ಮೂಗು ಮತ್ತು ಮೆದುಳನ್ನು ಬೇರ್ಪಡಿಸುವ ಪದರದ ರಂಧ್ರಗಳ ಮೂಲಕ ಅಥವಾ ಕಿವಿಯ ಟಮಟೆಯಲ್ಲಿರುವ ರಂಧ್ರಗಳ ಮೂಲಕ ಅಮೀಬಾ ಮೆದುಳಿಗೆ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ, ಕಿವಿಯಲ್ಲಿ ಸೋಂಕು ಇರುವ ಮಕ್ಕಳು ಕೊಳಗಳಲ್ಲಿ ಅಥವಾ ನಿಶ್ಚಲವಾಗಿ ನಿಂತಿರುವ ಜಲಮೂಲಗಳಲ್ಲಿ ಸ್ನಾನ ಮಾಡದಂತೆ ಸಲಹೆ ನೀಡಲಾಗಿದೆ.
ಕೇರಳ ರಾಜ್ಯದ ಜನರಲ್ಲಿ ಕಳೆದ ಎರಡು ತಿಂಗಳಿನಿಂದ ಅಪರೂಪದ ‘ಮೆದುಳು ತಿನ್ನುವ ಅಮೀಬಾ’ವು ತೀವ್ರವಾದ ಭಯ, ಆತಂಕವನ್ನು ಉಂಟುಮಾಡಿದೆ. ಕೋಝಿಕೋಡ್‌ನಲ್ಲಿ 12 ವರ್ಷದ ಬಾಲಕ, ಕಣ್ಣೂರಿನಲ್ಲಿ 13 ವರ್ಷದ ಬಾಲಕಿ, ಮಲಪ್ಪುರಂ ಜಿಲ್ಲೆಯಲ್ಲಿ 5 ವರ್ಷದ ಮಗು ಸೇರಿದಂತೆ ಒಟ್ಟು 3 ಮಕ್ಕಳು ಸಾವನ್ನಪ್ಪಿದ್ದಾರೆ. ಮತ್ತು ಕೋಝಿಕೋಡ್ ಜಿಲ್ಲೆಯಲ್ಲಿ ಸದ್ಯಕ್ಕೆ 4ನೇ ಪ್ರಕರಣವು ಪತ್ತೆಯಾಗಿದೆ.
ಮೆದುಳು ತಿನ್ನುವ ಅಮೀಬಾ ಎಂದರೇನು?
ಮೆದುಳು ತಿನ್ನುವ ಅಮೀಬಾ ಎಂಬುದು ನೇಗ್ಲೇರಿಯಾ ಫೌಲೆರಿ (Naegleria fowleri) ಎಂಬ ಏಕ-ಕೋಶ ಜೀವಿಯಿಂದ ಉಂಟಾಗುವ ಪ್ರಾಥಮಿಕ ಅಮೀಬಿಕ್ ಮೆನಿಂಜೊಎನ್ಸೆಫಾಲಿಟಿಸ್ (primary amoebic meningoencephalitis) ಎಂಬ ಅಪರೂಪದ ಮೆದುಳಿನ ಸೋಂಕಾಗಿದೆ.
ನೇಗ್ಲೇರಿಯಾ ಫೌಲೆರಿ, ಇದು ಏಕ-ಕೋಶ ಜೀವಿಯಾಗಿದ್ದು, ಇದು ಬೆಚ್ಚಗಿನ ಸಿಹಿನೀರಿನ ಸರೋವರಗಳು, ಕೊಳಗಳು ಮತ್ತು ನದಿಗಳಲ್ಲಿ ಬೆಳೆಯುವ ಅಮೀಬಾವಾಗಿದೆ. ಕೆಲವು ಅಪರೂಪದ ಸಂದರ್ಭಗಳಲ್ಲಿ ಸರಿಯಾಗಿ ನಿರ್ವಹಿಸಲಾಗದ ಈಜುಕೊಳಗಳಲ್ಲಿಯೂ ಸಹ ಇದು ಬದುಕಬಲ್ಲದು.
ಇದು ಸಾಮಾನ್ಯವಾಗಿ ಮೆದುಳಿಗೆ ಸೋಂಕು ತಗುಲಿ ಅಲ್ಲಿನ ಅಂಗಾಂಶಗಳನ್ನು ನಾಶಪಡಿಸುವುದರಿಂದ ಈ ಏಕಕೋಶ ಜೀವಿಯನ್ನು ‘ಮೆದುಳು ತಿನ್ನುವ ಅಮೀಬಾ’ ಎಂದೂ ಕರೆಯುತ್ತಾರೆ.
ಈ ಅಮೀಬಾವನ್ನು 1965ರಲ್ಲಿ ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಕಂಡುಹಿಡಿಯಲಾಯಿತು, ಇದು ತುಂಬಾ ಚಿಕ್ಕದಾಗಿದ್ದು, ಇದನ್ನು ಸೂಕ್ಷ್ಮದರ್ಶಕದಿಂದ ಮಾತ್ರ ನೋಡಬಹುದಾಗಿದೆ.
ಈ ಸೋಂಕು ಬಹಳ ಅಪರೂಪವಾಗಿದ್ದು, ತೀವ್ರವಾಗಿ ಮಾರಣಾಂತಿಕವಾಗಿರುತ್ತದೆ ಮತ್ತು ಈ ಸೋಂಕು ತಗುಲಿದ ಶೇ. 97 ರೋಗಿಗಳು ಬದುಕುಳಿಯುವುದಿಲ್ಲಎಂದು ಈ ಸೋಂಕಿನ ಮೆಡಿಕಲ್ ಇತಿಹಾಸ ತಿಳಿಸುತ್ತದೆ.
ಬೇಸಿಗೆಯಲ್ಲಿ ಜನರು ಸರೋವರಗಳು, ಕೊಳಗಳು ಅಥವಾ ನದಿಗಳಲ್ಲಿ ಈಜಲು ಹೋದಾಗ ಸೋಂಕು ಸಂಭವಿಸುತ್ತದೆ. ನಂತರ ಅಮೀಬಾವು ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿ ಮೆದುಳನ್ನು ತಲುಪುತ್ತದೆ. ಮುಂದೆ ಮೆದುಳಿನ ಅಂಗಾಂಶಗಳನ್ನು ನಾಶಪಡಿಸುತ್ತಾ, ಊತ ಉಂಟುಮಾಡುತ್ತದೆ.
ಇತ್ತೀಚಿನ ಪ್ರಕರಣಗಳಲ್ಲಿ ಇದು ಮಕ್ಕಳನ್ನು ಹೆಚ್ಚು ದುರ್ಬಲವಾಗಿ ಕಾಡುತ್ತದೆ. ಬಹಳ ಮುಖ್ಯವಾಗಿ ಈ ಸೋಂಕು ಜನರಿಂದ ಜನರಿಗೆ ಹರಡುವುದಿಲ್ಲ.
ಮೆದುಳು ತಿನ್ನುವ ಅಮೀಬಾ ಸೋಂಕಿನ ಲಕ್ಷಣಗಳು
ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಸೋಂಕು ತಗುಲಿದ ನಂತರ 1 ರಿಂದ 12 ದಿನಗಳಲ್ಲಿ ಮೊದಲ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ.
ಆರಂಭಿಕ ಹಂತಗಳಲ್ಲಿ ತಲೆನೋವು, ವಾಕರಿಕೆ ಮತ್ತು ಜ್ವರದಂತಹ ಮೆನಿಂಜೈಟಿಸ್‌ನ ಲಕ್ಷಣಗಳನ್ನು ಹೋಲುತ್ತವೆ.
ಇದು ಸಾಮಾನ್ಯವಾಗಿ ಐದು ದಿನಗಳ ನಂತರ ಕೋಮಾಗೆ ತಿರುಗಿ ಸಾವಿಗೆ ಕಾರಣವಾಗುತ್ತದೆ ಎಂದು ಸಿಡಿಸಿ ಹೇಳುತ್ತದೆ. ಹೆಚ್ಚಿನ ಜನರು ಒಂದರಿಂದ 18 ದಿನಗಳಲ್ಲಿ ಸಾಯುತ್ತಾರೆ.
ವಾತಾವರಣದ ಬೆಚ್ಚಗಾಗುವಿಕೆ ಮತ್ತು ಅನೈರ್ಮಲ್ಯದಿಂದ ಕೂಡಿದ ಜಲ ಮೂಲಗಳು ಸೋಂಕಿಗೆ ಕಾರಣವಾಗುವ ಕೆಲವು ಪರಿಸ್ಥಿತಿಗಳಾಗಿರಬಹುದು ಎಂದು ತಜ್ಞರು ಸೂಚಿಸುತ್ತಾರೆ. ಈ ರೀತಿಯ ಅಮೀಬಾ ಬೆಚ್ಚಗಿನ ನೀರಿನಲ್ಲಿ ಹೆಚ್ಚು ಸಕ್ರಿಯವಾಗಿರುವುದು ಕಂಡುಬರುತ್ತದೆ.
ಪತ್ತೆ ಹೇಗೆ? ಮತ್ತು ಈ ಸೋಂಕಿಗೆ ಚಿಕಿತ್ಸೆ ಏನು?
ಸೆರೆಬ್ರೊಸ್ಪೈನಲ್ ಫ್ಲೂಯಿಡ್(CSF)ನ ಪಿಸಿಆರ್ ಪರೀಕ್ಷೆಗಳ ಮೂಲಕ ಸೋಂಕನ್ನು ಕಂಡುಹಿಡಿಯಬಹುದಾಗಿದೆ. ಆದರೂ ಈ ಸೋಂಕನ್ನು ಪತ್ತೆಹಚ್ಚುವುದು ಕೆಲವೊಮ್ಮೆ ಕಷ್ಟಕರವಾಗಿರುತ್ತದೆ.
US-ಮೂಲದ ರೋಗ ನಿಯಂತ್ರಣ ಕೇಂದ್ರಗಳು (CDC) ಆಂಫೊಟೆರಿಸಿನ್ ಬಿ(amphotericin B), ಅಜಿಥ್ರೊಮೈಸಿನ್(azithromycin), ಫ್ಲುಕೋನಜೋಲ್(fluconazole), ರಿಫಾಂಪಿನ್(rifampin), ಮಿಲ್ಟೆಫೋಸಿನ್(miltefosine) ಮತ್ತು ಡೆಕ್ಸಾಮೆಥಾಸೊನ್(dexamethasone) ಸೇರಿದಂತೆ ಔಷಧಗಳ ಸಂಯೋಜನೆಯೊಂದಿಗೆ ಚಿಕಿತ್ಸೆಯನ್ನು ಶಿಫಾರಸು ಮಾಡುತ್ತದೆ.
ಕೇರಳ ರಾಜ್ಯದ ಆರೋಗ್ಯ ಇಲಾಖೆಯು ಸೋಂಕಿತ ವ್ಯಕ್ತಿಗಳ ಚಿಕಿತ್ಸೆಗಾಗಿ ಜರ್ಮನಿಯಿಂದ ಸ್ಪೆಕ್ಟ್ರಮ್ ಆಂಟಿಮೈಕ್ರೊಬಿಯಲ್ ಔಷಧವಾದ ಮಿಲ್ಟೆಫೋಸಿನ್ ಅನ್ನು ಖರೀದಿಸಿದೆ. ಅಜಿಥ್ರೊಮೈಸಿನ್ ಮತ್ತು ಆಂಫೋಟೆರಿಸಿನ್ ಬಿ, ಸೂಚಿಸಲಾದ ಇತರ ಕೆಲವು ಔಷಧಿಗಳು ಲಭ್ಯವಿದೆ ಎಂದು ಮಕ್ಕಳ ವೈದ್ಯರು ಹೇಳುತ್ತಾರೆ.
2016ರಲ್ಲಿ ಆಲಪ್ಪುಳದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದು, 2019 ಮತ್ತು 2020ರಲ್ಲಿ ಮಲಪ್ಪುರಂ, 2020ರಲ್ಲಿ ಕೋಝಿಕ್ಕೋಡ್, 2022ರಲ್ಲಿ ತ್ರಿಶೂರ್, 2023ರಲ್ಲಿ ಮತ್ತೆ ಆಲಪ್ಪುಳದಲ್ಲಿ ವರದಿಯಾಗಿದೆ.
ಈ ಸೋಂಕನ್ನು ತಡೆಗಟ್ಟಲು ಏನು ಮಾಡಬೇಕು?
ಮೂಗು ಮತ್ತು ಮೆದುಳನ್ನು ಬೇರ್ಪಡಿಸುವ ಪದರದ ರಂಧ್ರಗಳ ಮೂಲಕ ಅಥವಾ ಕಿವಿಯ ಟಮಟೆಯಲ್ಲಿರುವ ರಂಧ್ರಗಳ ಮೂಲಕ ಅಮೀಬಾ ಮೆದುಳಿಗೆ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ, ಕಿವಿಯಲ್ಲಿ ಸೋಂಕು ಇರುವ ಮಕ್ಕಳು ಕೊಳಗಳಲ್ಲಿ ಅಥವಾ ನಿಶ್ಚಲವಾಗಿ ನಿಂತಿರುವ ಜಲಮೂಲಗಳಲ್ಲಿ ಸ್ನಾನ ಮಾಡದಂತೆ ಸಲಹೆ ನೀಡಲಾಗಿದೆ.
ಪ್ರಸ್ತುತ ಚಾಲನೆಯಲ್ಲಿರುವ ನೀರಿನ ಥೀಮ್ ಪಾರ್ಕ್‌ಗಳು ಮತ್ತು ಈಜುಕೊಳಗಳಲ್ಲಿ ನಿಯಮಿತವಾಗಿ ನೀರನ್ನು ಕ್ಲೋರಿನೇಟ್ ಮಾಡಲು ಮತ್ತು ಜಲಮೂಲಗಳನ್ನು ಸ್ವಚ್ಛವಾಗಿಡಲು ಕೇರಳದ ಸರ್ಕಾರ ನಿರ್ದೇಶನಗಳನ್ನು ನೀಡಿದೆ.