ನಾವು ಅಧಿಕಾರಕ್ಕೆ ಬಂದರೆ ಜಾತಿ ಗಣತಿ ಹಾಗೂ ಆರ್ಥಿಕ ಸಮೀಕ್ಷೆಯ ಆಧಾರದ ಮೇಲೆ ಶೇ.50 ಮಿತಿಯನ್ನು ತೆರವುಗೊಳಿಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿಕೊಂಡಿರುವ ಅವರು, ಕಾಂಗ್ರೆಸ್ನ ಘೋಷಣೆ ಎಣಿಕೆ, ಏಕೆಂದರೆ ಇದು ನ್ಯಾಯದ ಕಡೆಗಿನ ಮೊದಲ ಹೆಜ್ಜೆಯಾಗಿದೆ ಎಂದರು.
“ಯಾರು ಬಡವರು ಎಂದು ನಾವು ಎಂದಾದರೂ ಯೋಚಿಸಿದ್ದೇವೆಯೆ?ಎಷ್ಟು ಮಂದಿ ಯಾವ ಪರಿಸ್ಥಿತಿಯಲ್ಲಿದ್ದಾರೆ? ಇವೆಲ್ಲವನ್ನು ಲೆಕ್ಕ ಮಾಡಬೇಕಿತ್ತಲ್ಲವೆ? ಬಿಹಾರದಲ್ಲಿ ಕೈಗೊಂಡ ಜಾತಿ ಸಮೀಕ್ಷೆಯಲ್ಲಿ ಶೇ 88 ರಷ್ಟಿರುವ ಬಡವರು ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿದ್ದಾರೆ” ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
“ಬಿಹಾರದ ಅಂಕಿಅಂಶಗಳು ದೇಶದ ನಿಜ ಚಿತ್ರಣದ ಒಂದು ಸಣ್ಣ ನೋಟವಷ್ಟೆ, ದೇಶದ ಬಡ ಜನರು ಯಾವ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂಬ ಕಲ್ಪನೆ ಕೂಡ ನಮಗಿಲ್ಲ. ಅದಕ್ಕಾಗಿ ನಾವು ಜಾತಿ ಗಣತಿ ಹಾಗೂ ಆರ್ಥಿಕ ಸಮೀಕ್ಷೆ ಎರಡು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಇದರ ಆಧಾರದ ಮೇಲೆ ನಾವು ಶೇ.50 ರಷ್ಟಿನ ಮೇಸಲಾತಿ ಮಿತಿಯನ್ನು ತೆರವುಗೊಳಿಸುತ್ತೇವೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ಬಾಂಡ್ ಬಹಿರಂಗಗೊಳಿಸಲು ಎಸ್ಬಿಐ ಏಕೆ ಹಿಂಜರಿಯುತ್ತಿದೆ?
ಈ ಕ್ರಮವು ದೇಶದ ಎಕ್ಸ್ರೆಯಾಗಿದೆ ಹಾಗೂ ಸರಿಯಾದ ಮೀಸಲಾತಿ, ಹಕ್ಕುಗಳು ಹಾಗೂ ಹಂಚಿಕೆಯನ್ನು ಪ್ರತಿಯೊಬ್ಬರಿಗೂ ಒದಗಿಸುತ್ತದೆ ಎಂದು ರಾಹುಲ್ ಹೇಳಿದರು.
“ಇದು ಬಡವರಿಗೆ ಸರಿಯಾದ ಯೋಜನೆಗಳನ್ನು ಜಾರಿಗೊಳಿಸುವುದಕ್ಕೆ ಸಹಾಯ ಮಾಡುವುದು ಮಾತ್ರವಲ್ಲದೆ, ಶಿಕ್ಷಣ, ಗಳಿಕೆ, ವೈದ್ಯಕೀಯ ಸೇವೆಯಿಂದ ವಂಚಿತರಾದವರನ್ನು ಮೇಲೆತ್ತುತ್ತದೆ. ಜೊತೆಗೆ ಅಭಿವೃದ್ಧಿಯ ಮುಖ್ಯವಾಹಿನಿಗೆ ಸಂಪರ್ಕಿಸುತ್ತದೆ” ಎಂದರು.
“ಅಲ್ಲಿಯವರೆಗೂ ಎದ್ದೇಳಿ, ಜಾತಿ ಸಮೀಕ್ಷೆ ನಿಮ್ಮ ಹಕ್ಕು ಎಂದು ನಿಮ್ಮ ಧ್ವನಿಯನ್ನು ತೋರ್ಪಡಿಸಿ . ಇದು ನಿಮ್ಮನ್ನು ಕತ್ತಲ ಸಂಕಷ್ಟದಿಂದ ಬೆಳಕಿನಡೆಗೆ ಕರೆದೊಯ್ಯುತ್ತದೆ” ಎಂದು ರಾಹುಲ್ ಗಾಂಧಿ ತಿಳಿಸಿದರು.
