ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರದ ಸಂತೆ ಮೈದಾನದ ಬಳಿಯ ಹೊರಕೆರಮ್ಮ ದೇವಾಲಯ, ಶನಿಮಹಾತ್ಮ ದೇವಾಲಯ ಹಾಗೂ ಪಾಂಡುರಂಗಸ್ವಾಮಿ ದೇವಾಲಯಕ್ಕೆ ಕನ್ನ ಹಾಕಿರುವ ಖದೀಮರು ಹುಂಡಿ ಬೀಗ ಮುರಿದು ಅಂದಾಜು 70 ಸಾವಿರ ಹಣ ದೋಚಿರುವ ಘಟನೆ ನಡೆದಿದೆ.
ಗ್ರಾಮದ ಮಧ್ಯೆ ಸಂತೆ ಮೈದಾನದ ಬಳಿಯ ಈ ದೇವಾಲಯಗಳು ಗುರಿಯಾಗಿಸಿಕೊಂಡ ಕಳ್ಳರ ಗುಂಪು ಸರಾಗವಾಗಿ ಕಳ್ಳತನ ಮಾಡಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಈಗಾಗಲೇ ಸಿ.ಎಸ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಲವು ಗ್ರಾಮದ ದೇವಾಲಯಕ್ಕೆ ಕನ್ನ ಹಾಕಿರುವ ಘಟನೆ ನಡೆದಿದ್ದು, ಒಂದೇ ಹೋಬಳಿಯಲ್ಲಿ ಕಳ್ಳತನ ನಡೆದಿರುವುದು ಹಿನ್ನಲೆ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಒಂಟಿ ಮನೆ, ಬೀಗ ಹಾಕಿದ ಮನೆ ಹಾಗೂ ದೇವಾಲಯಗಳತ್ತ ರಾತ್ರಿ ವೇಳೆ ಜಾಗೃತೆ ವಹಿಸಿ ಒಡವೆಗಳು, ಹಣ, ಬೆಳ್ಳಿ ಪೂಜಾ ಸಾಮಗ್ರಿಗಳು ಜೋಪಾನ ಮಾಡಿಕೊಳ್ಳಲು ದೇವಾಲಯ ಸಮಿತಿಗಳಿಗೆ ಸೂಚಿಸಲಾಗಿದೆ.
ಸಿ.ಎಸ್.ಪುರ ಹೋಬಳಿ ಜೊತೆಗೆ ಕಡಬ ಹೋಬಳಿಯ ಕೆಲ ದೇವಾಲಯಗಳಲ್ಲಿ ಸಹ ಹುಂಡಿ ಹಣಕ್ಕೆ ಟಾರ್ಗೆಟ್ ಮಾಡಿರುವುದು ವ್ಯವಸ್ಥಿತ ಗುಂಪು ಸ್ಥಳೀಯವಾಗಿ ಎಲ್ಲಾ ಚಲನವಲನ ಅರಿತು ಕಳ್ಳತನ ಮಾಡಿದೆ. ಈ ಬಗ್ಗೆ ಪೊಲೀಸರು ಎಚ್ಚರಿಕೆ ವಹಿಸಬೇಕಿದೆ.
ರಾತ್ರಿ ಗಸ್ತು ಹೆಚ್ಚಳ ಹಾಗೂ 112 ವಾಹನ ಓಡಾಟ ರಾತ್ರಿ ನಡೆಸಿದಲ್ಲಿ ಕಳ್ಳತನ ಪ್ರಕರಣಕ್ಕೆ ತಡೆಯೊಡ್ಡಬಹುದು. ಹೀಗೆ ಕಳ್ಳತನ ಮುಂದುವರೆದಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಸಿ.ಎಸ್.ಪುರ ಪೊಲೀಸರು ಧಾವಿಸಿ ಮುಂದಿನ ತನಿಖೆ ಆರಂಭಿಸಿ ಪ್ರಕರಣ ದಾಖಲಿಸಿದ್ದಾರೆ.