ಸಂಜೆ ವೇಳೆ ಸುರಿಯುತ್ತಿದ್ದ ಮಳೆಯಲ್ಲಿ ವಿಡಿಯೋ ಚಿತ್ರೀಕರಿಸಲು ತೆರಳಿದ್ದ ಯುವತಿ ಮೇಲೆ ಕಾಮಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದ ಸಂತ್ರಸ್ತ ಯುವತಿಯನ್ನೇ, ‘ನೀನೇಕೆ 7:30ರಲ್ಲಿ ಹೊರಹೋಗಿದ್ದೆ’ ಎಂದು ಪೊಲೀಸರು ಪ್ರಶ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನೋಯ್ಡಾದ ಸೆಕ್ಟರ್ 48 ಪ್ರದೇಶದಲ್ಲಿ ಮಳೆಯ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಅಪರಿಚಿತನೊಬ್ಬ ಯುವತಿ ಬಟ್ಟೆಯನ್ನು ಕಿತ್ತುಹಾಕಿದ್ದಾನೆ. ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ, ಇಬ್ಬರು ಬಾಲಕಿಯರು ಆಕೆಯ ರಕ್ಷಣೆಗೆ ಬಂದಿದ್ದು, ಕಾಮುಕ ಆರೋಪಿ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಘಟನೆ ಬಗ್ಗೆ ದೂರು ನೀಡಿಲು ಯುವತಿ ಸೆಕ್ಟರ್ 49 ಪೊಲೀಸ್ ಠಾಣೆಗೆ ತೆರಳಿದ್ದರು. ಆದರೆ, ಕರ್ತವ್ಯದಲ್ಲಿದ್ದ ಅಧಿಕಾರಿಗಳು ಎಫ್ಐಆರ್ ದಾಖಲಿಸಲು ನಿರಾಕರಿಸಿದ್ಅದರೆ. ಅಲ್ಲದೆ, ಆ ಸಮಯದಲ್ಲಿ ನೀನ್ಯಾಕೆ ಹೊರಹೋಗಿದ್ದೆ ಎಂದು ಆಕೆಯನ್ನೇ ಪ್ರಶ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಯುವತಿಯು ತನ್ನ ಮೇಲಾದ ದೌರ್ಜನ್ಯ ಮತ್ತು ಪೊಲೀಸರ ಧೋರಣೆಯ ಬಗ್ಗೆ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ, ಆಕೆಯ ವಿಡಿಯೋ ಸ್ಥಳೀಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.
“ಕಠಿಣ ಸೆಕ್ಷನ್ಗಳ ಅಡಿಯಲ್ಲಿ ತಕ್ಷಣವೇ ಪ್ರಕರಣ ದಾಖಲಿಸಲಾಗಿದೆ. ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಾವಳಿ ಇತ್ಯಾದಿಗಳನ್ನು ಪರಿಶೀಲಿಸಲಾಗುತ್ತಿದೆ. ಇಂದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.