‘BRICS’ನಿಂದ ಹೊರಗುಳಿಯುತ್ತದೆಯೇ ಭಾರತ: ದಕ್ಷಿಣ ರಾಷ್ಟ್ರಗಳ ಒಕ್ಕೂಟದಲ್ಲಿ ದೇಶದ ಸ್ಥಿತಿ ಏನು?

Date:

Advertisements
ಭಾರತವು ಬ್ರಿಕ್ಸ್‌ನಿಂದ ಹೊರಗುಳಿಯಲಿದೆ ಅಥವಾ ಭಾರತವನ್ನು ಬ್ರಿಕ್ಸ್‌ನಿಂದ ಹೊರಹಾಕಲಾಗುತ್ತದೆ ಎಂಬ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಗೆ ಕಳೆದ 11 ವರ್ಷಗಳ ಮೋದಿ ಆಡಳಿತದಲ್ಲಿ ಭಾರತದ ಧೋರಣೆ ಮತ್ತು ಬ್ರಿಕ್ಸ್‌ನಲ್ಲಿನ ನಿರಾಸಕ್ತಿ ಕಾರಣವೇ?

ಬ್ರಿಜಿಲ್, ರಷ್ಯಾ, ಭಾರತ ಹಾಗೂ ಚೀನಾ ಒಗ್ಗೂಡಿ ಕಟ್ಟಿದ ‘BRICS’ ಕಳೆದ 24 ವರ್ಷಗಳಿಂದ ಸಕ್ರಿಯವಾಗಿದೆ. ತನ್ನ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರ, ಸಮನ್ವಯ ನಡೆಸುತ್ತಲೇ ದಕ್ಷಿಣ ರಾಷ್ಟ್ರಗಳ ಸಂಬಂಧವನ್ನು ಗಟ್ಟಿಗೊಳಿಸುತ್ತಾ ಬಂದಿದೆ. ಬ್ರಿಕ್ಸ್‌ನ ಈ ವರ್ಷದ ಶೃಂಗಸಭೆಯು ಜುಲೈ 6 ಮತ್ತು 7ರಂದು ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಭೆಯಲ್ಲಿ ಭಾಗವಹಿಸಲು ಈಗಾಗಲೇ ಬ್ರೆಜಿಲ್‌ಗೆ ಹಾರಿದ್ದಾರೆ. ಆದಾಗ್ಯೂ, ಇದೆಲ್ಲದರ ನಡುವೆ, ಭಾರತವು ಬ್ರಿಕ್ಸ್‌ನಿಂದ ಹೊರಗುಳಿಯಲಿದೆ ಅಥವಾ ಭಾರತವನ್ನು ಬ್ರಿಕ್ಸ್‌ನಿಂದ ಹೊರಹಾಕಲಾಗುತ್ತದೆ ಎಂಬ ಅಭಿಪ್ರಾಯಗಳು, ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಗೆ ಕಳೆದ 11 ವರ್ಷಗಳ ಮೋದಿ ಆಡಳಿತದಲ್ಲಿ ಭಾರತದ ಧೋರಣೆ ಮತ್ತು ಬ್ರಿಕ್ಸ್‌ನಲ್ಲಿನ ನಿರಾಸಕ್ತಿ ಕಾರಣವೆಂದು ಹೇಳಲಾಗುತ್ತಿದೆ.

ಏನಿದು ಬ್ರಿಕ್ಸ್‌?

BRICS – ಪ್ರಮುಖ ಐದು ರಾಷ್ಟ್ರಗಳನ್ನು ಒಳಗೊಂಡು ರಚನೆಯಾದ ಆರ್ಥಿಕತೆಯ ಮೇಲೆ ಆಧಾರವಾದ ಒಕ್ಕೂಟ. ಇದು ಅನೌಪಚಾರಿಕ ಒಕ್ಕೂಟವಾಗಿದ್ದು, ಜಾಗತಿಕ ಆರ್ಥಿಕತೆ, ರಾಜಕೀಯ ಹಾಗೂ ಭದ್ರತೆಯ ಸವಾಲುಗಳನ್ನು ಎದುರಿಸಲು ಸದಸ್ಯ ರಾಷ್ಟ್ರಗಳ ನಡುವೆ ಸಹಕಾರ ಸಂಬಂಧವನ್ನು ಬಲಪಡಿಸುತ್ತಿದೆ. ಪ್ರಮುಖವಾಗಿ, ಜಾಗತಿಕ ದಕ್ಷಿಣ (Global South) ರಾಷ್ಟ್ರಗಳ ವೇದಿಕೆಯಾಗಿದೆ. ಪಾಶ್ಚಿಮಾತ್ಯ-ನಿಯಂತ್ರಿತ ಸಂಸ್ಥೆಗಳಾದ ಜಿ7, ಐಎಂಎಫ್ ಹಾಗೂ ವಿಶ್ವ ಬ್ಯಾಂಕ್‌ಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.

Advertisements

ಆರಂಭದಲ್ಲಿ, ಬ್ರೆಜಿಲ್, ರಷ್ಯಾ, ಭಾರತ, ಚೀನಾ – ಬ್ರಿಕ್ಸ್‌ನ ಸದಸ್ಯ ರಾಷ್ಟ್ರಗಳಾಗಿದ್ದವು – ಆಗ ಇದನ್ನು ಬ್ರಿಕ್ (BRIC) ಎಂದು ಕರೆಯಲಾಗುತ್ತಿತ್ತು. ಆ ನಂತರದಲ್ಲಿ, ದಕ್ಷಿಣ ಆಫ್ರಿಕಾದ ಸೇರ್ಪಡೆಯೊಂದಿಗೆ BRICS ಎಂದು ಮರುನಾಮಕರಣ ಮಾಡಲಾಯಿತು. ಪ್ರಸ್ತುತ, ಬ್ರಿಕ್ಸ್‌ನಲ್ಲಿ, 11 ಸದಸ್ಯ (ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಇಂಡೋನೇಷಿಯಾ) ರಾಷ್ಟ್ರಗಳಿವೆ.

ಬ್ರಿಕ್ಸ್‌ಅನ್ನು 2001ರಲ್ಲಿ ಗೋಲ್ಡ್‌ಮನ್ ಸ್ಯಾಕ್ಸ್‌ನ ಆರ್ಥಿಕ ತಜ್ಞ ಜಿಮ್ ಒ’ನೀಲ್ ರಚಿಸಿದರು. 2010ರಲ್ಲಿ ದಕ್ಷಿಣ ಆಫ್ರಿಕಾ ಸೇರ್ಪಡೆಯಾಯಿತು. ಕಳೆದ ಕೆಲವು ವರ್ಷಗಳಲ್ಲಿ ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಇಂಡೋನೇಷಿಯಾ ಸೇರ್ಪಡೆಗೊಂಡವು. ಈ 11 ರಾಷ್ಟ್ರಗಳು ಜಾಗತಿಕ ಜನಸಂಖ್ಯೆಯ 40% ಕ್ಕಿಂತ ಹೆಚ್ಚು ಜನರು ಮತ್ತು ಜಾಗತಿಕ ಜಿಡಿಪಿಯಲ್ಲಿ ಸುಮಾರು 30% ರಷ್ಟು ಪಾಲು ಹೊಂದಿವೆ. ಅಲ್ಲದೆ, ಒಟ್ಟು ಜಾಗತಿಕ ತೈಲ ಉತ್ಪಾದನೆಯಲ್ಲಿ 42% ಮತ್ತು ಕೃಷಿ ಉತ್ಪನ್ನಗಳಲ್ಲಿ 45% ಪಾಲು ಹೊಂದಿವೆ.

ಬ್ರಿಕ್ಸ್‌ ರಚನೆ – ನಡೆದು ಬಂದ ಹಾದಿ

  • BRICS – 2001ರಲ್ಲಿ ರಚನೆಯಾಯಿತು. ಜಿಮ್ ಒ’ನೀಲ್ ಅವರು ‘BRIC’ ಎಂಬ ಶಬ್ದವನ್ನು ರೂಪಿಸಿದರು. ಇದು ಬ್ರೆಜಿಲ್, ರಷ್ಯಾ, ಭಾರತ ಹಾಗೂ ಚೀನಾದ ಆರ್ಥಿಕ ಸಾಮರ್ಥ್ಯವನ್ನು ಗುರುತಿಸುವ ಉದ್ದೇಶವನ್ನು ಒಳಗೊಂಡಿತ್ತು. ಈ ನಾಲ್ಕು ರಾಷ್ಟ್ರಗಳು 2050ರ ವೇಳೆಗೆ ಜಾಗತಿಕ ಆರ್ಥಿಕತೆಯಲ್ಲಿ ಪ್ರಾಬಲ್ಯವನ್ನು ಸಾಧಿಸುತ್ತವೆಯೆಂದು ನೀಲ್ ಭವಿಷ್ಯ ನುಡಿದರು.
  • 2006ರಲ್ಲಿ BRIC ರಾಷ್ಟ್ರಗಳ ವಿದೇಶಾಂಗ ಸಚಿವರು ಯುಎನ್‌ಜಿಎ (UN General Assembly) ಸಭೆಯ ಸಮಯದಲ್ಲಿ ಪ್ರತ್ಯೇಕ ಸಭೆ ಸೇರಿದ್ದರು. ಇದು, BRIC ಒಕ್ಕೂಟದ ಮೊದಲ ಔಪಚಾರಿಕ ಸಭೆಯಾಗಿತ್ತು. ವಿಶ್ವಸಂಸ್ಥೆಯಲ್ಲಿ BRIC ರಾಷ್ಟ್ರಗಳ ನಿಲುವು, ಧೋರಣೆಗಳು ಏನಿರಬೇಕೆಂದು ಚರ್ಚಿಸಿ, ನಿರ್ಧರಿಸಿ, ಯುಎನ್‌ಜಿಎಯಲ್ಲಿ ಭಾಗಿಯಾದವು.
  • BRICSನ ಮೊದಲ ಶೃಂಗಸಭೆಯು 2009ರಲ್ಲಿ ರಷ್ಯಾದ ಯೆಕಾಟೆರಿನ್‌ಬರ್ಗ್‌ನಲ್ಲಿ ನಡೆಯಿತು. ಪ್ರಮುಖ ಆರ್ಥಿಕ ಸಹಕಾರಗಳ ಕುರಿತು ಚರ್ಚಿಸಲಾಯಿತು.
  • 2010ಯಲ್ಲಿ BRIC ಒಕ್ಕೂಟದಲ್ಲಿ ದಕ್ಷಿಣ ಆಫ್ರಿಕಾ ಸೇರಿಕೊಂಡಿತು. ಅಂದಿನಿಂದ BRICಅನ್ನು BRICS ಆಗಿ ಗುರುತಿಸಲಾಯಿತು.
  • ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ 2023ರಲ್ಲಿ ನಡೆದ ಶೃಂಗಸಭೆಯಲ್ಲಿ ಆರು ರಾಷ್ಟ್ರಗಳಿಗೆ (ಅರ್ಜೆಂಟೀನಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ) ಆಹ್ವಾನ ನೀಡಲಾಯಿತು. 2024ರಲ್ಲಿ ಈಜಿಪ್ಟ್, ಇಥಿಯೋಪಿಯಾ, ಇರಾನ್ ಮತ್ತು ಯುಎಇ BRICS ಒಕ್ಕೂಟ ಸೇರಿದವು. ಆದರೆ, ಸೌದಿ ಅರೇಬಿಯಾ ಇನ್ನೂ ಔಪಚಾರಿಕವಾಗಿ ಒಕ್ಕೂಟವನ್ನು ಸೇರಿಲ್ಲ. ಈ ನಡುವೆ BRICS ಆಹ್ವಾನವನ್ನು ಅರ್ಜೆಂಟೀನಾ ತಿರಸ್ಕರಿಸಿತು.
  • 2025ರಲ್ಲಿ ಇತ್ತೀಚೆಗೆ, ಇಂಡೋನೇಷಿಯಾ BRICSನಲ್ಲಿ ಔಪಚಾರಿಕ ಸದಸ್ಯತ್ವ ಪಡೆದುಕೊಂಡಿದೆ. ಬೆಲಾರಸ್, ಬೊಲಿವಿಯಾ, ಕ್ಯೂಬಾ, ಕಜಕಿಸ್ತಾನ್, ಮಲೇಷಿಯಾ, ನೈಜೀರಿಯಾ, ಥಾಯ್‌ಲ್ಯಾಂಡ್, ಉಗಾಂಡಾ ಹಾಗೂ ಉಜ್ಬೇಕಿಸ್ತಾನ್‌ ರಾಷ್ಟ್ರಗಳನ್ನು ಪಾಲುದಾರ ರಾಷ್ಟ್ರಗಳಾಗಿ ಸೇರಿಸಿಕೊಳ್ಳಲಾಗಿದೆ.

BRICS‌ನ ಪಾತ್ರ ಮತ್ತು ಉದ್ದೇಶಗಳು

BRICS‌ನ ಮುಖ್ಯ ಉದ್ದೇಶಗಳು ಜಾಗತಿಕ ದಕ್ಷಿಣದ ರಾಷ್ಟ್ರಗಳಿಗೆ ಒಂದು ಪ್ರಮುಖ ವೇದಿಕೆ ಒದಗಿಸುವುದು, ಆರ್ಥಿಕ ಸಹಕಾರವನ್ನು ಉತ್ತೇಜಿಸುವುದು ಹಾಗೂ ಪಾಶ್ಚಿಮಾತ್ಯ-ನಿಯಂತ್ರಿತ ಜಾಗತಿಕ ಸಂಸ್ಥೆಗಳಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುವುದಾಗಿದೆ. ಮುಖ್ಯವಾಗಿ:

  • ಆರ್ಥಿಕ ಸಹಕಾರ: BRICS ಭಾಗವಾಗಿ ‘ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್’ (NDB) ಮತ್ತು ಕಂಟಿಂಜೆಂಟ್ ರಿಸರ್ವ್ ಅರೇಂಜ್‌ಮೆಂಟ್ (CRA) ಮೂಲಕ ಸದಸ್ಯ ರಾಷ್ಟ್ರಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಎನ್‌ಡಿಬಿಯನ್ನು 2015ರಲ್ಲಿ ಸ್ಥಾಪಿಸಲಾಯಿತು. ಇದು, ಸದಸ್ಯ ರಾಷ್ಟ್ರಗಳಿಗೆ ಮೂಲಸೌಕರ್ಯ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆಗಳಿಗೆ ಧನಸಹಾಯ ನೀಡುತ್ತದೆ. ವಿಶ್ವ ಬ್ಯಾಂಕ್‌ಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ. ಇದು ಈವರೆಗೆ 39 ಬಿಲಿಯನ್‌ ಡಾಲರ್‌ಗಿಂತಲೂ ಹೆಚ್ಚಿನ ಹಣವನ್ನು 120 ಯೋಜನೆಗಳಿಗೆ ಧನಸಹಾಯ ನೀಡಿದೆ.
    ಸಿಆರ್‌ಎಅನ್ನು 2014ರಲ್ಲಿ ರಚಿಸಲಾಯಿತು. ಇದು ಸದಸ್ಯ ರಾಷ್ಟ್ರಗಳು ಜಾಗತಿಕ ಆರ್ಥಿಕ ಒತ್ತಡಗಳಿಗೆ ಸಿಲುಕಿದಾಗ, ಸಮಸ್ಯೆಗಳಿಂದ ಹೊರಬರಲು ನೆರವಾಗುತ್ತದೆ. ಕರೆನ್ಸಿ ಕುಸಿತ, ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರ-ವಹಿವಾಟು ಉತ್ತೇಜನ ಹಾಗೂ ಯುಎಸ್‌ ಡಾಲರ್‌ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ.
  • ಜಾಗತಿಕ ಆಡಳಿತದ ಸುಧಾರಣೆ: BRICS ವಿಶ್ವಸಂಸ್ಥೆ, ಐಎಂಎಫ್, ವಿಶ್ವ ಬ್ಯಾಂಕ್ ಹಾಗೂ ಡಬ್ಲ್ಯೂಟಿಒನಂತಹ ಸಂಸ್ಥೆಗಳಲ್ಲಿ ಉಗಮಗೊಳ್ಳುತ್ತಿರುವ ಆರ್ಥಿಕತೆಗಳಿಗೆ ಉತ್ತಮ ಪ್ರಾತಿನಿಧ್ಯವನ್ನು ಕೋರುತ್ತದೆ. ಬಹುಕೇಂದ್ರೀಯ ವಿಶ್ವ ವ್ಯವಸ್ಥೆಯನ್ನು (multipolar world order) ಉತ್ತೇಜಿಸುತ್ತದೆ. ಇದರಲ್ಲಿ ಒಂದು ರಾಷ್ಟ್ರ ಅಥವಾ ಗುಂಪಿನ ಏಕಸ್ವಾಮ್ಯ ಇರಬಾರದು ಎಂದು ಪ್ರತಿಪಾದಿಸುತ್ತದೆ.
  • ರಾಜಕೀಯ ಮತ್ತು ಭದ್ರತಾ ಸಹಕಾರ: ಭಯೋತ್ಪಾದನೆ, ಸೈಬರ್ ಭದ್ರತೆ ಹಾಗೂ ಆರ್ಥಿಕ ಒತ್ತಡಗಳಂತಹ ಸವಾಲುಗಳನ್ನು ಎದುರಿಸಲು ಸದಸ್ಯ ರಾಷ್ಟ್ರಗಳಿಗೆ ಸಹಕಾರ ಒದಗಿಸುತ್ತದೆ. ವಿಶ್ವಸಂಸ್ಥೆಯಲ್ಲಿ ಸಮಗ್ರ ಭಯೋತ್ಪಾದನೆ ವಿರೋಧಿ ಒಪ್ಪಂದವನ್ನು (Comprehensive Convention on International Terrorism) ಬೆಂಬಲಿಸಿದೆ.
  • ಸುಸ್ಥಿರ ಅಭಿವೃದ್ಧಿ: ಹವಾಮಾನ ಬದಲಾವಣೆ, ಆರೋಗ್ಯ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಸದಸ್ಯ ರಾಷ್ಟ್ರಗಳಿಗೆ ಪರಸ್ಪರ ಸಹಕಾರ ಒದಗಿಸುತ್ತದೆ. ಯುವ ವಿಜ್ಞಾನಿಗಳ ಫೋರಮ್ ಮತ್ತು ಇತರ ಜನ-ಕೇಂದ್ರಿತ ಯೋಜನೆಗಳನ್ನು ರೂಪಿಸಿದೆ.
  • ದಕ್ಷಿಣ-ದಕ್ಷಿಣ ಸಹಕಾರ: ಜಾಗತಿಕ ದಕ್ಷಿಣದ ರಾಷ್ಟ್ರಗಳ ನಡುವೆ ಸಹಕಾರವನ್ನು ಉತ್ತೇಜಿಸುವುದು BRICSನ ಆದ್ಯತೆಯಾಗಿದೆ. ದಕ್ಷಿಣ ಆಫ್ರಿಕಾ, ಲ್ಯಾಟಿನ್ (ದಕ್ಷಿಣ) ಅಮೆರಿಕ, ದಕ್ಷಿಣ ಏಷ್ಯಾ ರಾಷ್ಟ್ರಗಳನ್ನು ಬೆಂಬಲಿಸುವುದು ಪ್ರಮುಖ ಗುರಿಯಾಗಿದೆ.

ಮೋದಿ ಆಡಳಿತದ ಸಮಯದಲ್ಲಿ BRICSನಲ್ಲಿ ಭಾರತದ ಪಾಲುದಾರಿಕೆ

ಪ್ರಧಾನಿ ಮೋದಿ ಅವರು 2014ರಲ್ಲಿ ಭಾರತ ಸರ್ಕಾರದ ಅಧಿಕಾರಕ್ಕೇರಿದಾಗಿನಿಂದ ಭಾರತದ ಧೋರಣೆಗಳು ಬದಲಾಗಿವೆ. BRICSನಲ್ಲಿ ಭಾರತವು ವಿಭಿನ್ನವಾಗಿ ವರ್ತಿಸಲಾರಂಭಿಸಿದೆ. ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳೊಂದಿಗೆ ಭಿನ್ನಾಭಿಪ್ರಾಯ, ವೈಮನಸ್ಯ, ವಿಭಿನ್ನ ನಿಲುವುಗಳನ್ನು ತಳೆಯುತ್ತಿದೆ. ಮಾತ್ರವಲ್ಲದೆ, ಬ್ರಿಕ್ಸ್‌ನ ಒಮ್ಮತದ ನಿರ್ಧಾರವನ್ನು ಟೀಕಿಸುತ್ತಿದೆ. ಹೀಗಾಗಿ, ಭಾರತವು ಬ್ರಿಕ್ಸ್‌ನಿಂದ ಒಂದು ಕಾಲನ್ನು ಹೊರಗಿಟ್ಟಿದೆ ಎಂಬ ಅಭಿಪ್ರಾಯಗಳಿವೆ.

ಇತ್ತೀಚೆಗೆ, ಚೀನಾ ಯೋಜಿತ ‘ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್'(CPEC)ಗೆ ಏಷಿಯನ್ ಇನ್‌ಫ್ರಾಸ್ಟ್ರಕ್ಚರ್ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕ್ (AIIB) 2016ರಲ್ಲಿ ಸಾಲ ನೀಡಲು ಒಪ್ಪಿಕೊಂಡಿತು. ಹಲವು ಕಂತುಗಳಲ್ಲಿ ಸಾಲವನ್ನು ನೀಡುತ್ತಿದೆ. ಆದರೆ, ಇತ್ತೀಚೆಗೆ, ಸಾಲ ಸೌಲಭ್ಯ ಒದಗಿಸುವುದನ್ನು ಭಾರತ ವಿರೋಧಿಸಿತು. 9 ವರ್ಷಗಳ ಒಪ್ಪಂದವನ್ನು ಈಗ ಭಾರತ ಟೀಕಿಸುತ್ತಿರುವುದು ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳಲ್ಲಿ ಅಸಮಾಧಾನ ಹುಟ್ಟುಹಾಕಿದೆ.

ಈ ಲೇಖನ ಓದಿದ್ದೀರಾ?: ಸಂವಿಧಾನದ 370ನೇ ವಿಧಿ ಅಂಬೇಡ್ಕರ್ ಅವರ ಏಕ ಸಂವಿಧಾನ ಪರಿಕಲ್ಪನೆಗೆ ವಿರುದ್ಧವಾಗಿತ್ತೇ?

ಮೋದಿ ಆಡಳಿತದಲ್ಲಿ ಭಾರತವು ಪಾಶ್ಚಿಮಾತ್ಯ ರಾಷ್ಟ್ರಗಳ ಜೊತೆಗಿನ ಸ್ನೇಹಕ್ಕೆ ಹೆಚ್ಚು ಒಲವು ತೋರುತ್ತಿದೆ. ವಿಶ್ವಸಂಸ್ಥೆ, ಕ್ವಾಡ್ ಹಾಗೂ ಜಿ7 ರಾಷ್ಟ್ರಗಳೊಂದಿಗೆ, ಅದರಲ್ಲೂ ಅಮೆರಿಕದೊಂದಿಗೆ ಹೆಚ್ಚು ಸಂಬಂಧ, ವ್ಯವಹಾರ ಬೆಳೆಸುತ್ತಿದೆ. ಇದು, ಬ್ರಿಕ್ಸ್‌ನ ಉದ್ದೇಶ ಮತ್ತು ಗುರಿಗೆ ಅಡ್ಡಿಯಾಗುತ್ತಿದೆ ಎಂದು ಹೇಳಲಾಗಿದೆ.

ಜೊತೆಗೆ, ರಷ್ಯಾ-ಉಕ್ರೇನ್ ಸಂಘರ್ಷ, ಇಸ್ರೇಲ್-ಇರಾನ್ ಸಂಘರ್ಷದಂತಹ ಪ್ರಮುಖ ವಿಚಾರಗಳಲ್ಲಿ ಭಾರತವು ವಿಭಿನ್ನ ನಿಲುವನ್ನು ಹೊಂದಿದೆ. ಇರಾನ್ ಬ್ರಿಕ್ಸ್‌ನ ಭಾಗವೇ ಆಗಿದ್ದರೂ ಮತ್ತು ಇರಾನ್‌ ಮೇಲೆ ಇಸ್ರೇಲ್ ಸುಳ್ಳು ಆರೋಪ ಹೊರಿಸಿ ದಾಳಿ ಮಾಡಿದರೂ, ಭಾರತವು ಇರಾನ್‌ ಪರವಾದ ನಿಲುವನ್ನು ಸ್ಪಷ್ಟಪಡಿಸಲಿಲ್ಲ. ಬದಲಾಗಿ, ತಟಸ್ಥ ನೀತಿಯನ್ನು ಅನುಸರಿಸುತ್ತಿರುವುದಾಗಿ ಹೇಳಿಕೊಂಡೇ, ಇಸ್ರೇಲ್‌ ಪರ ನಿಲುವನ್ನು ಧೋರಣೆಯಲ್ಲಿ ಸೂಚಿಸಿತು.

ಇಂತಹ ಹಲವಾರು ಕಾರಣಗಳಿಂದಾಗಿ, ಭಾರತವು BRICS‌ನ ‘ದುರ್ಬಲ ಕೊಂಡಿ’ ಎಂದು ರಾಜಕೀಯ ತಜ್ಞರು ಹೇಳುತ್ತಿದ್ದಾರೆ. ಭಾರತದ ಧೋರಣೆಯನ್ನು ಬದಲಿಸಲು ಬ್ರಿಕ್ಸ್‌ನಲ್ಲಿ ಚರ್ಚೆಗಳು ನಡೆಯುತ್ತಿವೆ. ಒಂದು ವೇಳೆ, ಭಾರತದ ನಿಲುವುಗಳು ಬ್ರಿಕ್ಸ್‌ಗೆ ಅನುಗುಣವಾಗಿ ಇರದಿದ್ದರೆ; ಭಾರತವೇ ಬ್ರಿಕ್ಸ್‌ನಿಂದ ಹೊರಬರಬಹುದು ಅಥವಾ ಬ್ರಿಕ್ಸ್‌ನಿಂದ ಹೊರಹಾಕಬಹುದು ಎಂಬ ಚರ್ಚೆ ಹೆಚ್ಚಾಗಿದೆ. ಆದಾಗ್ಯೂ, ಜುಲೈ 6 ಮತ್ತು 7ರಂದು ಬ್ರೆಜಿಲ್‌ನಲ್ಲಿ ನಡೆಯಲಿರುವ ಬ್ರಿಕ್ಸ್‌ ಶೃಂಗಸಭೆಯನ್ನು ಚೀನಾ, ರಷ್ಯಾ ಅನುಪಸ್ಥಿತಿಯಲ್ಲಿ ಭಾರತ ಮತ್ತು ಬ್ರೆಜಿಲ್ ಮುನ್ನಡೆಸಲಿವೆ ಎಂದು ವರದಿಯಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X