ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಕರ್ನಾಟಕದ ಶಿರೂರು ಮತ್ತು ಕೇರಳದ ವಯನಾಡ್‌ನಲ್ಲಿ ಗುಡ್ಡ ಕುಸಿತ, ಭೂಕುಸಿತಗಳು ಸಂಭವಿಸಿದ್ದು, ನೂರಾರು ಜನರು ಬಲಿಯಾಗಿದ್ದಾರೆ. ಹಲವರು ಮನೆ, ಆಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇಂತಹ ಭೀಕರ ದುರಂತಗಳಿಗೆ ಅಭಿವೃದ್ಧಿ ಹೆಸರಿನಲ್ಲಿ ಪಶ್ಚಿಮ ಘಟ್ಟಗಳ ಬುಡಕ್ಕೆ ಕೊಡಲಿ ಹಾಕುತ್ತಿರುವುದೇ ಕಾರಣವೆಂದು ಪರಿಸರವಾದಿಗಳು ಆರೋಪಿಸುತ್ತಿದ್ದಾರೆ.
ಸಹ್ಯಾದ್ರಿ ಬೆಟ್ಟಗಳು ಎಂದೂ ಕರೆಯಲಾಗುವ ಪಶ್ಚಿಮ ಘಟ್ಟಗಳು ಗುಜರಾತಿನ ತಪತಿ ನದಿಯಿಂದ ತಮಿಳುನಾಡಿನ ನೀಲಗಿರಿ ಬೆಟ್ಟಗಳವರೆಗೂ ಹಬ್ಬಿಕೊಂಡಿವೆ. ಪಶ್ಚಿಮ ಘಟ್ಟವು ಆರು ರಾಜ್ಯಗಳ – ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು – ಒಟ್ಟು 1,600 ಕಿ.ಮೀ ವ್ಯಾಪ್ತಿಸಿಕೊಂಡಿದೆ. ಈ ಸಹ್ಯಾದ್ರಿ ಬೆಟ್ಟಗಳ ಸಾಲು UNESCOದ ವಿಶ್ವ ಪಾರಂಪರಿಕ ಪಟ್ಟಿಗೂ ಸೇರಿದೆ.
ಆಗ್ನೇಯ ಮಾನ್ಸೂನ್ ಮಾರುತಗಳಿಗೆ ತಡೆಗೊಡೆಗಳಾಗಿರುವ ಈ ಪಶ್ಚಿಮ ಘಟ್ಟವು ದಕ್ಷಿಣ ಭಾರತದ ಬಹುತೇಕ ನದಿಗಳ ಜಲಮೂಲವಾಗಿದೆ. ಸಸ್ಯ ಮತ್ತು ಪ್ರಾಣಿಗಳ ಅಗಾಧ ವೈವಿಧ್ಯತೆಯನ್ನು ಹೊಂದಿದೆ. 5,000 ಪ್ರಭೇದದ ಹೂವಿನ ಸಸ್ಯಗಳು, 139 ಸಸ್ತನಿಗಳು, 508 ಪಕ್ಷಿಗಳು ಮತ್ತು 179 ಉಭಯಚರ ಪ್ರಭೇದಗಳು ಹಾಗೂ 650 ಜಾತಿಯ ಮರಗಳ ನೆಲೆಯಾಗಿದೆ. ಲಾಂಗೂರ್, ಸಿಂಹ ಬಾಲದ ಸಿಂಗಳಿಕ, ನೀಲಗಿರಿ ತಾಹರ್ ಮುಂತಾದ ಹಲವಾರು ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ಪಶ್ಚಿಮ ಘಟ್ಟಗಳು ನೆಲೆಯಾಗಿವೆ. ಪಶ್ಚಿಮ ಘಟ್ಟಗಳನ್ನು The great Escarpment of India ಎಂದೂ ಸಹಾ ಕರೆಯಲಾಗುತ್ತದೆ.
ಪಶ್ಚಿಮ ಘಟ್ಟಗಳ ಪರಿಸರ ವ್ಯವಸ್ಥೆಗೆ ಎದುರಾಗಿರುವ ಸಮಸ್ಯೆಗಳು
ಮಾನವನ ಅಭಿವೃದ್ಧಿ ಚಟುವಟಿಕೆಗಳು ಮತ್ತು ಜನಸಂಖ್ಯೆ ಹೆಚ್ಚಳವು ಪಶ್ಚಿಮ ಘಟ್ಟಗಳ ಸಂಪನ್ಮೂಲಗಳನ್ನು ಬರಿದು ಮಾಡುತ್ತಿವೆ.
ಮರಕಡಿಯುವುದು, ನಗರೀಕರಣ, ಪ್ರವಾಸೋದ್ಯಮ, ಅತಿಕ್ರಮಣ, ಅಣೆಕಟ್ಟುಗಳ ನಿರ್ಮಾಣ, ಜಲ ಹಾಗೂ ಉಷ್ಣ ವಿದ್ಯುತ್ ಸ್ಥಾವರಗಳ ನಿರ್ಮಾಣ, ಗಣಿಗಾರಿಕೆ, ಜೀವ ವೈವಿಧ್ಯದ ನಷ್ಟಕ್ಕೆ ಕಾರಣವಾಗುವಂತಹ ಮೂಲ ಸೌಕರ್ಯಗಳ ನಿರ್ಮಾಣ ಇತ್ಯಾದಿಗಳು ಪಶ್ಚಿಮ ಘಟ್ಟಗಳು ನಶಿಸುವಂತೆ ಮಾಡುತ್ತಿವೆ. ಘಟ್ಟ ಪ್ರದೇಶಕ್ಕೆ ಅಪಾಯಗಳಾಗಿವೆ.
ಪ್ರಸ್ತುತ, ಕೇವಲ 6.8%ರಷ್ಟು ಮೂಲ ಕಾಡುಗಳು ಮಾತ್ರವೇ ಪಶ್ಚಿಮ ಘಟ್ಟಗಳಲ್ಲಿ ಅಸ್ತಿತ್ವದಲ್ಲಿವೆ. ಉಳಿದ ಅರಣ್ಯ ಪ್ರದೇಶ ನಶಿಸಿಹೋಗಿದೆ ಎಂದು ವರದಿ ಹೇಳುತ್ತದೆ.
ಮಾಧವ್ ಗಾಡ್ಗೀಲ್ ವರದಿ
ಭಾರತ ಸರ್ಕಾವು ಪರಸರ ವಿಜ್ಞಾನಿ ಮಾಧವ್ ಗಾಡ್ಗೀಲ್ ಅವರ ನೇತೃತ್ವದಲ್ಲಿ 2011ರಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಕಾರ್ಯಸೂಚಿಗಳನ್ನು ರಚಿಸಲು ಸಮಿತಿ ರಚನೆ ಮಾಡಿತ್ತು. ಇದನ್ನು ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ(WGEEP) ಎಂದು ಕರೆಯಲಾಗಿತ್ತು.
ಸಮತಿಯು ನೀಡಿದ ವರದಿಯಲ್ಲಿ ಹಲವು ಶಿಫಾರಸುಗಳಿದ್ದವು. ಅವುಗಳೆಂದರೆ;
1. ಪಶ್ಚಿಮ ಘಟ್ಟಗಳನ್ನು ಸಂಪೂರ್ಣವಾಗಿ ಪರಿಸರ ಸೂಕ್ಷ್ಮ ವಲಯ(ESZ)ಗಳೆಂದು ಗುರುತಿಸಬೇಕು. ಇದನ್ನು 3 ವರ್ಗಗಳಾಗಿ ESZ I – ಅತಿ ಹೆಚ್ಚು ಸುರಕ್ಷಿತ, ESZ II – ಹೆಚ್ಚು ಸುರಕ್ಷಿತ, ESZ III – ಮಧ್ಯಮ ಸುರಕ್ಷಿತ ಎಂದು ವಿಂಗಡಿಸಬೇಕು. ಅಲ್ಲಿ ಸೀಮಿತ ಅಭಿವೃದ್ದಿಗೆ ಮಾತ್ರ ಅನುಮತಿ ನೀಡಬೇಕು.
2. ಪರಿಸರ ಶ್ರೀಮಂತಿಕೆ ಮತ್ತು ಭೂಮಿಯ ಬಳಕೆಯ ಪ್ರಮಾಣವನ್ನು ಆಧರಿಸಿ ಕಲ್ಲು ಗಣಿಗಾರಿಕೆ ಸೇರಿದಂತೆ ಎಲ್ಲ ಗಣಿಗಾರಿಕೆ, ಉಷ್ಣ ವಿದ್ಯುತ್ ಸ್ಥಾವರಗಳು, ಅಣೆಕಟ್ಟುಗಳ ನಿರ್ಮಾಣ, ಮರಳು ಗಣಿಗಾರಿಕೆ ಮತ್ತು 20,000 ಚ.ಮೀ ಗಿಂತ ಹೆಚ್ಚಿನ ಕಟ್ಟಡ ನಿರ್ಮಾಣವನ್ನು ನಿಷೇಧಿಸಬೇಕು.
3. ಜಲ ವಿದ್ಯುತ್ ಯೋಜನೆಯ ಸಂದರ್ಭದಲ್ಲಿ ನದಿಯಲ್ಲಿ ಸಾಕಷ್ಟು ನೀರಿನ ಹರಿವು ಮತ್ತು ಬೇರೆ ಯೋಜನೆಗಳ ನಡುವಿನ ಅಂತರವನ್ನು ಪರಿಗಣಿಸಬೇಕು.
4. ಕೃಷಿ ಪ್ರದೇಶಗಳಲ್ಲಿ ಕೀಟನಾಶಕಗಳ ಬಳಕೆ ಮತ್ತು ಮಾರ್ಪಡಿಸಿದ ತಳಿಗಳ ಬೆಳೆಗಳನ್ನೂ ಸಹಾ ನಿಷೇಧಿಸಬೇಕು.
5. ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ತೀರ್ಮಾನಗಳನ್ನು ತೆಗೆದುಕೊಳ್ಳಲು ಗ್ರಾಮಸಭೆಗೆ ಜವಾಬ್ದಾರಿ ನೀಡಬೇಕು.
ಈ ಮಾಧವ್ ಗಾಡ್ಗೀಲ್ ವರದಿಯ ವಿರುದ್ದವಾಗಿ ಕೈಗಾರಿಕಾ ಲಾಬಿಯು ಪ್ರತಿಭಟನೆ ನಡೆಸಿತು. ಪರಿಣಾಮವಾಗಿ, ವಿವಿಧ ರಾಜ್ಯಗಳು ಗಾಡ್ಗೀಲ್ ವರದಿಯನ್ನ ಜಾರಿಗೆ ತರವುದನ್ನು ಮುಂದೂಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದವು. ನಂತರ ಕೇಂದ್ರ ಸರ್ಕಾರವು ಕಸ್ತೂರಿ ರಂಗನ್ ನೇತೃತ್ವದಲ್ಲಿ 2013ರಲ್ಲಿ ಮತ್ತೊಂದು ಸಮಿತಿಯನ್ನು ನೇಮಕ ಮಾಡಿ ಪಶ್ಚಿಮ ಘಟ್ಟಗಳ ಬಗ್ಗೆ ಸಮಗ್ರ ವರದಿ ನೀಡುವಂತೆ ಹೇಳಿತು.
ಕಸ್ತೂರಿ ರಂಗನ್ ವರದಿ
ಕಸ್ತೂರಿ ರಂಗನ್ ಸಮಿತಿಯು ಗಾಡ್ಗೀಲ್ ವರದಿ ಹೇಳಿದ್ದ ಪಶ್ಚಿಮ ಘಟ್ಟಗಳ ಒಟ್ಟು ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸುವುದಕ್ಕೆ ಬದಲಾಗಿ, ಕೇವಲ ಶೇ.37ರಷ್ಟು ಪ್ರದೇಶವನ್ನು ಮಾತ್ರ ಪರಿಸರ ಸೂಕ್ಷ್ಮ ಪ್ರದೇಶ ಎಂದು ಕರೆಯುವಂತೆ ಹೇಳಿತು. ಈ ಶೇ.37ರಷ್ಟು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಮಾತ್ರ ಗಣಿಗಾರಿಕೆಯನ್ನು ನಿಷೇಧ ಮಾಡಬೇಕು. ವಿವರವಾದ ಅಧ್ಯಯನದ ನಂತರವೇ ಜಲ ವಿದ್ಯುತ್ ಯೋಜನೆಗಳಿಗೆ ಅನುಮತಿ ನೀಡಬೇಕೆಂದು ಸೂಚಿಸಿತು. ಪಶ್ಚಿಮ ಘಟ್ಟಗಳ ಕೇಂದ್ರ ಪ್ರಾಧಿಕಾರದ ಬದಲಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಮತ್ತು ರಾಜ್ಯ ಜೀವ ವೈವಿಧ್ಯ ಮಂಡಳಿಗಳಿಂದ ಕಾನೂನು ಚೌಕಟ್ಟನ್ನು ಬಲಪಡಿಸುವಂತೆ ಹೇಳಿತು.
ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು 2022 ಜುಲೈ ತಿಂಗಳಿನಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಕರಡು ಅಧಿಸೂಚನೆ ಹೊರಡಿಸಿದೆ. ಆದರೆ, ಕರ್ನಾಟಕದಲ್ಲಿನ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದರು. ಕೇರಳ ಮತ್ತು ಗೋವಾ ರಾಜ್ಯಗಳೂ ಕೂಡ ಕಸ್ತೂರಿ ರಂಗನ್ ವರದಿಯನ್ನು ತೀವ್ರವಾಗಿ ವಿರೋಧಿಸಿದವು. ಪ್ರಸ್ತುತ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೂಡ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಗೊಳಿಸದಿರಲು ನಿರ್ಣಯ ಕೈಗೊಂಡಿದೆ.
ಪಶ್ಚಿಮ ಘಟ್ಟಗಳನ್ನು ಉಳಿಸಲು ಆಗಬೇಕಾದ ಅಗತ್ಯ ಕ್ರಮಗಳು
1. ವಿಶ್ವವು ತೀವ್ರವಾದ ಹವಾಮಾನ ಬಿಕ್ಕಟ್ಟನ್ನು ಎದುರಿಸುತ್ತಿರಬೇಕಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷವಾಗಿ ಪರಿಸರ ವ್ಯವಸ್ಥೆಯನ್ನು ನಾಶಪಡಿಸುವ ಅಪಾಯಗಳನ್ನು ಗುರುತಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
2. ರಾಜ್ಯ ಸರ್ಕಾರಗಳು ಅಭಿವೃದ್ಧಿ ಮತ್ತು ಪ್ರವಾಸೋದ್ಯಮದ ಹೆಸರಿನಲ್ಲಿ ಅವೈಜ್ಞಾನಿಕವಾಗಿ ನಡೆಸುವ ನಿರ್ಮಾಣ ಕೆಲಸಗಳನ್ನು ನಿಯಂತ್ರಿಸಲು ಸೂಕ್ತವಾದ ಕಾನೂನು ರೂಪಿಸಬೇಕು. ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.
ಸದ್ಯಕ್ಕೆ, ಅಭಿವೃದ್ಧಿ v/s ಪರಿಸರ (Environment v/s Development) – ಇದು ನೈತಿಕ ಪ್ರಶ್ನೆಯಾಗಿದೆ. ಇಲ್ಲಿ ನಾವು ಅಭಿವೃದ್ಧಿಯ ಕಡೆಗೆ ಹೋಗಬೇಕೋ ಅಥವಾ ಪರಿಸರ ಸಂರಕ್ಷಣೆ ಮಾಡಬೇಕೋ ಎಂಬುದಕ್ಕೆ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಅಭಿವೃದ್ಧಿ ಅಗತ್ಯಗಳಿಗೆ ಅನುಗುಣವಾಗಿ ಪರಿಸರ ಸಂರಕ್ಷಣೆ ಮತ್ತು ಆರ್ಥಿಕ ಅಭಿವೃದ್ಧಿಯ ನಡುವಿನ ಸೂಕ್ಷ್ಮ ಸಮತೋಲನವನ್ನು ಕಾಪಾಡಿಕೊಳ್ಳಬೇಕಿದೆ. ಸುಸ್ಥಿರ ಅಭಿವೃದ್ಧಿಯ(sustainable development) ಗುರಿಗಳೊಂದಿಗೆ ಪಶ್ಚಿಮ ಘಟ್ಟಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಿದೆ.