ಶ್ರೇಯಸ್ ಅಯ್ಯರ್ ಅವರಂತಹ ಆಟಗಾರರು ವಿಫಲರಾಗುತ್ತಿದ್ದಾರೆ. ಅದಲ್ಲದೆ ಗಂಭೀರ್ ವಿಚಿತ್ರ ಪ್ರಯೋಗಗಳು ಕೂಡ ತಂಡದ ಸೋಲಿಗೆ ಕಾರಣವಾಗಿದೆ ಎಂದು ಟೀಕೆಗಳು ಸಹ ಕೇಳಿಬರುತ್ತಿವೆ.
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಗೌತಮ್ ಗಂಭೀರ್ ತಮ್ಮ ಕೋಚಿಂಗ್‌ಗಿಂತ ಹೆಚ್ಚಾಗಿ ವಿಭಿನ್ನ ಪ್ರಯೋಗಗಳನ್ನು ತಂಡದ ಮೇಲೆ ಪ್ರಯೋಗಿಸಿದ್ದಾರೆ. ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸುವುದು ಇದರಲ್ಲಿ ಪ್ರಮುಖವಾಗಿದೆ. ವಾಷಿಂಗ್ಟನ್ ಒಂದು ಪಂದ್ಯದಲ್ಲಿ ಮುಂದೆ ತಂದರೆ, ಇನ್ನೊಂದು ಪಂದ್ಯದಲ್ಲಿ ಶಿವಂ ದುಬೆ ನಂತರ ಅಕ್ಷರ್ ಪಟೇಲ್ ಅವರನ್ನು ಆಡಿಸಿ ವಿಚಿತ್ರ ಪ್ರಯೋಗಗಳನ್ನು ಗಂಭೀರ್ ಮಾಡಿದ್ದಾರೆ. ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಉತ್ತಮ ಪ್ರದರ್ಶನದ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಆದರೆ ಗಂಭೀರ್ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿಲ್ಲ.
ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಪ್ರಮುಖ ಬ್ಯಾಟರ್ಗಳಾಗಿ ತಂಡದಲ್ಲಿ ಆಯ್ಕೆ ಮಾಡಲಾಗಿದೆಯೋ ಅಥವಾ ಅವರು ಬೌಲರ್‌ಗಳಾಗಿದ್ದಾರೋ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಸ್ಪಿನ್ ಬೌಲರ್ಗಳಿಗೆ ಅನುಕೂಲವಾಗುವ ಪಿಚ್‌ನಲ್ಲಿ ಬೌಲರ್, ಆಲ್‌ರೌಂಡರ್‌ಗಳಿಂದ ಉತ್ತಮ ಸ್ಕೋರ್ ನಿರೀಕ್ಷಿಸುವುದು ಎಷ್ಟು ಸರಿ ಎಂಬುದು ಈಗ ಎಲ್ಲರಲ್ಲೂ ಮೂಡಿರುವ ಪ್ರಶ್ನೆ. ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ತಮ್ಮ ಬ್ಯಾಟಿಂಗ್‌ನಿಂದ ಭರವಸೆ ಮೂಡಿಸಿದ್ದಾರೆ. ಆದರೆ ಕೆ ಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್‌ಗೆ ಹೋಲಿಸಿದರೆ ಅವರು ನಾಲ್ಕು ಮತ್ತು ಐದನೇ ಕ್ರಮಾಂಕಕ್ಕೆ ಎಷ್ಟರ ಮಟ್ಟಿಗೆ ತಂಡಕ್ಕೆ ನ್ಯಾಯ ಒದಗಿಸುತ್ತಾರೆ? ಎಂಬುದು ಕೂಡ ಚರ್ಚೆಗೆ ಕಾರಣವಾಗಿದೆ. ಒಂದು ಹಂತದಲ್ಲಿ ಬೌಲರ್‌ಗಳು ನಿರೀಕ್ಷಿತ ಪ್ರದರ್ಶನ ನೀಡಿದ್ದರು. ಆದರೆ ಅಲ್ಲಿಯೂ ಬದಲಾವಣೆ ಮಾಡಲಾಗಿದೆ. ಹೀಗೆ ಗೌತಮ್ ಗಂಭೀರ್ ಅವರ ನಿರ್ಧಾರಗಳು ಈಗ ಎಲ್ಲರಿಂದಲೂ ಟೀಕೆಗೆ ಒಳಗಾಗಿದೆ.
ಹಿಂದೆ ಭಾರತ ತಂಡದ ಕೋಚ್ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದ ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ನೋಡಿ ಗೌತಮ್ ಗಂಭೀರ್ ಸಾಕಷ್ಟು ಕಲಿಯಬೇಕಿದೆ. ರಾಹುಲ್ ಪ್ರತಿಯೊಬ್ಬರ ಆಟಗಾರರ ಮಾತಿಗೂ ಹಾಗೂ ಅವರ ಪ್ರತಿಭೆಯ ಅನುಸಾರವಾಗಿ ಮಾನ್ಯತೆ ನೀಡುತ್ತಿದ್ದರು. ಹಿರಿಯ ಆಟಗಾರರಿಂದ ಒಳಗೊಂಡು ಪಿಚ್ ನಿರ್ವಹಿಸುವ ಸಿಬ್ಬಂದಿ ಜೊತೆಯಲ್ಲೂ ತಾಳ್ಮೆಯಿಂದ ವ್ಯವಹರಿಸುತ್ತಿದ್ದರು. ದ್ರಾವಿಡ್‌ಗಿದ್ದ ಸಹನೆಯನ್ನು ಗೌತಮ್ ಗಂಭೀರ್ ಸಂಪೂರ್ಣವಾಗಿ ಮೈಗೂಡಿಸಿಕೊಳ್ಳಬೇಕಿದೆ.
ಹಾಗೆಯೇ ಗಂಭೀರ್ ತಮ್ಮ ಕೋಚ್ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು. ವೈಯಕ್ತಿಕ ನಿರ್ಧಾರಗಳಿಗಿಂತ ಆಟಗಾರರ ಅರ್ಹ ಪ್ರತಿಭೆಗೂ ಮಾನ್ಯತೆ ನೀಡಬೇಕು. ಐಪಿಎಲ್ ಪಂದ್ಯಗಳಿಗೂ ಅಂತಾರಾಷ್ಟ್ರೀಯ ಪಂದ್ಯಗಳಿಗೂ ತುಂಬಾ ವ್ಯತ್ಯಾಸಗಳಿವೆ. ಅಲ್ಲಿ ನಿಯಮಗಳಲ್ಲಿ ಸಾಕಷ್ಟು ಸಡಿಲವಿರುತ್ತದೆ. ಬ್ಯಾಟ್ಸ್‌ಮನ್‌ಗಳಿಗೆ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸೂಚನೆ ನೀಡಬೇಕು. ಯುವ ಆಲ್‌ರೌಂಡರ್‌ಗಳು ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡುವ ಜೊತೆಗೆ ಜೊತೆಯಾಟಕ್ಕೂ ಒತ್ತು ನೀಡುವಂತೆ ಮಾರ್ಗದರ್ಶನ ನೀಡಬೇಕು. ಹಾಗಾದಾಗ ಮಾತ್ರ ಉತ್ತಮ ಪ್ರದರ್ಶನವನ್ನು ನೀಡಲು ಸಾಧ್ಯ. ಇಲ್ಲದಿದ್ದರೆ ಭಾರತ ತಂಡ ಮತ್ತೊಂದು ವೆಸ್ಟ್ ಇಂಡೀಸ್, ಇಂಗ್ಲೆಂಡ್ ರೀತಿಯ ತಂಡಗಳಂತೆ ದುರ್ಬಲ ತಂಡಗಳಂತೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.