ಕೇಂದ್ರ ಸಚಿವ ನಿತಿನ್ ಗಡ್ಕರಿ ‘ಬಾವಿಗೆ ಹಾರುವುದೇ ಲೇಸು’ ಎಂದಿದ್ದೇಕೆ?

Date:

Advertisements
ನಿತಿನ್ ಗಡ್ಕರಿ ಕನಸುಗಳು ಒಂದೆರಡಲ್ಲ; ಯೂರಿನ್‌ನಿಂದ ಯೂರಿಯಾ ಮಾಡುವುದು ಅವರ ಒಂದು ಕನಸು. ಅವರು ತಮ್ಮ ಕನಸುಗಳನ್ನು ಈಡೇರಿಸಲು ಹೊರಟು ಸುದ್ದಿಯಾಗಿದ್ದಕ್ಕಿಂತ ವಂಚನೆ, ಅವ್ಯವಹಾರಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ಪಕ್ಷದಲ್ಲಿ ಮತ್ತು ಮೋದಿಯವರ ಸಂಪುಟದಲ್ಲಿ ಪ್ರಭಾವ ಕಳೆದುಕೊಂಡಿರುವ ಗಡ್ಕರಿ ಪುಟಿದೇಳಲು ತೀರ್ಮಾನಿಸಿದಂತಿದೆ. ಅದರ ಫಲವೇ 'ಬಾವಿಗೆ ಬೀಳುವ' ಈ ಹೇಳಿಕೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಮ್ಮ ಹೇಳಿಕೆಯೊಂದರಿಂದ ಸುದ್ದಿಯಲ್ಲಿದ್ದಾರೆ. ‘ಕಾಂಗ್ರೆಸ್ ಸೇರುವುದಕ್ಕಿಂತ ಬಾವಿಗೆ ಹಾರುವುದು ಲೇಸು’ ಎನ್ನುವುದು ಅವರ ಹೇಳಿಕೆ. ಕಾಂಗ್ರೆಸ್‌ ಸೇರಿ ಎಂದು ಹಿಂದೊಮ್ಮೆ ತಮಗೆ ಆಹ್ವಾನ ನೀಡಿದ್ದವರಿಗೆ ತಾವು ಹಾಗೆ ಉತ್ತರ ನೀಡಿದ್ದಾಗಿ ನಿತಿನ್ ಗಡ್ಕರಿ ಈಗ ಹೇಳಿಕೊಂಡಿದ್ದಾರೆ.

ನಿತಿನ್ ಗಡ್ಕರಿಯವರು ಆಗಾಗ ಇಂಥ ಹೇಳಿಕೆಗಳನ್ನು ನೀಡುವುದರ ಮೂಲಕ ಸುದ್ದಿಯಲ್ಲಿರುತ್ತಾರೆ. ಒಂದು ವರ್ಷದ ಹಿಂದೆ, ಅಂದರೆ 2022ರ ಆಗಸ್ಟ್‌ನಲ್ಲಿ, ಇನ್ನು ತಾನು ರಾಜಕಾರಣ ತ್ಯಜಿಸುವುದೇ ವಾಸಿ ಎಂದಿದ್ದರು. ಈಗಿನಂತೆಯೇ ಆಗ ಕೆಲವರು ಆಶ್ಚರ್ಯ ಪಟ್ಟಿದ್ದರು. ಕೇವಲ 52 ವರ್ಷಕ್ಕೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿ, ಅತಿ ಕಿರಿಯ ಅಧ್ಯಕ್ಷ ಎನ್ನಿಸಿಕೊಂಡಿದ್ದವರು ಗಡ್ಕರಿ. ಅಂಥವರು 65ನೇ ವಯಸ್ಸಿಗೆ ರಾಜಕೀಯ ಸನ್ಯಾಸದ ಮಾತು ಆಡಿದ್ದರು.

ಗಡ್ಕರಿಯವರನ್ನು ಬಲ್ಲವರಿಗೆ ಇದ್ಯಾವುದರಲ್ಲೂ ಅಚ್ಚರಿ ಪಡುವಂಥದ್ದೇನಿಲ್ಲ ಎನ್ನುವುದು ತಿಳಿದಿದೆ. ಉತ್ತಮ ಲಹರಿಯಲ್ಲಿದ್ದಾಗ ಮನ್ನಾ ಡೇ ಹಾಡು ಹಾಡುವ, ಮೂಡ್ ಸರಿ ಇಲ್ಲದಿದ್ದಾಗ ಜೀವನದಲ್ಲಿ ರಾಜಕಾರಣಕ್ಕಿಂತ ಮುಖ್ಯವಾಗಿ ಮಾಡಬೇಕಾದ ಕೆಲಸಗಳು ಅನೇಕವಿವೆ ಎನ್ನುವ ಗಡ್ಕರಿ ಈಗ ಮೋದಿ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ; ‘ಕಾಂಗ್ರೆಸ್ ಸರ್ಕಾರ 60 ವರ್ಷಗಳಲ್ಲಿ ಮಾಡಿದ ಕೆಲಸಕ್ಕಿಂತಲೂ ಮೋದಿಯವರ ಒಂಬತ್ತು ವರ್ಷದ ಸರ್ಕಾರ ಎರಡು ಪಟ್ಟು ಹೆಚ್ಚು ಕೆಲಸ ಮಾಡಿದೆ’ ಎಂದಿದ್ದಾರೆ. ‘ತಾನು ಬಿಜೆಪಿ ಮತ್ತು ಅದರ ಸಿದ್ಧಾಂತದಲ್ಲಿ ಬಲವಾದ ನಂಬಿಕೆ ಹೊಂದಿದ್ದೇನೆ ಮತ್ತು ಅದಕ್ಕಾಗಿ ಕೆಲಸ ಮಾಡುವುದನ್ನು ಮುಂದುವರೆಸುತ್ತೇನೆ’ ಎಂದು ಕೂಡ ಹೇಳಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ: ಶಾಸಕ ಮುನಿರತ್ನರನ್ನು ಕೂಡಲೇ ಬಂಧಿಸಿ ವಿಚಾರಣೆಗೊಳಪಡಿಸಿ: ಮೋಹನ್ ದಾಸರಿ

ಗಡ್ಕರಿ ಯಾಕೆ ಹೀಗೆ ಹೇಳಿದರು ಎಂಬುದನ್ನು ಅರ್ಥ ಮಾಡಿಕೊಳ್ಳಲು ತುಂಬಾ ಕಸರತ್ತು ಮಾಡುವ ಅಗತ್ಯವೇನಿಲ್ಲ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಗಡ್ಕರಿ ಅವರ ಬಾಯಲ್ಲಿ ಇಂಥ ಮಾತುಗಳನ್ನು ಆಡಿಸಿದೆ.

ನಿತಿನ್ ಗಡ್ಕರಿ ಮಹಾರಾಷ್ಟ್ರದ ನಾಗಪುರದವರು. ಆರ್‌ಎಸ್‌ಎಸ್‌ ಕೇಂದ್ರ ಕಚೇರಿ ಇರುವುದು ಕೂಡ ನಾಗಪುರದಲ್ಲಿಯೇ. ಸಂಘ ಪರಿವಾರದ ನೆರಳಿನಲ್ಲೇ ರಾಜಕಾರಣ ಮಾಡುತ್ತಾ ಬೆಳೆದವರು ಗಡ್ಕರಿ. ಒಂದು ಕಾಲದಲ್ಲಿ ಪಕ್ಷದ ಪೋಸ್ಟರ್ ಅಂಟಿಸುತ್ತಿದ್ದ ಗಡ್ಕರಿ ಅವರ ಬ್ರಾಹ್ಮಣ ಜಾತಿ ಮತ್ತು ನಾಗಪುರದ ನಂಟಿನಿಂದಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದವರೆಗೆ ಬೆಳೆದರು.                        

ನಿತಿನ್ ಗಡ್ಕರಿ ನರೇಂದ್ರ ಮೋದಿಯವರ ಮೊದಲ ಸರ್ಕಾರದಲ್ಲಿಯೂ ಮಂತ್ರಿಯಾಗಿದ್ದರು. ಆಗ ಅವರಿಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆಯ ಜೊತೆಗೆ ಹಡಗು ಸಾಗಣೆ ಖಾತೆಯನ್ನೂ ನೀಡಲಾಗಿತ್ತು. ಗೋಪಿನಾಥ್ ಮುಂಡೆ ಆಕಸ್ಮಿಕ ಸಾವಿನ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನೂ ಗಡ್ಕರಿಯವರಿಗೇ ವಹಿಸಲಾಯಿತು. 2017ರಲ್ಲಿ ಉಮಾಭಾರತಿಯವರ ನಿರ್ಗಮನದಿಂದ ತೆರವಾದ ಜಲಸಂಪನ್ಮೂಲ, ನದಿ ಅಭಿವೃದ್ಧಿ, ಗಂಗಾ ಪುನರುಜ್ಜೀವನ ಖಾತೆಗಳನ್ನೂ ಅವರಿಗೇ ನೀಡಲಾಯಿತು. ಹೀಗೆ ಗಡ್ಕರಿ ಆಗ ಪ್ರಭಾವಿ ಸಚಿವರಾಗಿದ್ದರು.

ಮೋದಿಯವರ ಮೊದಲ ಸರ್ಕಾರದಲ್ಲಿ ಮಂತ್ರಿಗಳಾಗಿದ್ದವರ ಪೈಕಿ ಎರಡನೇ ಸರ್ಕಾರದಲ್ಲಿ ಉಳಿದ ಬೆರಳೆಣಿಕೆಯ ಮಂದಿಯಲ್ಲಿ ಗಡ್ಕರಿಯೂ ಒಬ್ಬರು; ನಿಧಾನಕ್ಕೆ ಗಡ್ಕರಿಯವರ ಪ್ರಾಶಸ್ತ್ಯ ಕುಸಿಯುತ್ತಾ ಬರತೊಡಗಿತು. ಮೋದಿ-ಶಾ ಆಪ್ತಕೂಟದಿಂದ ದೂರವೇ ಉಳಿದ ಗಡ್ಕರಿ ಸಚಿವರಾಗಿದ್ದರೂ ತಮ್ಮ ಪ್ರಭಾವ ಕಳೆದುಕೊಂಡರು. ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಅವರು ಹಲ್ಲು ಕಿತ್ತ ಹಾವಿನಂತಾದರು. ಆರ್‌ಎಸ್‌ಎಸ್‌ನೊಂದಿಗಿನ ಉತ್ತಮ ಬಾಂಧವ್ಯದ ಕಾರಣಕ್ಕೆ ಅವರಿಗೆ ಎರಡನೇ ಬಾರಿಗೆ ಅಧ್ಯಕ್ಷ ಪದವಿ ನೀಡಲಿಲ್ಲ. 2022ರಲ್ಲಿ ಬಿಜೆಪಿ ಸಂಸದೀಯ ಮಂಡಳಿಯಿಂದಲೂ ಅವರಿಗೆ ಕೊಕ್ ಕೊಡಲಾಗಿತ್ತು. ಇವುಗಳ ಹಿನ್ನೆಲೆಯಲ್ಲಿಯೇ ವರ್ಷದ ಹಿಂದೆ ರಾಜಕೀಯ ತ್ಯಜಿಸುವುದಾಗಿ ಹೇಳಿದ್ದ ಗಡ್ಕರಿಯವರಿಗೆ ಈಗ ತಮ್ಮ ರಾಜಕೀಯ ಭವಿಷ್ಯದ ಚಿಂತೆ ಕಾಡಲಾರಂಭಿಸಿದೆ ಎನ್ನಿಸುತ್ತಿದೆ. ಹಾಗಾಗಿಯೇ ಅವರು ‘ಬಾವಿಗೆ ಹಾರುವ’ ಮಾತು ಆಡಿದ್ದಾರೆ.

ಈ ಸುದ್ದಿ ಓದಿದ್ದೀರಾ: ಅರ್ಥ ಪಥ | ಸಾಧ್ಯವಾದರೆ ಅವರು ಭಾರತವನ್ನೇ ಕೊಳ್ಳುತ್ತಾರೆ!

ಪ್ರಧಾನಿ ಮೋದಿಯವರ ಸಂಪುಟದಲ್ಲಿ ತಮ್ಮ ಖಾತೆಯ ಬಗ್ಗೆ ತಾವೇ ನಿರ್ಧಾರಗಳನ್ನು ಕೈಗೊಳ್ಳುವ ಕೆಲವೇ ಮಂತ್ರಿಗಳಲ್ಲಿ ನಿತಿನ್ ಗಡ್ಕರಿ ಕೂಡ ಒಬ್ಬರು. ದಿನಕ್ಕೆ 60 ಕಿಮೀ ಹೆದ್ದಾರಿ ನಿರ್ಮಾಣ ಮಾಡುವುದು ತಮ್ಮ ಗುರಿ ಎಂದು ಹೇಳಿದ್ದ ಅವರು ತಮ್ಮ ಇಲಾಖೆಯಲ್ಲಿ ಒಂದಿಷ್ಟು ಕೆಲಸವನ್ನೂ ಮಾಡಿದ್ದಾರೆ. ಗಡ್ಕರಿಯವರ ಕನಸುಗಳು ಒಂದೆರಡಲ್ಲ; ಯೂರಿನ್‌ನಿಂದ ಯೂರಿಯಾ ಮಾಡುವುದು ಅವರ ಒಂದು ಕನಸು. ದೇಶದ ಜನರ ಮೂತ್ರ ಸಂಗ್ರಹಿಸಿ ಅದನ್ನು ರಸಗೊಬ್ಬರ ತಯಾರಿಕೆಗೆ ಬಳಸಿದರೆ, ವಿದೇಶಗಳಿಂದ ರಸಗೊಬ್ಬರ ಆಮದು ಮಾಡಿಕೊಳ್ಳುವುದು ತಪ್ಪುತ್ತದೆ ಎಂದು ಅವರೊಮ್ಮೆ ಘನವಾದ ಐಡಿಯಾ ಕೊಟ್ಟಿದ್ದರು. ಹಾಗೆಯೇ ಮನುಷ್ಯನ ತಲೆಕೂದಲು ಬಳಸಿ ಅಮೈನೋ ಆಸಿಡ್ ಉತ್ಫಾದನೆ ಮಾಡುವುದು, ದೆಹಲಿಯಿಂದ ಆಗ್ರಾದ ತಾಜ್‌ಮಹಲ್‌ವರೆಗೆ ಜಲಮಾರ್ಗ ನಿರ್ಮಾಣ ಹೀಗೆ ಹತ್ತಾರು ಯೋಜನೆಗಳು. ಗಡ್ಕರಿಯವರು ಇವುಗಳ ಜಾರಿಗೆ ಪ್ರಯತ್ನಿಸಿದ್ದಕ್ಕಿಂತ ವಂಚನೆ, ಅವ್ಯವಹಾರ, ಲಂಚದ ಆರೋಪಗಳಿಗೆ ಗುರಿಯಾಗಿ ಸುದ್ದಿಯಾಗಿದ್ದೇ ಹೆಚ್ಚು.

ಆರ್‌ಎಸ್‌ಎಸ್‌ನ ಹಲವರು ಪಾಲುದಾರರಾಗಿದ್ದ ನಾಗಪುರದ ಕಂಪನಿಯೊಂದರ ಭೂಮಿಯನ್ನು ಅಡವಿಟ್ಟು ತನ್ನ ಮಕ್ಕಳ ಮಾಲೀಕತ್ವದ ಕಂಪನಿಗೆ 42 ಕೋಟಿ ರೂಪಾಯಿ ಸಾಲ ಪಡೆದಿದ್ದ ಆರೋಪ ಎದುರಾಗಿತ್ತು. ನಿತಿನ್ ಗಡ್ಕರಿಯವರ ಮಾಲೀಕತ್ವದ ಕಂಪನಿಗೆ ಸ್ವೀಡಿಷ್ ಕಂಪನಿ ಐಷಾರಾಮಿ ಬಸ್‌ವೊಂದನ್ನು ಕೊಡುಗೆಯನ್ನಾಗಿ ನೀಡಿದ್ದು ಇವರ ವಿರುದ್ಧದ ಮತ್ತೊಂದು ಆರೋಪ. ಭಾರತದ ಏಳು ರಾಜ್ಯಗಳಿಗೆ ಬಸ್‌ಗಳನ್ನು ಪೂರೈಸುವ ಸಂಬಂಧ ಆ ಬಸ್ ಅನ್ನು ಲಂಚವನ್ನಾಗಿ ನೀಡಲಾಗಿದೆ ಎಂದು ಸ್ವೀಡನ್ ಟಿವಿಯೊಂದು ವರದಿ ಮಾಡಿತ್ತು. ಇನ್ನೊಮ್ಮೆ ಗಡ್ಕರಿ ಅವರ ಕಂಪನಿ ಏಳು ಕೋಟಿ ರೂಪಾಯಿ ತೆರಿಗೆ ವಂಚಿಸಿದ ಆರೋಪ ಎದುರಾಗಿತ್ತು. ಹೀಗೆ ಸಾಲು ಸಾಲು ಆರೋಪಗಳಿಗೆ ಗುರಿಯಾಗಿ ಹೈರಾಣಾದಂತೆ ಕಾಣುವ ಗಡ್ಕರಿ ಈಗ ಮತ್ತೆ ಪುಟಿದೇಳಲು ನಿರ್ಧರಿಸಿದಂತಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು, ಸ್ಪರ್ಧಿಸಿ ಗೆಲ್ಲಲು, ಗೆದ್ದು ಮಂತ್ರಿಯಾಗಲು ಮೋದಿ-ಶಾ ಕೃಪೆ ಬೇಕು ಎಂದು ತಡವಾಗಿ ಅರಿತಂತಿರುವ ಗಡ್ಕರಿ, ಅದಕ್ಕಾಗಿ ಮೋದಿಯವರನ್ನು ಹೊಗಳುವ, ಕಾಂಗ್ರೆಸ್ ಅನ್ನು ತೆಗಳುವ ಮಾತು ಆಡಿದ್ದಾರೆ ಎನ್ನಲಾಗುತ್ತಿದೆ.                                

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

Download Eedina App Android / iOS

X