ಮಹಿಳೆಯು ತನ್ನ ಮೊದಲ ಮದುವೆಯನ್ನು ಕಾನೂನುಬದ್ಧವಾಗಿ ಮುರಿದುಕೊಳ್ಳದೆ ಇದ್ದರೂ ಸಹ, ಎರಡನೇ ಗಂಡನಿಂದ ಜೀವನಾಂಶ ಪಡೆಯಬಹುದು. ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 125ರ ಅಡಿಯಲ್ಲಿ ಮಹಿಳೆಗೆ ಜೀವನಾಂಶ ನೀಡುವುದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಿಆರ್‌ಪಿಸಿ 125ರ ಅಡಿಯಲ್ಲಿ ಜೀವನಾಂಶದ ಹಕ್ಕು ಪತ್ನಿ ಪಡೆಯುವ ಪ್ರಯೋಜನವಲ್ಲ. ಬದಲಾಗಿ, ಪತಿ ನಿರ್ವಹಿಸಬೇಕಾದ ಕಾನೂನಾತ್ಮಕ ಮತ್ತು ನೈತಿಕ ಕರ್ತವ್ಯವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು” ಎಂದು ನ್ಯಾಯಮೂರ್ತಿ ಬಿ.ವಿ ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ಹೇಳಿದೆ.
ಮಹಿಳೆಯೊಬ್ಬರು ತಮ್ಮ ಮೊದಲ ವಿವಾಹ ಸಂಬಂಧವನ್ನು ಕಾನೂನಾತ್ಮಕವಾಗಿ ಮುರಿದುಕೊಳ್ಳದೆ (ವಿಚ್ಛೇದನ ಪಡೆಯದೆ) 2ನೇ ಮದುವೆಯಾಗಿದ್ದರು. ಆ ಬಳಿಕ, 2ನೇ ವೈವಾಹಿಕ ಸಂಬಂಧವೂ ಮುರಿದುಬಿದ್ದಿತ್ತು. ತಮಗೆ 2ನೇ ಪತಿ ಜೀವನಾಂಶ ನೀಡಬೇಕೆಂದು ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣಾ ನ್ಯಾಯಾಲಯವು ಮಾಸಿಕ 5,000 ರೂ. ಜೀವನಾಂಶ ನೀಡುವಂತೆ 2ನೇ ಪತಿಗೆ ಆದೇಶ ನೀಡಿತ್ತು.
ಆದರೆ, ಆ ತೀರ್ಪನ್ನು ಪ್ರಶ್ನಿಸಿ ಮಹಿಳೆಯ 2ನೇ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ‘ಆಕೆ ಮೊದಲ ಮದುವೆಯನ್ನು ಕಾನೂನು ತೀರ್ಪಿನ ಮೂಲಕ (ವಿಚ್ಛೇದನ) ಮುರಿದುಕೊಂಡಿಲ್ಲ. ಹೀಗಾಗಿ, ಮಹಿಳೆಯನ್ನು ಅರ್ಜಿದಾರನ ಕಾನೂನುಬದ್ದ ಪತ್ನಿ ಎಂದು ಪರಿಗಣಿಸಲು ಆಗುವುದಿಲ್ಲ’ ಎಂದು ಹೇಳಿತ್ತು. ಮಾತ್ರವಲ್ಲದೆ, ಜೀವನಾಂಶ ನೀಡುವುದನ್ನು ರದ್ದುಗೊಳಿಸಿತ್ತು.
ಹೈಕೋರ್ಟ್ ತೀರ್ಪಿನ ವಿರುದ್ಧ ಮಹಿಳೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅವರ ಮೇಲ್ಮನವಿಯನ್ನು ಆಲಿಸಿರುವ ಸುಪ್ರೀಂ ಕೋರ್ಟ್, “ಮಹಿಳೆ ಕಾನೂನುಬದ್ಧವಾಗಿ ಮೊದಲ ಪತಿಯಿಂದ ದೂರವಾಗದೇ ಇದ್ದರೂ, ಆಕೆ 2ನೇ ಪತಿಯಿಂದ ಜೀವನಾಂಶ ಪಡೆಯಬಹುದು” ಎಂದು ಹೇಳಿದೆ.
ಈ ವರದಿ ಓದಿದ್ದೀರಾ?: ಮುಟ್ಟಿನ ಸಮಯದಲ್ಲಿ ಹತ್ತಾರು ಕಟ್ಟುಪಾಡುಗಳು; ಗಂಡನಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ
“ಸಿಆರ್‌ಪಿಸಿ 125ರ ಅಡಿಯಲ್ಲಿ ಜೀವನಾಂಶ ಎಂಬುದು ಸಾಮಾಜಿಕ ನ್ಯಾಯದ ಉದ್ದೇಶವನ್ನು ಹೊಂದಿದೆ. ನಾವು ಆತ್ಮಸಾಕ್ಷಿಯಿಂದ ಗಮನಿಸಿದಾಗ ಮೇಲ್ಮನವಿದಾರರಿಗೆ (ಮಹಿಳೆ) ಜೀವನಾಂಶವನ್ನು ನಿರಾಕರಿಸಲು ಸಾಧ್ಯವಿಲ್ಲ. ಸಾಮಾಜಿಕ ಕಲ್ಯಾಣ ನಿಬಂಧನೆಗಳನ್ನು ವಿಸ್ತಾರವಾದ ಮತ್ತು ಫಲಕಾರಿ ಉದ್ದೇಶಕ್ಕಾಗಿ ಒಳಪಡಿಸಬೇಕು ಎಂಬುದು ಕಾನೂನಿನ ಆಶಯವಾಗಿದೆ” ಎಂದು ಪೀಠ ಹೇಳಿದೆ.
“ಮಹಿಳೆಯ ಮೊದಲ ವಿವಾಹ ಸಂಬಂಧವನ್ನು ಕಾನೂನುಬದ್ಧವಾಗಿ ಮುರಿದುಕೊಂಡಿಲ್ಲ ಎಂಬ ಕಾರಣಕ್ಕೆ ಪ್ರತಿವಾದಿಯು ಜೀವನಾಂಶ ನೀಡುವುದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಅದಕ್ಕೆ ಅವಕಾಶ ಕೊಡಬಾರದು. ಅಲ್ಲದೆ, ಮಹಿಳೆಯು ಮೊದಲನೇ ಪತಿಯಿಂದ ಜೀವನಾಂಶ ಪಡೆಯುತ್ತಿಲ್ಲ ಎಂಬುದನ್ನು ಗಮನಿಸಬೇಕು” ಎಂದು ಪೀಠ ಹೇಳಿದೆ.